IND vs AFG ಏಕೈಕ ಟೆಸ್ಟ್‌ಗೆ ಭಾರತದ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ!
ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಏಕೈಕ ಟೆಸ್ಟ್ ಪಂದ್ಯ ಜೂನ್ 6 ರಂದು ಶನಿವಾರ ನವ ಚಂಡೀಗಢಧ ಮುಲ್ಲಾನ್‌ಪುರದಲ್ಲಿ ನಡೆಯಲಿದೆ. ಈ ಪಂದ್ಯದ ನಿಮಿತ್ತ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರಾ, ಭಾರತ ತಂಡದ ಪ್ಲೇಯಿಂಗ್ XI ಆರಿಸಿದ್ದಾರೆ. ಅವರು ಮೂರನೇ ಕ್ರಮಾಂಕಕ್ಕೆ ದೇವದತ್ ಪಡಿಕ್ಕಲ್ ಬದಲು ಸಾಯಿ ಸುದರ್ಶನ್‌ಗೆ ಅವಕಾಶ ನೀಡಿದ್ದಾರೆ.
ಭಾರತದ ಪ್ಲೇಯಿಂಗ್ XI ಆರಿಸಿದ ಆಕಾಶ್ ಚೋಪ್ರಾ. -
ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ ಜೂನ್ 6 ರಂದು ನಡೆಯುವ ಏಕೈಕ ಟೆಸ್ಟ್ ಪಂದ್ಯಕ್ಕೆ (IND vs AFG) ಭಾರತ ತಂಡದ ಪ್ಲೇಯಿಂಗ್ xi ಅನ್ನು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ (Aakash Chopra) ಆಯ್ಕೆ ಮಾಡಿದ್ದಾರೆ. 2025ರ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ತವರು ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಆಘಾತ ಅನುಭವಿಸಿದ ಬಳಿಕ ಇದೇ ಮೊದಲ ಬಾರಿ ಭಾರತ ತಂಡ ರೆಡ್ ಬಾಲ್ ಕ್ರಿಕೆಟ್ ಆಡಲು ಸಜ್ಜಾಗುತ್ತಿದೆ. ಈ ಟೆಸ್ಟ್ ಪಂದ್ಯಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಡಿಯಲ್ಲಿ ಬರುವುದಿಲ್ಲ. ಹಾಗಾಗಿ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಯ ನಿಮಿತ್ತ ಭಾರತಕ್ಕೆ ಇದು ಅಭ್ಯಾಸ ಪಂದ್ಯ ಎಂದೇ ಪರಿಗಣಿಸಬಹುದು.
ಭಾರತ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಕ್ರಮಾಂಕಕ್ಕೆ ಇನ್‌ಫಾರ್ಮ್ ಸಾಯಿ ಸುದರ್ಶನ್‌ಗೆ ಚೋಪ್ರಾ ಅವಕಾಶ ನೀಡಿದ್ದಾರೆ. 2026ರ ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ದೇವದತ್ ಪಡಿಕ್ಕಲ್ ಅವರನ್ನು ಕೂಡ ಮೂರನೇ ಕ್ರಮಾಂಕಕ್ಕೆ ಟೀಮ್ ಮ್ಯಾನೇಜ್‌ಮೆಂಟ್ ಪರಿಗಣಿಸಬಹುದು.
ಮಾಜಿ ಆಟಗಾರ ಹಾಗೂ ಈಗ ಕ್ರಿಕೆಟ್ ವಿಶ್ಲೇಷಕರಾಗಿರುವ ಅವರ ಆಯ್ಕೆ ಮಾಡಿದ ಉಳಿದ ತಂಡವು ಬಹುತೇಕ ಎಲ್ಲರೂ ನಿರೀಕ್ಷಿಸುವಂತೆಯೇ ಇದೆ. ಆಲ್‌ರೌಂಡರ್‌ಗಳಾಗಿ ಅವರು ವಾಷಿಂಗ್ಟನ್ ಸುಂದರ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ವಿಕೆಟ್‌ಕೀಪರ್ ಜವಾಬ್ದಾರಿಯನ್ನು ರಿಷಭ್ ಪಂತ್‌ಗೆ ನೀಡಿದ್ದಾರೆ.
IND vs AFG: ಪಡಿಕ್ಕಲ್ or ಸುದರ್ಶನ್? ಭಾರತದ ಮೂರನೇ ಕ್ರಮಾಂಕಕ್ಕೆ ಆಟಗಾರನನ್ನು ರಿವೀಲ್ ಮಾಡಿದ ಗಂಭೀರ್!
"ಭಾರತ ತಂಡದ ಪ್ಲೇಯಿಂಗ್ XI ಈ ರೀತಿ ಇದೆ-ಯಶಸ್ವಿ ಜೈಸ್ವಾಲ್ ಅವರು ಕೆಎಲ್ ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಲಿದ್ದಾರೆ. ಸಾಯಿ ಸುದರ್ಶನ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇವರನ್ನು ನೀವು ಆಡಿಸಿಲ್ಲವಾದರೆ, ಅವರ ಬದಲು ದೇವದತ್ ಪಡಿಕ್ಕಲ್‌ಗೆ ಅವಕಾಶವನ್ನು ನೀಡಿ. ನಾಯಕ ಶುಭಮನ್ ಗಿಲ್‌ಗೆ ನಾಲ್ಕನೇ ಕ್ರಮಾಂಕ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್ ಅವರಿಗೆ ಐದನೇ ಕ್ರಮಾಂಕ, ಇನ್ನುಳಿದಂತೆ ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರು ಕ್ರಮವಾಗಿ 6 ಮತ್ತು 7ನೇ ಕ್ರಮಾಂಕಗಳನ್ನು ಆಯ್ಕೆ ಮಾಡುತ್ತೇನೆಂದು," ಆಕಾಶ್ ಚೋಪ್ರಾ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.
ಇನ್ನು ವೇಗದ ಬೌಲಿಂಗ್ ವಿಭಾಗವನ್ನು ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿಧ್ ಕೃಷ್ಣ ಅವರು ಮುನ್ನಡೆಸಲಿದ್ದಾರೆ. ಪೂರ್ಣ ಪ್ರಮಾಣದ ಸ್ಪಿನ್ನರ್ ಸ್ಥಾನಕ್ಕೆ ಕುಲ್ದೀಪ್ ಯಾದವ್ ಅವರನ್ನು ಚೋಪ್ರಾ ಆರಿಸಿದ್ದಾರೆ. ಭಾರತಕ್ಕೆ ಹೆಚ್ಚುವರಿ ಸ್ಪಿನ್ನರ್ ಅಗತ್ಯಬಿದ್ದರೆ ಹರ್ಷ್ ದುಬೇ ಅಥವಾ ಮಾನವ್ ಸುತಾರ್ ಅವರನ್ನು ಆರಿಸಿಕೊಳ್ಳಬೇಕು, ಇಲ್ಲವಾದಲ್ಲಿ ಮೂರನೇ ವೇಗದ ಬೌಲರ್ ಬೇಕಿದ್ದಲ್ಲಿ ಗುರ್ನೂರ್ ಬ್ರಾರ್‌ಗೆ ಚಾನ್ಸ್ ನೀಡಬೇಕೆಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs AFG: ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ದಾಖಲೆಯ ಸನಿಹದಲ್ಲಿ ರಿಷಭ್ ಪಂತ್!
“ನಂತರ ಕುಲ್ದೀಪ್ ಯಾದವ್ ತಂಡದಲ್ಲಿ ಇರುವರು. ಪ್ರಸಿಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ಅವರ ಸ್ಥಾನಗಳು ಬಹುತೇಕ ಖಚಿತವಾಗಿವೆ. ಅದರ ಬಳಿಕ ಪಿಚ್‌ನ ಸ್ವಭಾವವನ್ನು ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ನನ್ನ ಅನಿಸಿಕೆಯಲ್ಲಿ ಇಲ್ಲಿ ಒಬ್ಬ ಆಟಗಾರನ ಪದಾರ್ಪಣೆ ಖಚಿತವಾಗಿದೆ. ಅದು ಹರ್ಷ್ ದುಬೇ ಆಗಿರಬಹುದು, ಮಾನವ್ ಸುತಾರ್ ಆಗಿರಬಹುದು ಅಥವಾ ಗುರ್ನೂರ್ ಬ್ರಾರ್ ಆಗಿರಬಹುದು. ಏಕೆಂದರೆ ತಂಡವು ಮೂರು ವೇಗದ ಬೌಲರ್‌ಗಳೊಂದಿಗೆ ಅಥವಾ ಮೂರು ಪ್ರಮುಖ ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ,” ಎಂದು ಚೋಪ್ರಾ ಹೇಳಿದ್ದಾರೆ.
ಆಕಾಶ ಚೋಪ್ರಾ ಆರಿಸಿದ ಭಾರತದ ಪ್ಲೇಯಿಂಗ್ XI: ಭಾರತ: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್/ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ರೆಡ್ಡಿ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್/ ಹರ್ಷ್ ದುಬೇ/ ಮಾನವ್ ಸುತಾರ್