ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs AUS: ಬ್ಯಾಟಿಂಗ್‌ ವೈಫಲ್ಯದಿಂದಾಗಿ ಆಸ್ಟ್ರೇಲಿಯಾ ಎದುರು ಸೋಲುಂಡ ಭಾರತ!

IND vs AUS 2nd T20I Highlights: ಬ್ಯಾಟಿಂಗ್‌ ವೈಫಲ್ಯದಿಂದಾಗಿ ಭಾರತ ತಂಡ, ಎರಡನೇ ಟಿ20ಐ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಟೀಮ್‌ ಇಂಡಿಯಾ 0-1 ಹಿನ್ನಡೆ ಅನುಭವಿಸಿದೆ.

IND vs AUS:  ಆಸ್ಟ್ರೇಲಿಯಾ ಎದುರು ಎರಡನೇ ಟಿ20ಐ ಸೋತ ಭಾರತ!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಟಿ20ಐ ಪಂದ್ಯದ ಹೈಲೈಟ್ಸ್‌. -

Profile Ramesh Kote Oct 31, 2025 6:11 PM

ಮೆಲ್ಬೋರ್ನ್‌: ಬ್ಯಾಟಿಂಗ್‌ ವೈಫಲ್ಯದಿಂದಾಗಿ ಭಾರತ ತಂಡ (India), ಎರಡನೇ ಟಿ20ಐ ಪಂದ್ಯದಲ್ಲಿ(IND vs AUS) ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳ ಸೋಲು ಅನುಭವಿಸಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಪ್ರವಾಸಿ ಟೀಮ್‌ ಇಂಡಿಯಾ 0-1 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಈ ಪಂದ್ಯದಲ್ಲಿ ಪರಿಣಾಮಕಾರಿಯಾಗಿ ಬೌಲ್‌ ಮಾಡಿದ ಜಾಶ್‌ ಹೇಝಲ್‌ವುಡ್‌ (Josh Hazlewood), ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಮೆಲ್ಬೋರ್ನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಜಾಶ್‌ ಹೇಝಲ್‌ವುಡ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿ 18.4 ಓವರ್‌ಗಳಿಗೆ 125 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, ಮಿಚೆಲ್‌ ಮಾರ್ಷ್‌ (46) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಕೇವಲ 13.2 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿ ಗೆಲುವು ಪಡೆಯಿತು. ಆ ಮೂಲಕ ಟಿ20ಐ ಸರಣಿಯಲ್ಲಿ ಶುಭಾರಂಭ ಕಂಡಿತು.

IND vs AUS: 35 ರನ್‌ ಗಳಿಸಿ ಗೌತಮ್ ಗಂಭೀರ್‌ ನಂಬಿಕೆ ಉಳಿಸಿಕೊಂಡ ಹರ್ಷಿತ್‌ ರಾಣಾ!

ಭಾರತ ತಂಡ ನೀಡಿದ್ದ 126 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡದ ಆರಂಭಿಕರಾದ ಮಿಚೆಲ್‌ ಮಾರ್ಷ್‌ ಹಾಗೂ ಟ್ರಾವಿಸ್‌ ಹೆಡ್‌ ಸಿಡಿದರು. ಈ ಇಬ್ಬರೂ ಮುರಿಯದ ಮೊದಲನೇ ವಿಕೆಟ್‌ಗೆ 4.3 ಓವರ್‌ಗಳಿಗೆ 51 ರನ್‌ಗಳನ್ನು ಕಲೆಹಾಕಿ ತಮ್ಮ ತಂಡಕ್ಕೆ ಭರ್ಜರಿ ಆರಂಭವನ್ನು ತಂದುಕೊಟ್ಟಿದ್ದರು. ಕೇವಲ 15 ಎಸೆತಗಳಲ್ಲಿ 28 ರನ್‌ ಸಿಡಿಸಿದ ಬಳಿಕ ಟ್ರಾವಿಸ್‌ ಹೆಡ್‌, ವರುಣ್‌ ಚಕ್ರವರ್ತಿಗೆ ವಿಕೆಟ್‌ ಒಪ್ಪಿಸಿದರು. ನಂತರ ಸ್ಪೋಟಕ ಬ್ಯಾಟಿಂಗ್‌ ಮುಂದುವರಿಸಿದ ನಾಯಕ ಮಿಚೆಲ್‌ ಮಾರ್ಷ್‌, 26 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ 46 ರನ್‌ಗಳನ್ನು ಕಲೆ ಹಾಕಿ ತಂಡವನ್ನು ಗೆಲುವಿನ ಸನಿಹ ತಂದು ವಿಕೆಟ್‌ ಒಪ್ಪಿಸಿದರು.



ಟಿಮ್‌ ಡೇವಿಡ್‌, ಮಿಚೆಲ್‌ ಓವೆನ್‌ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ವಿಕೆಟ್‌ಗಳು ತ್ವರಿತವಾಗಿ ಉರುಳಿದವು. ಜಾಶ್‌ ಇಂಗ್ಲಿಸ್‌ 20 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಜಸ್‌ಪ್ರೀತ್‌ ಬುಮ್ರಾ, ವರುಣ್‌ ಚಕ್ರವರ್ತಿ ಹಾಗೂ ಕುಲ್ದೀಪ್‌ ಯಾದವ್‌ ಕಠಿಣ ಹೋರಾಟ ನಡೆಸಿದರೂ ಕಡಿಮೆ ಗುರಿ ನೀಡಿದ್ದ ಕಾರಣ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಆಸ್ಟ್ರೇಲಿಯಾ ಪಂದ್ಯವನ್ನು ಗೆದ್ದು ಟಿ20ಐ ಸರಣಿಯಲ್ಲಿ ಮುನ್ನಡೆಯನ್ನು ಪಡೆಯಿತು.



ಭಾರತ ತಂಡದ ಬ್ಯಾಟಿಂಗ್‌ ವೈಫಲ್ಯ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಜಾಶ್‌ ಹೇಝಲ್‌ವುಡ್‌ ಅವರ ಹೊಸ ಚೆಂಡಿನ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಶುಭಮನ್‌ ಗಿಲ್‌ ಸೇರಿದಂತೆ ಭಾರತೀಯ ಅಗ್ರ ಕ್ರಮಾಂಕ ಎಡವಿತು. ಗಿಲ್‌, ಸೂರ್ಯಕುಮಾರ್‌ ಯಾದವ್‌ ಹಾಗೂ ತಿಲಕ್‌ ವರ್ಮಾ ಅವರನ್ನು ಹೇಝಲ್‌ವುಡ್‌ ಕಟ್ಟಿ ಹಾಕಿದರೆ, ನೇಥನ್‌ ಎಲ್ಲಿಸ್‌ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಆಡಿದ ಸಂಜು ಸ್ಯಾಮ್ಸನ್‌ ಅವರನ್ನು ಔಟ್‌ ಮಾಡಿದರು. ಅಕ್ಷರ್‌ ಪಟೇಲ್‌, ಶಿವಂ ದುಬೆ ಕೂಡ ಎರಡಂಕಿ ವೈಯಕ್ತಿಕ ಮೊತ್ತವನ್ನು ಕಲೆ ಹಾಕಲಿಲ್ಲ.

IND vs AUS 2nd T20I: ಆಸ್ಟಿನ್ ಗೌರವಾರ್ಥ; ಪಂದ್ಯಕ್ಕೂ ಮುನ್ನ ಮೆಲ್ಬರ್ನ್‌ ಸ್ಟೇಡಿಯಂನಲ್ಲಿ ಒಂದು ನಿಮಿಷ ಮೌನಾಚರಣೆ

ಅಭಿಷೇಕ್‌ ಶರ್ಮಾ ಅರ್ಧಶತಕ

ಭಾರತ ತಂಡ 49 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಮೇಲಿನ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸ್‌ಗೆ ಬಂದಿದ್ದ ಹರ್ಷಿತ್‌ ರಾಣಾ 33 ಎಸೆತಗಳಲ್ಲಿ 35 ರನ್‌ ಗಳಿಸಿದ ಜೊತೆಗೆ ಆರಂಭಿಕ ಅಭಿಷೇಕ್‌ ಶರ್ಮಾ ಅವರ ಜತೆಗೆ ಅರ್ಧಶತಕದ ಜೊತೆಯಾಟವನ್ನು ಆಡಿದರು. ಆ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಅಭಿಷೇಕ್‌ ಶರ್ಮಾ, ಕೇವಲ 37 ಎಸತೆಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 68 ರನ್‌ಗಳನ್ನು ಕಲೆ ಹಾಕಿದರು ಹಾಗೂ ಭಾರತದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು. ಇವರ ಅತ್ಯಮೂಲ್ಯ ಇನಿಂಗ್ಸ್‌ನ ನೆರವಿನಿಂದ ಭಾರತ ತಂಡ 125 ರನ್‌ ಗಳಿಸಲು ಸಾಧ್ಯವಾಯಿತು. ಇಲ್ಲವಾದಲ್ಲಿ ಭಾರತ ತಂಡ 100ರ ಗಡಿಯನ್ನು ದಾಟಲು ಸಾಧ್ಯವಾಗುತ್ತಿರಲಿಲ್ಲ.