IND vs NZ: ಐದನೇ ಪಂದ್ಯದಲ್ಲಿ ಶತಕ ಸಿಡಿಸಿದರೂ ತೃಪ್ತಿ ಇಲ್ಲ ಎಂದ ಇಶಾನ್ ಕಿಶನ್!
ನ್ಯೂಜಿಲೆಂಡ್ ವಿರುದ್ದ ಟಿ20ಐ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಹೊರತಾಗಿಯೂ ಭಾರತ ತಂಡದ ವಿಕೆಟ್ ಕೀಪರ್ ಇಶಾನ್ ಕಿಶನ್ ಅತೃಪ್ತಿಯನ್ನು ಹೊರ ಹಾಕಿದ್ದಾರೆ. ಟಿ20ಐ ತಂಡಕ್ಕೆ ಯಶಸ್ವಿಯಾಗಿ ಕಮ್‌ಬ್ಯಾಕ್ ಮಾಡಿದ ಹೊರತಾಗಿಯೂ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಡುವುದು ನನ್ನ ಗುರಿ ಎಂದು ಹೇಳಿದ್ದಾರೆ.
ಶತಕ ಸಿಡಿಸಿದರೂ ಅತೃಪ್ತಿ ವ್ಯಕ್ತಪಡಿಸಿದ ಇಶಾನ್ ಕಿಶನ್. -
ತಿರುವನಂತಪುರಂ: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯ (IND vs NZ) ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಯಶಸ್ವಿಯಾಗಿ ಕಮ್‌ಬ್ಯಾಕ್ ಮಾಡಿದರ ಹೊರತಾಗಿಯೂ ಭಾರತ ತಂಡದ ವಿಕೆಟ್ ಕೀಪರ್ ಇಶಾನ್ ಕಿಶನ್ (Ishan Kishan) ಅತೃಪ್ತಿಯನ್ನು ಹೊರಹಾಕಿದ್ದಾರೆ. 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯಲ್ಲಿ ಭಾರತ ತಂಡಕ್ಕೆ ಪ್ರಶಸ್ತಿಯನ್ನು ಗೆದ್ದುಕೊಡುವುದು ನನಗೆ ತೃಪ್ತಿ ತಂದುಕೊಡಲಿದೆ ಎಂದಿದ್ದಾರೆ. ಇಲ್ಲಿನ ಗ್ರೀನ್‌ಫೀಲ್ಡ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ ಐದನೇ ಟಿ20ಐ ಪಂದ್ಯದಲ್ಲಿ ಇಶಾನ್ ಕಿಶನ್ 103 ರನ್‌ಗಳ ಮೂಲಕ ಶತಕವನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡವನ್ನು ಗೆಲ್ಲಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಇಶಾನ್ ಕಿಶನ್ ಭರ್ಜರಿ ಶತಕವನ್ನು ಬಾರಿಸಿದ್ದರು. ಅವರು ಆಡಿದ್ದ 42 ಎಸೆತಗಳಲ್ಲಿಯೇ ಶತಕವನ್ನು ಪೂರ್ಣಗೊಳಿಸಿದ್ದರು. ಅಂತಿಮವಾಗಿ ಅವರು 43 ಎಸೆತಗಳಲ್ಲಿ 103 ರನ್‌ಗಳನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಪಂದ್ಯದ ಬಳಿಕ ಮಾತನಾಡಿದ ಇಶಾನ್ ಕಿಶನ್, ಹಲವು ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
5 ವಿಕೆಟ್ ಪಡೆದ ಹೊರತರಾಗಿಯೂ ಅನಗತ್ಯ ದಾಖಲೆಯನ್ನು ಹೆಗಲೇರಿಸಿಕೊಂಡ ಅರ್ಷದೀಪ್ ಸಿಂಗ್!
ಇಶಾನ್ ಕಿಶನ್ ಹೇಳಿದ್ದೇನು?
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಇಶಾನ್ ಕಿಶನ್, "ನಿಸ್ಸಂಶಯವಾಗಿ ಇದರಿಂದ ತೃಪ್ತಿ ಸಿಕ್ಕಿದೆ, ಆದರೆ ಇನ್ನೂ ಸಂಪೂರ್ಣವಾಗಿ ಸಿಕ್ಕಿಲ್ಲ. ನಾನು ಚೆನ್ನಾಗಿ ಆಡಿದ್ದೇನೆ ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದೇನೆ, ಆದರೆ ನನ್ನ ಮುಖ್ಯ ಗುರಿ ವಿಶ್ವಕಪ್ ಟೂರ್ನಿ. ಇದಕ್ಕೆ ಹೆಚ್ಚುವರಿ ಪ್ರಯತ್ನದ ಅಗತ್ಯವಿದೆ. ಇದರಲ್ಲಿ ಮುಖ್ಯ ಸಂಗತಿ ಏನೆಂದರೆ, ಇದೇ ಲಯವನ್ನು ಮುಂದುವರಿಸುವುದಾಗಿದೆ," ಎಂದು ಹೇಳಿದ್ದಾರೆ.
ಶತಕದ ಸನಿಹ ನಿಧಾನಗತಿಯಲ್ಲಿ ಬ್ಯಾಟ್ ಮಾಡಲು ಪ್ರಯತ್ನಿಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವೈಯಕ್ತಿಕ ದಾಖಲೆಗಿಂತ ತಂಡದ ಅಗತ್ಯತೆ ತುಂಬಾ ಮುಖ್ಯ. ಹಾಗಾಗಿ ಚೆಂಡು ಸ್ಲಾಟ್‌ನಲ್ಲಿದ್ದರೆ ಅದನ್ನು ಬೌಂಡರಿ ಅಥವಾ ಸಿಕ್ಸರ್‌ಗೆ ಹೊಡೆಯಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
ಸಂಜು ಸ್ಯಾಮ್ಸನ್ ಬದಲು ಇಶಾನ್ ಕಿಶನ್ ವಿಕೆಟ್ ಕೀಪಿಂಗ್ ನಿರ್ವಹಿಸಲು ಕಾರಣ ತಿಳಿಸಿದ ಸೂರ್ಯಕುಮಾರ್!
"ಈಗಿನ ದಿನಗಳಲ್ಲಿ ಭಾರತ ತಂಡದಲ್ಲಿ ಪ್ರತಿಯೊಬ್ಬ ಆಟಗಾರ ಯೋಜನೆ ಇದೇ ಆಗಿರುತ್ತದೆ. ನೀವು ಒಂದು ಮೈಲುಗಲ್ಲಿನ ಹತ್ತಿರದಲ್ಲಿದ್ದರೂ ಸಹ, ಅದು ನಿಜವಾಗಿಯೂ ಅಪ್ರಸ್ತುತವಾಗುತ್ತದೆ. ಆ ಓವರ್‌ಗಳಲ್ಲಿ ನೀವು ಸಿಂಗಲ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನಂತರ ನೀವು ಇನ್ನೂ ದೊಡ್ಡ ರನ್‌ಗಳನ್ನು ಗಳಿಸಬಹುದಿತ್ತು ಎಂದು ನಿಮಗೆ ಅನಿಸುತ್ತದೆ ಮತ್ತು ಅದು ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಚೆಂಡನ್ನು ಹೊಡೆಯಲು ಇದ್ದರೆ, ನೀವು ಅದನ್ನು ಸಾಧಿಸಬೇಕು. ನೀವು ಮೈಲಿಗಲ್ಲುಗಳ ಬಗ್ಗೆ ಯೋಚಿಸಬಾರದು, ಆದರೆ ಪಂದ್ಯಗಳನ್ನು ಗೆಲ್ಲುವತ್ತ ಗಮನಹರಿಸಬೇಕು, ”ಎಂದು ಅವರು ಹೇಳಿದ್ದಾರೆ.
215 ರನ್ ಸಿಡಿಸಿರುವ ಇಶಾನ್ ಕಿಶನ್
ಅಂತಿಮವಾಗಿ ಈ ಸರಣಿಯನ್ನು ಸ್ಮರಣೀಯ ಶತಕದೊಂದಿಗೆ ಇಶಾನ್ ಕಿಶನ್ ಮುಗಿಸಿದ್ದಾರೆ. ಇವರು ಆಡಿದ ನಾಲ್ಕು ಇನಿಂಗ್ಸ್‌ಗಳಿಂದ 53.75ರ ಸರಾಸರಿ ಮತ್ತು 231.18ರ ಸ್ಟ್ರೈಕ್ ರೇಟ್‌ನಲ್ಲಿ 215 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿರುವ ಕಿಶನ್, ಮುಂಬರುವ ಟಿ20ಐ ವಿಶ್ವಕಪ್ ಟೂರ್ನಿಯಲ್ಲಿಯೂ ಭಾರತ ತಂಡದ ಆಡುವ XIನಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಭದ್ರಪಡಿಸಿಕೊಂಡಿದ್ದಾರೆ. ಸಂಜು ಸ್ಯಾಮ್ಸನ್ ಅವರ ಕಳಪೆ ಫಾರ್ಮ್ ಹಿನ್ನೆಲೆಯಲ್ಲಿ ಅವರನ್ನು ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಲು ಬಡ್ತಿ ನೀಡಬಹುದು.