ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻಮೊಹಮ್ಮದ್‌ ಆಮಿರ್‌ರ ಮತ್ತೊಂದು ಭವಿಷ್ಯ ಸುಳ್ಳುʼ: ಭಾರತದ ಜಯದ ಬಗ್ಗೆ ಪಾಕ್‌ ಮಾಜಿ ವೇಗಿ ಪ್ರತಿಕ್ರಿಯೆ!

T20 World Cup final: ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ ಅವರ ಭವಿಷ್ಯ ಮತ್ತೊಮ್ಮೆ ಸುಳ್ಳಾಯಿತು. 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್‌ ತಂಡ ಚೊಚ್ಚಲ ಟಿ20 ವಿಶ್ವಕಪ್‌ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಭಾರತ ತಂಡ ಮೂರನೇ ಬಾರಿ ಟಿ20 ವಿಶ್ವಕಪ್‌ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.

ಭಾರತ ಸೋಲುತ್ತೆ ಎಂದಿದ್ದ ಮೊಹಮ್ಮದ್‌ ಆಮಿರ್‌ ಭವಿಷ್ಯ ಸುಳ್ಳು!

ಭಾರತ ಸೋಲುತ್ತೆ ಎಂದಿದ್ದ ಮೊಹಮ್ಮದ್‌ ಆಮಿರ್‌ ಭವಿಷ್ಯ ಸುಳ್ಳಾಯಿತು. -

Profile
Ramesh Kote Mar 9, 2026 2:52 PM

ನವದೆಹಲಿ: ಪಾಕಿಸ್ತಾನ ತಂಡದ ಮಾಜಿ ವೇಗಿ ಮೊಹಮ್ಮದ್‌ ಆಮಿರ್‌ (Mohammad Amir) ಅವರ ಭಾರತ ವಿರುದ್ಧದ ಮತ್ತೊಂದು ಭವಿಷ್ಯ ಸುಳ್ಳಾಗಿದೆ. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ತಂಡ 96 ರನ್‌ಗಳನ್ನು ಗೆಲುವು ಪಡೆಯುವ ಮೂಲಕ ಮೂರನೇ ಬಾರಿ ಟಿ20 ವಿಶ್ವಕಪ್‌ ಅನ್ನು ಮುಡಿಗೇರಿಸಿಕೊಂಡಿತು. ಭಾರತ ತಂಡ (India) ಟಿ20 ವಿಶ್ವಕಪ್‌ ಗೆದ್ದ ಬಳಿಕ ಮೊಹಮ್ಮದ್‌ ಆಮಿರ್‌ಗೆ ಮತ್ತೊಮ್ಮೆ ಮುಖಭಂಗವಾಯಿತು.

ಫೈನಲ್‌ ಪಂದ್ಯಕ್ಕೂ ಮುನ್‌ ಪಾಕಿಸ್ತಾನ ಚಾನೆಲ್‌ವೊಂದರ ಸಂಭಾಷಣೆಯಲ್ಲಿ ಭಾಗವಹಿಸಿದ್ದ ಆಮಿರ್‌, ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಭಾರತ ತಂಡವನ್ನು ಮಣಿಸಿ ನ್ಯೂಜಿಲೆಂಡ್‌ ತಂಡ ಚೊಚ್ಚಲ ಚುಟುಕು ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದರು. ಆದರೆ, ಫೈನಲ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನವನ್ನು ತೋರಿತು. ಮೊದಲು ಬ್ಯಾಟ್‌ ಮಾಡಿದ್ದ ಭಾರತ 255 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ 159 ರನ್‌ಗಳಿಗೆ ಆಲ್‌ಔಟ್‌ ಆಯಿತು.

ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಫೈನಲ್‌ ಪಂದ್ಯದ ನಿಮಿತ್ತ ಮಾಧ್ಯಮ ಸಂವಾದಲ್ಲಿ ಮೊಹಮ್ಮದ್‌ ಆಮಿರ್‌ ಭಾಗವಹಿಸಿದ್ದರು. ಈ ವೇಳೆ ಭಾರತ ತಂಡದ ವಿರುದ್ಧ ನೀವು ನುಡಿದಿದ್ದ ಭವಿಷ್ಯ ಸುಳ್ಳಾಗಿದೆ ಎಂದು ಕೇಳಲಾಯಿತು. ಇದಕ್ಕೆ ಅವರು ಬೇಸರದ ಉತ್ತರ ನೀಡಿದರು. ಅವರು, "ಭಾರತ ಗೆದ್ದಿದೆ, ಒಳ್ಳೆಯದು, ಅವರು ಕಪ್‌ ಅನ್ನು ಮನಗೆ ತೆಗೆದುಕೊಂಡು ಹೋಲಿದ್ದಾರೆ, ಅವರು ನಮ್ಮ ಮನೆಗೆ ಕಪ್‌ ತಂದುಕೊಡುವುದಿಲ್ಲ. ಚೆನ್ನಾಗಿ ಆಡಿದ್ದಾರೆ," ಎಂದು ಮೊಹಮ್ಮದ್‌ ಆಮಿರ್‌ ಹೇಳಿದರು.

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ನಿರ್ಮಿಸಿದ ವಿಶ್ವ ದಾಖಲೆಗಳ ಪಟ್ಟಿ ಹೀಗಿದೆ

ಟೂರ್ನಿಯ ಸೂಪರ್‌-8ರ ಹಂತದ ವೇಳೆಯೇ ಮೊಹಮ್ಮದ್‌ ಆಮಿರ್, ಭಾರತ ತಂಡ ದಕ್ಷಿಣ ಆಫ್ರಿಕಾದ ವಿರುದ್ಧ ಸೋಲುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಇದು ನಿಜವಾಗಿತ್ತು. ಇದರ ಬಳಿಕವೂ ಭಾರತ ತಂಡ ಫೈನಲ್‌ಗೆ ತಲುಪುವುದಿಲ್ಲ ಮತ್ತು ಪ್ರಶಸ್ತಿ ಗೆಲ್ಲುವುದಿಲ್ಲ ಎಂದು ಅವರು ನಿರಂತರವಾಗಿ ಹೇಳುತ್ತಿದ್ದರು. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಆಮಿರ್ ಅವರನ್ನು ಅಭಿಮಾನಿಗಳು ಹಾಗೂ ಭಾರತದ ಮಾಜಿ ಕ್ರಿಕೆಟಿಗರಾದ ನವಜೋತ್ ಸಿಂಗ್ ಸಿಧು ಮತ್ತು ಮೊಹಮ್ಮದ್ ಕೈಫ್ ಕಠಿಣವಾಗಿ ಟೀಕಿಸಿದರು.



ಭಾರತದ ಗೆಲುವಿಗೆ ಕಿವೀಸ್‌ ಬೌಲರ್‌ಗಳು ನೆರವು ನೀಡಿದ್ದಾರೆ: ಆಮಿರ್‌

“ಒಂದು ರೀತಿಯಲ್ಲಿ ನೋಡಿದರೆ ನ್ಯೂಜಿಲೆಂಡ್ ಬೌಲರ್‌ಗಳಿಗೂ ಶ್ರೇಯ ಸಲ್ಲಬೇಕಾಗುತ್ತದೆ. ಅವರು ಸ್ಟಂಪ್‌ಗಳ ಹೊರಗೆ ನಾಲ್ಕು ನಾಲ್ಕು ವೈಡ್‌ಗಳನ್ನು ಎಸೆದು ಕೂಡ ಅಲ್ಲಿಂದಲೇ ಸಿಕ್ಸರ್ ಹೊಡೆಯಿಸಿಕೊಂಡರು. ಬಹಳ ಸುಲಭವಾಗಿ ಬೌಲ್ ಮಾಡಿದರು. ಭಾರತಕ್ಕೆ ಕ್ರೆಡಿಟ್ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅವರ ತಂತ್ರ ನನಗೆ ಅರ್ಥವಾಗಲಿಲ್ಲ. ಮೊದಲು ಹೆನ್ರಿಯನ್ನು ಬೌಲ್‌ ಮಾಡಿಸಿದರು, ನಂತರ ಆಫ್‌ ಸ್ಪಿನ್ನರ್‌ನ್ನು ತರಿಸಿದರು, ಮತ್ತೆ ಹೆನ್ರಿಯನ್ನು ಕರೆ ತಂದರು. ಎರಡು ಓವರ್‌ಗಳಲ್ಲಿ ಹೆನ್ರಿ ಕೇವಲ 12 ರನ್ ನೀಡಿದ್ದರು, ಆದರೆ ಏಕಾಏಕಿ ಸಂಪೂರ್ಣ ಯೋಜನೆ ಬದಲಾಯಿಸಲಾಯಿತು. ಬಹಳ ವಿಚಿತ್ರ ಬೌಲಿಂಗ್ ಆಗಿತ್ತು,” ಎಂದು ಆಮಿರ್‌ ವ್ಯಂಗ್ಯವಾಡಿದರು.

“ಅಭಿಷೇಕ್ ಶರ್ಮಾ ಆಫ್‌ಸ್ಪಿನ್ ಎದುರಿಸಲು ಕಷ್ಟಪಡುವ ಆಟಗಾರ ಎಂದು ನಿಮಗೆ ಗೊತ್ತಿದ್ದರೆ, ತಕ್ಷಣವೇ ಆಫ್‌ಸ್ಪಿನ್ನರ್‌ನ್ನು ಬೌಲಿಂಗ್‌ಗೆ ತರಬೇಕು. ಆದರೆ ಅವರು ಡಫಿಯನ್ನು ತರಿಸಿ ವಿಚಿತ್ರ ರೀತಿಯಲ್ಲಿ ಬೌಲಿಂಗ್ ಮಾಡಿಸಿದರು. ಇಂದು ಲಾಕಿ ಫರ್ಗ್ಯುಸನ್ ನನಗೆ ತುಂಬಾ ಸಾಮಾನ್ಯ ಬೌಲರ್‌ನಂತೆ ಕಂಡರು. ಮೂರು ಎಸೆತಗಳಲ್ಲಿ ವೈಡ್, ಎರಡು ಎಸೆತಗಳು ಆಫ್‌ಕಟ್ಟರ್, ನಂತರ ಒಂದು ಸ್ಲಾಟ್ ಬಾಲ್ — ಅದನ್ನು ಸಿಕ್ಸರ್ ಹೊಡೆಯಲಾಯಿತು,"ಎಂದು ದೂರಿದರು.

ಭಾರತದ ಮುಂದಿನ ಗುರಿ ಲಾಸ್ ಏಂಜಲೀಸ್ ಒಲಿಂಪಿಕ್ಸ್: ಸೂರ್ಯಕುಮಾರ್ ಯಾದವ್

“ನಾನು 2004–05ರಿಂದ ನ್ಯೂಜಿಲೆಂಡ್ ತಂಡವನ್ನು ಅನುಸರಿಸುತ್ತಿದ್ದೇನೆ. ಇಷ್ಟು ಒತ್ತಡದಲ್ಲಿ ಅವರನ್ನು ನಾನು ಎಂದಿಗೂ ನೋಡಿಲ್ಲ. ಅದು ಬಹುಶಃ ಪ್ರೇಕ್ಷಕರು ಕಾರಣವಾಗಿರಬಹುದು ಅಥವಾ ಫೈನಲ್ ಪಂದ್ಯವಾಗಿದ್ದುದರಿಂದ ಆಗಿರಬಹುದು. ಆದರೆ ನೋಡಿ, ಅಭಿಷೇಕ್ ಶರ್ಮಾ ಕೂಡ ಯುವ ಆಟಗಾರನೇ. ಟೂರ್ನಿಯುದ್ದಕ್ಕೂ ಅವರು ಹೆಚ್ಚಿನದೇನೂ ಮಾಡಿರಲಿಲ್ಲ. ಅವರ ಮೇಲೂ ಒತ್ತಡ ಇದ್ದೇ ಇರುತ್ತದೆ. ಅಲ್ಲಿ ಎಲ್ಲೋ ಒಂದು ಕಡೆ ಕೌಶಲ ಮಟ್ಟದ ವ್ಯತ್ಯಾಸ ಕಾಣಿಸುತ್ತದೆ. ಇಂತಹ ಪಂದ್ಯಗಳಲ್ಲಿ ಆಟಗಾರರ ಮಾನಸಿಕ ಶಕ್ತಿ ಬಹಳ ಮುಖ್ಯ. ನನ್ನ ಅಭಿಪ್ರಾಯದಲ್ಲಿ ಭಾರತ ಅದನ್ನು ತೋರಿಸಿದೆ, ಅದಕ್ಕೇ ಅವರು ಫೈನಲ್ ಗೆದ್ದರು,” ಎಂದು ಅಮೀರ್ ಶ್ಲಾಘಿಸಿದರು.