'ಕಾಯುವ ಸಮಯ ಮುಗಿದಿದೆ'; ಮಾರ್ಚ್ 28ಕ್ಕೆ ಐಪಿಎಲ್ ಆರಂಭ
IPL 2026 Schedule: 2024 ರಲ್ಲಿ, ಭಾರತ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಬಿಸಿಸಿಐ ಆರಂಭದಲ್ಲಿ ಮೊದಲ ಎರಡು ವಾರಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಮತದಾನದ ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.
Royal Challengers Bengaluru -
ಮುಂಬಯಿ, ಮಾ.9: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 19 ನೇ ಆವೃತ್ತಿಯು ಮಾರ್ಚ್ 28 ರಂದು ಪ್ರಾರಂಭವಾಗಲಿದ್ದು, ಮೇ ಅಂತ್ಯದವರೆಗೆ ನಡೆಯಲಿದೆ ಎಂದು ಅಧಿಕೃತ ಪ್ರಸಾರಕ ಸ್ಟಾರ್ ಸ್ಪೋರ್ಟ್ಸ್ ತಿಳಿಸಿದೆ. ಈ ಬಾರಿ 74 ಪಂದ್ಯಗಳ ಬದಲಿಗೆ 84 ಪಂದ್ಯಗಳನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಐಪಿಎಲ್‌ನ ಅಧಿಕೃತ ಪ್ರಸಾರದ ಹಕ್ಕು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್, ‘ಕಾಯುವ ಸಮಯ ಮುಗಿದಿದೆ, ‘ಟಾಟಾ ಐಪಿಎಲ್2026’ ಮಾರ್ಚ್ 28ರಿಂದ ಆರಂಭವಾಗುತ್ತಿದ್ದು, ಸಕಲವೂ ಸಜ್ಜಾಗಿದೆ’ ಎಂದು ಪೋಸ್ಟ್ ಮಾಡಿದೆ. ಐಪಿಎಲ್ ಆರಂಭದ ಸುದ್ದಿಯೂ ಹೊರಬಿದ್ದಿರುವುದಕ್ಕೆ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
18ನೇ ಆವೃತ್ತಿಯ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ತನ್ನ ತವರಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಉದ್ಘಾಟನ ಪಂದ್ಯ ಆಡಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಅಧಿಕೃತ ವೇಳಾಪಟ್ಟಿಯನ್ನು ಇನಷ್ಟೇ ಪ್ರಕಟಿಸಬೇಕಿದೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಸೇರಿದಂತೆ ಬಿಸಿಸಿಐ ಅಧಿಕಾರಿಗಳು ಹಾಜರಿದ್ದರು. ಈ ವೇಳೆ ಅವರು ಐಪಿಎಲ್ ಆರಂಭದ ಬಗ್ಗೆ ಸಭೆ ನಡೆಸಿರುವ ಸಾಧ್ಯತೆ ಇದೆ.
🚨 Announcement 🚨
— Star Sports (@StarSportsIndia) March 8, 2026
Get ready! #TATAIPL2026 is all set to start from the 28th of MARCH! pic.twitter.com/RF4Ixvo1J5
ಮೂಲಗಳ ಪ್ರಕಾರ ಎರಡು ಹಂತದಲ್ಲಿ ಐಪಿಎಲ್ ಪಂದ್ಯಾವಳಿ ಆಡಿಸುವ ಸಾಧ್ಯತೆ ಇದೆ. ಎರಡನೇ ಹಂತದಲ್ಲಿ ಪ್ಲೇ–ಆಫ್ ಪಂದ್ಯಗಳು ಇರಲಿದ್ದು, ಇವುಗಳ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ಸೇರಿದಂತೆ ಪಂಚರಾಜ್ಯಗಳ ಚುನಾವಣೆ ಇರುವುದರಿಂದ ವೇಳಾಪಟ್ಟಿ ಬಿಡುಗಡೆಯೂ ತಡವಾಗಿದೆ.
ಭಾವುಕರಾದ ಇಶಾನ್ ಕಿಶನ್; ಟಿ20 ವಿಶ್ವಕಪ್ ಗೆಲುವನ್ನು ದಿವಂಗತ ಸಹೋದರಿಗೆ ಅರ್ಪಣೆ
ಚುನಾವಣಾ ದಿನಾಂಕಗಳ ಬಗ್ಗೆ ಸ್ಪಷ್ಟತೆ ಬಂದ ನಂತರ, ಸಾಧ್ಯವಾದಷ್ಟು ಬೇಗ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಇತ್ತೀಚೆಗೆ ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದರು.
2024 ರಲ್ಲಿ, ಭಾರತ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಬಿಸಿಸಿಐ ಆರಂಭದಲ್ಲಿ ಮೊದಲ ಎರಡು ವಾರಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿತ್ತು. ಮತದಾನದ ದಿನಾಂಕಗಳನ್ನು ಅಂತಿಮಗೊಳಿಸಿದ ನಂತರ ಉಳಿದ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ವಿದೇಶಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವ ಬಗ್ಗೆ ಊಹಾಪೋಹಗಳ ಹೊರತಾಗಿಯೂ, ಮಂಡಳಿಯು ಸಂಪೂರ್ಣ ಆವೃತ್ತಿಯನ್ನು ದೇಶದೊಳಗೆ ಯಶಸ್ವಿಯಾಗಿ ನಡೆಸಿತ್ತು.