IND vs SL ಟೆಸ್ಟ್ ಸರಣಿಯಲ್ಲಿ ಗಾಯಾಳು ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಆಕಿಬ್ ನಬಿಗೆ ಸ್ಥಾನ?
ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವ ವೇಗದ ಬೌಲರ್ ಆಕಿಬ್ ನಬಿ ಅವರಿಗೆ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.
ಜಸ್‌ಪ್ರೀತ್ ಬುಮ್ರಾ ಸ್ಥಾನಕ್ಕೆ ಆಕಿಬ್ ನಬಿ. -
ನವದೆಹಲಿ: ಮೊಣಕಾಲು ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ತಂಡದ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಿಂದ (IND vs SL) ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಅವರ ಸ್ಥಾನಕ್ಕೆ ಜಮ್ಮು ಮತ್ತು ಕಾಶ್ಮೀರದ ಆಕಿಬ್ ನಬಿ (Auqib Nabi) ಅವರಿಗೆ ರಾಷ್ಟ್ರೀಯ ತಂಡದಲ್ಲಿ ಚೊಚ್ಚಲ ಅವಕಾಶ ನೀಡುವ ಸಾಧ್ಯತೆ ಇದೆ. ಇವರು ಆಯ್ಕೆಯಾದರೆ, ಕಣಿವೆ ರಾಜ್ಯದಿಂದ ಭಾರತ ತಂಡಕ್ಕೆ ಆಯ್ಕೆಯಾದ ಮೂರನೇ ಆಟಗಾರ ಎನಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಪರ್ವೇಝ್ ರಸೋಲ್ ಹಾಗೂ ಉಮ್ರಾನ್ ಮಲಿಕ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.
"ಜಸ್‌ಪ್ರೀತ್ ಬುಮ್ರಾ ಸಂಪೂರ್ಣ ಫಿಟ್ ಇಲ್ಲ ಹಾಗೂ ಆಕಿಬ್ ನಬಿ ಅವರು ಭಾರತ ತಂಡಕ್ಕೆ ಆಯ್ಕೆಯಾಗುವ ಬಗ್ಗೆ ಒಪ್ಪಿಗೆ ಸಿಕ್ಕಿದೆ," ಎಂದು ಬಿಸಿಸಿಐ ಮೂಲವೊಂದು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿಯನ್ನು ನೀಡಿದೆ.
ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ ಆಕಿಬ್ ನಬಿ ಕಳೆದ ಎರಡು ರಣಜಿ ಟ್ರೋಫಿ ಋತುಗಳಲ್ಲಿ 100ಕ್ಕೂ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಜಮ್ಮು-ಕಾಶ್ಮೀರ ತಂಡದ ರೆಡ್-ಬಾಲ್ ಕ್ರಿಕೆಟ್‌ನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ವೇಗದ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ಉಪಯುಕ್ತ ಕೊಡುಗೆ ನೀಡಬಲ್ಲ ಆಲ್‌ರೌಂಡರ್ ಎಂಬ ಹೆಗ್ಗಳಿಕೆಯನ್ನು ಅವರು ಹೊಂದಿದ್ದಾರೆ.
ʻ25 ಸಿಕ್ಸರ್, 13 ಬೌಂಡರಿʼ: 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ ಅಭಿಷೇಕ್ ಶರ್ಮಾ!
ಇನ್ನೊಂದೆಡೆ, ಜಸ್‌ಪ್ರೀತ್ ಬುಮ್ರಾ ಅವರ ಮೊಣಕಾಲಿನ ಊತ ಮೊದಲಿಗೆ ಅಂದಾಜಿಸಿದ್ದಕ್ಕಿಂತ ಗಂಭೀರವಾಗಿರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಭಾರತ ತಂಡದ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಕ್ರೀಡಾ ವಿಜ್ಞಾನ ವಿಭಾಗವು ಬುಮ್ರಾ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತುರವಾಗಿ ಮರಳಿಸದಿರಲು ನಿರ್ಧರಿಸಿದೆ.
"ಸೆಂಟರ್ ಆಫ್ ಎಕ್ಸಲೆನ್ಸ್ (COE) ಮುಖ್ಯಸ್ಥರಾದ ಧನಂಜಯ್ ಮತ್ತು ತುಳಸಿ ಅವರು ಜಸ್‌ಪ್ರೀತ್ ಬುಮ್ರಾ ಅವರನ್ನು ಯಾವುದೇ ರೀತಿಯ ಅಪಾಯಕ್ಕೆ ಒಳಪಡಿಸಬಾರದು ಎಂದು ನಿರ್ಧರಿಸಿದ್ದಾರೆ. ಆರಂಭದಲ್ಲಿ ತಂಡದ ಆಡಳಿತ ಮಂಡಳಿ ಹಾಗೂ ಆಯ್ಕೆ ಸಮಿತಿಗೆ, ಎರಡು ಟೆಸ್ಟ್ ಪಂದ್ಯಗಳಲ್ಲಿ ಕನಿಷ್ಠ ಒಂದಾದರೂ ಬುಮ್ರಾ ಆಡಲು ಲಭ್ಯರಾಗಬಹುದು ಎಂಬ ಮಾಹಿತಿ ನೀಡಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ತಿಂಗಳಿಗೆ ಸಿಗುವ ಪೆನ್ಷನ್ ಹಣವೆಷ್ಟು?
ಬುಮ್ರಾ ಅವರ ಫಿಟ್ನೆಸ್ ಕುರಿತಾಗಿ ಸೆಂಟರ್ ಆಫ್ ಎಕ್ಸಲೆನ್ಸ್‌ನ ಕಾರ್ಯವೈಖರಿ, ತಂಡದ ಆಡಳಿತ ಮಂಡಳಿ ಹಾಗೂ ಆಯ್ಕೆ ಸಮಿತಿಯಲ್ಲೂ ಗೊಂದಲಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಆಗಸ್ಟ್ 15 ರಂದು ಮೊದಲನೇ ಟೆಸ್ಟ್ ಪಂದ್ಯ
ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ಆಗಸ್ಟ್ 15 ರಂದು ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಕಳೆದ ತಿಂಗಳು ಇಂಗ್ಲೆಂಡ್ ಪ್ರವಾಸದ ವೇಳೆ ಮೊಣಕಾಲು ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರು ಆಂಗ್ಲರ ವಿರುದ್ಧ ಮೂರನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದರು. ಹಾಗಾಗಿ ಅವರು ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ಗೆ ಆಗಮಿಸಿದ್ದರು ಹಾಗೂ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಸಂಪೂರ್ಣ ಫಿಟ್ ಆಗಲಿದ್ದಾರೆಂದು ಭಾವಿಸಲಾಗಿತ್ತು. ಆದರೆ, ಅವರು ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಹೇಳಲಾಗುತ್ತಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಂದು ಕೊಲಂಬೊದಲ್ಲಿ ಆರಂಭವಾಗಲಿದೆ.