ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಂಜು ಸ್ಯಾಮ್ಸನ್‌ರಿಂದಾಗಿ ಟೀಮ್‌ ಮ್ಯಾನೇಜ್‌ಮೆಂಟ್‌, ಆಯ್ಕೆದಾರರ ನಡುವೆ ಭಿನ್ನಾಭಿಪ್ರಾಯ!

ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಕೈಬಿಟ್ಟಿರುವ ನಿರ್ಧಾರವು ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತು ಆಯ್ಕೆ ಸಮಿತಿಯ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಇದೇ ವೇಳೆ, ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ತೋರಿರುವ ನಿರಾಸಾಜನಕ ಪ್ರದರ್ಶನವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿಯಾಗಿದೆ.

ಸಂಜು ಬಗ್ಗೆ ಟೀಮ್‌ ಮ್ಯಾನೇಜ್‌ಮೆಂಟ್‌, ಆಯ್ಕೆದಾರರ ನಡುವೆ ಭಿನ್ನಾಭಿಪ್ರಾಯ!

ಸಂಜು ಸ್ಯಾಮ್ಸನ್‌ ವಿಚಾರದಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌-ಆಯ್ಕೆದಾರರ ನಡುವೆ ಭಿನ್ನಾಭಿಪ್ರಾಯ. -

Profile
Ramesh Kote Jul 9, 2026 10:10 PM

ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ (IND vs ZIM) ಆಯ್ಕೆ ಮಾಡಿದ ಭಾರತ ತಂಡದಿಂದ ಸಂಜು ಸ್ಯಾಮ್ಸನ್ (Sanju Samson) ಅವರನ್ನು ಕೈಬಿಟ್ಟಿರುವ ನಿರ್ಧಾರವು ಕೇವಲ ಕ್ರಿಕೆಟ್ ಅಭಿಮಾನಿಗಳಲ್ಲಷ್ಟೇ ಅಲ್ಲ, ಭಾರತೀಯ ಕ್ರಿಕೆಟ್ ವಲಯದಲ್ಲಿಯೂ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಅನುಭವಿಸುತ್ತಿರುವ ಹೀನಾಯ ಪ್ರದರ್ಶನದ ನಡುವೆ ಈ ಆಯ್ಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಭಾರತ ಆಡುತ್ತಿರುವ ಮೊದಲ ಟಿ20ಐ ಸರಣಿ ನಿರೀಕ್ಷಿಸಿದಂತೆ ಉತ್ತಮವಾಗಿ ಸಾಗುತ್ತಿಲ್ಲ. ಮೊದಲಿಗೆ ಐರ್ಲೆಂಡ್ ವಿರುದ್ಧ 2-0 ಅಂತರದಿಂದ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದ್ದ ಭಾರತ, ಇದೀಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಯಲ್ಲೂ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆಯಲ್ಲಿದೆ.

ಐರ್ಲೆಂಡ್‌ ವಿರುದ್ಧ ಎರಡು ಪಂದ್ಯಗಳು ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲನೇ ಪಂದ್ಯ ಸೇರಿ ಸತತ ಮೂರು ಇನಿಂಗ್ಸ್‌ಗಳಲ್ಲಿ ಸಂಜು ಸ್ಯಾಮ್ಸನ್‌ ಒಂದಂಕಿ ವೈಯಕ್ತಿಕ ಮೊತ್ತಕ್ಕೆ ಸೀಮಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಎರಡನೇ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ ಅವರ ಸ್ಥಾನಕ್ಕೆ ವೈಭವ್‌ ಸೂರ್ಯವಂಶಿಗೆ ಚೊಚ್ಚಲ ಅವಕಾಶವನ್ನು ಕಲ್ಪಿಸಲಾಗಿತ್ತು. ಆದರೂ ವೈಭವ್‌ ಎರಡೂ ಪಂದ್ಯಗಳಲ್ಲಿ ಸಿಕ್ಕ ಉತ್ತಮ ಆರಂಭದಲ್ಲಿ ದೊಡ್ಡ ಮೊತ್ತವನ್ನು ಪರಿವರ್ತಿಸುವಲ್ಲಿ ವಿಫಲರಾಗಿದ್ದರು.

ಸಂಜು ಇನ್‌, ದುಬೇ ಔಟ್‌; ಭಾರತ ತಂಡಕ್ಕೆ ಒಂದು ಬದಲಾವಣೆ ಸೂಚಿಸಿದ ಪಾರ್ಥಿವ್‌ ಪಟೇಲ್‌!

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ನಾಕ್‌ಔಟ್‌ ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನವನ್ನು ತೋರಿದ್ದ ಸಂಜು ಸ್ಯಾಮ್ಸನ್‌ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದಾದ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಐಪಿಎಲ್‌ ಟೂರ್ನಿಯಲ್ಲಿಯೂ ಮಿಂಚಿದ್ದರು. ಆದರೆ, ಭಾರತ ತಂಡಕ್ಕೆ ಮರಳಿದ ಬಳಿಕ ಸತತವಾಗಿ ವಿಫಲರಾದರು. ಇದರ ಪರಿಣಾಮ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯ ಭಾರತ ತಂಡದಿಂದ ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಡಲಾಗಿದೆ. ಸಂಜು ಬದಲು ಪ್ರಭ್‌ಸಿಮ್ರನ್ ಸಿಂಗ್‌ ಅವರಿಗೆ ಅವಕಾಶವನ್ನು ನೀಡಲಾಗಿದೆ.

ಸಂಜು ಸ್ಯಾಮ್ಸನ್ ಅವರನ್ನು ಕೈಬಿಡುವ ನಿರ್ಧಾರವು ಭಾರತದ ಟೀಮ್‌ ಮ್ಯಾನೇಜ್‌ಮೆಂಟ್‌ ಮತ್ತು ಆಯ್ಕೆ ಸಮಿತಿಯ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಟೈಮ್ಸ್ ನೌಗೆ ಬಿಸಿಸಿಐನ ಹಿರಿಯ ಮೂಲವೊಂದು ನೀಡಿದೆ. ಆದರೆ ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದಲೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಸಮರ್ಥಿಸಿಕೊಂಡಿದೆ.

ಇದೇ ವೇಳೆ, ಸಂಜು ಸ್ಯಾಮ್ಸನ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಹಾಗೂ ಜಿಂಬಾಬ್ವೆ ಪ್ರವಾಸದ ತಂಡದಿಂದ ಹೊರಗಿಟ್ಟಿದ್ದರೂ, ಅವರು ಇನ್ನೂ ಭಾರತ ತಂಡದ ಭವಿಷ್ಯದ ಯೋಜನೆಗಳ ಭಾಗವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ತಂಡದಲ್ಲಿ ಶಾಶ್ವತ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಅವರ ಪ್ರದರ್ಶನದಲ್ಲಿ ಹೆಚ್ಚಿನ ಸ್ಥಿರತೆ ತೋರಿಸುವುದು ಅಗತ್ಯವಾಗಿದೆ ಎಂದು ಬಿಸಿಸಿಐ ಅಭಿಪ್ರಾಯಪಟ್ಟಿದೆ.

IND vs ENG 4th T20I: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ!

ಬಿಸಿಸಿಐನ ಹಿರಿಯ ಮೂಲಗಳ ಪ್ರಕಾರ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟಿ20ಐ ಸರಣಿಯಲ್ಲಿ ಭಾರತ ತಂಡದ ಪ್ರದರ್ಶನವನ್ನು ಬಿಸಿಸಿಐ ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತಿದೆ. ವಿಶೇಷವಾಗಿ ಅಭಿಷೇಕ್ ಶರ್ಮಾ ಮತ್ತು ವೈಭವ್ ಸೂರ್ಯವಂಶಿ ಪ್ರತಿ ಎಸೆತವನ್ನೂ ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡುತ್ತಿರುವ ಪ್ರವೃತ್ತಿಯು ತಂಡದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂಬುದನ್ನು ಬಿಸಿಸಿಐ ಗಮನಿಸಿದೆ. ಈ ಇಬ್ಬರು ಯುವ ಆಟಗಾರರು ಪರಿಸ್ಥಿತಿಗೆ ತಕ್ಕಂತೆ ಬ್ಯಾಟ್‌ ಮಾಡುವ ಪಾಠವನ್ನು ಕಲಿಯುವಂತೆ ನೋಡಿಕೊಳ್ಳಲಾಗುವುದು ಎಂದು ಮಂಡಳಿ ತಿಳಿಸಿದೆ.

ಇನ್ನೊಂದೆಡೆ, ಸರಣಿಯನ್ನು ಸಮಬಲಗೊಳಿಸುವ ಅವಕಾಶ ಭಾರತ ತಂಡಕ್ಕೆ ಇನ್ನೂ ಇದೆ. ಜುಲೈ 9ರಂದು ಬ್ರಿಸ್ಟಲ್‌ನಲ್ಲಿ ನಡೆಯಲಿರುವ ನಾಲ್ಕನೇ ಟಿ20ಐ ಪಂದ್ಯ ಹಾಗೂ ಜುಲೈ 11ರಂದು ಸೌತಾಂಪ್ಟನ್‌ನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಭಾರತ ಸರಣಿಯನ್ನು 2-2ರಿಂದ ಸಮಬಲಗೊಳಿಸಬಹುದು.