IPL 2025: 'ಸ್ವೀಕಾರಾರ್ಹವಲ್ಲ'-ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದ ರಜತ್ ಪಾಟಿದಾರ್!
Rajat Patidar on RCB lose against DC: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ವಿಶೇಷ ವೈಫಲ್ಯ ಅನುಭವಿಸಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಪಾಟಿದಾರ್ ಟೀಕಿಸಿದ್ದಾರೆ.

ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದ ರಜತ್ ಪಾಟಿದಾರ್.

ಬೆಂಗಳೂರು: ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ 6 ವಿಕೆಟ್‌ಗಳಿಂದ ಸೋಲು ಅನುಭವಿಸಿದ ಬಳಿಕ ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿಯೂ ಪಂದ್ಯದಲ್ಲಿ ಹಠಾತ್ ಕುಸಿದ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಪಾಟಿದಾರ್ ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 6 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಒಪ್ಪಿಕೊಂಡಿತು. ಆ ಮೂಲಕ ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತವರಿನಲ್ಲಿ ಸತತ ಎರಡನೇ ಸೋಲು ಅನುಭವಿಸಿತು.
ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 61 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿತ್ತು. ಆದರೆ, 90 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಫಿಲ್ ಸಾಲ್ಟ್ 37 ರನ್ ಗಳಿಸಿ ರನ್‌ಔಟ್ ಆದ ಬಳಿಕ ಪಂದ್ಯದ ದಿಕ್ಕು ಸಂಪೂರ್ಣ ಬದಲಾಯಿತು. ವಿರಾಟ್ ಕೊಹ್ಲಿ 22 ರನ್ ಗಳಿಸಿ ಔಟ್ ಆದರು. ದೇವದತ್ ಪಡಿಕ್ಕಲ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ ವೈಫಲ್ಯ ಅನುಭವಿಸಿದರು. ನಾಯಕ ರಜತ್ ಪಾಟಿದಾರ್ 25, ಕೃಣಾಲ್ ಪಾಂಡ್ಯ 18 ಹಾಗೂ ಟಿಮ್ ಡೇವಿಡ್ 37 ರನ್ ಗಳಿಸಿದರು. ಆದರೆ, ಫಿಲ್ ಸಾಲ್ಟ್ ಹಾಗೂ ಟಿಮ್ ಡೇವಿಡ್ ಬಿಟ್ಟರೆ ಯಾವೊಬ್ಬ ಬ್ಯಾಟ್ಸ್‌ಮನ್ 30ಕ್ಕಿಂತ ಹೆಚ್ಚಿನ ರನ್ ಗಳಿಸಲಿಲ್ಲ. ಅಂತಿಮವಾಗಿ ಆರ್‌ಸಿಬಿ 163 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಕೆಎಲ್ ರಾಹುಲ್ (93*) ಹಾಗೂ ಟ್ರಿಸ್ಟನ್ ಸ್ಟಬ್ಸ್ (38*) ಅವರ ಬ್ಯಾಟಿಂಗ್ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಗೆಲುವು ಪಡೆದಿತ್ತು.
RCB vs DC: ಆರ್‌ಸಿಬಿಗೆ ತವರಿನಲ್ಲಿ ಸತತ ಎರಡನೇ ಸೋಲು, ಡೆಲ್ಲಿಗೆ ಗೆಲುವು ತಂದುಕೊಟ್ಟ ಕೆಎಲ್ ರಾಹುಲ್!
ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ರಜತ್ ಪಾಟಿದಾರ್, "ನಾವು ಚೆನ್ನಾಗಿ ಬ್ಯಾಟ್ ಮಾಡಿಲ್ಲ. ಬ್ಯಾಟ್ಸ್‌ಮನ್‌ಗಳು ಉತ್ತಮ ಮನಸ್ಥಿತಿಯಲ್ಲಿದ್ದಾರೆ ಹಾಗೂ ಅವರು ಅತ್ಯುತ್ತಮ ಉದ್ದೇಶವನ್ನು ತೋರಿದ್ದರು. 60ಕ್ಕೆ ಒಂದು ವಿಕೆಟ್ ಕಳೆದುಕೊಂಡಿದ್ದ ನಾವು 90 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಳ್ಳಬೇಕಾಯಿತು. ಇದು ಸ್ವೀಕಾರಾರ್ಹವಲ್ಲ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ನಾವು ಇದನ್ನು ಅತ್ಯುತ್ತಮ ಬ್ಯಾಟಿಂಗ್ ಟ್ರ್ಯಾಕ್ ಎಂದು ಭಾವಿಸಿದ್ದೆವು. ಆದರೆ, ಇಲ್ಲಿನ ಕಂಡೀಷನ್ಸ್ ಹಾಗೂ ಸನ್ನಿವೇಶಕ್ಕೆ ಹೊಂದಿಕೊಳ್ಳುವುದರಲ್ಲಿ ನಾವು ಎಡವಿದ್ದೇವೆ," ಎಂದು ಆರ್‌ಸಿಬಿ ನಾಯಕ ಹೇಳಿದ್ದಾರೆ.
ಕುಲ್ದೀಪ್ ಯಾದವ್ ಹಾಗೂ ವಿಪ್ರಾಜ್ ನಿಗಮ್ ಸ್ಪಿನ್ ಮೋಡಿಗೆ ನಲುಗಿದ ಆರ್‌ಸಿಬಿ ಒಂದು ಹಂತದಲ್ಲಿ 125 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ, ಟಿಮ್ ಡೇವಿಡ್ ಕೊನೆಯಲ್ಲಿ 20 ಎಸೆತಗಳಲ್ಲಿ ಅಜೇಯ 37 ರನ್‌ಗಳನ್ನು ಸಿಡಿಸುವ ಮೂಲಕ ಬೆಂಗಳೂರು ತಂಡದ ಮೊತ್ತವನ್ನು160ರ ಗಡಿ ದಾಟಿಸಿದ್ದರು.
RCB vs DC: ʻನಿಮ್ಮಿಂದ ಫಿಲ್ ಸಾಲ್ಟ್ ರನ್ ಔಟ್ʼ-ವಿರಾಟ್ ಕೊಹ್ಲಿ ವಿರುದ್ಧ ಫ್ಯಾನ್ಸ್ ಕಿಡಿ!
ಟಿಮ್ ಡೇವಿಡ್‌ಗೆ ರಜತ್ ಮೆಚ್ಚುಗೆ
"ಕೊನೆಯಲ್ಲಿ ಟಿಮ್ ಡೇವಿಡ್ ಆಡಿದ ಆಟ ಅತ್ಯುತ್ತಮವಾಗಿತ್ತು. ಇನ್ನು ಪವರ್‌ಪ್ಲೇನಲ್ಲಿ ಆರ್‌ಸಿಬಿ ಬೌಲರ್‌ಗಳು ತೋರಿದ್ದ ಪ್ರದರ್ಶನ ಕೂಡ ಅದ್ಭುತವಾಗಿತ್ತು. ಇದು ನಿಜಕ್ಕೂ ಅತ್ಯಂತ ವಿಶೇಷವಾಗಿತ್ತು," ಎಂದು ಆರ್‌ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ತಿಳಿಸಿದ್ದಾರೆ.
ಕೆಎಲ್ ರಾಹುಲ್-ಟ್ರಿಸ್ಟನ್ ಸ್ಟಬ್ಸ್
ಆರ್‌ಸಿಬಿ ನೀಡಿದ್ದ 164 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಒಂದು ಹಂತದಲ್ಲಿ 58 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೆಎಲ್ ರಾಹುಲ್ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ ಅತ್ಯುತ್ತಮ ಬ್ಯಾಟ್ ಮಾಡುವ ಮೂಲಕ 111 ರನ್‌ಗಳ ಜೊತೆಯಾಟವನ್ನು ಆಡಿದ್ದರು. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಇದರಲ್ಲಿ ಕೆಎಲ್ ರಾಹುಲ್ 53 ಎಸೆತಗಳಲ್ಲಿ ಅಜೇಯ 93 ರನ್‌ಗಳನ್ನು ಸಿಡಿಸಿದ್ದರೆ, ಟ್ರಿಸ್ಟನ್ ಸ್ಟಬ್ಸ್ ಅಜೇಯ 38 ರನ್‌ಗಳನ್ನು ಬಾರಿಸಿದ್ದರು. ಅಂತಿಮವಾಗಿ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಗೆಲುವನ್ನು ತನ್ನದಾಗಿಸಿಕೊಂಡಿತ್ತು.