IPL 2026: '49/3'ರ ಪೋಸ್ಟ್ ಹಾಕಿ ಪಂಜಾಬ್ ಕಿಂಗ್ಸ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ!
ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿದೆ. ಅಂದ ಹಾಗೆ ಈ ಪಂದ್ಯದ ಸಮಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ʻ49/3ʼರ ಪೋಸ್ಟ್ ಹಾಕುವ ಮೂಲಕ ಟ್ರೋಲ್ ಮಾಡಿದೆ. ಈ ಹಿಂದೆಯೂ ಪಂಜಾಬ್, ಇದೇ ರೀತಿ ಆರ್‌ಸಿಬಿಯನ್ನು ಟ್ರೋಲ್ ಮಾಡಿತ್ತು.
ಪಂಜಾಬ್ ಕಿಂಗ್ಸ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ. -
ಧರ್ಮಶಾಲಾ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನಲ್ಲಿ(IPL 2026) ಗೆಲುವಿನ ಲಯವನ್ನು ಮುಂದುವರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಪಂಜಾಬ್ ಕಿಂಗ್ಸ್ (PBKS) ಎದುರು 23 ರನ್‌ಗಳ ಜಯ ದಾಖಲಿಸಿತು. ಆ ಮೂಲಕ ಟೂರ್ನಿಯ ಪ್ಲೇಆಫ್ಸ್‌ಗೆ ಅಧಿಕೃತವಾಗಿ ಅರ್ಹತೆಯನ್ನು ಪಡೆದಿದೆ ಹಾಗೂ ನಾಕೌಟ್ ಪ್ರವೇಶಿಸಿದ ಮೊದಲ ತಂಡ ಎಂಬ ಕೀರ್ತಿಗೆ ಆರ್‌ಸಿಬಿ ಭಾಜನವಾಯಿತು. ಅಂದ ಹಾಗೆ ಈ ಪಂದ್ಯದ ಸಮಯದಲ್ಲಿ ಪಂಜಾಬ್ ಕಿಂಗ್ಸ್ ಮೂರು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಆರ್‌ಸಿಬಿ ಟ್ರೋಲ್ ಮಾಡಿತು.
ಪಂಜಾಬ್ ಇನಿಂಗ್ಸ್ ವೇಳೆ ಆರ್‌ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ‘49/3 (6 ಓವರ್)’ ಎಂದು ಪೋಸ್ಟ್ ಮಾಡಿದ್ದು, ಇದು ಪಂಜಾಬ್ ಕಿಂಗ್ಸ್ ತಂಡದ ಹಿಂದಿನ ಸಾಮಾಜಿಕ ಜಾಲತಾಣ ಚಟುವಟಿಕೆಗೆ ತಿರುಗೇಟು ಎಂದು ಅಂದಾಜಿಸಲಾಗಿದೆ.
ಈ ಪ್ರಸ್ತಾಪ ಏಪ್ರಿಲ್ 28ರಂದು ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯಕ್ಕೆ ಸೇರಿದೆ. ಆ ವೇಳೆ ಪಂಜಾಬ್ ‘49/1 (4.3 ಓವರ್)’ ಎಂದು ಪೋಸ್ಟ್ ಮಾಡಿತ್ತು. ಆ ಪೋಸ್ಟ್ ಪರೋಕ್ಷವಾಗಿ 2017ರ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಕೇವಲ 49 ರನ್‌ಗಳಿಗೆ ಆಲೌಟ್ ಆದ ಘಟನೆಯನ್ನು ನೆನಪಿಸುವ ರೀತಿಯಲ್ಲಿತ್ತು. ಅಂದರೆ ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆದ ತಂಡ ಎಂಬ ಕುಖ್ಯಾತಿ ಕೂಡ ಆರ್‌ಸಿಬಿ ಹೆಸರಿನಲ್ಲಿದೆ.
RCB vs PBKS: 500 ರನ್ ಪೂರ್ಣಗೊಳಿಸಿ ಐಪಿಎಲ್ ಟೂರ್ನಿಯಲ್ಲಿ ದೊಡ್ಡ ದಾಖಲೆ ಬರೆದ ವಿರಾಟ್ ಕೊಹ್ಲಿ!
ಪಂದ್ಯದಲ್ಲಿಯೂ ಆರ್‌ಸಿಬಿ ಸರ್ವಾಂಗೀಣ ಪ್ರಾಬಲ್ಯ ಮೆರೆದಿತು. ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಬೆಂಗಳೂರು ತಂಡ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿತು. ಹರಪ್ರೀತ್ ಬ್ರಾರ್ ಆರಂಭದಲ್ಲೇ ಜೇಕಬ್ ಬೆಥೆಲ್ ವಿಕೆಟ್ ಪಡೆಯುವ ಮೂಲಕ ಆರ್‌ಸಿಬಿಗೆ ಆರಂಭಿಕ ಆಘಾತ ನೀಡಿದರು. ಆದರೆ ಬಳಿಕ ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಪಂದ್ಯದ ದಿಕ್ಕನ್ನು ಬೆಂಗಳೂರಿನ ಪರ ತಿರುಗಿಸಿದರು. ಈ ಜೋಡಿ ಕೇವಲ 42 ಎಸೆತಗಳಲ್ಲಿ 76 ರನ್‌ಗಳ ಜೊತೆಯಾಟವಾಡಿತು . ಅದ್ಭುತ ಲಯದಲ್ಲಿ ಬ್ಯಾಟಿಂಗ್ ಮಾಡಿದ ಪಡಿಕ್ಕಲ್ 45 ರನ್ ಗಳಿಸಿ ಔಟಾದರು.
ನಂತರ ವೆಂಕಟೇಶ್ ಅಯ್ಯರ್ ಕ್ರೀಸ್‌ಗೆ ಬಂದು ಕೊಹ್ಲಿಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರು ಸೇರಿ 35 ಎಸೆತಗಳಲ್ಲಿ ಮಹತ್ವದ 60 ರನ್‌ಗಳ ಜೊತೆಯಾಟ ನಿರ್ಮಿಸಿದರು. ಕೊಹ್ಲಿ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿ 37 ಎಸೆತಗಳಲ್ಲಿ 58 ರನ್ ಗಳಿಸಿ ಇನಿಂಗ್ಸ್‌ನ ಅಂತ್ಯದ ಮಹತ್ವದ ಹಂತದಲ್ಲಿ ವಿಕೆಟ್ ಒಪ್ಪಿಸಿದರು. ಕೊನೆಯ ಹಂತದಲ್ಲಿ ಟಿಮ್ ಡೇವಿಡ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 12 ಎಸೆತಗಳಲ್ಲಿ ವೇಗದ 28 ರನ್ ಸೇರಿಸಿದರು. ಆದರೆ ಇನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅವರು ಔಟಾದರು.
ಇನ್ನೊಂದೆಡೆ ವೆಂಕಟೇಶ್ ಅಯ್ಯರ್ 40 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿ ಆರ್‌ಸಿಬಿ ಪರ ತಮ್ಮ ಮೊದಲ ಅರ್ಧಶತಕ ದಾಖಲಿಸಿದರು. ಅವರ ಜವಾಬ್ದಾರಿಯುತ ಮತ್ತು ಸ್ಫೋಟಕ ಆಟದ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಭರ್ಜರಿ 222 ರನ್ ಕಲೆಹಾಕಿತು.
IPL 2026: ʻಆರ್‌ಸಿಬಿ ನನಗೆ ತವರು ತಂಡದ ರೀತಿ ಭಾಸವಾಗುತ್ತಿದೆʼ-ಭಾವುಕರಾದ ವೆಂಕಟೇಶ್ ಅಯ್ಯರ್!
222 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಕುಸಿತ ಅನುಭವಿಸಿತು. ಭುವನೇಶ್ವರ್ ಕುಮಾರ್ ಮೊದಲ ಎರಡು ಓವರ್‌ಗಳಲ್ಲೇ ಎರಡೂ ಆರಂಭಿಕ ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ ಪಂಜಾಬ್‌ಗೆ ದೊಡ್ಡ ಆಘಾತ ನೀಡಿದರು. ಬಳಿಕ ರಸಿಖ್ ಸಲಾಮ್ ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಬಳಿಸಿದರು. ಇದರಿಂದ ಪಂಜಾಬ್ 19 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆ ಬಳಿಕ ಕೂಪರ್ ಕನೋಲಿ ಮತ್ತು ಸೂರ್ಯಾಂಶ್ ಶೆಡ್ಗೆ ತಂಡವನ್ನು ಹಿನ್ನಡೆಯಿಂದ ಹೊರತೆಗೆಯಲು ಪ್ರಯತ್ನಿಸಿದರು. ಈ ಜೋಡಿ 43 ರನ್‌ಗಳ ಜೊತೆಯಾಟ ನಿರ್ಮಿಸಿತು. ಕನೋಲಿ 37 ರನ್ ಗಳಿಸಿದರೆ, ಶೆಡ್ಗೆ 35 ರನ್‌ಗಳ ಕೊಡುಗೆ ನೀಡಿದರು.
ಇನ್ನೊಂದೆಡೆ ಶಶಾಂಕ್ ಸಿಂಗ್ ಧೈರ್ಯವಾಗಿ ಹೋರಾಟ ನಡೆಸಿ ಕೇವಲ 27 ಎಸೆತಗಳಲ್ಲಿ ವೇಗದ 56 ರನ್ ಬಾರಿಸಿದರು. ಆದರೆ ಗುರಿ ತುಂಬಾ ದೊಡ್ಡದಾಗಿದ್ದರಿಂದ ಪಂಜಾಬ್‌ಗೆ ಗೆಲುವು ಕೈಗೂಡಲಿಲ್ಲ. ಅಂತಿಮವಾಗಿ ಆರ್‌ಸಿಬಿ ಸುಲಭ ಜಯ ದಾಖಲಿಸಿ, 2026ರ ಐಪಿಎಲ್ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.