IPL 2027: ಡಿಸೆಂಬರ್ 16 ರಂದು ಗೋವಾದಲ್ಲಿ ಐಪಿಎಲ್ ಮಿನಿ ಹರಾಜು, ಫ್ರಾಂಚೈಸಿಗಳಿಗೆ ಸೂಚನೆ!
2027ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಸಿದ್ಧತೆಗಳು ಆರಂಭವಾಗುವ ನಿರೀಕ್ಷೆಯಿದೆ. ಬಹು ನಿರೀಕ್ಷಿತ ಹರಾಜಿನ ದಿನಾಂಕದ ಕುರಿತು ಮಾಹಿತಿ ಹೊರಬಿದ್ದಿದೆ. ಡಿಸೆಂಬರ್ 16 ರಂದು ಗೋವಾದಲ್ಲಿ ಮಿನಿ ಹರಾಜು ನಡೆಯಲಿದ್ದು, ಇದಕ್ಕೆ ತಯಾರು ನಡೆಸಿಕೊಳ್ಳುವಂತೆ ಫ್ರಾಂಚೈಸಿಗಳಿಗೆ ಸೂಚನೆ ನೀಡಲಾಗಿದೆ ಎಂದು ವರದಿಯಾಗಿದೆ.
2027ರ ಐಪಿಎಲ್ ಮಿನಿ ಹರಾಜು ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯುವ ಸಾಧ್ಯತೆ ಇದೆ. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2027 Mini Auction) 2027ರ ಟೂರ್ನಿಯ ಆಟಗಾರರ ಮಿನಿ ಹರಾಜು ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಕ್ರಿಕ್ಬಜ್ ವರದಿ ಮಾಡಿದೆ. ಹರಾಜಿಗೆ ಸಿದ್ಧತೆ ಮಾಡಿಕೊಳ್ಳುವಂತೆ ವಿವಿಧ ಐಪಿಎಲ್ ಫ್ರಾಂಚೈಸಿಗಳಿಗೆ ವಾಟ್ಸ್ಆ್ಯಪ್ ಸಂದೇಶ ರವಾನಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಯ ಲಾಜಿಸ್ಟಿಕ್ಸ್ ತಂಡ, ಫ್ರಾಂಚೈಸಿಗಳಿಗೆ ಈ ಸಂದೇಶವನ್ನು ಕಳುಹಿಸಿದೆ. ಗೋವಾದ ಪಂಚತಾರಾ ಹೋಟೆಲ್ ಐಟಿಸಿ ಗ್ರ್ಯಾಂಡ್ನಲ್ಲಿ ಹರಾಜು ನಡೆಯುವ ಸಾಧ್ಯತೆಯಿದ್ದು, ಡಿಸೆಂಬರ್ 15ರಂದು ಹರಾಜಿನ ಕುರಿತಾದ ಸಭೆ ಆಯೋಜಿಸುವ ಬಗ್ಗೆ ಸಂದೇಶದಲ್ಲಿ ಮಾಹಿತಿ ನೀಡಲಾಗಿದೆ.
“ಐಪಿಎಲ್ 2026ರ ಆಟಗಾರರ ಮಿನಿ ಹರಾಜು 2026ರ ಡಿಸೆಂಬರ್ 16 ರಂದು ಗೋವಾದ ಐಟಿಸಿ ಗ್ರ್ಯಾಂಡ್ನಲ್ಲಿ ನಡೆಯಲಿದೆ. ಹರಾಜಿನ ಕುರಿತಾದ ಮಾಹಿತಿ ಸಭೆ ಡಿಸೆಂಬರ್ 15ರಂದು ನಡೆಯಲಿದೆ,” ಎಂದು ಕ್ರಿಕ್ಬಜ್ ವರದಿ ಉಲ್ಲೇಖಿಸಿರುವ ವಾಟ್ಸ್ಆ್ಯಪ್ ಸಂದೇಶದಲ್ಲಿ ತಿಳಿಸಲಾಗಿದೆ.
ಆದರೆ, ಈ ಸಂದೇಶ ಪ್ರಯಾಣ ಮತ್ತು ಇತರ ವ್ಯವಸ್ಥೆಗಳನ್ನು ಮುಂಚಿತವಾಗಿ ಯೋಜಿಸಲು ಮಾತ್ರ ಕಳುಹಿಸಲಾಗಿದೆ. ಹರಾಜಿನ ದಿನಾಂಕ ಬದಲಾಗುವ ಸಾಧ್ಯತೆಯೂ ಇದೆ. ಐಪಿಎಲ್ ತಂಡಗಳ ಮಾಲೀಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಈ ಕುರಿತು ಅಧಿಕೃತ ಮಾಹಿತಿ ಇನ್ನೂ ತಲುಪಿಲ್ಲ ಎಂದು ವರದಿ ತಿಳಿಸಿದೆ.
IPL 2027 ʻಮಿನಿ ಹರಾಜಿನಲ್ಲಿ ಶೇಯ್ ಹೋಪ್ಗಾಗಿ ಆರ್ಸಿಬಿ ಬಲೆ ಬೀಸಬಹುದುʼ: ಆರ್ ಅಶ್ವಿನ್ ಭವಿಷ್ಯ!
ಡಿಸೆಂಬರ್ 16ರಂದು ಶ್ರೀಲಂಕಾ ವಿರುದ್ಧ ಭಾರತಕ್ಕೆ ಮೊದಲ ಏಕದಿನ ಪಂದ್ಯ
ಇದೇ ವೇಳೆ, ಡಿಸೆಂಬರ್ 16ರಂದು ಬೆಂಗಳೂರಿನಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವೆ ಏಕದಿನ ಪಂದ್ಯ ನಡೆಯುವ ವೇಳಾಪಟ್ಟಿ ಇದೆ. ಇದೇ ದಿನ ಐಪಿಎಲ್ ಹರಾಜು ನಡೆಯುವ ಸಾಧ್ಯತೆ ಇರುವುದರಿಂದ, ಪಂದ್ಯ ಅಥವಾ ಹರಾಜಿನ ದಿನಾಂಕದಲ್ಲಿ ಬದಲಾವಣೆಯಾಗುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಸಮಬಲ
ಇನ್ನೊಂದೆಡೆ, ಭಾರತ ತಂಡ ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20ೈ ಸರಣಿಯಲ್ಲಿ ಕಠಿಣ ಸವಾಲು ಎದುರಿಸುತ್ತಿದೆ. ನಾಲ್ಕನೇ ಟಿ20ಐ ಪಂದ್ಯದಲ್ಲಿ ಶೇಯ್ ಹೋಪ್ ಅವರ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 247 ರನ್ಗಳ ಬೃಹತ್ ಮೊತ್ತ ದಾಖಲಿಸಿತ್ತು. ಗುರಿ ಬೆನ್ನಟ್ಟಿದ ಭಾರತ ತಂಡ 223 ರನ್ಗಳಿಗೆ ಸೀಮಿತವಾಯಿತು. ಇದರೊಂದಿಗೆ ವೆಸ್ಟ್ ಇಂಡೀಸ್ 24 ರನ್ಗಳ ಜಯ ಸಾಧಿಸಿ ಸರಣಿಯನ್ನು 2-2ರಿಂದ ಸಮಬಲಗೊಳಿಸಿತು. ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
2027ರ ಐಪಿಎಲ್ ಮಿನಿ ಹರಾಜಿನ ಅಂತಿಮ ದಿನಾಂಕ ಮತ್ತು ಸ್ಥಳದ ಕುರಿತು ಬಿಸಿಸಿಐನ ಅಧಿಕೃತ ಪ್ರಕಟಣೆ ಹೊರಬಂದ ಬಳಿಕವೇ ಸಂಪೂರ್ಣ ಸ್ಪಷ್ಟತೆ ಸಿಗಲಿದೆ.
ʻವಿರಾಟ್ ಕೊಹ್ಲಿ ಅಹಂಕಾರ, ಸೊಕ್ಕಿನ ಮನುಷ್ಯʼ: ತನ್ನ ಗೆಳೆಯನ ಮೊದಲ ಭೇಟಿಯನ್ನು ನೆನೆದ ಎಬಿ ಡಿವಿಲಿಯರ್ಸ್!
ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಹೇಳಿದ್ದೇನು?
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರು ಈ ಹಿಂದೆ ಮಾತನಾಡಿ, ಆಟಗಾರರ ಹರಾಜನ್ನು ಮತ್ತೆ ಭಾರತದಲ್ಲೇ ಆಯೋಜಿಸಲು ಬಿಸಿಸಿಐ ಬಯಸುತ್ತಿದೆ ಎಂದು ತಿಳಿಸಿದ್ದರು. ಆದರೆ, ಮದುವೆ ಸಮಾರಂಭಗಳ ಭರಾಟೆ ಹೆಚ್ಚಿರುವ ಅವಧಿಯಲ್ಲಿ ಸೂಕ್ತ ಸ್ಥಳವನ್ನು ಹುಡುಕುವುದು ಕಷ್ಟವಾಗುತ್ತಿದೆ ಎಂದು ಅವರು ಹೇಳಿದ್ದರು.
“ಪ್ರತಿ ವರ್ಷವೂ ಐಪಿಎಲ್ ಹರಾಜನ್ನು ಭಾರತದಲ್ಲೇ ನಡೆಸಲು ನಾವು ಪ್ರಯತ್ನಿಸುತ್ತೇವೆ. ಆದರೆ, ಮದುವೆ ಸಮಾರಂಭಗಳ ಋತುವಿನಲ್ಲಿ ಸೂಕ್ತ ಸ್ಥಳ ಲಭ್ಯವಾಗುವುದಿಲ್ಲ. ಈ ಬಾರಿ ಹರಾಜು ಸಣ್ಣ ಪ್ರಮಾಣದಲ್ಲಿ ನಡೆಯುವುದರಿಂದ, ಭಾರತದಲ್ಲೇ ಸೂಕ್ತ ಸ್ಥಳ ಸಿಗಬಹುದು ಎಂಬ ಆಶಯವಿದೆ. ಹೀಗಾಗಿ, ಈ ವರ್ಷ ಹರಾಜನ್ನು ಭಾರತದಲ್ಲೇ ನಡೆಸಲು ನಾವು ಖಂಡಿತವಾಗಿಯೂ ಬಯಸುತ್ತೇವೆ,” ಎಂದು ಅರುಣ್ ಧುಮಾಲ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.