ʻಗುವಾಹಟಿಯಲ್ಲಿ ತುಂಬಾ ನಿರಾಶೆಯಾಗಿದೆʼ-ಟೆಸ್ಟ್ ಸರಣಿ ಸೋಲಿಗೆ ಕಾರಣ ತಿಳಿಸಿದ ರಿಷಭ್ ಪಂತ್!
ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ 408 ರನ್‌ಗಳ ಹೀನಾಯ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ ಹರಿಣ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತಿದೊಡ್ಡ ಸೋಲಾಗಿದೆ. ಈ ಪಂದ್ಯದ ಬಳಿಕ ಹಂಗಾಮಿ ನಾಯಕ ರಿಷಭ್ ಪಂತ್ ಮಾತನಾಡಿದ್ದಾರೆ.
ಟೆಸ್ಟ್ ಸರಣಿಯ ಸೋಲಿನ ಬಗ್ಗೆ ರಿಷಭ್ ಪಂತ್ ಪ್ರತಿಕ್ರಿಯೆ. -
ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ (IND vs SA) ಸೋಲಿನಿಂದ ಭಾರತ ತಂಡದ ಹಂಗಾಮಿ ನಾಯಕ ರಿಷಭ್ ಪಂತ್ (Rishabh Pant) ಬೇಸರ ವ್ಯಕ್ತಪಡಿಸಿದರು. ನಾವು ನಮ್ಮ ಆಟದಲ್ಲಿ ಸಾಕಷ್ಟು ಸುಧಾರಣೆ ಕಂಡುಕೊಳ್ಳಬೇಕು ಹಾಗೂ ಈ ಟೆಸ್ಟ್ ಸರಣಿಯ ಗೆಲುವಿನ ಶ್ರೇಯ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸಲ್ಲಬೇಕು, ಏಕೆಂದರೆ ಅವರು ಎರಡೂ ಪಂದ್ಯಗಳಲ್ಲಿ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಭಾರತ ತಂಡ (India) ಗುವಾಹಟಿ ಟೆಸ್ಟ್‌ನಲ್ಲಿ ಬ್ಯಾಟಿಂಗ್ ವೈಫಲ್ಯದಿಂದ 408 ರನ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದ ಸೋಲಿನ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವೈಟ್‌ವಾಷ್ ಆಘಾತ ಅನುಭವಿಸಿತು.
ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿಯನ್ನು ತನ್ನದಾಗಿಸಿಕೊಂಡಿತು. ಎರಡನೇ ಟೆಸ್ಟ್ ಪಂದ್ಯ ದ್ವಿತೀಯ ಇನಿಂಗ್ಸ್ ಆಫ್ ಸ್ಪಿನ್ನರ್ ಸೈಮನ್ ಹಾರ್ಮರ್ ಆರು ವಿಕೆಟ್‌ಗಳನ್ನು ಕಬಳಿಸಿದರು. ಈ ಸೋಲು ಭಾರತದ ಟೆಸ್ಟ್ ಇತಿಹಾಸದಲ್ಲಿ ಮತ್ತೊಂದು ಅವಮಾನಕರ ಅಧ್ಯಾಯವಾಗಿದೆ, ಏಕೆಂದರೆ ಇದು ರನ್‌ಗಳ ವಿಷಯದಲ್ಲಿ ಭಾರತದ ಅತಿದೊಡ್ಡ ಸೋಲಾಗಿದೆ. ಭಾರತ 549 ರನ್‌ಗಳ ಅಸಾಧ್ಯ ಗುರಿಯನ್ನು ಹಿಂಬಾಲಿಸಿ 140 ರನ್‌ಗಳಿಗೆ ಆಲೌಟ್ ಆಯಿತು.
IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ವೈಟ್‌ವಾಶ್ ಮುಖಭಂಗ
ಎರಡನೇ ಟೆಸ್ಟ್ ಸೋಲಿನ ಬಳಿಕ ರಿಷಭ್ ಪಂತ್ ಹೇಳಿದ್ದೇನು?
ಮೊದಲ ಬಾರಿ ಟೀಮ್ ಇಂಡಿಯಾ ನಾಯಕರಾಗಿರುವ ರಿಷಭ್ ಪಂತ್ ಸೋಲಿನ ನಂತರ ನಿರಾಶೆ ವ್ಯಕ್ತಪಡಿಸಿದರು. ಪಂದ್ಯದ ನಂತರ ಅವರು ಹೇಳಿದರು, "ಇದು ಸ್ವಲ್ಪ ನಿರಾಶಾದಾಯಕವಾಗಿದೆ. ನಾವು ತಂಡವಾಗಿ ಸುಧಾರಿಸಬೇಕಾಗಿದೆ. ನಾವು ಎದುರಾಳಿಗಳಿಗೆ ಇದರ ಶ್ರೇಯವನ್ನು ನೀಡಬೇಕಾಗಿದೆ. ನಾವು ಕಲಿಯಬೇಕು ಮತ್ತು ತಂಡವಾಗಿ ಬಲವಾಗಿ ಉಳಿಯಬೇಕು. ಅವರು ಸರಣಿಯಲ್ಲಿ ಪ್ರಾಬಲ್ಯ ಸಾಧಿಸಿದರು, ಆದರೆ ಅದೇ ಸಮಯದಲ್ಲಿ, ನೀವು ಕ್ರೆಡಿಟ್ ಅನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಚಿಂತನೆಯಲ್ಲಿ ನಾವು ಸ್ಪಷ್ಟವಾಗಿರಬೇಕು," ಎಂದು ತಿಳಿಸಿದ್ದಾರೆ.
"ನಾವು ಇದರಿಂದ ಕಲಿಯಬೇಕು ಮತ್ತು ಭವಿಷ್ಯದಲ್ಲಿ ಸುಧಾರಿಸಿಕೊಳ್ಳಬೇಕು. ಅವರು ಉತ್ತಮ ಕ್ರಿಕೆಟ್ ಆಡಿದ್ದಾರೆ ಮತ್ತು ಕ್ರಿಕೆಟ್ ನೀವು ತಂಡವಾಗಿ ಅದರ ಲಾಭವನ್ನು ಪಡೆದುಕೊಳ್ಳಬೇಕೆಂದು ಒತ್ತಾಯಿಸುತ್ತದೆ. ನಾವು ಹಾಗೆ ಮಾಡಲಿಲ್ಲ, ಮತ್ತು ಅದರಿಂದಾಗಿ ನಾವು ಇಡೀ ಸರಣಿಯನ್ನು ಕಳೆದುಕೊಂಡಿದ್ದೇವೆ. ಸಕಾರಾತ್ಮಕ ವಿಷಯವೆಂದರೆ ನಾವು ನಮ್ಮ ಯೋಜನೆಯ ಮೇಲೆ ಕೇಂದ್ರೀಕರಿಸುತ್ತೇವೆ ಮತ್ತು ಈ ಸರಣಿಯಿಂದ ನಾವು ಕಲಿಯುವುದು ಅದನ್ನೇ." ಎಂದು ರಿಷಭ್ ಪಂತ್ ಹೇಳಿದರು.
IND vs SA: ದಕ್ಷಿಣ ಆಫ್ರಿಕಾ ಎದುರು ಟೆಸ್ಟ್ ಸರಣಿಯ ಸೋಲಿಗೆ ಕಾರಣರಾದ ಐದು ಆಟಗಾರರು!
"ನೀವು ತವರಿನಲ್ಲಿ ಆಡುತ್ತಿರಲಿ ಅಥವಾ ವಿದೇಶದಲ್ಲಿ ಆಡುತ್ತಿರಲಿ, ಕ್ರಿಕೆಟ್ ಆ ದೃಢನಿಶ್ಚಯ ಮತ್ತು ಹೆಚ್ಚುವರಿ ಪ್ರಯತ್ನವನ್ನು ಬಯಸುತ್ತದೆ. ಬ್ಯಾಟಿಂಗ್ ವಿಭಾಗವಾಗಿ, ನೀವು ಕೆಲವು ಕ್ಷಣಗಳನ್ನು ಬಳಸಿಕೊಳ್ಳಬೇಕು. ಒಂದು ತಂಡವಾಗಿ, ನಾವು ಹಾಗೆ ಮಾಡಲಿಲ್ಲ. ಈ ಸರಣಿಯ ಸಕಾರಾತ್ಮಕ ಅಂಶಗಳು ನಮ್ಮದೇ ಆದ ಯೋಜನೆಯ ಮೇಲೆ ಕೇಂದ್ರೀಕರಿಸುವುದು," ಎಂದು ಪಂದ್ಯದ ನಂತರ ಪಂತ್ ತಿಳಿಸಿದ್ದಾರೆ.
20 ರನ್ ಗಳಿಸಿ ರಿಷಭ್ ಪಂತ್ ಔಟ್
ಈ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಅವರ ಬ್ಯಾಟ್ ಸಂಪೂರ್ಣವಾಗಿ ವಿಫಲವಾಗಿದೆ. ಅವರು ಕೇವಲ 20 ರನ್ ಗಳಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಬೇಜವಾಬ್ದಾರಿಯುತ ಶಾಟ್ ಆಡುವ ಮೂಲಕ ತಮ್ಮ ವಿಕೆಟ್ ಅನ್ನು ಕೈಚೆಲ್ಲಿದರು. ಅಲ್ಲಿಂದ ಟೀಮ್ ಇಂಡಿಯಾ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್‌ನಲ್ಲಿಯೂ ಪಂತ್ ಹೆಚ್ಚಿನದನ್ನು ಮಾಡಲು ವಿಫಲರಾದರು. ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಅವರು ಬೌಂಡರಿ ಮತ್ತು ಸಿಕ್ಸರ್ ಬಾರಿಸಿದ ಬಳಿಕ ಔಟಾದರು.