ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LSG vs KKR: ಕೋಲ್ಕತಾದ ರನ್‌ ಹೊಳೆಯಲ್ಲಿ ಈಜಿ ಗೆದ್ದ ಲಖನೌ ಸೂಪರ್‌ ಜಯಂಟ್ಸ್‌!

LSG vs KKR Match Highlights: ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 22ನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ 4 ರನ್‌ ರೋಚಕ ಗೆಲುವು ಸಾಧಿಸಿತು. ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿಗೆ ಇದು ಮೂರನೇ ಗೆಲುವಾಗಿದೆ.

ಕೆಕೆಆರ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ಗೆ 4  ರನ್‌ ಜಯ!

ಲಖನೌ ಸೂಪರ್‌ ಜಯಂಟ್ಸ್‌ಗೆ 4 ರನ್‌ ರೋಚಕ ಜಯ.

Profile Ramesh Kote Apr 8, 2025 8:40 PM

ಕೋಲ್ಕತಾ: ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಕೊನೆಯ ಎಸೆತದವರೆಗೂ ನಡೆದಿದ್ದ ರನ್‌ ಹೊಳೆಯ ಜಿದ್ದಾಜಿದ್ದಿನಲ್ಲಿ (LSG vs KKR) ಆತಿಥೇಯ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ತಂಡ 4 ರನ್‌ ರೋಚಕ ಗೆಲುವು ಸಾಧಿಸಿತು. ಆ ಮೂಲಕ ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ (Lucknow Super Giants) ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಮೂರನೇ ಗೆಲುವು ಪಡೆಯುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಇನ್ನು ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ತವರು ಅಭಿಮಾನಿಗಳ ಎದುರು ಕಠಿಣ ಹೋರಾಟ ನಡೆಸಿದ ಹೊರತಾಗಿಯೂ ತನ್ನ ಮೂರನೇ ಸೋಲು ಅನುಭವಿಸಿತು.

ಈ ಪಂದ್ಯದಲ್ಲಿ ಲಖನೌ ನೀಡಿದ್ದ 239 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಕೂಡ ಕೊನೆಯ ಓವರ್‌ವರೆಗೂ ಕಠಿಣ ಹೋರಾಟ ನಡೆಸಿತ್ತಾದರೂ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 234 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೇವಲ 4 ರನ್‌ಗಳಿಂದ ಸೋಲು ಒಪ್ಪಿಕೊಂಡಿತು. ಕೊನೆಯ ಎರಡು ಓವರ್‌ಗಳಲ್ಲಿ ಕೆಕೆಆರ್‌ಗೆ 38 ರನ್‌ಗಳ ಅಗತ್ಯವಿತ್ತು. ಈ ವೇಳೆ ಕ್ರೀಸ್‌ನಲ್ಲಿದ್ದ ರಿಂಕು ಸಿಂಗ್‌ 19ನೇ ಓವರ್‌ನಲ್ಲಿ ಒಂದು ಸಿಕ್ಸರ್‌ ಹಾಗೂ ಎರಡು ಫೋರ್‌ಗಳು ಸೇರಿದಂತೆ 14 ರನ್‌ಗಳಿಸಿದ್ದರು.

IPL 2025: ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದ ಬೆನ್ನಲ್ಲೆ ರಜತ್‌ ಪಾಟಿದಾರ್‌ಗೆ ಶಾಕ್‌ ನೀಡಿದ ಬಿಸಿಸಿಐ!

ನಂತರ ಕೊನೆಯ ಓವರ್‌ನಲ್ಲಿ ಆತಿಥೇಯ ತಂಡಕ್ಕೆ 24 ರನ್‌ ಅಗತ್ಯವಿತ್ತು. ಈ ವೇಳೆ ಮೊದಲನೇ ಎಸೆತದಲ್ಲಿ ಬೌಂಡರಿ ಬಾರಿಸಿದ್ದ ಹರ್ಷಿತ್‌ ರಾಣಾ, ಎರಡನೇ ಬಾಲ್‌ ಡಾಟ್‌ ಮಾಡಿದರು ಹಾಗೂ ಮೂರನೇ ಎಸೆತದಲ್ಲಿ ಸಿಂಗಲ್‌ ಆಡಿ ರಿಂಕು ಸಿಂಗ್‌ಗೆ ಸ್ಟ್ರೈಕ್‌ ಕೊಟ್ಟಿದ್ದರು. ಈ ವೇಳೆ 3 ಎಸೆತಗಳಲ್ಲಿ ರಹಾನೆ ಪಡೆಗೆ 19 ರನ್‌ ಬೇಕಿತ್ತು. ರಿಂಕು ಸಿಂಗ್‌ ಕೊನೆಯ ಮೂರು ಎಸೆತಗಳಲ್ಲಿ ಕ್ರಮವಾಗಿ 2 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು. ಕೊನೆಯ ಓವರ್‌ನಲ್ಲಿ 19 ರನ್‌ ಬಂತು. ಹರ್ಷಿತ್‌ ರಾಣಾ ಒಂದು ಬಾಲ್‌ ವ್ಯರ್ಥ ಮಾಡದೆ, ಎರಡನೇ ಎಸೆತದಲ್ಲಿಯೇ ರಿಂಕುಗೆ ಸ್ಟ್ರೈಕ್‌ ಕೊಟ್ಟಿದ್ದರೆ ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಕೊನೆಯಲ್ಲಿ ಅಬ್ಬರಿಸಿದ್ದ ರಿಂಕು ಸಿಂಗ್‌ 15 ಎಸೆತಗಳಲ್ಲಿ ಅಜೇಯ 38 ರನ್‌ಗಳನ್ನು ಸಿಡಿಸಿದ್ದರು.



ಅಜಿಂಕ್ಯ ರಹಾನೆ ಅಬ್ಬರದ ಬ್ಯಾಟಿಂಗ್‌ ವ್ಯರ್ಥ

ಕ್ವಿಂಟನ್‌ ಡಿ ಕಾಕ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಮತ್ತೊಬ್ಬ ಆರಂಭಿಕ ಸುನೀಲ್‌ ನರೇನ್‌ 13 ಎಸೆತಗಳಲ್ಲಿ 30 ರನ್‌ ಸಿಡಿಸಿ ಕೆಕೆಆರ್‌ಗೆ ಭರ್ಜರಿ ಅಡಿಪಾಯ ಹಾಕಿ ಔಟ್‌ ಆದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಅಜಿಂಕ್ಯ ರಹಾನೆ 35 ಎಸೆತಗಳಲ್ಲಿ 61 ರನ್‌ ಸಿಡಿಸಿದರು ಹಾಗೂ ವೆಂಕಟೇಶ್‌ ಅಯ್ಯರ್‌ (45) ಅವರೊಂದಿಗೆ 71 ರನ್‌ಗಳ ಜೊತೆಯಾಟವನ್ನು ಆಡಿದ್ದರು. ರಹಾನೆ ಔಟ್‌ ಆಗುವುದಕ್ಕೂ ಮುನ್ನ ಕೆಕೆಆರ್‌ 13ನೇ ಓವರ್‌ನಲ್ಲಿ 162 ರನ್‌ಗಳನ್ನು ಬಾರಿಸಿತ್ತು. ಈ ವೇಳೆ ಕೆಕೆಆರ್‌ ಸುಲಭವಾಗಿ ಗೆಲ್ಲುವ ಹಾದಿಯಲ್ಲಿತ್ತು. ಆದರೆ, ರಹಾನೆ ವಿಕೆಟ್‌ ಒಪ್ಪಿಸಿದ ಬಳಿಕ ರಮನ್‌ ದೀಪ್‌ ಸಿಂಗ್‌, ಅಂಗ್‌ಕೃಷ್‌ ರಘುವಂಶಿ ಹಾಗೂ ಆಂಡ್ರೆ ರಸೆಲ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರೂ ಈ ಕಾರಣದಿಂದ ಕೊನೆಯಲ್ಲಿ ರಿಂಕು ಸಿಂಗ್‌ ಏಕಾಂಗಿ ಹೋರಾಟ ನಡೆಸಿದರೂ ಕೆಕೆಆರ್‌ ಗೆಲ್ಲುವ ಸಾಧ್ಯವಾಗಲಿಲ್ಲ.



238 ರನ್‌ ಕಲೆ ಹಾಕಿದ್ದ ಲಖನೌ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿತ್ತು. ಮಿಚೆಲ್‌ ಮಾರ್ಷ್‌ (81) ಹಾಗೂ ನಿಕೋಲಸ್‌ ಪೂರನ್‌ (87) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಎಲ್‌ಎಸ್‌ಜಿ ತಂಡ, ತಮ್ಮ ಪಾಲಿನ 20 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 238 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಕೆಕೆಆರ್‌ಗೆ 239 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.



ಅಬ್ಬರಿಸಿದ ಮಾರ್ಷ್‌, ಪೂರನ್‌

ಲಖನೌ ಸೂಪರ್‌ ಜಯಂಟ್ಸ್‌ ಪರ ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದರು. ಇನಿಂಗ್ಸ್‌ ಆರಂಭಿಸಿದ್ದ ಏಡೆನ್‌ ಮಾರ್ಕ್ರಮ್‌ 28 ಎಸೆತಗಳಲ್ಲಿ 47 ರನ್‌ಗಳನ್ನು ಸಿಡಿಸಿ ವಿಕೆಟ್‌ ಒಪ್ಪಿಸಿದ್ದರು. ಇವರು ವಿಕೆಟ್‌ ಒಪ್ಪಿಸಿದ ಬಳಿಕ ಎರಡನೇ ವಿಕೆಟ್‌ಗೆ ಜೊತೆಯಾದ ಮಿಚೆಲ್‌ ಮಾರ್ಷ್‌ ಹಾಗೂ ನಿಕೋಲಸ್‌ ಪೂರನ್‌, ಈಡನ್‌ ಗಾರ್ಡನ್ಸ್‌ನಲ್ಲಿ ರನ್‌ ಹೊಳೆ ಹರಿಸಿದರು. ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 71 ರನ್‌ ಕಲೆ ಹಾಕಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ಮಿಚೆಲ್‌ ಮಾರ್ಷ್‌, 47 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 81 ರನ್‌ ಸಿಡಿಸಿದ್ದರು. ಕೊನೆಯವರೆಗೂ ಬ್ಯಾಟ್‌ ಮಾಡಿದ್ದ ನಿಕೋಲಸ್‌ ಪೂರನ್‌ ಅವರನ್ನು ಕಟ್ಟಿ ಹಾಕುವಲ್ಲಿ ಕೆಕೆಆರ್‌ ಬೌಲರ್‌ಗಳು ವಿಫಲರಾದರು. ಯಾವುದೇ ಬೌಲರ್‌ಗೆ ಮುಲಾಜಿಲ್ಲದೆ ಬ್ಯಾಟ್‌ ಬೀಸಿದ ಪೂರನ್‌, 36 ಎಸೆತಗಳಲ್ಲಿ ಬರೋಬ್ಬರಿ 8 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 87 ರನ್‌ ಸಿಡಿಸಿದರು. ಇವರು 241.67ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ.

RCB vs MI: ಮುಂಬೈ ಇಂಡಿಯನ್ಸ್‌ ಸೋಲಿಗೆ ನೈಜ ಕಾರಣ ತಿಳಿಸಿದ ಹಾರ್ದಿಕ್‌ ಪಾಂಡ್ಯ!

ಸ್ಕೋರ್‌ ವಿವರ

ಲಖನೌ ಸೂಪರ್‌ ಜಯಂಟ್ಸ್:‌ 20 ಓವರ್‌ಗಳಿಗೆ 238-3 ( ಮಿಚೆಲ್‌ ಮಾರ್ಷ್‌ 81, ನಿಕೋಲಸ್‌ ಪೂರನ್‌ 87, ಏಡೆನ್‌ ಮಾರ್ಕ್ರಮ್‌ 47; ಹರ್ಷಿತ್‌ ರಾಣಾ 51 ಕ್ಕೆ 2)

ಕೋಲ್ಕತಾ ನೈಟ್‌ ರೈಡರ್ಸ್:‌ 20 ಓವರ್‌ಗಳಿಗೆ 234-7 ( ಅಜಿಂಕ್ಯ ರಹಾನೆ 61, ವೆಂಕಟೇಶ್‌ ಅಯ್ಯರ್‌ 45, ರಿಂಕು ಸಿಂಗ್‌ 38, ಸುನೀಲ್‌ ನರೇನ್30; ಶಾರ್ದುಲ್‌ ಠಾಕೂರ್‌ 52 ಕ್ಕೆ 2, ಆಕಾಶ್‌ ದೀಪ್‌ 55ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ನಿಕೋಲಸ್‌ ಪೂರನ್‌