ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs KKR: ನೈಟ್‌ ರೈಡರ್ಸ್‌ ಸವಾಲು ಗೆದ್ದು ಐಪಿಎಲ್‌ ಟೂರ್ನಿಯಲ್ಲಿ ಶುಭಾರಂಭ ಕಂಡ ಆರ್‌ಸಿಬಿ!

RCB vs KKR Match Highlights: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಶನಿವಾರ ನಡೆದಿದ್ದ ಆರಂಭಿಕ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಆರ್‌ಸಿಬಿ 7 ವಿಕೆಟ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಕೆಕೆಆರ್‌ ನೀಡಿದ್ದ 175 ರನ್‌ಗಳ ಮೊತ್ತವನ್ನು ಆರ್‌ಸಿಬಿ ಸುಲಭವಾಗಿ ಚೇಸ್‌ ಮಾಡಿತು.

ಕೋಲ್ಕತಾದಲ್ಲಿ ನೈಟ್‌ ರೈಡರ್ಸ್‌ ಬೇಟೆಯಾಡಿದ ರಾಯಲ್‌ ಚಾಲೆಂಜರ್ಸ್‌!

ಕೆಕೆಆರ್‌ ಎದುರು ಆರ್‌ಸಿಬಿಗೆ 7 ವಿಕೆಟ್‌ಗಳ ಭರ್ಜರಿ ಜಯ.

Profile Ramesh Kote Mar 22, 2025 10:51 PM

ಕೋಲ್ಕತಾ: ಕೃಣಾಲ್‌ ಪಾಂಡ್ಯ (29ಕ್ಕೆ 3) ಸ್ಪಿನ್‌ ಮೋಡಿ ಹಾಗೂ ಫಿಲ್‌ ಸಾಲ್ಟ್‌ (56 ರನ್‌) ಮತ್ತು ವಿರಾಟ್‌ ಕೊಹ್ಲಿ ( 59* ರನ್‌) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಮೊದಲನೇ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌(KKR) ವಿರುದ್ದ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ತಂಡ ಭರ್ಜರಿ ಶುಭಾರಂಭ ಕಂಡಿದೆ. ಕೆಕೆಆರ್‌ ನೀಡಿದ್ದ 175 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಆರ್‌ಸಿಬಿ ತಂಡ, ಅಬ್ಬರದ ಬ್ಯಾಟಿಂಗ್‌ ಮೂಲಕ 16.2 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 177 ರನ್‌ ಗಳಿಸಿ ಜಯಭೇರಿ ಬಾರಿಸಿತು.

ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಕೆಕೆಆರ್‌ ನೀಡಿದ್ದ 175 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿಗೆ ಓಪನರ್ಸ್‌ ಫಿಲ್‌ ಸಾಲ್ಟ್‌ ಹಾಗೂ ವಿರಾಟ್‌ ಕೊಹ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಭರ್ಜರಿ ಆರಂಭವನ್ನು ತಂದುಕೊಟ್ಟರು. ಒಂದು ಕಡೆ ಫಿಲ್‌ ಸಾಲ್ಟ್‌ ಫೋರ್‌-ಸಿಕ್ಸರ್‌ ಮೂಲಕ ಅಬ್ಬರಿಸಿದರೆ, ಮತ್ತೊಂದು ತುದಿಯಲ್ಲಿ ಕಿಂಗ್‌ ಕೊಹ್ಲಿ ಕೆಕೆಆರ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಈ ಜೋಡಿ 8.3 ಓವರ್‌ಗಳಿಗೆ 95 ರನ್‌ ಗಳಿಸಿ ಆರ್‌ಸಿಬಿ ತಂಡದ ಗೆಲುವಿನ ಹಾದಿಗೆ ಸೂಕ್ತ ವೇದಿಕೆಯನ್ನು ನಿರ್ಮಿಸಿತು.

RCB vs KKR: ಕೆಕೆಆರ್‌ ಪಂದ್ಯದಲ್ಲಿ ಭುವನೇಶ್ವರ್‌ ಕುಮಾರ್‌ ಆಡದೆ ಇರಲು ಕಾರಣ ಇಲ್ಲಿದೆ!

ವಿರಾಟ್ ಕೊಹ್ಲಿ-ಫಿಲ್‌ ಸಾಲ್ಟ್‌ ಅಬ್ಬರ

ಆರ್‌ಸಿಬಿ ಪರ ಇನಿಂಗ್ಸ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರು. ಇದೇ ಮೊದಲ ಬಾರಿ ಆರ್‌ಸಿಬಿ ಪರ ಐಪಿಎಲ್‌ನಲ್ಲಿ ಕಣಕ್ಕೆ ಇಳಿದ ಫಿಲ್‌ ಸಾಲ್ಟ್‌ ತಮ್ಮ ಮಾಜಿ ತಂಡ ಕೆಕೆಆರ್‌ ಬೌಲರ್‌ಗಳಿಗೆ ನಡುಕ ಉಂಟು ಮಾಡಿದರು. ಇವರು ಆಡಿದ 31 ಎಸೆತಗಳಲ್ಲಿ 180.65ರ ಸ್ಟ್ರೈಕ್‌ ರೇಟ್‌ನಲ್ಲಿ ಎರಡು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 56 ರನ್‌ ಗಳಿಸಿ ಆರ್‌ಸಿಬಿಗೆ ಉತ್ತಮ ಆರಂಭ ತಂದುಕೊಟ್ಟು ವಿಕೆಟ್‌ ಒಪ್ಪಿಸಿದರು. ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿದ ಬಳಿಕ ತಂಡದ ಜವಾಬ್ದಾರಿ ಹೊತ್ತ ವಿರಾಟ್‌ ಕೊಹ್ಲಿ, 36 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ ನಾಲ್ಕು ಬೌಂಡರಿಗಳೊಂದಿಗೆ ಅಜೇಯ 59 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.



ಆರಂಭಿಕ ಬ್ಯಾಟ್ಸ್‌ಮನ್‌ಗಳ ಜೊತೆಗೆ ನಾಯಕ ರಜತ್‌ ಪಾಟಿದಾರ್‌ ಕ್ರೀಸ್‌ನಲ್ಲಿ ಅಲ್ಪ ಸಮಯ ಕಳೆದರೂ ಕೆಕೆಆರ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಇವರು ಆಡಿದ ಕೇವಲ 16 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 34 ರನ್‌ಗಳನ್ನು ಬಾರಿಸಿದರು. ಪಂದ್ಯವನ್ನು ಮುಗಿಸುವ ಹೊತ್ತಿನಲ್ಲಿ ವೈಭವ್‌ ಅರೋರಾಗೆ ಔಟ್‌ ಆದರು. ಕೊನೆಯಲ್ಲಿ 5 ಎಸೆತಗಳಲ್ಲಿ ಅಜೇಯ 15 ರನ್‌ ಗಳಿಸಿದ ಲಿಯಾಮ್‌ ಲಿವಿಂಗ್‌ಸ್ಟೋನ್‌ ಪಂದ್ಯವನ್ನು ಮುಗಿಸಿದರು.



174 ರನ್‌ ಕಲೆ ಹಾಕಿದ್ದ ಕೆಕೆಆರ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಅಜಿಂಕ್ಯ ರಹಾನೆ (56 ರನ್‌) ಹಾಗೂ ಸುನೀಲ್‌ ನರೇನ್‌ (44 ರನ್‌) ಅವರ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 174 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 175 ರನ್‌ಗಳ ಗುರಿಯನ್ನು ನೀಡಿತ್ತು.



ಕೆಕೆಆರ್‌ಗೆ ಸ್ಪೋಟಕ ಆರಂಭ

ಮೊದಲು ಬ್ಯಾಟ್‌ ಮಾಡಿದ್ದ ಕೆಕೆಆರ್‌ ತಂಡ, ಬಹುಬೇಗ ಆರಂಭಿಕ ಕ್ವಿಂಟನ್‌ ಡಿ ಕಾಕ್‌ ಅವರ ವಿಕೆಟ್‌ ಅನ್ನು ಕಳೆದುಕೊಂಡಿತ್ತು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ಅಜಿಂಕ್ಯ ರಹಾನೆ ಹಾಗೂ ಸುನೀಲ್‌ ನರೇನ್‌ ಜೋಡಿ ಬಿರುಸಿನ ಬ್ಯಾಟಿಂಗ್‌ಪ್ರದರ್ಶನ ತೋರಿತು. ಆರಂಭಿಕ 10 ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳಿಗೆ ಬೆವರಿಳಿಸಿದ ನರೇನ್‌ ಹಾಗೂ ರಹಾನೆ 103 ರನ್‌ಗಳ ಭರ್ಜರಿ ಜೊತೆಯಾಟವನ್ನು ಆಡುವ ಮೂಲಕ ತಂಡದ ಮೊತ್ತವನ್ನು 110 ರ ಸನಿಹ ತಂದಿತ್ತು. ಇವರಿಬ್ಬರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಕೆಕೆಆರ್‌ ಭರ್ಜರಿ ಆರಂಭ ಪಡೆದಿತ್ತು.

RCB vs KKR: ಸ್ಪೋಟಕ ಅರ್ಧಶತಕ ಸಿಡಿಸಿ ಟೀಕಾಕಾರರಿಗೆ ತಿರುಗೇಟು ನೀಡಿದ ಅಜಿಂಕ್ಯ ರಹಾನೆ!

ಅಬ್ಬರಿಸಿದ ಅಜಿಂಕ್ಯಾ ರಹಾನೆ

ಕೆಕೆಆರ್‌ ಪರ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ನಾಯಕ ಅಜಿಂಕ್ಯಾ ರಹಾನೆ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ಆರ್‌ಸಿಬಿ ಬೌಲರ್‌ಗಳಲ್ಲಿ ನಡುಕ ಉಂಟು ಮಾಡಿದರು. ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಅವರು, ಫೋರ್‌-ಸಿಕ್ಸರ್‌ಗಳ ಸುರಿಮಳೆಯನ್ನು ಹರಿಸಿದರು. ಆ ಮೂಲಕ ಕೇವಲ 25 ಎಸೆತಗಳಲ್ಲಿಯೇ ಅರ್ಧಶತಕವನ್ನು ಸಿಡಿಸಿದ್ದರು ಹಾಗೂ ಕೆಕೆಆರ್‌ಗೆ ಭರ್ಜರಿ ಆರಂಭ ತಂದುಕೊಡುವಲ್ಲಿ ನೆರವಾದರು. ಅಂತಿಮವಾಗಿ ಕೃಣಾಲ್‌ ಪಾಂಡ್ಯಗೆ ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ರಹಾನೆ 31 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 6 ಸಿಕ್ಸರ್‌ಗಳೊಂದಿಗೆ 56 ರನ್‌ಗಳನ್ನು ಸಿಡಿಸಿದರು. ಇದಕ್ಕೂ ಮುನ್ನ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಸುನೀಲ್‌ ನರೇನ್‌, 26 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 44 ರನ್‌ ಗಳಿಸಿ ರಸಿಖ್‌ ದಾರ್‌ ಸಲಾಮ್‌ಗೆ ಔಟ್‌ ಆಗಿದ್ದರು.



ಕಮ್‌ಬ್ಯಾಕ್‌ ಮಾಡಿದ ಆರ್‌ಸಿಬಿ ಬೌಲರ್ಸ್‌

ಪ್ರಥಮ ಇನಿಂಗ್ಸ್‌ನ ಮೊದಲ 10 ಓವರ್‌ಗಳಲ್ಲಿ ಪ್ರಾಬಲ್ಯ ಸಾಧಿಸಿದ್ದ ಕೆಕೆಆರ್‌ಗೆ ಎರಡನೇ ಅವಧಿಯಲ್ಲಿ ಆರ್‌ಸಿಬಿ ಬೌಲರ್‌ಗಳು ಆಘಾತ ನೀಡಿದರು. 10ನೇ ಓವರ್‌ನಲ್ಲಿ ಸುನೀಲ್‌ ನರೇನ್‌ ಹಾಗೂ 11ನೇ ಓವರ್‌ನಲ್ಲಿ ಅಜಿಂಕ್ಯ ರಹಾನೆ ಅವರನ್ನು ಕ್ರಮವಾಗಿ ರಸಿಖ್‌ ಹಾಗೂ ಕೃಣಾಲ್‌ ಔಟ್‌ ಮಾಡಿದ ಬಳಿಕ ಆರ್‌ಸಿಬಿ ಕಮ್‌ಬ್ಯಾಕ್‌ ಮಾಡಿತು. ಸ್ಪಿನ್‌ ರಣತಂತ್ರ ರೂಪಿಸಿದ ಕೃಣಾಲ್‌ ಪಾಂಡ್ಯ, ಅಪಾಯಕಾರಿ ವೆಂಕಟೇಶ್‌ ಅಯ್ಯರ್‌ ಹಾಗೂ ರಿಂಕು ಸಿಂಗ್‌ ಅವರನ್ನು ಔಟ್‌ ಮಾಡಿದರು. ಆಂಡ್ರೆ ರಸೆಲ್‌ ಕೇವಲ 4 ರನ್‌ ಗಳಿಸಿ ಸುಯಸ್‌ ಶರ್ಮಾಗೆ ಕ್ಲೀನ್‌ ಬೌಲ್ಡ್‌ ಆದರು. ಕೊನೆಯಲ್ಲಿ ಅಂಗಕೃಷ್‌ ರಘುವಂಶಿ ಕೆಕೆಆರ್‌ಗೆ 30 ರನ್‌ಗಳ ಕೊಡುಗೆಯನ್ನು ನೀಡಿದ್ದು ಬಿಟ್ಟರೆ ಇನ್ನುಳಿದವರು ವಿಫಲರಾದರು. ಮೊದಲ 10 ಓವರ್‌ಗಳಲ್ಲಿ 10ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್‌ ನೀಡಿದ್ದ ಆರ್‌ಸಿಬಿ ಬೌಲರ್ಸ್‌, ಕೊನೆಯ 10 ಓವರ್‌ಗಳಲ್ಲಿ 60ಕ್ಕೂ ಹೆಚ್ಚು ರನ್‌ ನೀಡಿ ಕೆಕೆಆರ್‌ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.

ಆರ್‌ಸಿಬಿ ಪರ ಸ್ಪಿನ್‌ ಮೋಡಿ ಮಾಡಿದ ಕೃಣಾಲ್‌ ಪಾಂಡ್ಯ 4 ಓವರ್‌ಗಳಿಗೆ 29 ರನ್‌ ನೀಡಿ 3 ವಿಕೆಟ್‌ ಕಿತ್ತರೆ, ಜಾಶ್‌ ಹೇಝಲ್‌ವುಡ್‌ ತಮ್ಮ ಶಿಸ್ತುಬದ್ದ ಬೌಲಿಂಗ್‌ ದಾಳಿಯ ಮೂಲಕ ಕೇವಲ 22 ರನ್‌ ನೀಡಿ ಎರಡು ವಿಕೆಟ್‌ ಕಿತ್ತರು.

ಸ್ಕೋರ್‌ ವಿವರ

ಕೋಲ್ಕತಾ ನೈಟ್‌ ರೈಡರ್ಸ್‌: 20 ಓವರ್‌ಗಳಿಗೆ 174-8 (ಅಜಿಂಕ್ಯ ರಹಾನೆ 56, ಸುನೀಲ್‌ ನರೇನ್‌ 44, ಅಂಗಕೃಷ್‌ ರಘುವಂಶಿ 30; ಜಾಶ್‌ ಹೇಝಲ್‌ವುಡ್‌ 22 ಕ್ಕೆ 2, ಕೃಣಾಲ್‌ ಪಾಂಡ್ಯ 29 ಕ್ಕೆ 3)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 16.2 ಓವರ್‌ಗಳಿಗೆ 177-3 (ಫಿಲ್‌ ಸಾಲ್ಟ್‌ 56, ವಿರಾಟ್‌ ಕೊಹ್ಲಿ 59*, ರಜತ್‌ ಪಾಟಿದಾರ್‌ 34; ಸುನೀಲ್‌ ನರೇನ್‌ 27ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಕೃಣಾಲ್‌ ಪಾಂಡ್ಯ