ʻಆರ್‌ಸಿಬಿಯ ನಿಜವಾದ ರಾಣಿʼ: ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಅನನ್ಯಾ ಬಿರ್ಲಾ!
ಅಸ್ಸಾಂನಲ್ಲಿ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೋ ಓನರ್ ಅನನ್ಯಾ ಬಿರ್ಲಾ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಅಲ್ಲದೆ, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಸಮುದಾಯಗಳಿಗೆ ಅಗತ್ಯ ನೆರವು ಮತ್ತು ಬೆಂಬಲವನ್ನು ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ನಿಂತ ಆರ್‌ಸಿಬಿ ಓನರ್ ಅನನ್ಯಾ ಬಿರ್ಲಾ. -
ನವದೆಹಲಿ: ಸತತ ಎರಡು ಆವೃತ್ತಿಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ, ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ (IPL 2026) ಚಾಂಪಿಯನ್ ಆಗಿದೆ. ಆರ್‌ಸಿಬಿ ಅಭಿಮಾನಿಗಳು ಇನ್ನೂ ತಮ್ಮ ತಂಡದ ವಿಜಯವನ್ನು ನೆನಪಿಸಿಕೊಂಡು ಖುಷಿ ಪಡುತ್ತಿದ್ದಾರೆ. ಇದೀಗ ಆರ್‌ಸಿಬಿ ತಂಡಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಮೈದಾನದ ಹೊರಗಿನ ತಮ್ಮ ಸಮಾಜಮುಖಿ ಕಾರ್ಯಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆಯನ್ನು ಗಳಿಸುತ್ತಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಆರ್‌ಸಿಬಿ ತಂಡದ ನೂತನ ಕೋ ಓನರ್ ಅನನ್ಯಾ ಬಿರ್ಲಾ (Ananya Birla)!
ಹೌದು, ಅನನ್ಯಾ ಬಿರ್ಲಾ ಅವರು ಸದ್ಯ ಅಸ್ಸಾಂನಲ್ಲಿ ಪ್ರವಾಹದ ಸಂತ್ರಸ್ತರಿಗೆ ನೆರವು ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೊಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇದನ್ನು ಗಮನಿಸಿದ ಆರ್‌ಸಿಬಿ ಅಭಿಮಾನಿಗಳು ಸೇರಿದಂತೆ ನೆಟ್ಟಿಗರು ಅನನ್ಯಾ ಬಿರ್ಲಾ ಅವರ ಈ ಸಮಾಜ ಮುಖಿ ಕಾರ್ಯವನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ವಿವಿಧ ತಂಡಗಳ ಓನರ್‌ಗಳು ಪಂದ್ಯಗಳ ಸಮಯದಲ್ಲಿ ಕ್ಯಾಮೆರಾಗಳಿಗೆ ಕಾಣಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ವಿಶೇಷವಾಗಿ ಸನ್‌ರೈಸರ್ಸ್ ಹೈದರಾಬಾದ್ ಓನರ್ ಕಾವ್ಯಾ ಮಾರನ್ ಅವರು ಪ್ರತಿಯೊಂದು ಪಂದ್ಯದಲ್ಲಿಯೂ ಕ್ಯಾಮೆರಾಗಳ ಗಮನವನ್ನು ಸೆಳೆಯುತ್ತಿದ್ದರು. ಆದರೆ, 2026ರ ಟೂರ್ನಿಯ ವೇಳೆ ಆರ್‌ಸಿಬಿ ತಂಡದ ಮಾಲೀಕತ್ವವನ್ನು ಪಡೆದಿದ್ದರೂ ಅನನ್ಯಾ ಬಿರ್ಲಾ ಅವರು ಕ್ಯಾಮೆರಾಗಳ ಕಣ್ಣಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ, ಅವರು ಅಸ್ಸಾಂ ಪ್ರವಾಹ ಪೀಡಿತರಿಗೆ ನರೆವಿಗೆ ಬರುವ ಮೂಲಕ ತಮ್ಮ ಹೃದಯವಂತಿಕೆಯನ್ನು ಮೆರೆದಿದ್ದಾರೆ. ಐಪಿಎಲ್ ವೇಳೆ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಮುಖ್ಯವಲ್ಲ, ನಿಜವಾದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಮುಖ್ಯ ಎಂಬ ಸಂದೇಶವನ್ನು ಸಾರಿದ್ದಾರೆ.
ಅಸ್ಸಾಂ ಪ್ರವಾಹ: ಕರುವನ್ನು ರಕ್ಷಿಸಲು ಪ್ರವಾಹದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವ್ಯಕ್ತಿ; ವಿಡಿಯೊ ವೈರಲ್
ತಮ್ಮ ಜೊತೆಯಲ್ಲಿ ತಂಡವನ್ನು ಕರೆದುಕೊಂಡು ಅನನ್ಯಾ ಬಿರ್ಲಾ ಅಸ್ಸಾಂನ ಜೋರ್‌ಹಾಟ್ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು. ನೀರಿನಿಂದ ಆವೃತಗೊಂಡ ಪ್ರದೇಶಗಳಲ್ಲಿ ತಾತ್ಕಾಲಿಕ ಆಶ್ರಯಗಳಲ್ಲಿ ವಾಸಿಸುತ್ತಿರುವ ಸ್ಥಳಾಂತರಿತ ಕುಟುಂಬಗಳನ್ನು ಭೇಟಿ ಮಾಡಿ, ಅಗತ್ಯವಿರುವ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಿದರು.
ಅಸ್ಸಾಂನಲ್ಲಿ ಮುಂದುವರಿದಿರುವ ಪ್ರವಾಹ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾದ ಸಮುದಾಯಗಳಿಗೆ ನೆರವು ನೀಡುವ ಉದ್ದೇಶದಿಂದ ಅನನ್ಯಾ ಬಿರ್ಲಾ ಫೌಂಡೇಶನ್ ಕೈಗೊಂಡಿರುವ ಮಾನವೀಯ ಸೇವಾ ಅಭಿಯಾನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಅನನ್ಯಾ ಬಿರ್ಲಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ನೀವು ಆರ್‌ಸಿಬಿ ತಂಡದ ನಿಜವಾದ ರಾಣಿ ಎಂದು ಗುಣಗಾನ ಮಾಡಿದ್ದಾರೆ.
So many billionaires live in India, yet very few stepped up for the people of Assam.
— RiTesH (@ritesh_o2) July 31, 2026
The same goes for many Bollywood celebrities. they barely even acknowledged the crisis.
But Ananya Birla chose to lead with kindness.
She didn't just donate for Assam...
She actually visited… pic.twitter.com/yJJrSaZMye
ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳ ವಿತರಣೆ
ಅನನ್ಯಾ ಬಿರ್ಲಾ ಫೌಂಡೇಶನ್‌ನಿಂದ ವಿತರಿಸಲಾದ ಪರಿಹಾರ ಕಿಟ್‌ಗಳಲ್ಲಿ ಅಗತ್ಯ ವಸ್ತುಗಳನ್ನು ಒಳಗೊಂಡಿದ್ದವು. ಒಣ ಆಹಾರ ಸಾಮಗ್ರಿಗಳಾದ ಅಕ್ಕಿ, ಬೇಳೆ ಹಾಗೂ ಅಡುಗೆ ಎಣ್ಣೆ. ಸ್ವಚ್ಛತಾ ಸಾಮಗ್ರಿಗಳಾದ ಸಾಬೂನು, ಟೂತ್‌ಪೇಸ್ಟ್ ಮತ್ತು ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು. ಇತರೆ ಅಗತ್ಯ ವಸ್ತುಗಳಾದ ಸೊಳ್ಳೆ ಪರದೆಗಳು, ತಾರ್ಪಾಲಿನ್‌ಗಳು ಹಾಗೂ ಮಕ್ಕಳಿಗಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ಇದೇ ವೇಳೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನನ್ಯಾ ಬಿರ್ಲಾ, ದೇಶವ್ಯಾಪಿ ನಡೆಸಿದ ಪರಿಹಾರ ನಿಧಿ ಸಂಗ್ರಹ ಅಭಿಯಾನದ ಮೂಲಕ ಸಂಗ್ರಹವಾದ ಸಾಮಗ್ರಿಗಳನ್ನು ಅಸ್ಸಾಂನ ಸಂತ್ರಸ್ತರಿಗೆ ತಲುಪಿಸಲು ತಮ್ಮ ತಂಡದೊಂದಿಗೆ ಆಗಮಿಸಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ, ಪ್ರವಾಹದಿಂದ ಸಂಕಷ್ಟದಲ್ಲಿರುವ ಜನರು ಎದುರಿಸುತ್ತಿರುವ ನೈಜ ಪರಿಸ್ಥಿತಿಯನ್ನು ಸ್ಥಳದಲ್ಲೇ ಅರಿಯುವ ಉದ್ದೇಶವೂ ಈ ಭೇಟಿಯದ್ದಾಗಿತ್ತು ಎಂದು ಅವರು ಹೇಳಿದರು. ಪರಿಹಾರ ಕಾರ್ಯಕ್ಕೆ ದೇಣಿಗೆ ಹಾಗೂ ಬೆಂಬಲ ನೀಡಿದ ಎಲ್ಲ ದಾನಿಗಳು ಮತ್ತು ಸಹಭಾಗಿಗಳಿಗೆ ಅನನ್ಯಾ ಬಿರ್ಲಾ ಕೃತಜ್ಞತೆ ಸಲ್ಲಿಸಿದರು.
In times of crisis, actions speak louder than wordsand @AnanyaBirlaX has shown exactly that.
— Nitish Jha (@jhanitish134) July 31, 2026
Her heartfelt commitment to the people of Assam, combined with the trust she has placed in every donation, reflects true compassion and responsible leadership. It's inspiring to see… pic.twitter.com/Sh6xfU1IhB
ಹಲವು ನಗರಗಳಲ್ಲಿ ದೇಣಿಗೆ ಸಂಗ್ರಹ ಅಭಿಯಾನ
ಅಸ್ಸಾಂನ ಪ್ರವಾಹ ಸಂತ್ರಸ್ತರಿಗೆ ನೆರವು ಒದಗಿಸುವ ಉದ್ದೇಶದಿಂದ ಅನನ್ಯಾ ಬಿರ್ಲಾ ಫೌಂಡೇಶನ್ ಜುಲೈ 28ರಿಂದ ಆಗಸ್ಟ್ 2ರವರೆಗೆ ಬಹು ನಗರಗಳಲ್ಲಿ ದೇಣಿಗೆ ಸಂಗ್ರಹ ಅಭಿಯಾನವನ್ನು ನಡೆಸಿತ್ತು. ಈ ಅಭಿಯಾನದ ಅಂಗವಾಗಿ ಮುಂಬೈ, ಬೆಂಗಳೂರು ಮತ್ತು ಕೊಲ್ಕತಾದಲ್ಲಿ ದೇಣಿಗೆ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು.
ಅಸ್ಸಾಂ ಪ್ರವಾಸದ ವೇಳೆ ಅನನ್ಯಾ ಬಿರ್ಲಾ ಅವರು ಪರಿಹಾರ ಕಾರ್ಯಕರ್ತರು, ಸ್ವಯಂಸೇವಕರು ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿ, ಸಂತ್ರಸ್ತರ ತುರ್ತು ಅಗತ್ಯಗಳ ಬಗ್ಗೆ ಮಾಹಿತಿ ಪಡೆದರು. ಅಗತ್ಯವಿರುವ ಪ್ರತಿಯೊಬ್ಬರಿಗೂ ನೆರವು ತಲುಪುವಂತೆ ಕ್ರಮ ಕೈಗೊಳ್ಳುವುದಾಗಿ ಅನನ್ಯಾ ಭರವಸೆ ನೀಡಿದರು.