ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

RCB vs RR: ರಾಜಸ್ಥಾನ್‌ಗೆ ನಿರಾಶೆ, ತವರು ಅಂಗಣದಲ್ಲಿ ಮೊದಲ ಜಯ ಸಾಧಿಸಿದ ಆರ್‌ಸಿಬಿ!

RCB vs RR Match Highlights: ವಿರಾಟ್‌ ಕೊಹ್ಲಿ (70) ಅರ್ಧಶತಕ ಹಾಗೂ ಜಾಶ್‌ ಹೇಝಲ್‌ವುಡ್‌ (33ಕ್ಕೆ 4) ಬೌಲಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 42ನೇ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ವಿರುದ್ದ 11 ರನ್‌ಗಳ ರೋಚಕ ಗೆಲುವು ಸಾಧಿಸಿತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವು ಇದಾಗಿದೆ.

RCB vs RR: ಬೆಂಗಳೂರಿನಲ್ಲಿ ಕೊನೆಗೂ ವಿಜಯ ಪತಾಕೆ ಹಾರಿಸಿದ ಆರ್‌ಸಿಬಿ!

ರಾಜಸ್ಥಾನ್‌ ರಾಯಲ್ಸ್‌ ವಿರುದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ 11 ರನ್‌ ಜಯ.

Profile Ramesh Kote Apr 24, 2025 11:34 PM

ಬೆಂಗಳೂರು: ಸತತ ಮೂರು ಸೋಲುಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bengaluru) ತಂಡ ತವರು ಅಂಗಣ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯಲ್ಲಿ ಮೊದಲು ಗೆಲುವು ಸಾಧಿಸಿತು. ಕೊನೆಯ ಎಸೆತದವರೆಗೂ ತೀವ್ರ ಕುತೂಹಲ ಕೆರಳಸಿದ್ದ ರಾಜಸ್ಥಾನ್‌ ರಾಯಲ್ಸ್‌ (Rajasthan Royals) ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ, 11 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಹದಿನೆಂಟನೇ ಆವೃತ್ತಿಯಲ್ಲಿ ರಜತ್‌ ಪಾಟಿದಾರ್‌ ನಾಯಕತ್ವದ ಬೆಂಗಳೂರು ತಂಡ ಆರನೇ ಗೆಲುವು ಪಡೆಯುವ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಟೂರ್ನಿಯಲ್ಲಿ ಏಳನೇ ಸೋಲು ಅನುಭವಿಸಿದ ರಾಜಸ್ಥಾನ್‌ ರಾಯಲ್ಸ್‌ ತಂಡಕ್ಕೆ ಪ್ಲೇಆಫ್ಸ್‌ ಹಾದಿ ಇನ್ನಷ್ಟು ಕಠಿಣವಾಗಿದೆ.

ಆರ್‌ಸಿಬಿ ನೀಡಿದ್ದ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡ, ಯಶಸ್ವಿ ಜೈಸ್ವಾಲ್‌ (49) ಹಾಗೂ ಧ್ರುವ್‌ ಜುರೆಲ್‌ (47) ಅವರ ನಿರ್ಣಾಯಕ ಬ್ಯಾಟಿಂಗ್‌ ಹೊರತಾಗಿಯೂ, ಜಾಶ್‌ ಹೇಝಲ್‌ವುಡ್‌ ( 33 ಕ್ಕೆ 4) ಪರಿಣಾಮಕಾರಿ ಬೌಲಿಂಗ್‌ ದಾಳಿಗೆ ನಲುಗಿ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 194 ರನ್‌ಗಳಿಗೆ ಸೀಮಿತವಾಯಿತು. ಆ ಮೂಲಕ ಕೂದಲೆಳೆಯ ಅಂತರದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಗೆಲುವನ್ನು ತಪ್ಪಿಸಿಕೊಂಡಿತು.

ʻಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 3500 ರನ್‌ʼ-ಇತಿಹಾಸ ಬರೆದ ವಿರಾಟ್‌ ಕೊಹ್ಲಿ!

ಆರ್‌ಆರ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಯಶಸ್ವಿ ಜೈಸ್ವಾಲ್‌ ಅವರು ಒವರ್‌ಪ್ಲೇನಲ್ಲಿ ಅಬ್ಬರಿಸಿದ್ದರು. ಅವರು ಕೇವಲ 19 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 49 ರನ್‌ ಸಿಡಿಸಿ ರಾಜಸ್ಥಾನ್‌ ರಾಯಲಗ್ಸ್‌ಗೆ ಸ್ಪೋಟಕ ಆರಂಭ ತಂದುಕೊಟ್ಟು, ಜಾಶ್‌ ಹೇಝಲ್‌ವುಡ್‌ಗೆ ವಿಕೆಟ್‌ ಒಪ್ಪಿಸಿದರು. ನಿತೀಶ್‌ ರಾಣಾ (28 ರನ್‌) ಹಾಗೂ ರಿಯಾನ್‌ ಪರಾಗ್‌ (22 ರನ್‌) ಅವರು ಸಿಕ್ಕ ಉತ್ತಮ ಆರಂಭವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.



ಧ್ರುವ್‌ ಜುರೆಲ್‌ ಆಟ ವ್ಯರ್ಥ

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಧ್ರುವ್‌ ಜುರೆಲ್‌, 34 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 3 ಬೌಂಡರಿಗಳೊಂದಿಗೆ 47 ರನ್‌ ಗಳಿಸಿ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಗೆಲ್ಲಿಸುವ ಹಾದಿಯಲ್ಲಿದ್ದರು. ಅದರಂತೆ ಕೊನೆಯ ಮೂರು ಓವರ್‌ಗಳಿಗೆ 40 ರನ್‌ಗಳ ಅಗತ್ಯವಿದ್ದಾಗ, ಭುವನೇಶ್ವರ್‌ ಕುಮಾರ್‌ಗೆ ಜುರೆಲ್‌ ಎರಡು ಸಿಕ್ಸರ್‌ ಹಾಗೂ ಎರಡು ಬೌಂಡರಿಯೊಂದಿಗೆ 22 ರನ್‌ ಸಿಡಿಸಿದ್ದರು. ಆ ಮೂಲಕ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ ತಂದುಕೊಟ್ಟಿದ್ದರು. ಆ ಮೂಲಕ ಕೊನೆಯ ಎರಡು ಓವರ್‌ಗಳಲ್ಲಿ 18 ರನ್‌ ಅಗತ್ಯವಿತ್ತು. ಆದರೆ, ಇವರನ್ನು ಜಾಶ್‌ ಹೇಝಲ್‌ವುಡ್‌ ಕಟ್ಟಿ ಹಾಕಿದರು.



ಆರ್‌ಸಿಬಿಗೆ ಗೆಲುವು ತಂದುಕೊಟ್ಟ ಜಾಶ್‌ ಹೇಝಲ್‌ವುಡ್‌

19ನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್‌ ತಮ್ಮ ಬುದ್ದಿವಂತಿಕೆಯ ಬೌಲಿಂಗ್‌ನಿಂದ ಕೇವಲ ಒಂದು ರನ್‌ ನೀಡಿ ಜೋಫ್ರಾ ಆರ್ಚರ್‌ ಹಾಗೂ ಧ್ರುವ್‌ ಜುರೆಲ್‌ ಅವರ ನಿರ್ಣಾಯಕ ವಿಕೆಟ್‌ಗಳನ್ನು ಕಿತ್ತರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಕೈನಲ್ಲಿದ್ದ ಪಂದ್ಯವನ್ನು ಹೇಝಲ್‌ವುಡ್‌ ಕಸಿದುಕೊಂಡರು. ಇದರೊಂದಿಗೆ ಆರ್‌ಆರ್‌ಗೆ ಕೊನೆಯ ಓವರ್‌ಗೆ 17 ರನ್‌ ಅಗತ್ಯವಿತ್ತು. 20ನೇ ಓವರ್‌ನಲ್ಲಿ ಯಶ್‌ ದಯಾಳ್‌, 5 ರನ್‌ ನೀಡಿ ಎರಡು ವಿಕೆಟ್‌ ಕಿತ್ತರು. ಅಂತಿಮವಾಗಿ ಆರ್‌ಸಿಬಿ 11 ರನ್‌ಗಳಿಂದ ಗೆದ್ದು ಬೀಗಿತು. 4 ಓವರ್‌ ಬೌಲ್‌ ಮಾಡಿದ ಹೇಝಲ್‌ವುಡ್‌ 33 ರನ್‌ ನೀಡಿ 4 ವಿಕೆಟ್‌ ಕಿತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.



205 ರನ್‌ ಕಲೆ ಹಾಕಿದ್ದ ಆರ್‌ಸಿಬಿ

ಇದಕ್ಕೂ ಮುನ್ನ ತವರು ಅಂಗಣದಲ್ಲಿ ಸತತ ನಾಲ್ಕನೇ ಬಾರಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಕಳೆದ ಮೂರು ಪಂದ್ಯಗಳಲ್ಲಿ ಮಾಡಿದ್ದ ತಪ್ಪನ್ನು ತಿದ್ದಿಕೊಂಡಿತು. ವಿರಾಟ್‌ ಕೊಹ್ಲಿ (70 ರನ್‌) ಹಾಗೂ ದೇವದತ್‌ ಪಡಿಕ್ಕಲ್‌ (50 ರನ್‌) ಅವರ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ, 5 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ಗೆ 206 ರನ್‌ಗಳ ಗುರಿಯನ್ನು ನೀಡಿತು.

IPL 2025: ಅರ್ಧಶತಕ ಸಿಡಿಸುವ ಮೂಲಕ ಕ್ರಿಸ್‌ ಗೇಲ್‌ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಐದನೇ ಅರ್ಧಶತಕ ಸಿಡಿಸಿದ ಕೊಹ್ಲಿ

ಆರಂಭಿಕರಾದ ವಿರಾಟ್‌ ಕೊಹ್ಲಿ ಹಾಗೂ ಫಿಲ್‌ ಸಾಲ್ಟ್‌ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 62 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಆರ್‌ಸಿಬಿಗೆ ಉತ್ತಮ ಆರಂಭವನ್ನು ತಂದುಕೊಟ್ಟಿತ್ತು. ಆರಂಭಿಕ ಫಿಲ್‌ ಸಾಲ್ಟ್‌ 23 ಎಸೆತಗಳಲ್ಲಿ 26 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ವಿರಾಟ್‌ ಕೊಹ್ಲಿ, 42 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 70 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ಐದನೇ ಅರ್ಧಶತಕವನ್ನು ಕೊಹ್ಲಿ ಪೂರ್ಣಗೊಳಿಸಿದ ಬಳಿಕ ಶತಕದ ಹಾದಿಯಲ್ಲಿದ್ದರು. ಆದರೆ, ಅವರು ಜೋಫ್ರಾ ಆರ್ಚರ್‌ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕವರ್ಸ್‌ನಲ್ಲಿ ಕ್ಯಾಚ್‌ ಕೊಟ್ಟರು.



ಕೊಹ್ಲಿ-ಪಡಿಕ್ಕಲ್‌ ಜುಗಲ್‌ಬಂದಿ

ಫಿಲ್‌ ಸಾಲ್ಟ್‌ ವಿಕೆಟ್‌ ಒಪ್ಪಿಸಿದ ಬಳಿಕ ಕ್ರೀಸ್‌ನಲ್ಲಿ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಜೋಡಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿತು. ರಾಜಸ್ಥಾನ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಇಬ್ಬರು, ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಅಬ್ಬರಿಸಿದರು. ಇವರು 95 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಅತ್ಯುತ್ತಮ ಬ್ಯಾಟ್‌ ಮಾಡಿದ ಕನ್ನಡಿಗ ಪಡಿಕ್ಕಲ್‌, 27 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ ಸತತ ಎರಡನೇ ಅರ್ಧಶತಕವನ್ನು ಬಾರಿಸಿ ಔಟ್‌ ಆದರು.

ನಾಯಕ ರಜತ್‌ ಪಾಟಿದಾರ್‌ ವಿಕೆಟ್‌ ಒಪ್ಪಿಸಿದ ಬಳಿಕ ಜೊತೆಯಾದ ಜಿತೇಶ್‌ ಶರ್ಮಾ ಹಾಗೂ ಟಿಮ್‌ ಡೇವಿಡ್‌ ಅವರು ಮುರಿಯದ 5ನೇ ವಿಕೆಟ್‌ಗೆ 45 ರನ್‌ಗಳ ನಿರ್ಣಾಯಕ ಕೊಡುಗೆಯನ್ನು ನೀಡಿದ್ದರು. ಕೊನೆಯಲ್ಲಿ ಜಿತೇಶ್‌ ಶರ್ಮಾ 10 ಎಸೆತಗಳಲ್ಲಿ 20 ರನ್‌ ಸಿಡಿಸಿದರೆ, ಟಿಮ್‌ ಡೇವಿಡ್‌ 15 ಎಸೆತಗಳಲ್ಲಿ 23 ರನ್‌ಗಳನ್ನು ಕೊಡುಗೆಯನ್ನು ತಂಡಕ್ಕೆ ನೀಡಿದ್ದರು.

ಸ್ಕೋರ್‌ ವಿವರ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 20 ಓವರ್‌ಗಳಿಗೆ 205-5 (ವಿರಾಟ್‌ ಕೊಹ್ಲಿ 70, ದೇವದತ್‌ ಪಡಿಕ್ಕಲ್‌ 50, ಫಿಲ್‌ ಸಾಲ್ಟ್‌ 26, ಟಿಮ್‌ ಡೇವಿಡ್‌ 23, ಜಿತೇಶ್‌ ಶರ್ಮಾ 20*; ವಾನಿಂದು ಹಸರಂಗ 30 ಕ್ಕೆ 1, ಸಂದೀಪ್‌ ಶರ್ಮಾ 45ಕ್ಕೆ 2)

ರಾಜಸ್ಥಾನ್‌ ರಾಯಲ್ಸ್‌: 194-9 (ಯಶಸ್ವಿ ಜೈಸ್ವಾಲ್‌ 49, ಧ್ರುವ್‌ ಜುರೆಲ್‌ 47; ಜಾಶ್‌ ಹೇಝಲ್‌ವುಡ್‌ 33 ಕ್ಕೆ 4, ಕೃಣಾಲ್‌ ಪಾಂಡ್ಯ 31 ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜಾಶ್‌ ಹೇಝಲ್‌ವುಡ್‌