BBL 2025: 2026ರ ಮಿನಿ ಹರಾಜಿಗೂ ಮುನ್ನ ಸ್ಪೋಟಕ ಶತಕ ಬಾರಿಸಿದ ಟಿಮ್ ಸೀಫರ್ಟ್!
2025-26ರ ಬಿಗ್ ಬ್ಯಾಷ್ ಲೀಗ್‌ನ ಎರಡನೇ ಪಂದ್ಯ ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಅಬ್ಬರದ ಶತಕವನ್ನು ಬಾರಿಸಿದ್ದಾರೆ. ಆ ಮೂಲಕ ಮಂಗಳವಾರ ನಡೆಯುವ ಐಪಿಎಲ್ ಟೂರ್ನಿಯ ಮಿನಿ ಹರಾಜಿಗೂ ಮುನ್ನ ಫ್ರಾಂಚೈಸಿಗಳ ಗಮನವನ್ನು ಸೆಳೆದಿದ್ದಾರೆ.
ಬಿಗ್‌ಬ್ಯಾಷ್ ಲೀಗ್ ಪಂದ್ಯದಲ್ಲಿ ಶತಕ ಬಾರಿಸಿದ ಟಿಮ್ ಸೀಫರ್ಟ್. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಬಿಗ್ ಬ್ಯಾಷ್ ಲೀಗ್ (BBL 2025) ಎರಡನೇ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ಬ್ರಿಸ್ಬೇನ್ ಹೀಟ್ ವಿರುದ್ಧ 14 ರನ್‌ಗಳಿಂದ ಜಯಗಳಿಸಿತು. ಶತಕ ಸಿಡಿಸಿದ ಟಿಮ್ ಸೀಫರ್ಟ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲು ಬ್ಯಾಟ್ ಮಾಡಿದ ರೆನೆಗೇಡ್ಸ್ ತಂಡದ ಪರ ಸ್ಪೋಟಕ ಬ್ಯಾಟ್ ಮಾಡಿದ ಕಿವೀಸ್ ವಿಕೆಟ್ ಕೀಪರ್ ಸೀಫರ್ಟ್, ಭರ್ಜರಿ ಶತಕ ಬಾರಿಸಿದರು. ಆ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸ್ಪೋಟಕ ಶತಕದ ಮೂಲಕ ಮಂಗಳವಾರ ನಡೆಯುವ 2026ರ ಐಪಿಎಲ್ ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ ಫ್ರಾಂಚೈಸಿಗಳ ಗಮನವನ್ನು ಸೆಳೆದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 212 ರನ್ ಗಳಿಸಿತು. ಜಾಶ್ ಬ್ರೌನ್ ಮತ್ತು ಟಿಮ್ ಸೀಫರ್ಟ್ 3.3 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 28 ರನ್ ಸೇರಿಸಿದರು. ಬ್ರೌನ್ 15 ರನ್‌ಗಳಿಗೆ ಔಟಾದರು. ನಂತರ ಮೊಹಮ್ಮದ್ ರಿಜ್ವಾನ್ (4) ಮತ್ತು ಜೇಕ್ ಫ್ರೇಸರ್-ಮೆಕ್‌ಗುರ್ಕ್ (14) ನಿರ್ಗಮಿಸಿದರು. ತಂಡವು 82 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
IPL 2026 Retained Players: ತಂಡಗಳು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ
ಅಲ್ಲಿಂದ ಟಿಮ್ ಸೀಫರ್ಟ್, ಆಲಿವರ್ ಪೀಕ್ ಅವರೊಂದಿಗೆ 54 ಎಸೆತಗಳಲ್ಲಿ ನಾಲ್ಕನೇ ವಿಕೆಟ್‌ಗೆ 121 ರನ್‌ಗಳನ್ನು ಸೇರಿಸಿ ತಂಡವನ್ನು 200 ದಾಟಿಸಿದರು. ಸೀಫರ್ಟ್ 56 ಎಸೆತಗಳಲ್ಲಿ 6 ಸಿಕ್ಸರ್‌ಗಳು ಮತ್ತು 9 ಬೌಂಡರಿಗಳೊಂದಿಗೆ 102 ರನ್ ಗಳಿಸಿದರು, ಆದರೆ ಆಲಿವರ್ ಪೀಕ್ 29 ಎಸೆತಗಳಲ್ಲಿ 57 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 3 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳು ಸೇರಿದ್ದವು. ಎದುರಾಳಿ ತಂಡದ ಪರ, ಜ್ಯಾಕ್ ವೈಲ್ಡರ್‌ಮತ್ ಗರಿಷ್ಠ 3 ವಿಕೆಟ್‌ಗಳನ್ನು ಪಡೆದರೆ, ಕ್ಸೇವಿಯರ್ ಬಾರ್ಟ್ಲೆಟ್ ಮತ್ತು ಪ್ಯಾಟ್ರಿಕ್ ಡೂಲಿ ತಲಾ 1 ವಿಕೆಟ್ ಪಡೆದರು.
ಐಪಿಎಲ್ ಮಿನಿ ಹರಾಜಿನಲ್ಲಿ ಸೀಫರ್ಟ್ ಹೆಸರು ಇದೆ. ಡಿಸೆಂಬರ್ 16, ಮಂಗಳವಾರ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ನ್ಯೂಜಿಲೆಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಟಿಮ್ ಸೀಫರ್ಟ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರು 1.5 ಕೋಟಿ ಮೂಲ ಬೆಲೆಯೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅವರ ಇನಿಂಗ್ಸ್ ಖಂಡಿತವಾಗಿಯೂ ಐಪಿಎಲ್ ಫ್ರಾಂಚೈಸಿಗಳನ್ನು ಆಕರ್ಷಿಸುತ್ತದೆ.
IPL 2026 Mini Auction: ಪಂಜಾಬ್ ಕಿಂಗ್ಸ್ ಟಾರ್ಗೆಟ್ ಮಾಡಬಲ್ಲ ಐವರು ಆಟಗಾರರು!
198 ರನ್‌ಗಳಿಗೆ ಶಕ್ತವಾದ ಬ್ರಿಸ್ಬೇನ್ ಹೀಟ್
213 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಬ್ರಿಸ್ಬೇನ್ ಹೀಟ್ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 198 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಬ್ರಿಸ್ಬೇನ್ ಕಳಪೆ ಆರಂಭವನ್ನು ಹೊಂದಿತ್ತು, 55 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಅಲ್ಲಿಂದ ಕಾಲಿನ್ ಮನ್ರೋ, ಮ್ಯಾಕ್ಸ್ ಬ್ರ್ಯಾಂಟ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 45 ರನ್‌ಗಳನ್ನು ಸೇರಿಸಿ ತಂಡವನ್ನು 100ಕ್ಕೆ ಕೊಂಡೊಯ್ದರು. ಮ್ಯಾಕ್ಸ್ ಬ್ರ್ಯಾಂಟ್ 14 ರನ್‌ಗಳಿಗೆ ಔಟಾದರು. ಇದು ತಂಡದ ನಾಲ್ಕನೇ ವಿಕೆಟ್ ಆಗಿದ್ದು, ನಂತರ ಬ್ರಿಸ್ಬೇನ್ ತನ್ನ ಆರನೇ ವಿಕೆಟ್ ಅನ್ನು ಕಳೆದುಕೊಂಡು ಒಟ್ಟು 108 ರನ್‌ಗಳನ್ನು ತಲುಪಿತು.
ಜಿಮ್ಮಿ ಪಿಯರ್ಸನ್ ಮತ್ತು ಹಗ್ ವೈಬ್ಗೆನ್ ಏಳನೇ ವಿಕೆಟ್‌ಗೆ 35 ಎಸೆತಗಳಲ್ಲಿ 78 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡು ತಂಡವನ್ನು ಬೃಹತ್ ಮೊತ್ತಕ್ಕೆ ಮುನ್ನಡೆಸಿದರು. ಪಿಯರ್ಸನ್ 22 ಎಸೆತಗಳಲ್ಲಿ 50 ರನ್ ಗಳಿಸಿದರೆ, ಹಗ್ ವೈಬ್ಗೆನ್ ಔಟಾಗದೆ 38 ರನ್ ಗಳಿಸಿದರು. ಎದುರಾಳಿ ತಂಡದ ಪರ ನಾಯಕ ವಿಲ್ ಸದರ್ಲ್ಯಾಂಡ್ ಮೂರು ವಿಕೆಟ್ ಪಡೆದರೆ, ಜೇಸನ್ ಬೆಹ್ರೆಂಡಾರ್ಫ್ ಮತ್ತು ಗುರಿಂದರ್ ಸಂಧು ತಲಾ ಎರಡು ವಿಕೆಟ್ ಪಡೆದರು.