ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs GT: ಗುಜರಾತ್‌ ಎದುರು ವಿರಾಟ ದರ್ಶನ, ಟೈಟನ್ಸ್‌ಗೆ ಬೆವರಿಳಿಸಿದ ಚಾಲೆಂಜರ್ಸ್‌!

RCB vs GT Match Highlights: ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 34ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 5 ವಿಕೆಟ್‌ ಗೆಲುವು ಪಡೆಯಿತು. ಐದನೇ ಗೆಲುವಿನ ಮೂಲಕ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪಿತು.

ಗುಜರಾತ್‌ಗೆ‌ ಸೋಲಿನ ಆಘಾತ ನೀಡಿದ ರಾಯಲ್‌ ಚಾಲೆಂಜರ್ಸ್!

ಗುಜರಾತ್‌ ಟೈಟನ್ಸ್‌ ಎದುರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರಿಗೆ ಜಯ. -

Profile
Ramesh Kote Apr 24, 2026 11:05 PM

ಬೆಂಗಳೂರು: ವಿರಾಟ್‌ ಕೊಹ್ಲಿ (Virat Kohli) ಹಾಗೂ ದೇವದತ್‌ ಪಡಿಕ್ಕಲ್‌ (Devdutt Padikkal) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 34ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ 10 ಅಂಕಗಳು ಹಾಗೂ ಧನಾತ್ಮಕ ರನ್‌ರೇಟ್‌ ಬಲದಿಂದ ರಜತ್‌ ಪಾಟಿದಾರ್‌ ನಾಯಕತ್ವದ ಆರ್‌ಸಿಬಿ ಟೂರ್ನಿಯ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿತು. ಇನ್ನು ಸಾಯಿ ಸುದರ್ಶನ್‌ ಶತಕದ ಹೊರತಾಗಿಯೂ ನಾಲ್ಕನೇ ಸೋಲು ಅನುಭವಿಸಿದ ಶುಭಮನ್‌ ಗಿಲ್‌ ನಾಯಕತ್ವದ ಗುಜರಾತ್‌ ತಂಡ ಏಳನೇ ಸ್ಥಾನದಲ್ಲಿಯೇ ಉಳಿಯಿತು.

ಶುಕ್ರವಾರ ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿಟಿ ನೀಡಿದ್ದ 206 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ, ವಿರಾಟ್‌ ಕೊಹ್ಲಿ (81 ರನ್) ಹಾಗೂ ದೇವದತ್‌ ಪಡಿಕ್ಕಲ್‌ (‌55 ರನ್‌) ಅವರ ಅರ್ಧಶತಕಗಳ ಬಲದಿಂದ 18.5 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ ಗೆಲುವು ದಾಖಲಿಸಿತು. ಈ ಸೀಸನ್‌ನಲ್ಲಿ ತವರು ಅಂಗಣದಲ್ಲಿನ ಕೊನೆಯ ಪಂದ್ಯವನ್ನು ಗೆದ್ದು ಅಭಿಮಾನಿಗಳಿಗೆ ಆರ್‌ಸಿಬಿ ಭರ್ಜರಿ ರಸದೌತಣ ಉಣಬಡಿಸಿತು.

RCB vs GT: 800 ಐಪಿಎಲ್‌ ಬೌಂಡರಿಗಳ ಮೂಲಕ ದೊಡ್ಡ ದಾಖಲೆ ಬರೆದ ವಿರಾಟ್‌ ಕೊಹ್ಲಿ!

ಕೊಹ್ಲಿ-ಪಡಿಕ್ಕಲ್‌ ಜುಗಲ್‌ಬಂದಿ

ಫಿಲ್‌ ಸಾಲ್ಟ್‌ ಅನುಪಸ್ಥಿತಿಯಲ್ಲಿ ವಿರಾಟ್‌ ಕೊಹ್ಲಿ ಜತೆ ಇನಿಂಗ್ಸ್‌ ಆರಂಭಿಸಿದ ಜೇಕಬ್‌ ಬೆಥೆಲ್‌ 14 ರನ್‌ ಗಳಿಸಿ ಮೊಹಮ್ಮದ್‌ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ತಮ್ಮ ಅಬ್ಬರದ ಬ್ಯಾಟಿಂಗ್‌ ಮೂಲಕ ಜಿಟಿ ಬೌಲರ್‌ಗಳಿಗೆ ಬೆವರಿಳಿಸಿದರು. ಈ ಜೋಡಿ 59 ಎಸೆತಗಳಲ್ಲಿ 115 ರನ್‌ಗಳ ಜೊತೆಯಾಟವನ್ನು ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. 203ಕ್ಕೂ ಹೆಚ್ಚಿನ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಪಡಿಕ್ಕಲ್‌, 27 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 2 ಬೌಂಡರಿಗಳೊಂದಿಗೆ 55 ರನ್‌ ಚಚ್ಚಿ ರಶೀದ್‌ ಖಾನ್‌ಗೆ ಔಟ್‌ ಆದರು.



81 ರನ್‌ ಸಿಡಿಸಿದ ವಿರಾಟ್‌ ಕೊಹ್ಲಿ

ಮೊದಲ ಓವರ್‌ನಲ್ಲಿಯೇ ವಾಷಿಂಗ್ಟನ್‌ ಸುಂದರ್‌ ಅವರಿಂದ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಂಡ ವಿರಾಟ್‌ ಕೊಹ್ಲಿ, ಮತ್ತೊಂದು ಮ್ಯಾಚ್‌ ವಿನ್ನಿಂದ ಇನಿಂಗ್ಸ್‌ ಆಡಿದರು. ಅವರು ಆಡಿದ 44 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ 81 ರನ್‌ ಗಳಿಸಿದರು. ಆರ್‌ಸಿಬಿ ತಂಡವನ್ನು ಬಹುಬೇಗ ಗೆಲ್ಲಿಸುವ ಪ್ರಯತ್ನದಲ್ಲಿ ಕೊಹ್ಲಿ, ಜೇಸನ್‌ ಹೋಲ್ಡರ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಜಿತೇಶ ಶರ್ಮಾ ಹಾಗೂ ರಜತ್‌ ಪಾಟಿದಾರ್‌ ಒಂದೊಂದು ಸಿಕ್ಸರ್‌ ಬಾರಿಸಿ ತಂಡವನ್ನು ಬಹುಬೇಗ ಗೆಲ್ಲಿಸುವ ಪ್ರಯತ್ನದಲ್ಲಿ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ಆರ್‌ಸಿಬಿಗೆ ಕೊನೆಯ 4 ಓವರ್‌ಗಳಲ್ಲಿ 31 ರನ್‌ ಅಗತ್ಯವಿತ್ತು. ಆದರೆ, 18ನೇ ಓವರ್‌ನಲ್ಲಿ ಕೃಣಾಲ್‌ ಪಾಂಡ್ಯ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್‌ ಮೂಲಕ ಆರ್‌ಸಿಬಿಗೆ ಗೆಲುವು ಖಾತ್ರಿಗೊಳಿಸಿದರು. ಕೃಣಾಲ್‌ ಕೊನೆಯಲ್ಲಿ 12 ಎಸೆತಗಳಲ್ಲಿ ನಿರ್ಣಾಯಕ 23 ರನ್‌ಗಳನ್ನು ಬಾರಿಸಿದರು.



ಸಾಯಿ ಸುದರ್ಶನ್‌-ಶುಭಮನ್‌ ಗಿಲ್‌ ಜುಗಲ್‌ಬಂದಿ

ಇದಕ್ಕೂ ಮುನ್ನ ಟಾಸ್‌ ಗೆದ್ದು ಎದುರಾಳಿ ಗುಜರಾತ್‌ ಟೈಟನ್ಸ್‌ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನ ನೀಡಿದ್ದ ಆರ್‌ಸಿಬಿಯ ಯೋಜನೆಯನ್ನು ಸಾಯಿ ಸುದರ್ಶನ್‌ ತಲೆ ಕೆಳಗಾಗುವಂತೆ ಮಾಡಿದರು. ಜಿಟಿ ಪರ ಇನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಮೊದಲನೇ ವಿಕೆಟ್‌ಗೆ 76 ಎಸೆತಗಳಲ್ಲಿ 128 ರನ್‌ಗಳನ್ನು ಕಲೆ ಹಾಕಿದರು. ಒಂದು ಕಡೆ ಸುದರ್ಶನ್‌ ಸ್ಪೋಟಕ ಬ್ಯಾಟಿಂಗ್‌ ತೋರುತ್ತಿದ್ದರೆ, ಮತ್ತೊಂದು ಕಡೆ ಗಿಲ್‌ ಸ್ಟ್ರೈಕ್‌ ರೊಟೇಟ್‌ ಮಾಡುತ್ತಾ ಅವಕಾಶ ಸಿಕ್ಕಾಗ ಚೆಂಡನ್ನು ಬೌಂಡರಿ ಹಾಗೂ ಸಿಕ್ಸರ್‌ ಗೆರೆ ದಾಟಿಸುತ್ತಿದ್ದರು. ಆದರೆ ಅವರು 24 ಎಸೆತಗಳಲ್ಲಿ 32 ರನ್‌ ಗಳಿಸಿದ ಬಳಿಕ ಸುಯಾಶ್‌ ಶರ್ಮಾಗೆ ಸಿಕ್ಸರ್‌ ಹೊಡೆಯುವ ಪ್ರಯತ್ನದಲ್ಲಿ ದೇವದತ್‌ ಪಡಿಕ್ಕಲ್‌ಗೆ ಕ್ಯಾಚ್‌ ಕೊಟ್ಟು ನಿರ್ಗಮಿಸಿದರು.

RCB vs GT: 2000 ರನ್‌ ಪೂರ್ಣಗೊಳಿಸಿದ ಕ್ರಿಸ್‌ ಗೇಲ್‌ ದಾಖಲೆ ಮುರಿದ ಸಾಯಿ ಸುದರ್ಶನ್‌!

ಮೂರನೇ ಶತಕ ಬಾರಿಸಿದ ಸುದರ್ಶನ್‌

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜೋಸ್‌ ಬಟ್ಲರ್‌ 16 ಎಸೆತಗಳಲ್ಲಿ 25 ರನ್‌ ಗಳಿಸಿದ ಬಳಿಕ ಔಟ್‌ ಆದರು. ಆದರೆ, ಒಂದು ತುದಿಯಲ್ಲಿ ದೀರ್ಘವಧಿ ಬ್ಯಾಟ್‌ ಮಾಡಿದ ಸಾಯಿ ಸುದರ್ಶನ್‌, ಆರ್‌ಸಿಬಿ ಬೌಲರ್‌ಗಳ ಬೌಲಿಂಗ್‌ ತಂತ್ರವನ್ನು ಸುಲಭವಾಗಿ ಮೆಟ್ಟಿ ನಿಂತರು. ಅವರು ಕ್ರೀಸ್‌ನಲ್ಲಿ ಇರುವವರೆಗೂ ಲೀಲಾ-ಜಾಲವಾಗಿ ಬ್ಯಾಟ್‌ ಬೀಸಿದರು. ಅವರು ಆಡಿದ 58 ಎಸೆತಗಳಲ್ಲಿ 5 ಸಿಕ್ಸರ್‌ ಹಾಗೂ 11 ಬೌಂಡರಿಗಳೊಂದಿಗೆ 100 ರನ್‌ ಗಳಿಸಿದರು. ಆ ಮೂಲಕ ತಮ್ಮ ಐಪಿಎಲ್‌ ವೃತ್ತಿ ಜೀವನದ ಮೂರನೇ ಶತಕ ಹಾಗೂ ವೇಗವಾಗಿ 2000 ರನ್‌ಗಳನ್ನು ಪೂರ್ಣಗೊಳಿಸಿದ ಮೊದಲ ಬ್ಯಾಟರ್‌ ಎನಿಸಿಕೊಂಡರು. ಆದರೆ, 16ನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್‌ ಎಸೆತದಲ್ಲಿ ಸಾಯಿ ಔಟ್‌ ಆದರು.



205 ರನ್‌ ಕಲೆ ಹಾಕಿದ ಜಿಟಿ

ಸಾಯಿ ಸುದರ್ಶನ್‌ ವಿಕೆಟ್‌ ಒಪ್ಪಿಸಿದ ಬಳಿಕ ಸುಯಾಶ್‌ ಶರ್ಮಾ, ಭುವನೇಶ್ವರ್‌ ಕುಮಾರ್‌ ಹಾಗೂ ಜಾಶ್‌ ಹೇಝಲ್‌ವುಡ್‌ ಅವರು ಕ್ರಮವಾಗಿ 17,18 ಹಾಗೂ 19ನೇ ಓವರ್‌ಗಳಲ್ಲಿ ಕೇವಲ 17 ರನ್‌ ನೀಡುವ ಮೂಲಕ ಜಿಟಿ ತಂಡವನ್ನು ಕಟ್ಟಿ ಹಾಕಿದ್ದರು. ಆದರೆ, ನಿರ್ಣಾಯಕ ಸಮಯದಲ್ಲಿ 20ನೇ ಓವರ್‌ ಬೌಲ್‌ ಮಾಡಬೇಕಿದ್ದ ರಸಿಖ್‌ ದಾರ್‌ ಸಲಾಮ್‌ ಅವರು ಸ್ನಾಯು ಸೆಳೆತಕ್ಕೆ ತುತ್ತಾಗಿ 20ನೇ ಓವರ್‌ ಬೌಲ್‌ ಮಾಡಲು ಸಾಧ್ಯವಾಗದೆ ಪೆವಿಲಿಯನ್‌ಗೆ ತೆರಳಿದರು. ಇದರ ಪರಿಣಾಮ ಕೃಣಾಲ್‌ 20ನೇ ಓವರ್‌ನಲ್ಲಿ ಜೇಸನ್‌ ಹೋಲ್ಡರ್‌ಗೆ ಎರಡು ಸಿಕ್ಸರ್‌ ಹಾಗೂ ಒಂದು ಬೌಂಡರಿ ಬಿಟ್ಟುಕೊಟ್ಟರು. ಅಂತಿಮವಾಗಿ ಗುಜರಾತ್‌ ಟೈಟನ್ಸ್‌ 20 ಓವರ್‌ಗಳಿಗೆ 3 ವಿಕೆಟ್‌ಗಳ ನಷ್ಟಕ್ಕೆ 205 ರನ್‌ಗಳನ್ನು ಕಲೆ ಹಾಕಿತು. ಜೇಸನ್‌ ಹೋಲ್ಡರ್‌ 10 ಎಸೆತಗಳಲ್ಲಿ 23 ರನ್‌ ಗಳಿಸಿದರು.

RCB vs GT ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಏಕೆ ಆಡುತ್ತಿಲ್ಲ? ಕಾರಣ ಕೊಟ್ಟ ರಜತ್‌ ಪಾಟಿದಾರ್‌!

ಸ್ಕೋರ್‌ ವಿವರ

ಗುಜರಾತ್‌ ಟೈಟನ್ಸ್‌: 20 ಓವರ್‌ಗಳಿಗೆ 205-3 ( ಸಾಯಿ ಸುದರ್ಶನ್‌ 100 ರನ್‌, ಶುಭಮನ್‌ ಗಿಲ್‌ 32‌ ರನ್, ಜೋಸ್‌ ಬಟ್ಲರ್‌ 25, ಜೇಸನ್‌ ಹೋಲ್ಡರ್‌ 23* ರನ್;‌ ಭುವನೇಶ್ವರ್‌ ಕುಮಾರ್‌ 31 ಕ್ಕೆ 1, ಸುಯಾಶ್‌ ಶರ್ಮಾ 36 ಕ್ಕೆ 1, ಜಾಶ್‌ ಹೇಝಲ್‌ವುಡ್‌ 40 ಕ್ಕೆ 1)

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು: 18.5 ಓವರ್‌ಗಳಿಗೆ 206-5 (ವಿರಾಟ್‌ ಕೊಹ್ಲಿ 81 ರನ್‌, ದೇವದತ್‌ ಪಡಿಕ್ಕಲ್‌ 55 ರನ್‌, ಕೃಣಾಲ್‌ ಪಾಂಡ್ಯ 23* ರನ್‌; ರಶೀದ್‌ ಖಾನ್‌ 49ಕ್ಕೆ 2)

ಪಂದ್ಯ ಶ್ರೇಷ್ಠ ಪ್ರಶಸ್ತಿ: ವಿರಾಟ್‌ ಕೊಹ್ಲಿ