IPL 2026: 600 ರನ್ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ!
ಗುಜರಾತ್ ಟೈಟನ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 43 ರನ್ ಗಳಿಸಿ ವಿಕೆಟ್ ಒಪ್ಪಿಸಿದರೂ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ಸತತ ನಾಲ್ಕು ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
600 ರನ್ ಗಳಿಸಿ ವಿಶೇಷ ದಾಖಲೆ ಬರೆದ ವಿರಾಟ್ ಕೊಹ್ಲಿ. -
ಧರ್ಮಶಾಲಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರು ಈಗಾಗಲೇ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ 2026ರ ಐಪಿಎಲ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ 25 ಎಸೆತಗಳಲ್ಲಿ 43 ರನ್‌ಗಳನ್ನು ಗಳಿಸಿದ ಬಳಿಕ ವಿಕೆಟ್ ಒಪ್ಪಿಸಿದರು, ಆ ಮೂಲಕ ಅರ್ಧಶತಕವನ್ನು ಗಳಿಸುವ ಅವಕಾಶವನ್ನು ಕೈ ಚೆಲ್ಲಿಕೊಂಡರು. ಇದರ ಹೊರತಾಗಿಯೂ ಐಪಿಎಲ್‌ನ ಸತತ ನಾಲ್ಕು ಆವೃತ್ತಿಗಳಲ್ಲಿಯೂ 600ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಕಿಂಗ್ ಕೊಹ್ಲಿ ಬರೆದಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ 600 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಅವರ ಇನ್ನೂ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಹೊಂದಿದ್ದಾರೆ. 2023ರ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಸತತವಾಗಿ ನಾಲ್ಕು ಆವೃತ್ತಿಗಳಲ್ಲಿ ಕೊಹ್ಲಿ 600ಕ್ಕೂ ಅಧಿಕ ರನ್‌ಗಳನ್ನು ಬಾರಿಸಿದ್ದಾರೆ.
ದಿಗ್ಗಜ ಆಟಗಾರನಾದರೂ ಕ್ರೀಡಾಸ್ಫೂರ್ತಿ ಮರೆತ ವಿರಾಟ್ ಕೊಹ್ಲಿ; ನೆಟ್ಟಿಗರ ಟೀಕೆ
2023ರಲ್ಲಿ ಯಾವುದೇ ಟಿ20ಐ ಪಂದ್ಯ ಆಡದಿದ್ದರೂ ಕೊಹ್ಲಿ ಇದೇ ವರ್ಷದ ಐಪಿಎಲ್ ಟೂರ್ನಿಯಲ್ಲಿ 600ಕ್ಕೂ ಹೆಚ್ಚು ರನ್‌ಗಳ ಗಡಿ ದಾಟಿ ಒಟ್ಟು 639 ರನ್‌ಗಳನ್ನು ಗಳಿಸಿದ್ದರು. ಅವರ ಈ ಸಾಧನೆಯಲ್ಲಿ ಎರಡು ಶತಕಗಳೂ ಸೇರಿದ್ದವು. ಅವರು 2024ರಲ್ಲಿ ಮತ್ತೆ ಭಾರತ ಟಿ20 ತಂಡಕ್ಕೆ ಮರಳಿದ್ದು, ಬಳಿಕ ವಿಶ್ವಕಪ್ ಗೆಲುವಿನ ನಂತರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
𝐓𝐡𝐞 𝐆𝐨𝐥𝐝 𝐒𝐭𝐚𝐧𝐝𝐚𝐫𝐝 🌟
— Royal Challengers Bengaluru (@RCBTweets) May 26, 2026
Virat Kohli becomes the first player to score 6️⃣0️⃣0️⃣+ runs in 4️⃣ consecutive #TATAIPL seasons. 🫡🔥 pic.twitter.com/sNBOTuT9eP
ವಿಶ್ವಕಪ್ ಟೂರ್ನಿಗೂ ತೆರಳುವ ಮುನ್ನ ವಿರಾಟ್ ಕೊಹ್ಲಿ 2024ರಲ್ಲಿ ಭರ್ಜರಿ ಪ್ರದರ್ಶನ ನೀಡಿ 741 ರನ್‌ಗಳನ್ನು ಕಲೆಹಾಕಿದ್ದರು. ಆ ಮೂಲಕ ಅವರು ತಮ್ಮ ವೃತ್ತಿಜೀವನದಲ್ಲಿ ಎರಡನೇ ಬಾರಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆ ಸೀಸನ್‌ನಲ್ಲಿ ಅವರು ಒಂದು ಶತಕವೂ ದಾಖಲಿಸಿದ್ದರು. ಇದಾದ ಬಳಿಕ, ಆರ್‌ಸಿಬಿಯ ಪ್ರಶಸ್ತಿ ವಿಜೇತ 2025ರ ಅಭಿಯಾನದಲ್ಲೂ ಕೊಹ್ಲಿ 657 ರನ್‌ಗಳನ್ನು ಗಳಿಸಿದರು. ಫೈನಲ್‌ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು, 18 ವರ್ಷಗಳ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕದ ಕೊಹ್ಲಿಯ ಮೊದಲ ಐಪಿಎಲ್ ಸೀಸನ್ ಇದಾಗಿತ್ತು. ಪ್ರಸ್ತುತ ಐಪಿಎಲ್ 2026ರಲ್ಲಿ ಅವರು ಈಗಾಗಲೇ 600 ರನ್‌ಗಳ ಗಡಿ ದಾಟಿದ್ದಾರೆ.
254 ರನ್ ಕಲೆ ಹಾಕಿದ ಆರ್‌ಸಿಬಿ
ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದ ಬಳಿಕ ನಾಯಕ ರಜತ್ ಪಾಟಿದಾರ್ (93* ರನ್) ಹಾಗೂ ಕೃಣಾಲ್ ಪಾಂಡ್ಯ (43 ರನ್) ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಆರ್‌ಸಿಬಿ ತನ್ನ ಪಾಲಿನ 20 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 254 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ 255 ರನ್‌ಗಳ ದಾಖಲೆಯ ಗುರಿಯನ್ನು ನೀಡಿತು. ಅಂತಿಮವಾಗಿ ಆರ್‌ಸಿಬಿ ತಂಡ, ಪಂದ್ಯವನ್ನು ಗೆದ್ದು ಸತತ ಎರಡನೇ ಬಾರಿ ಫೈನಲ್‌ಗೆ ಪ್ರವೇಶಿಸಿತು.