ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs LSG: ಲಖನೌಗೆ ಮತ್ತೊಂದು ಆಘಾತ, ವಿಲ್‌ ಜ್ಯಾಕ್ಸ್‌ ಆಲ್‌ರೌಂಡ್‌ ಆಟದಿಂದ ಗೆದ್ದ ಮುಂಬೈ ಇಂಡಿಯನ್ಸ್!

MI vs LSG Match Highlights: ವಿಲ್‌ ಜ್ಯಾಕ್ಸ್‌ ಆಲ್‌ರೌಂಡ್‌ ಆಟದ ಬಲದಿಂದ ಮುಂಬೈ ಇಂಡಿಯನ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 45ನೇ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ 54 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಎರಡನೇ ಸ್ಥಾನಕ್ಕೇರಿದೆ.

IPL 2025: ಲಖನೌಗೆ ಸೋಲಿನ ರುಚಿ ತೋರಿಸಿದ ಮುಂಬೈ ಇಂಡಿಯನ್ಸ್‌!

ಲಖನೌ ಸೂಪರ್‌ ಜಯಂಟ್ಸ್‌ ವಿರುದ್ದ ಮುಂಬೈ ಇಂಡಿಯನ್ಸ್‌ಗೆ 54 ರನ್‌ಗಳ ಜಯ.

Profile Ramesh Kote Apr 27, 2025 8:47 PM

ಮುಂಬೈ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಮುಂಬೈ ಇಂಡಿಯನ್ಸ್‌ (Mumbai Indians) ತಂಡ, ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ (Lucknow Super Giants) ವಿರುದ್ದ 54 ರನ್‌ಗಳ ಭರ್ಜರಿ ಗೆಲುವು ಪಡೆದಿದೆ. ಆ ಮೂಲಕ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಬ್ಯಾಟಿಂಗ್‌ ವೈಫಲ್ಯದಿಂದ ಸೋಲು ಅನುಭವಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ ಆರನೇ ಸ್ಥಾನದಲ್ಲಿಯೇ ಉಳಿದಿದೆ. ಬ್ಯಾಟಿಂಗ್‌ನಲ್ಲಿ 29 ರನ್‌ ಹಾಗೂ ಬೌಲಿಂಗ್‌ನಲ್ಲಿ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ ಮುಂಬೈ ಗೆಲುವಿಗೆ ನೆರವಾದ ವಿಲ್‌ ಜ್ಯಾಕ್ಸ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ನೀಡಿದ್ದ 216 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಲಖನೌ ಸೂಪರ್‌ ಜಯಂಟ್ಸ್‌ ತಂಡ, ಜಸ್‌ಪ್ರೀತ್‌ ಬುಮ್ರಾ, ಟ್ರೆಂಟ್‌ ಬೌಲ್ಟ್‌ ಹಾಗೂ ವಿಲ್‌ ಜ್ಯಾಕ್ಸ್‌ ಪರಿಣಾಮಕಾರಿ ಬೌಲಿಂಗ್‌ಗೆ ನಲುಗಿ 20 ಓವರ್‌ಗಳನ್ನು ಮುಗಿಸಿದರೂ 161 ರನ್‌ಗಳನ್ನು ಕಲೆ ಹಾಕಿ ಆಲ್‌ಔಟ್‌ ಆಯಿತು. ಆ ಮೂಲಕ ರಿಷಭ್‌ ಪಂತ್‌ ನಾಯಕತ್ವದ ಎಲ್‌ಎಸ್‌ಜಿ ದೊಡ್ಡ ಅಂತರದಲ್ಲಿ ಸೋಲು ಅನುಭವಿಸಿತು.

IPL 2025: ಸಾಮರ್ಥ್ಯವಿದ್ದರೂ ಪಂಜಾಬ್‌ ಕಪ್‌ ಗೆಲ್ಲಲ್ಲ; ಮಾಜಿ ಆಟಗಾರನ ಅಚ್ಚರಿಯ ಹೇಳಿಕೆ

ಮುಂಬೈ ಇಂಡಿಯನ್ಸ್‌ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್‌ ದಾಳಿಯ ಎದುರು ಲಖನೌ ಸೂಪರ್‌ ಜಯಂಟ್ಸ್‌ ತಂಡದ ಪವರ್‌ಫುಲ್‌ ಬ್ಯಾಟಿಂಗ್‌ ವಿಭಾಗ ವಿಫಲವಾಯಿತು. ಏಡೆನ್‌ ಮಾರ್ಕ್ರಮ್‌ ವಿಕೆಟ್‌ ಒಪ್ಪಿಸಿದ ಹೊರತಾಗಿಯೂ ಮಿಚೆಲ್‌ ಮಾರ್ಷ್‌ (34) ಹಾಗೂ ನಿಕೋಲಸ್‌ ಪೂರನ್‌ (27) ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಪವರ್‌ಪ್ಲೇ ಅಂತ್ಯಕ್ಕೆ ಲಖನೌ, 60 ರನ್‌ ಕಲೆಹಾಕಿ ಭರ್ಜರಿ ಆರಂಭವನ್ನು ಪಡೆಯಿತು. ಈ ವೇಳೆ ವಿಲ್‌ ಜ್ಯಾಕ್ಸ್‌, ನಿಕೋಲಸ್‌ ಪೂರನ್‌ ಹಾಗೂ ರಿಷಭ್‌ ಪಂತ್‌ ಅವರನ್ನು ಔಟ್‌ ಮಾಡಿ ಮುಂಬೈ ಕಮ್‌ಬ್ಯಾಕ್‌ಗೆ ನೆರವು ನೀಡಿದ್ದರು.



ಮಿಚೆಲ್‌ ಮಾರ್ಷ್‌ (34) ಹಾಗೂ ಆಯುಷ್‌ ಬದೋನಿ (35) ಕೆಲ ಕಾಲ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿ ಲಖನೌಗೆ ಗೆಲುವಿನ ಭರವಸೆಯನ್ನು ಮೂಡಿಸಿದ್ದರು. ಆದರೆ, ಟ್ರೆಂಟ್‌ ಬೌಲ್ಟ್‌ ಈ ಇಬ್ಬರನ್ನು ಕಟ್ಟಿ ಹಾಕಿದರು. ಡೇವಿಡ್‌ ಮಿಲ್ಲರ್‌ 24 ರನ್‌ ಗಳಿಸಿದರೂ ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಲಖನೌ ತಂಡದ ಯಾವುದೇ ಬ್ಯಾಟ್ಸ್‌ಮನ್‌ಗಳ ದೊಡ್ಡ ಇನಿಂಗ್ಸ್‌ ಆಡದೆ ವಿಫಲರಾದರು. ಬೌಲಿಂಗ್‌ನಲ್ಲಿ ಮಿಂಚಿದ ಜಸ್‌ಪ್ರೀತ್‌ ಬುಮ್ರಾ 4 ವಿಕೆಟ್‌ ಕಿತ್ತರೆ, ಟ್ರೆಂಟ್‌ ಬೌಲ್ಟ್‌ 3 ಹಾಗೂ ವಿಲ್‌ ಜ್ಯಾಕ್ಸ್‌ ಎರಡು ವಿಕೆಟ್‌ ಪಡೆದರು.



215 ರನ್‌ಗಳನ್ನು ಕಲೆ ಹಾಕಿದ ಮುಂಬೈ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲ ಬ್ಯಾಟ್‌ ಮಾಡುವಂತಾದ ಮುಂಬೈ ಇಂಡಿಯನ್ಸ್‌ ತಂಡ, ರಯಾನ್‌ ರಿಕೆಲ್ಟನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಅರ್ಧಶತಕಗಳ ಬಲದಿಂದ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 215 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ 216 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು.

ರಿಕೆಲ್ಟನ್‌, ಸೂರ್ಯ ಸ್ಪೋಟಕ ಬ್ಯಾಟಿಂಗ್‌

ರೋಹಿತ್‌ ಶರ್ಮಾ ಕೇವಲ 12 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೂ ಮುಂಬೈ ಇಂಡಿಯನ್ಸ್‌ ಪರ ರಯಾನ್‌ ರಿಕೆಲ್ಟನ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ರಿಕೆಲ್ಟನ್‌ ಭರ್ಜರಿ ಬ್ಯಾಟ್‌ ಬೀಸಿ 32 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಸಿಡಿಸಿ ಮುಂಬೈಗೆ ಭರ್ಜರಿ ಆರಂಭ ತಂದು ಕೊಟ್ಟರು. ನಂತರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದ ಸೂರ್ಯಕುಮಾರ್‌ ಯಾದವ್‌, 28 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 4 ಬೌಂಡರಿಗಳೊಂದಿಗೆ 54 ರನ್‌ ಸಿಡಿಸಿದರು. ವಿಲ್‌ ಜ್ಯಾಕ್ಸ್‌ 29 ರನ್‌, ನಮನ್‌ ದೀರ್‌ 25 ರನ್‌ ಹಾಗೂ ಕಾರ್ಬಿನ್‌ ಬಾಷ್‌ 20 ರನ್‌ ಉಪಯುಕ್ತ ಕೊಡುಗೆ ನೀಡಿದರು.