WPL 2026: ಮುಂಬೈ ಇಂಡಿಯನ್ಸ್ ವನಿತೆಯರಿಗೆ ಆಘಾತ, ಜಿ ಕಮಲಿನಿ ಟೂರ್ನಿಯಿಂದ ಔಟ್!
ಮುಂಬೈ ಇಂಡಿಯನ್ಸ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಗುಣಲನ್ ಕಮಲಿನಿ ಅವರು ಗಾಯಕ್ಕೆ ತುತ್ತಾಗಿದ್ದು,2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಇವರ ಸ್ಥಾನಕ್ಕೆ ವೈಷ್ಣವಿ ಶರ್ಮಾ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಈ ಸೀಸನ್‌ನಲ್ಲಿ ಕಮಲಿನಿ ಅವರು ಐದು ಪಂದ್ಯಗಳನ್ನು ಆಡಿದ್ದು 75 ರನ್‌ಗಳನ್ನು ಗಳಿಸಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಜಿ ಕಮಲಿನಿ ಔಟ್. -
ನವದೆಹಲಿ: ಮುಂಬೈ ಇಂಡಿಯನ್ಸ್ (Mumbai Indians) ತಂಡದ ವಿಕೆಟ್ ಕೀಪರ್-ಬ್ಯಾಟರ್ ಗುಣಲನ್ ಕಮಲಿನಿ (G Kamalini) ಅವರು ಗಾಯಕ್ಕೆ ತುತ್ತಾಗಿದ್ದಾರೆ, ಹಾಗಾಗಿ ಅವರು ಪ್ರಸ್ತುತ ನಡೆಯುತ್ತಿರುವ 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಇವರು ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳಿಂದ 75 ರನ್‌ಗಳನ್ನು ಗಳಿಸಿದ್ದಾರೆ. ಮೆಗಾ ಹರಾಜಿನಲ್ಲಿ ಇವರನ್ನು ಮುಂಬೈ ಫ್ರಾಂಚೈಸಿಯು 50 ಲಕ್ಷ ರು. ಗಳಿಗೆ ಖರೀದಿಸಿತ್ತು. ಈ ಹಿಂದೆ 2024ರ ಟೂರ್ನಿಯಲ್ಲಿ ಇವರು ಮುಂಬೈ ಇಂಡಿಯನ್ಸ್ ಪರ ಆಡಿದ್ದರು ಹಾಗೂ ಆಡಿದ್ದ ಐದು ಇನಿಂಗ್ಸ್‌ಗಳಿಂದ ಕೇವಲ 32 ರನ್‌ಗಳನ್ನು ಗಳಿಸಿದ್ದರು.
ಮುಂಬೈ ಇಂಡಿಯನ್ಸ್ ತಂಡ, ಜೆ ಕಮಲಿನಿ ಅವರ ಸ್ಥಾನಕ್ಕೆ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರನ್ನು ಆಯ್ಕೆ ಮಾಡಿದೆ. 2025ರ ಅಂಡರ್-19 ಮಹಿಳಾ ವಿಶ್ವಕಪ್ ಗೆದ್ದಿದ್ದ ಭಾರತ ತಂಡದಲ್ಲಿ ವೈಷ್ಣವಿ ಶರ್ಮಾ ಆಡಿದ್ದರು. ಇದೀಗ ಅವರಿಗೆ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವ ಅದೃಷ್ಟ ಒಲಿದು ಬಂದಿದ್ದು, ಈ ಅವಕಾಶವನ್ನು ಅವರು ಹೇಗೆ ಸದುಪಯೋಗಪಡಿಸಿಕೊಳ್ಳಲಿದಾರೆಂದು ಕಾದು ನೋಡಬೇಕಾಗಿದೆ.
"ಮುಂಬೈ ಇಂಡಿಯನ್ಸ್ ತಂಡ, 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಜಿ ಕಮಲಿನಿ ಬದಲಿಗೆ ವೈಷ್ಣವಿ ಶರ್ಮಾ ಅವರನ್ನು ಆಯ್ಕೆ ಮಾಡಿದೆ. ಮುಂಬೈ ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿ ಕಮಲಿನಿ ಗಾಯದಿಂದಾಗಿ ಈ ಋತುವಿನಿಂದ ಹೊರಗುಳಿಯುವುದಕ್ಕೂ ಮುನ್ನ ಅವರು 5 ಪಂದ್ಯಗಳನ್ನು ಆಡಿದ್ದರು," ಎಂದು ಡಬ್ಲ್ಯುಪಿಎಲ್ ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯ ಮೂಲಕ ತಿಳಿಸಿದೆ.
Squad update 🚨
— Mumbai Indians (@mipaltan) January 20, 2026
Vaishnavi Sharma replaces G Kamilini who is set to miss the remainder of #TATAWPL due to injury.
Full details in the article 👉 https://t.co/IasOX1dBfB
ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ವೈಷ್ಣವಿ ಶರ್ಮಾ ಗಮನಾರ್ಹ ಪ್ರದರ್ಶನವನ್ನು ತೋರಿದ್ದರು. ಆಡಿದ್ದ ಆರು ಪಂದ್ಯಗಳಿಂದ ಅವರು 17 ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಆಗಿದ್ದರು. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಹಲವು ಪಂದ್ಯಗಳಿಂದ ಅವರು 5 ವಿಕೆಟ್‌ಗಳನ್ನು ಕಬಳಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಭಾರತ ತಂಡದಲ್ಲಿಯೂ ಅವರು ಸ್ಥಾನವನ್ನು ಪಡೆದಿದ್ದಾರೆ.
ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಮುಂಬೈ ಇಂಡಿಯನ್ಸ್ ಸದ್ಯ ಎರಡನೇ ಸ್ಥಾನದಲ್ಲಿದೆ. ಇಲ್ಲಿಯವರೆಗೂ ಆಡಿದ ಐದು ಪಂದ್ಯಗಳಿಂದ ಮುಂಬೈ ತಂಡ ಎರಡರಲ್ಲಿ ಗೆಲುವು ಪಡೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತನ್ನ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೋಲು ಅನುಭವಿಸಿತ್ತು. ನಂತರ ಕಮ್‌ಬ್ಯಾಕ್ ಮಾಡಿದ್ದ ಮುಂಬೈ, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯಗಳನ್ನು ಗೆದ್ದು ಟೂರ್ನಿಯಲ್ಲಿ ಗೆಲುವಿನ ಲಯಕ್ಕೆ ಮರಳಿತ್ತು.
ಆದಾಗ್ಯೂ, ಯುಪಿ ವಾರಿಯರ್ಸ್ ವಿರುದ್ಧದ ಸತತ ಸೋಲುಗಳ ನಂತರ ಹರ್ಮನ್‌ಪ್ರೀತ್ ಕೌರ್ ತಂಡದ ಅಭಿಯಾನವು ಹಿನ್ನಡೆಯನ್ನು ಅನುಭವಿಸಿತು. ಮುಂಬೈ ತಂಡವು ಜನವರಿ 20, ಮಂಗಳವಾರ ವಡೋದರಾದ ಕೋಟಂಬಿಯಲ್ಲಿರುವ ಬಿಸಿಎ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.