RCB vs LSG: ವಿರಾಟ್ ಕೊಹ್ಲಿ ಚಾಂಪಿಯನ್ ಎನ್ನುವುದಕ್ಕೆ ಇದೇ ಉದಾಹರಣೆ ಎಂದ ಸಂಜಯ್ ಮಾಂಜ್ರೇಕರ್!
ಲಖನೌ ಸೂಪರ್ ಜಯಂಟ್ಸ್ ವಿರುದ್ಧದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರನ್ನು ಪ್ರಿನ್ಸ್ ಯಾದವ್ ತಮ್ಮ ಇನ್‌ಸ್ವಿಂಗ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಸಂಜಯ್ ಮಾಂಜ್ರೇಕರ್ ಆರ್‌ಸಿಬಿ ಮಾಜಿ ನಾಯಕನ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮನಸ್ಥಿತಿಗೆ ಕೊಹ್ಲಿಯನ್ನು ಹೋಲಿಸಿದ್ದಾರೆ.
ವಿರಾಟ್ ಕೊಹ್ಲಿ ಶ್ರೇಷ್ಠ ಆಟಗಾರ ಎನ್ನುವುದಕ್ಕೆ ಕಾರಣ ತಿಳಿಸಿದ ಮಾಂಜ್ರೇಕರ್. -
ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026: ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಡಿಎಲ್‌ಎಸ್ ನಿಯಮದಡಿಯಲ್ಲಿ 9 ರನ್‌ಗಳಿಂದ ಸೋಲು ಅನುಭವಿಸಿತು. ಮೇ 7 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli), ಯುವ ವೇಗಿ ಪ್ರಿನ್ಸ್ ಯಾದವ್‌ಗೆ ಕ್ಲೀನ್ ಬೌಲ್ಡ್ ಆಗಿದ್ದು ಎಲ್ಲರನ್ನು ಅಚ್ಚರಿಚಕಿತರನ್ನಾಗಿಸಿತ್ತು. ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಾಂಜ್ರೇಕರ್ ಅವರು ಕ್ರಿಕೆಟ್ ದೇವರು ಹಾಗೂ ಕೊಹ್ಲಿ ನಡುವಿನ ಸಾಮ್ಯತೆಯನ್ನು ವಿವರಿಸಿದರು.
ಎಲ್‌ಎಸ್‌ಜಿ ವೇಗಿ ಎಸೆದ 140.4 ಕಿಮೀ ವೇಗದ ಇನ್‌ಸ್ವಿಂಗರ್ ಚೆಂಡು, ಕೊಹ್ಲಿಯ ರಕ್ಷಣೆಯನ್ನು ಭೇದಿಸಿ ಆಫ್ ಸ್ಟಂಪ್ ಉರುಳಿಸಿತು. ಈ ವಿಕೆಟ್‌ನಿಂದ ಅನುಭವಿ ಬ್ಯಾಟರ್ ಕೊಹ್ಲಿಯವರೇ ಆಶ್ಚರ್ಯಗೊಂಡರು. ಬೌಲ್ಡ್ ಆದ ತಕ್ಷಣ, ಚೆಂಡು ಪಿಚ್ ಆದ ಸ್ಥಳದತ್ತ ಅವರು ತೀವ್ರವಾಗಿ ಗಮನ ಹರಿಸಿರುವುದು ಕ್ಯಾಮೆರಾಗಳಲ್ಲಿ ಸೆರೆಯಾಯಿತು.
RCB vs LSG: ʻವಿರಾಟ್ ಕೊಹ್ಲಿ ತಾವೇ ನೀಡಿದ ಔಷಧಿಗೆ ಬಲಿಯಾದರುʼ-ಮುರಳಿ ಕಾರ್ತಿಕ್!
"ವಿರಾಟ್ ಕೊಹ್ಲಿ ಅವರನ್ನು ಪ್ರಿನ್ಸ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದ ಘಟನೆ, ಒಬ್ಬ ಚಾಂಪಿಯನ್ ಬ್ಯಾಟರ್ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆ. ಇದು ಸಚಿನ್ ತೆಂಡೂಲ್ಕರ್ ಅವರಲ್ಲೂ ಕಾಣಿಸಿಕೊಂಡ ಗುಣ. ಅವರು ಹೇಗೆ ಔಟ್ ಆದರು ಎಂಬುದಕ್ಕಿಂತ, ಔಟ್ ಆದ ಬಳಿಕ ವಿರಾಟ್ ನೀಡಿದ ಪ್ರತಿಕ್ರಿಯೆ ಗಮನಾರ್ಹ. ಏನೋ ಅಸಾಮಾನ್ಯ ಸಂಭವಿಸಿದಂತೆ ಅವರು ಪಿಚ್ ಕಡೆ ನೋಡುತ್ತಾರೆ. ಪಿಚ್ ಅವರೊಂದಿಗೆ ಹೇಗೆ ವರ್ತಿಸಿತು ಎಂಬಂತೆ ಅವರ ಪ್ರತಿಕ್ರಿಯೆ ಇರುತ್ತದೆ,” ಎಂದು ಸಂಜಯ್ ಮಾಂಜ್ರೇಕರ್ ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ ತಿಳಿಸಿದ್ದಾರೆ.
“ತೆಂಡೂಲ್ಕರ್ ಕೂಡ ತಮ್ಮ ವೃತ್ತಿಜೀವನದ ಕೊನೆಯ ಹಂತದಲ್ಲಿ, ಔಟ್ ಆದಾಗ ಪಿಚ್ ಕಡೆ ನೋಡುತ್ತಿದ್ದರು. ಚೆಂಡು ಕೆಳಮಟ್ಟದಲ್ಲಿ ಉಳಿದಿತ್ತೋ ಅಥವಾ ಏನಾದರೂ ತಪ್ಪಾಗಿದೆ ಎಂಬ ಭಾವನೆ ಇರುತ್ತಿತ್ತು. ಇಲ್ಲಿ ನಡೆಯುತ್ತಿರುವುದು ಏನೆಂದರೆ, ಸಣ್ಣ ಹಿನ್ನಡೆ ಬಂದ ಕೂಡಲೇ ಅವರು ತಕ್ಷಣ ತಮ್ಮನ್ನೇ ಪ್ರಶ್ನಿಸುವುದಿಲ್ಲ ಅಥವಾ ಆತ್ಮಪರಿಶೀಲನೆಗೆ ಹೋಗುವುದಿಲ್ಲ. ಬದಲಾಗಿ, ತಮ್ಮ ಹೊರತಾದ ಬೇರೆ ಕಾರಣಗಳನ್ನು ಹುಡುಕುತ್ತಾರೆ,” ಎಂದು ಅವರು ಹೇಳಿದ್ದಾರೆ.
ತಾನೇ ತೋಡಿದ ಹಳ್ಳಕ್ಕೆ ಬಿದ್ದ ಕೊಹ್ಲಿ; ಬೌಲಿಂಗ್ ಸಲಹೆ ನೀಡಿ ಶೂನ್ಯಕ್ಕೆ ಔಟ್
ಈ ರೀತಿಯ ಪ್ರತಿಕ್ರಿಯೆಯೇ ಒಬ್ಬ ಮಹಾನ್ ಬ್ಯಾಟರ್ ಮತ್ತು ಸಾಮಾನ್ಯ ಆಟಗಾರನ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
“ಇದು ಆಸಕ್ತಿದಾಯಕವಾಗಿ ಒಬ್ಬ ಶ್ರೇಷ್ಠ ಬ್ಯಾಟರ್‌ನ ಗುಣ. ವರ್ಷಗಳ ಕಾಲ ಅಪಾರ ಯಶಸ್ಸು ಕಂಡಿರುವುದರಿಂದ ಅವರ ಆತ್ಮವಿಶ್ವಾಸ ತುಂಬಾ ಗಟ್ಟಿಯಾಗಿರುತ್ತದೆ. ಹೀಗಾಗಿ ಇಂತಹ ಕ್ಷಣ ಬಂದರೂ, ಅವರ ಆತ್ಮವಿಶ್ವಾಸ ತಕ್ಷಣ ಕುಸಿಯುವುದಿಲ್ಲ. ಸಾಮಾನ್ಯ ಆಟಗಾರರಿಗೆ ಇಂತಹ ಸಂದರ್ಭಗಳಲ್ಲಿ ಆತ್ಮವಿಶ್ವಾಸ ಕುಸಿದುಹೋಗಬಹುದು. ಆದರೆ ಶ್ರೇಷ್ಠ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯದ ಮೇಲೆ ಅಪಾರ ನಂಬಿಕೆ ಇಟ್ಟಿರುವುದರಿಂದ, ಔಟ್ ಆಗಿದ್ದಕ್ಕೆ ಬೇರೆ ಕಾರಣ ಹುಡುಕುವ ಸ್ವಭಾವ ಹೊಂದಿರುತ್ತಾರೆ. ಅದೇ ಕಾರಣಕ್ಕೆ ಅವರು ಮಹಾನ್ ಆಟಗಾರರಾಗುತ್ತಾರೆ,” ಎಂದು ಭಾರತದ ಮಾಜಿ ಆಟಗಾರ ತಿಳಿಸಿದ್ದಾರೆ.