ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಫಿಫಾ ವಿಶ್ವಕಪ್‌ ಫೈನಲ್‌ ಸೋಲಿನ ಬಳಿಕ ಅರ್ಜೆಟೀನಾದ ಮೂವರು ಆಟಗಾರರಿಗೆ ಕಠಿಣ ಶಿಕ್ಷೆ!

ಅರ್ಜೆಂಟೀನಾ ಹಾಗೂ ಸ್ಪೇನ್‌ ತಂಡಗಳ ನಡುವಣ 2026ರ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್ ಪಂದ್ಯ ಮುಕ್ತಾಯಗೊಂಡು 24 ಗಂಟೆಗಳೂ ಕಳೆಯುವ ಮುನ್ನ ಫಿಫಾ ತನ್ನ ಅಧಿಕೃತ ತನಿಖೆಯನ್ನು ಆರಂಭಿಸುವುದಾಗಿ ಘೋಷಿಸಿದೆ. ಸ್ಪೇನ್‌ ತಂಡ 1-0 ಅಂತರದಲ್ಲಿ ಗೆಲುವು ಸಾಧಿಸಿದ ಬಳಿಕ ಮೈದಾನದಲ್ಲಿ ನಡೆದಿದ್ದ ಗಲಾಟೆ ಸಂಬಂಧ ಈ ತನಿಕೆ ನಡೆಯಲಿದೆ.

FIFA World Cup 2026: ಅರ್ಜೆಂಟೀನಾ ಸ್ಟಾರ್‌ ಆಟಗಾರರಿಗೆ ಕಠಿಣ ಶಿಕ್ಷೆ!

ಮೂರು ಪಂದ್ಯಗಳ ನಿಷೇಧದ ಭೀತಿಯಲ್ಲಿ ಅರ್ಜೆಂಟೀನಾ ಆಟಗಾರರು. -

Profile
Ramesh Kote Jul 21, 2026 9:33 PM

ನವದೆಹಲಿ: ಸ್ಪೇನ್‌ ವಿರುದ್ಧ ಫಿಫಾ ವಿಶ್ವಕಪ್ 2026ರ (FIFA World Cup 2026) ಟೂರ್ನಿಯ ಫೈನಲ್‌ ಪಂದ್ಯದ ಸೋಲಿನ ಬಳಿಕ ಮೈದಾನದಲ್ಲಿ ನಡೆದಿದ್ದ ಗಲಾಟೆಗೆ ಸಂಬಂಧಿಸಿದಂತೆ ಅರ್ಜೆಂಟೀನಾ (Argentina) ಆಟಗಾರರು ಕನಿಷ್ಠ ಮೂರು ಪಂದ್ಯಗಳ ನಿಷೇಧ ಶಿಕ್ಷೆಯನ್ನು ಎದುರಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಜುಲೈ 20 ರಂದು ನ್ಯೂಜೆರ್ಸಿಯಲ್ಲಿ ಫೈನಲ್ ಪಂದ್ಯ ಮುಗಿದ 24 ಗಂಟೆಗಳೊಳಗೆ ಮೈದಾನದಲ್ಲಿ ಉಂಟಾಗಿದ್ದ ಗೊಂದಲದ ಕುರಿತು ಫಿಫಾ ತನಿಖೆ ಆರಂಭಿಸಿರುವುದಾಗಿ ಘೋಷಿಸಿದೆ.

ಅರ್ಜೆಂಟೀನಾ ಬಲಭಾಗದ ಡಿಫೆಂಡರ್ ನಹುಯೆಲ್ ಮೊಲಿನಾ, ಸ್ಪೇನ್ ನಾಯಕ ರೊಡ್ರಿ ಅವರು ಸಹ ಆಟಗಾರರೊಂದಿಗೆ ಗೋಲು ಸಂಭ್ರಮಿಸಲು ಓಡುತ್ತಿದ್ದ ವೇಳೆ ಅವರ ಹೊಟ್ಟೆಯ ಭಾಗಕ್ಕೆ ಹೊಡೆದ ಬಳಿಕ ಈ ಗಲಾಟೆ ಆರಂಭವಾಯಿತು ಎಂದು ವರದಿಯಾಗಿದೆ. ಬಳಿಕ ಎರಡೂ ತಂಡಗಳ ಆಟಗಾರರು ಪರಸ್ಪರ ವಾಗ್ವಾದಕ್ಕೆ ಇಳಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ರೆಫರಿಗಳು ಹಾಗೂ ಕೋಚ್‌ಗಳು ಮಧ್ಯಪ್ರವೇಶಿಸಬೇಕಾಗಿತ್ತು.

ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದ ವೇಳೆ, ಸ್ಪೇನ್ ಆಟಗಾರ ಎರಿಕ್ ಗಾರ್ಸಿಯಾ ಅಲ್ಲಿಗೆ ಬಂದರು. ನಂತರ ಅರ್ಜೆಂಟೀನಾದ ಲೆಆಂಡ್ರೊ ಪರೆಡೆಸ್ ಕೂಡ ಸ್ಥಳಕ್ಕೆ ಆಗಮಿಸಿ ಮಧ್ಯಪ್ರವೇಶಿಸಿದರು. ವೈರಲ್‌ ಆಗಿರುವ ವಿಡಿಯೊಗಳಲ್ಲಿ ಪರೆಡೆಸ್, ಗಾರ್ಸಿಯಾ ಅವರ ಕುತ್ತಿಗೆಯನ್ನು ಹಿಡಿದಂತೆ ಕಾಣಿಸಿದ್ದು, ಬಳಿಕ ಅರ್ಜೆಂಟೀನಾ ಮುಖ್ಯ ಕೋಚ್ ಲಿಯೋನೆಲ್ ಸ್ಕಲೋನಿ ಕೂಡ ಗಲಾಟೆಯನ್ನು ತಡೆಯಲು ಮುಂದಾದರು.

ಫಿಫಾ ರ‍್ಯಾಂಕಿಂಗ್‌: ಅರ್ಜೆಂಟೀನಾ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ವಿಶ್ವ ಚಾಂಪಿಯನ್‌ ಸ್ಪೇನ್

ಇದಾದ ಬಳಿಕ ಪರೆಡೆಸ್ ಅವರ ಗಮನ ಸ್ಪೇನ್‌ನ ಯುವ ಮಿಡ್‌ಫೀಲ್ಡರ್ ಗವಿ ಕಡೆ ತಿರುಗಿತು. ಅವರು 21 ವರ್ಷದ ಆಟಗಾರನನ್ನು ಟ್ಯಾಕಲ್ ಮಾಡಿ ನೆಲಕ್ಕೆ ಬೀಳಿಸಿದರು. ಅಲ್ಲದೆ, ಬಾರ್ಸಿಲೋನಾ ಆಟಗಾರ ಗವಿಯತ್ತ ಬೂಟ್ ಎಸೆದಂತೆ ಕೂಡ ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ವೇಳೆ ಅರ್ಜೆಂಟೀನಾದ ಥಿಯಾಗೊ ಅಲ್ಮಾಡಾ ಕೂಡ ಗಲಾಟೆಯಲ್ಲಿ ಸೇರಿಕೊಂಡರು. ಪರೆಡೆಸ್ ಮತ್ತು ಅಲ್ಮಾಡಾ ಇಬ್ಬರೂ ಸೇರಿ ಗವಿಯನ್ನು ನೆಲಕ್ಕೆ ತಳ್ಳಿದ ಘಟನೆ ವರದಿಯಾಗಿದೆ.

ಗಲಾಟೆಯಲ್ಲಿ ಭಾಗಿಯಾದ ಕೆಲವು ಅರ್ಜೆಂಟೀನಾ ಆಟಗಾರರು ಕನಿಷ್ಠ ಮೂರು ಪಂದ್ಯಗಳ ನಿಷೇಧ ಶಿಕ್ಷೆ ಎದುರಿಸುವ ಸಾಧ್ಯತೆ ಇದೆ. ಅಲ್ಲದೆ, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾ 2-1 ಅಂತರದಲ್ಲಿ ಗೆದ್ದ ಪಂದ್ಯದ ಘಟನೆಗಳ ಬಗ್ಗೆಯೂ ಫಿಫಾ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಬಿಬಿಸಿ ಸ್ಪೋರ್ಟ್ ವರದಿ ಮಾಡಿದೆ. ಈಗಾಗಲೇ ಅರ್ಜೆಂಟೀನಾ ತಂಡದ ವಿರುದ್ಧ ಮತ್ತೊಂದು ತನಿಖೆ ನಡೆಯುತ್ತಿದೆ. ಮೆಸ್ಸಿ ತಂಡದ ಬೆಂಬಲಿಗರು ಪ್ರದರ್ಶಿಸಿದ “ಫಾಲ್ಕ್‌ಲ್ಯಾಂಡ್ ದ್ವೀಪಗಳು ಅರ್ಜೆಂಟೀನಾಗೆ ಸೇರಿವೆ” ಎಂಬ ಬ್ಯಾನರ್‌ ಕುರಿತಾಗಿ ಫಿಫಾ ಪರಿಶೀಲನೆ ನಡೆಸುತ್ತಿದೆ.

ಅಭಿಮಾನಿಗಳ ಕಣ್ಣಲ್ಲಿ ವಿಲನ್ ಆಯ್ತಾ ಅರ್ಜೆಂಟೀನಾ?

ಫಿಫಾದ ಸ್ವತಂತ್ರ ಶಿಸ್ತು ಸಮಿತಿ ಪ್ರಸ್ತುತ ಫೈನಲ್ ಪಂದ್ಯದ ಬಳಿಕ ನಡೆದ ಘಟನೆಗಳನ್ನು ಪರಿಶೀಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಾಧ್ಯವಿರುವ ಶಿಕ್ಷೆಗಳ ಕುರಿತು ನಿರ್ಧಾರ ಕೈಗೊಳ್ಳಲಿದೆ. ಈ ಪ್ರಕರಣವನ್ನು ಪರಿಶೀಲಿಸಲು ಫಿಫಾ ಶಿಸ್ತು ಮತ್ತು ನೈತಿಕತೆ ವಿಭಾಗದ ಪ್ರಾಸಿಕ್ಯೂಟರ್‌ರನ್ನು ನೇಮಿಸಿದರೆ, ಕಠಿಣ ಶಿಕ್ಷೆಗಳು ವಿಧಿಸುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯಾಗಿದೆ.

"ಶಿಸ್ತು ಮತ್ತು ನೈತಿಕತೆ ಪ್ರಾಸಿಕ್ಯೂಟರ್ ಪ್ರಕರಣದಲ್ಲಿ ಶಿಕ್ಷೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಂಶಗಳನ್ನು ಪರಿಗಣಿಸಲಿದ್ದಾರೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ನಿಷೇಧ ಹೇರಿಸುವ ಅಧಿಕಾರವೂ ಅವರಿಗೆ ಇದೆ," ಎಂದು ವರದಿ ತಿಳಿಸಿದೆ.