Maharshi Valmiki Jayanti: ವಾಲ್ಮೀಕಿ ಅವರ ಜೀವನ ಸಂದೇಶ, ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ
ಸಾಮಾನ್ಯ ಬೇಡನಾಗಿದ್ದ ರತ್ನಾಕರನು ಕಠಿಣ ತಪಸ್ಸು ಮತ್ತು ಜ್ಞಾನದ ಹಸಿವಿನ ಮೂಲಕ ಮಹರ್ಷಿ ವಾಲ್ಮೀಕಿಯಾಗಿ ರೂಪಾಂತರಗೊಂಡರು. ರಾಮಾಯಣದಂತಹ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ ಆದಿಕವಿ ವಾಲ್ಮೀಕಿ ಅವರ ಆದರ್ಶಗಳು ಎಂದೆಂದಿಗೂ ಅಜರಾಮರ. ಮನುಷ್ಯನ ಗತಕಾಲಕ್ಕಿಂತ ಆತನ ಪರಿಶ್ರಮ, ಸನ್ನಡತೆ ಮತ್ತು ಸಾಧನೆ ಮುಖ್ಯ ಎಂಬುದನ್ನು ಅವರ ಜೀವನ ನಮಗೆ ಕಲಿಸುತ್ತದೆ
ಪೋಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಶಿಕ್ಷಕ ವೃಂದದವರು ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. -
ಚಿಕ್ಕಬಳ್ಳಾಪುರ: ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶ ಮತ್ತು ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ಪ್ರಭಾರಿ ಮುಖ್ಯ ಶಿಕ್ಷಕಿ ಬಿ.ವಿ. ನಾಗವೇಣಿ ತಿಳಿಸಿದರು.
ತಾಲೂಕಿನ ಪೋಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ(Maharshi Valmiki Jayanti) ಕಾರ್ಯಕ್ರಮದಲ್ಲಿ ಮಾತನಾಡಿದರು. ಕಠಿಣ ಪರಿಶ್ರಮ, ಜ್ಞಾನ ಮತ್ತು ಸನ್ಮಾರ್ಗದ ಮೂಲಕ ಯಾರೂ ಜೀವನದಲ್ಲಿ ಉನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರ ಬದುಕೇ ಸಾಕ್ಷಿಯಾಗಿದೆ ಎಂದರು.
ಸಾಮಾನ್ಯ ಬೇಡನಾಗಿದ್ದ ರತ್ನಾಕರನು ಕಠಿಣ ತಪಸ್ಸು ಮತ್ತು ಜ್ಞಾನದ ಹಸಿವಿನ ಮೂಲಕ ಮಹರ್ಷಿ ವಾಲ್ಮೀಕಿಯಾಗಿ ರೂಪಾಂತರಗೊಂಡರು. ರಾಮಾಯಣದಂತಹ ಮಹಾಕಾವ್ಯವನ್ನು ಜಗತ್ತಿಗೆ ನೀಡಿದ ಆದಿಕವಿ ವಾಲ್ಮೀಕಿ ಅವರ ಆದರ್ಶಗಳು ಎಂದೆಂದಿಗೂ ಅಜರಾಮರ. ಮನುಷ್ಯನ ಗತಕಾಲಕ್ಕಿಂತ ಆತನ ಪರಿಶ್ರಮ, ಸನ್ನಡತೆ ಮತ್ತು ಸಾಧನೆ ಮುಖ್ಯ ಎಂಬುದನ್ನು ಅವರ ಜೀವನ ನಮಗೆ ಕಲಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Chikkaballapur News: ಡಿ.31ರವರೆಗೆ ಗ್ರಾಮ ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶಿಬಿರಗಳ ಆಯೋಜನೆ
ಸಹಶಿಕ್ಷಕ ಮನೋಹರ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಧರ್ಮ, ಸತ್ಯ, ತ್ಯಾಗ ಮತ್ತು ಕರ್ತವ್ಯನಿಷ್ಠೆಯ ಮಹತ್ವವನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ವಿದ್ಯಾರ್ಥಿಗಳು ಈ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಶಿಕ್ಷಕ ವೆಂಕಟರಮಣಪ್ಪ ಮಾತನಾಡಿ, ಕುಟುಂಬದಲ್ಲಿ ಪರಸ್ಪರ ಬಾಂಧವ್ಯ ಹೇಗಿರಬೇಕು ಹಾಗೂ ಸಮಾಜದ ಆಡಳಿತಗಾರನಿಗೆ ಇರಬೇಕಾದ ಜವಾಬ್ದಾರಿಗಳೇನು ಎಂಬುದನ್ನು ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ತಿಳಿಸಿಕೊಟ್ಟಿದ್ದಾರೆ. ಈ ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಅನುಸರಿಸುವುದು ಎಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಭಾರಿ ಮುಖ್ಯ ಶಿಕ್ಷಕಿ ಸೇರಿದಂತೆ ಶಿಕ್ಷಕ ವೃಂದದವರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಸಹಶಿಕ್ಷಕರಾದ ಆನಂದ್, ಪದ್ಮಾವತಿ, ಲಕ್ಷ್ಮೀನಾರಾಯಣ, ಲಕ್ಷ್ಮೀದೇವಮ್ಮ, ವಿದ್ಯಾಶ್ರೀ ಸೇರಿದಂತೆ ಬೋಧಕೇತರ ಸಿಬ್ಬಂದಿ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಉಪಸ್ಥಿತರಿದ್ದರು.