Sunil Gavaskar: ಕಾಂಬ್ಳಿಗೆ ಪ್ರತಿ ತಿಂಗಳು 30 ಸಾವಿರ ಸಹಾಯಧನ ನೀಡಲು ಮುಂದಾದ ಗವಾಸ್ಕರ್
Vinod Kambli: ವಿನೋದ್ ಕಾಂಬ್ಳಿ ಕ್ರಿಕೆಟ್ ವೃತ್ತಿ ಜೀವನದಲ್ಲಿ 17 ಟೆಸ್ಟ್ , 104 ಏಕದಿನ ಪಂದ್ಯಗಳನ್ನು 1991 ರಿಂದ 2000ದವರೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಸಕ್ರಿಯರಾಗಿ ಆಟವಾಡಿದ್ದರು. ಕಾಂಬ್ಳಿ 1996ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತ ತಂಡದ ಸದಸ್ಯರಾಗಿದ್ದರು.


ಮುಂಬಯಿ: ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (Vinod Kambli) ಅವರಿಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್(Sunil Gavaskar) ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ. ಗವಾಸ್ಕರ್ ತಮ್ಮ CHAMPS ಫೌಂಡೇಶನ್(champs foundation) ಮೂಲಕ ಕಾಂಬ್ಳಿಗೆ ತಿಂಗಳಿಗೆ 30,000 ರೂಪಾಯಿ ಸಹಾಯಧನ ನೀಡಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಸಹಾಯಧನ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ ಎಂದು ತಿಳಿಸಿದೆ. CHAMPS ಫೌಂಡೇಶನ್ ಸಂಕಷ್ಟದಲ್ಲಿರುವ ಮಾಜಿ ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯ ನೀಡುತ್ತಿದೆ.
ಕಾಂಬ್ಳಿಗೆ ತಿಂಗಳಿಗೆ 30,000 ರೂ. ಸಹಾಯಧನ ಮಾತ್ರವಲ್ಲದೆ ಇದರ ಜತೆಗೆ ಅವರ ವೈದ್ಯಕೀಯ ವೆಚ್ಚಗಳಿಗಾಗಿ ವಾರ್ಷಿಕವಾಗಿ 30,000 ರೂ. ಕೂಡ ನೀಡಲಾಗುವುದು ಎಂದು ತಿಳಿದುಬಂದಿದೆ. ಈ ವರ್ಷದ ಆರಂಭದಲ್ಲಿ ವಾಂಖೆಡೆ ಸ್ಟೇಡಿಯಂನ 50ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಕಾಂಬ್ಳಿ, ಗವಾಸ್ಕರ್ ಅವರನ್ನು ಭೇಟಿಯಾದರು. ಕಾಂಬ್ಳಿ ನಡೆಯಲು ಕಷ್ಟಪಡುತ್ತಿದ್ದರೂ, ಗವಾಸ್ಕರ್ ಅವರ ಪಾದಗಳನ್ನು ಮುಟ್ಟಿ ಗೌರವ ಸೂಚಿಸಿದ್ದರು.
ಇದನ್ನೂ ಓದಿ IPL 2025: ಐಪಿಎಲ್‌ನಿಂದ ಹೊರಬೀಳುವ ಆತಂಕದಲ್ಲಿ ಫರ್ಗ್ಯುಸನ್
ಕಾಂಬ್ಳಿ 2013ರಲ್ಲಿ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದರು. ಆಗ ಎರಡು ಬಾರಿಯೂ ಶಸ್ತ್ರಚಿಕಿತ್ಸೆಯ ವೆಚ್ಚವನ್ನ ಗೆಳೆಯ ಸಚಿನ್ ತೆಂಡೂಲ್ಕರ್ ಭರಿಸಿದ್ದರು ವಿನೋದ್ ಕಾಂಬ್ಳಿ ಕ್ರಿಕೆಟ್ ವೃತ್ತಿ ಜೀವನದಲ್ಲಿ 17 ಟೆಸ್ಟ್ , 104 ಏಕದಿನ ಪಂದ್ಯಗಳನ್ನು 1991 ರಿಂದ 2000ದವರೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಸಕ್ರಿಯರಾಗಿ ಆಟವಾಡಿದ್ದರು. ಕಾಂಬ್ಳಿ 1996ರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ವೇಳೆ ಭಾರತ ತಂಡದ ಸದಸ್ಯರಾಗಿದ್ದರು. 1983ರ ವಿಶ್ವಕಪ್ ವಿಜೇತ ಭಾರತ ತಂಡದಿಂದಲೂ ಕಾಂಬ್ಳಿಗೆ ಸಹಾಯ ಹಸ್ತ ಲಭಿಸಿತ್ತು.
ವಿಪರೀತ ಕುಡಿತದ ಚಟಕ್ಕೆ ಬಿದ್ದು ಹಲವು ಕಾಯಿಲೆಗಳಿಗೆ ತುತ್ತಾಗಿದ್ದ ಕಾಂಬ್ಳಿ ಈ ವರ್ಷದ ಆರಂಭದಲ್ಲಿ ತೀವ್ರ ಅನಾರೋಗ್ಯಕ್ಕೀಡಾಗಿ ಸುಮಾರು 10 ದಿನಗಳ ಆಸ್ಪತ್ರೆಗೆ ದಾಖಲಾಗಿದ್ದರು.