ಟಿ20 ವಿಶ್ವಕಪ್‌ಗೆ ತಂಡ ಪ್ರಕಟಿಸಿದ ಯುಎಇ; ಭಾರತದ ದಂತಕಥೆ ಕ್ರಿಕೆಟಿಗ ಕೋಚ್ ಆಗಿ ನೇಮಕ
UAE squad for T20 World Cup 2026: ಯುಎಇ ತಂಡವು ಗ್ರೂಪ್ 'ಡಿ' ಯಲ್ಲಿ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಕೆನಡಾ ಜತೆಗೆ ಸ್ಥಾನ ಪಡೆದಿದೆ. ಫೆಬ್ರವರಿ 10 ರಂದು ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
UAE squad -
ದುಬೈ, ಜ.31: ಫೆಬ್ರವರಿ 7 ರಿಂದ ಪ್ರಾರಂಭವಾಗಲಿರುವ ಮುಂಬರುವ ಟಿ20 ವಿಶ್ವಕಪ್(T20 World Cup 2026)ಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅನುಭವಿ ಆಟಗಾರ ಮೊಹಮ್ಮದ್ ವಸೀಮ್ ತಂಡವನ್ನು ಮುನ್ನಡೆಸಲಿದ್ದಾರೆ. ಭಾರತದ ಮಾಜಿ ದಿಗ್ಗಜ ಲಾಲ್‌ಚಂದ್ ರಜಪೂತ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಅವರಿಗೆ ಪಾಕಿಸ್ತಾನದ ಮಾಜಿ ವೇಗಿ ಯಾಸಿರ್ ಅರಾಫತ್ ಸಹಾಯ ಮಾಡಲಿದ್ದಾರೆ. ಅವರನ್ನು ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ. ಜಿಂಬಾಬ್ವೆಯ ಸ್ಟಾನ್ಲಿ ಚಿಯೋಜಾ ಈ ಪಂದ್ಯಾವಳಿಯಲ್ಲಿ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಲಿದ್ದಾರೆ.
ಯುಎಇ ತಂಡವು ಕ್ರಮವಾಗಿ 2012 ಮತ್ತು 2024 ರಲ್ಲಿ ಟಿ20 ವಿಶ್ವಕಪ್ ಆಡಿದ್ದು, ಇದು ಮೂರನೇ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿದೆ. ಓಮನ್‌ನಲ್ಲಿ ನಡೆದ ಟಿ20 ವಿಶ್ವಕಪ್ ಏಷ್ಯಾ ಮತ್ತು ಪೂರ್ವ ಏಷ್ಯಾ-ಪೆಸಿಫಿಕ್ (ಇಎಪಿ) ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ಜಪಾನ್ ವಿರುದ್ಧ ಜಯಗಳಿಸುವ ಮೂಲಕ ಯುಎಇ ಟೂರ್ನಿಗೆ ಅರ್ಹತೆ ಪಡೆದುಕೊಂಡಿದೆ.
ಯುಎಇ ವೇಳಾಪಟ್ಟಿ
ಯುಎಇ ತಂಡವು ಗ್ರೂಪ್ 'ಡಿ' ಯಲ್ಲಿ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಕೆನಡಾ ಜತೆಗೆ ಸ್ಥಾನ ಪಡೆದಿದೆ. ಫೆಬ್ರವರಿ 10 ರಂದು ಚೆನ್ನೈನಲ್ಲಿ ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಫೆಬ್ರವರಿ 13 ರಂದು ದೆಹಲಿಯಲ್ಲಿ ಕೆನಡಾ, ಫೆಬ್ರವರಿ 16 ರಂದು ದೆಹಲಿಯಲ್ಲಿ ಅಫ್ಘಾನಿಸ್ತಾನ ಮತ್ತು ಫೆಬ್ರವರಿ 16 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಅದೇ ಸ್ಥಳದಲ್ಲಿ ಆಡಲಿದೆ.
T20 World Cup 2026: ಟಿ20 ವಿಶ್ವಕಪ್ ಟೂರ್ನಿಗೆ ಅಂಪೈರ್‌ಗಳನ್ನು ಪ್ರಕಟಿಸಿದ ಐಸಿಸಿ!
ಪ್ರಸ್ತುತ, ವಸೀಮ್ ನೇತೃತ್ವದ ತಂಡವು ತವರಿನಲ್ಲಿ ಐರ್ಲೆಂಡ್ ವಿರುದ್ಧ ಟಿ20ಐ ಸರಣಿಯಲ್ಲಿ ತೊಡಗಿಸಿಕೊಂಡಿದೆ. ಆರಂಭಿಕ ಪಂದ್ಯದಲ್ಲಿ ತಂಡವು 57 ರನ್‌ಗಳ ಸೋಲನ್ನು ಅನುಭವಿಸಿದರೆ, ಎರಡನೇ ಪಂದ್ಯ ಜನವರಿ 31 ರಂದು ನಡೆಯಲಿದೆ. ಟಿ20 ವಿಶ್ವಕಪ್‌ಗೆ ಮುಂಚಿತವಾಗಿ, ಅವರು ಫೆಬ್ರವರಿ 6 ರಂದು ಚೆನ್ನೈನಲ್ಲಿ ಇಟಲಿ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ.
ಯುಎಇ ತಂಡ
ಮುಹಮ್ಮದ್ ವಸೀಮ್ (ನಾಯಕ), ಅಲಿಶನ್ ಶರಫು, ಆರ್ಯಾಂಶ್ ಶರ್ಮಾ, ಧ್ರುವ ಪರಾಶರ್, ಹೈದರ್ ಅಲಿ, ಹರ್ಷಿತ್ ಕೌಶಿಕ್, ಜುನೈದ್ ಸಿದ್ದಿಕ್, ಮಯಾಂಕ್ ಕುಮಾರ್, ಮುಹಮ್ಮದ್ ಅರ್ಫಾನ್, ಮುಹಮ್ಮದ್ ಫಾರೂಕ್, ಮುಹಮ್ಮದ್ ಜವದುಲ್ಲಾ, ಮುಹಮ್ಮದ್ ಜೊಹೈಬ್, ರೋಹಿದ್ ಖಾನ್, ಸೊಹೈಬ್ ಖಾನ್, ಸಿಮ್ರಂಜೀತ್ ಸಿಂಗ್.