ʼʼಪಂಚ ಗ್ಯಾರಂಟಿಗೆ ಜನ ಮೆಚ್ಚುಗೆʼʼ; ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಎಂದ ಅನ್ನಪೂರ್ಣ ತುಕಾರಾಮ್
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದರಿಂದಾಗಿ ದಾವಣಗೆರೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದು ವಿಶ್ವವಾಣಿ ಜೊತೆ ಮಾತನಾಡಿದ ಶಾಸಕಿ ಅನ್ನಪೂರ್ಣ ತುಕಾರಾಮ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗೆ (Five Guarantee Scheme) ಜನರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಇದರಿಂದಾಗಿ ದಾವಣಗೆರೆ (Davangere) ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದು ಶಾಸಕಿ ಅನ್ನಪೂರ್ಣ ತುಕಾರಾಮ್ (MLA Annapurna Tukaram) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಶ್ವವಾಣಿ ಟಿವಿ ಜೊತೆ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ನಾನು ಪ್ರತಿಯೊಂದು ಮನೆಗೂ ಹೋಗಿ ಪಂಚ ಗ್ಯಾರಂಟಿ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರದೃಷ್ಟಿ ಇರುವ ನಾಯಕರು. ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಸಾಧ್ಯವಾಗಿಲ್ಲ. ಆರ್ಥಿಕ ಸಮಾನತೆಯನ್ನು ತಂದುಕೊಟ್ಟರೆ ಜಾತಿ ವ್ಯವಸ್ಥೆಯನ್ನು ಸ್ವಲ್ಪ ಕಡಿಮೆ ಮಾಡಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಹಿಂದೆ ಹೆಣ್ಣು ಮಕ್ಕಳು ಪ್ರತಿಯೊಂದಕ್ಕೂ ಗಂಡನನ್ನೇ ಅವಲಂಬಿಸಬೇಕಾಗಿತ್ತು. ಆದರೆ ಸರ್ಕಾರ ಕೊಟ್ಟಿರುವ ಗೃಹಲಕ್ಷ್ಮಿ ಹಣದಿಂದಾಗಿ ಹೆಣ್ಣು ಮಕ್ಕಳು ವ್ಯವಹಾರ ಜ್ಞಾನವನ್ನು ಪಡೆದಿದ್ದಾರೆ. ಉಚಿತ ಬಸ್ಸಿನ ವ್ಯವಸ್ಥೆಯಿಂದ ಯಾರ ಸಹಾಯವಿಲ್ಲದೆ ಎಲ್ಲ ಕೆಲಸವನ್ನು ಮಾಡಲು ಪ್ರಾರಂಭಿಸಿದರು.