ಯುಗಾದಿ ವರ್ಷ ಭವಿಷ್ಯ: ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ ಹೊಸ ಸಂವತ್ಸರ?
ಯುಗಾದಿ ಬಳಿಕ ಪರಾಭವ ನಾಮ ಸಂವತ್ಸರ ಆರಂಭವಾಗಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಸಂವತ್ಸರದಲ್ಲಿ ಕರ್ಕಾಟಕ ರಾಶಿಯವರಲ್ಲಿ ಹಲವು ರೀತಿಯ ಬದಲಾವಣೆಗಳು ಕಂಡುಬರಲಿವೆ. ಹೊಸ ಸಂವತ್ಸರವು ಕರ್ಕಾಟಕ ರಾಶಿಯವರ ಜೀವನದಲ್ಲಿ ಏನೆಲ್ಲ ಬದಲಾವಣೆಗಳನ್ನು ಉಂಟು ಮಾಡಲಿದೆ? ಆರ್ಥಿಕ ಪರಿಸ್ಥಿತಿ ಹೇಗೆ ಇರಲಿದೆ? ಉದ್ಯೋಗ, ವ್ಯವಹಾರಗಳಲ್ಲಿ ಏನೆಲ್ಲ ಬದಲಾವಣೆ ಎದುರಿಸಬೇಕಾಗಬಹುದು? ಎನ್ನುವ ಕುರಿತು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.
ಬೆಂಗಳೂರು, ಮಾ. 21: ಹೊಸ ಸಂವತ್ಸರದಲ್ಲಿ ಕರ್ಕಾಟಕ ರಾಶಿಯ ಕುಂಡಲಿಯಲ್ಲಿ ಗುರು, ರವಿ, ಚಂದ್ರನ ಸ್ಥಾನ ಪಲ್ಲಟವಾಗಲಿದೆ. ಶನಿಯು ವರ್ಷ ಪೂರ್ತಿ ಸಿಂಹ ರಾಶಿಯಲ್ಲಿ ಇರಲಿದ್ದು, ರಾಹು, ಕೇತು ವರ್ಷಾಂತ್ಯಕ್ಕೆ ಸ್ಥಳ ಬದಲಾವಣೆ ಮಾಡಲಿದ್ದಾರೆ. ಇದರಿಂದ ಈ ವರ್ಷ (Ugadi 2026) ಕರ್ಕಾಟಕ ರಾಶಿಯವರಿಗೆ ಮಧ್ಯಮ ಫಲ ದೊರೆಯಲಿದೆ. ಅನಾರೋಗ್ಯವೂ ಅಷ್ಟೊಂದು ಬಾಧಿಸದೇ ಇದ್ದರೂ ಆರೋಗ್ಯ ಸ್ಥಿರವಾಗಿರುವುದಿಲ್ಲ. ಅನಾವಶ್ಯಕ ಖರ್ಚುಗಳು ಎದುರಾಗುವ ಸಾಧ್ಯತೆ ಇದೆ. ಕೂಡಿಟ್ಟ ಹಣವೆಲ್ಲ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಏನೇ ಖರೀದಿ ಮಾಡುವುದಿದ್ದರೂ ಯೋಚಿಸಿ. ಎಚ್ಚರಿಕೆಯಿಂದ ಹಣದ ನಿರ್ವಹಣೆ ಮಾಡಿ. ವಂಚನೆಗೆ ಒಳಗಾಗುವ ಅಪಾಯವಿದೆ. ಆರ್ಥಿಕ ವಿಚಾರಗಳಲ್ಲಿ ಯಾರನ್ನು ಕೂಡ ನಂಬದೇ ಇರುವುದು ಒಳ್ಳೆಯದು. ಕೆಲಸದ ಕ್ಷೇತ್ರದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಯೋಗವೂ ಇದೆ. ಕಾರ್ಯಕ್ಷೇತ್ರದಲ್ಲಿ ವಿಘ್ನಗಳು ಬರುವ ಸಾಧ್ಯತೆ ಉಂಟು. ಋಣ ಮುಕ್ತರಾಗುವ ಯೋಗವೂ ಇದೆ. ಕಷ್ಟಗಳಿಂದ ಪರಿಹಾರ ಪಡೆಯಲು ಬಂಧು ಮಿತ್ರರ ಸಹಾಯ ದೊರೆಯಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಹೊಸ ಹೂಡಿಕೆ ಬೇಡ. ವ್ಯಾಪಾರ, ವ್ಯವಹಾರದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ದುರ್ಗಾ ಮಾತೆಯ ಸಾನಿಧ್ಯಕ್ಕೆ ಭೇಟಿ ನೀಡಿ. ಶಕ್ತಿಯ ಆರಾಧನೆ ಮಾಡಿ. ಗಣೇಶನನ್ನು ಆರಾಧಿಸಿ. ಇದು ವಿಘ್ನಗಳನ್ನು ನಿವಾರಣೆ ಮಾಡುತ್ತದೆ ಎಂದು ಜ್ಯೋತಿಷಿ ಶ್ರೀ ದೇವದತ್ತ ಶರ್ಮ ಗುರೂಜಿ ವಿವರಿಸಿದ್ದಾರೆ.