ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕನ್ನಡಿಗರ ಒಗ್ಗಟ್ಟಿನ ಮುಂದೆ ಮಂಡಿಯೂರಿದ ಝೊಮೆಟೊ ಉದ್ಯೋಗಿ; ಹಿಂದಿ ಕಲಿತು ಬನ್ನಿ, ಇಲ್ಲದಿದ್ದರೆ ಕೆಲಸ ಬಿಡಿ ಎಂದವ ಕೊನೆಗೆ ಕನ್ನಡದಲ್ಲೇ ಕ್ಷಮೆ ಕೋರಿದ!

Viral Video: ಝೊಮೆಟೊ ಸಂಸ್ಥೆಯ ಗೋದಾಮಿನ ಮೇಲ್ವಿಚಾರಕ ಸ್ಥಳೀಯ ಉದ್ಯೋಗಿಗಳಿಗೆ ಹಿಂದಿ ಕಲಿತು ಬನ್ನಿ, ಇಲ್ಲವೇ ಕೆಲಸ ಬಿಟ್ಟು ಹೋಗಿ ಎಂದು ದರ್ಪ ತೋರಿಸಿದ್ದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಆತ ಕೈ ಮುಗಿದು ಕನ್ನಡದಲ್ಲೇ ಕ್ಷಮೆ ಯಾಚಿಸಿದ್ದಾನೆ.

ಹಿಂದಿ ಕಲಿಯಿರಿ ಎಂದು ಧಮ್ಕಿ: ಆಕ್ರೋಶದ ಬಳಿಕ ಕನ್ನಡದಲ್ಲಿ ಕ್ಷಮೆ!

ಕನ್ನಡ ನೌಕರರಿಗೆ ಧಮ್ಕಿ ಹಾಕಿದ ಝೊಮೆಟೊ ಉದ್ಯೋಗಿ ಅಶೋಕ್‌ -

Profile
Pushpa Kumari Oct 6, 2026 2:17 PM

​ಬೆಂಗಳೂರು, ಅ. 6: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಭಾಷಾ ವಿವಾದವೊಂದು ಮುನ್ನಲೆಗೆ ಬಂದಿದೆ. ಅನ್ಯ ರಾಜ್ಯದ ಝೊಮೆಟೊ ಮೇಲ್ವಿಚಾರಕ ಕನ್ನಡಿಗರಿಗೆ ಹಿಂದಿ ಕಲಿಯುವಂತೆ ಬೆದರಿಕೆ ಒಡ್ಡಿದ್ದ ವಿಂಚಲನ ಮೂಡಿಸಿತ್ತು. ಝೊಮೆಟೊ ಸಂಸ್ಥೆಯ ಗೋದಾಮಿನ ಮೇಲ್ವಿಚಾರಕನು ಸ್ಥಳೀಯ ಉದ್ಯೋಗಿಗಳಿಗೆ ಹಿಂದಿ ಕಲಿತು ಬನ್ನಿ, ಇಲ್ಲವೇ ಕೆಲಸ ಬಿಟ್ಟು ಹೋಗಿ ಎಂದು ಕನ್ನಡಿಗರ ವಿರುದ್ಧವೆ ದರ್ಪ ತೋರಿಸಿದ್ದ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ (Viral News) ಕನ್ನಡಿಗರು ಆಕ್ರೋಶ ಹೊರಹಾಕಿದ್ದರು. ಪರಿಸ್ಥಿತಿ ಕೈ ಮೀರಿ ಹೀಗುತ್ತಿದ್ದಂತೆ ಆತ ಇದೀಗ ಕೈ ಮುಗಿದು, ಕನ್ನಡದಲ್ಲೇ ಕ್ಷಮೆಕೋರಿದ್ದಾನೆ.

ಕನ್ನಡಿಗರ ಮೇಲೆಯೇ ದಬ್ಬಾಳಿಕೆ ನಡೆಸುವ ಪರಭಾಷಿಕರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಇದೀಗ ಬೆಂಗಳೂರಿನಲ್ಲಿರುವ ಝೊಮೆಟೊ ಗೋದಾಮಿನ ಮೇಲ್ವಿಚಾರಕ ಸ್ಥಳೀಯ ಸಿಬ್ಬಂದಿಗೆ ಹಿಂದಿ ಕಲಿಯಿರಿ ಅಥವಾ ಕೆಲಸ ಬಿಟ್ಟುಬಿಡಿ ಎಂದು ಹೇಳಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾನೆ.

ಆಂಧ್ರ ಪ್ರದೇಶದ ಅಶೋಕ್ ಎಂಬಾತ ಬೆಂಗಳೂರಿನ ಮಾದನಾಯಕನಹಳ್ಳಿ ಹತ್ತಿರ ಇರುವ ಝೊಮೆಟೊ ಗೋದಾಮಿನಲ್ಲಿ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸ್ಥಳೀಯ ಸಿಬ್ಬಂದಿಯೊಂದಿಗೆ ಮಾತನಾಡುತ್ತ, ʼʼನನಗೆ ಕನ್ನಡ ಬರುವುದಿಲ್ಲ. ಹಿಂದಿಯಲ್ಲೇ ಮಾತನಾಡುತ್ತೇನೆ. ನನ್ನ ಜತೆ ಕೆಲಸ ಮಾಡಬೇಕಿದ್ದರೆ ನೀವು ಹಿಂದಿ ಕಲಿಯಲೇ ಬೇಕು. ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗುವುದಾದರೆ ಹೋಗಿ, ನನಗೆ ತೊಂದರೆಯಿಲ್ಲʼʼ ಎಂದು ಉದ್ಧಟತನದ ವರ್ತನೆ ತೋರಿದ್ದ.

ವಿಡಿಯೊ ನೋಡಿ:



ಸಿಬ್ಬಂದಿ ಇದಕ್ಕೆ ಪ್ರತ್ಯುತ್ತರವಾಗಿ "ಇದು ಕರ್ನಾಟಕ" ಎಂದು ಹೇಳಿದ್ದರು. ಅದಕ್ಕವನು, ʼʼಅದಕ್ಕೇನು, ನಾನು ಹಿಂದಿಯಲ್ಲೇ ಮಾತನಾಡುವುದು" ಎಂದು ಅಹಂಕಾರದ ವರ್ತನೆ ತೋರಿದ್ದ.‌ ವೈರಲ್ ಆಗಿರುವ ವಿಡಿಯೊದಲ್ಲಿ ಅಶೋಕ್ ಸಿಬ್ಬಂದಿಗೆ ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇನೆ ಮತ್ತು ತನ್ನೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಭಾಷೆಯನ್ನು ಕಲಿಯಬೇಕು ಅಥವಾ ಬಿಟ್ಟುಬಿಡಿ ಎಂದು ಹೇಳುತ್ತಿರುವುದು ಕಂಡುಬಂದಿತ್ತು.

ಇದು ದೇವರ ನಾಡಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿಶಿಷ್ಟ ಆಚರಣೆ

ಈ ಇಡೀ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಆತನ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಆತನನ್ನು ಕೆಲಸದಿಂದ ತೆಗೆದುಹಾಕುವಂತೆ ಕನ್ನಡ ಪರ ಕಾರ್ಯಕರ್ತರು ದೂರು ನೀಡಿದ್ದರು.

ಪೊಲೀಸರು ಅಶೋಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಕಾನೂನು ಕ್ರಮದ ಭಯದಿಂದ ಎಚ್ಚೆತ್ತುಕೊಂಡ ಅಶೋಕ್, ವಿಡಿಯೊ ಮಾಡಿ, ಕೈ ಮುಗಿದು, ಕನ್ನಡದಲ್ಲೇ ಮಾತನಾಡುವ ಮೂಲಕ ಕ್ಷಮೆಯಾಚಿಸಿದ್ದಾನೆ. "ನನ್ನಿಂದ ತಪ್ಪಾಗಿದೆ, ಇನ್ಮುಂದೆ ಈ ರೀತಿ ವರ್ತಿಸುವುದಿಲ್ಲʼʼ ಎಂದು ಹೇಳಿದ್ದಾನೆ.