ಬೆಂಗಳೂರಿನಲ್ಲಿ ಎಐ ಕ್ಯಾಮೆರಾ ಎಡವಟ್ಟು; ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಸವಾರನ ಗಿಟಾರ್ ಬ್ಯಾಗನ್ನೇ ಹಿಂಬದಿ ಸವಾರ ಎಂದು ಭಾವಿಸಿ 500 ರೂಪಾಯಿ ದಂಡ!
Viral News: ಬೆಂಗಳೂರಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಚಾರ ನಿಯಂತ್ರಣ ಕ್ಯಾಮೆರಾವೊಂದು ಎಡವಟ್ಟು ಮಾಡಿರುವ ಘಟನೆ ವರದಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಕರೊಬ್ಬರು ತೆರಳುತ್ತಿದ್ದು ಬೆನ್ನ ಹಿಂದೆ ಗಿಟಾರ್ ಬ್ಯಾಗ್ ಧರಿಸಿದ್ದರು. ಆದರೆ ಬೆನ್ನಲ್ಲಿದ್ದ ಗಿಟಾರ್ ಬ್ಯಾಗ್ ಅನ್ನು ಹೆಲ್ಮೆಟ್ ಧರಿಸದ ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿದ ಎಐ ಕ್ಯಾಮೆರಾ 500 ರೂಪಾಯಿ ದಂಡ ವಿಧಿಸಿದೆ.
ಬೆಂಗಳೂರಿನಲ್ಲಿ ಎಐ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ -
ಬೆಂಗಳೂರು, ಸೆ. 27: ದಿನನಿತ್ಯದ ಜೀವನದಲ್ಲೂ ಎಐ ತಂತ್ರಜ್ಞಾನಕ್ಕೆ ಮೊರೆ ಹೋದವರಿದ್ದಾರೆ. ಈ ನಡುವೆ ಬೆಂಗಳೂರಿನ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಂಚಾರ ನಿಯಂತ್ರಣ ಕ್ಯಾಮೆರಾವೊಂದು ಎಡವಟ್ಟು ಮಾಡಿರುವ ಘಟನೆ ವರದಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಒಬ್ಬರೇ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಬೆನ್ನ ಹಿಂದೆ ಗಿಟಾರ್ ಬ್ಯಾಗ್ ಧರಿಸಿದ್ದರು. ಆದರೆ ಬೆನ್ನಲ್ಲಿದ್ದ ಗಿಟಾರ್ ಬ್ಯಾಗನ್ನೇ ಹೆಲ್ಮೆಟ್ ಧರಿಸದ ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿದ ಎಐ ಕ್ಯಾಮೆರಾ 500 ರೂಪಾಯಿ ದಂಡ ವಿಧಿಸಿದೆ. ಸದ್ಯ ಈ ಘಟನೆ ಬಗ್ಗೆ (Viral News) ನೆಟ್ಟಿಗರು ತಮಾಷೆಯ ಕಾಮೆಂಟ್ ಮಾಡುತ್ತಿದ್ದಾರೆ.
ಸೌವಿಕ್ ದತ್ತಾ ಎಂಬವರು ಪೋಸ್ಟ್ ಶೇರ್ ಮಾಡಿಕೊಂಡಿದ್ದು, ತಮ್ಮ ಪತ್ನಿಯ ದ್ವಿಚಕ್ರ ವಾಹನದಲ್ಲಿ ಒಬ್ಬರೇ ಪ್ರಯಾಣ ಮಾಡಿದ್ದಾಗಿ ತಿಳಿಸಿದ್ದಾರೆ. ಆದರೆ ಅಲ್ಲಿದ್ದ ಕ್ಯಾಮೆರಾ ಮಾತ್ರ ಹೆಲ್ಮೆಟ್ ಧರಿಸದ ಪ್ರಯಾಣಿಕ ಎಂದು ದಂಡ ವಿಧಿಸಿದೆ. ಆದರೆ ಇಲ್ಲಿ ಒಂದು ಸಮಸ್ಯೆಯಿತ್ತು. ಆ ʼಪ್ರಯಾಣಿಕʼ ಎಂದು ಗುರುತಿಸಲ್ಪಟ್ಟಿದ್ದು ವಾಸ್ತವವಾಗಿ ಅವರ ಬೆನ್ನಿನಲ್ಲಿದ್ದ ಗಿಟಾರ್ ಬ್ಯಾಗ್ ಆಗಿತ್ತು ಎಂದು ಅವರು ತಿಳಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ:
I was riding my wife's two-wheeler alone with my guitar slung on my back in Bangalore. @blrcitytraffic my wife received a traffic challan (notice no. 86202541) for "pillion riding without helmet". So much for AI based traffic violation detection! Pls revoke the challan #AISlop pic.twitter.com/fYCn9OoUNQ
— Souvik Dutta (@souvikonline) September 26, 2026
ಹೆಬ್ಬಾಳ ಹಾಗೂ ಟಿನ್ ಫ್ಯಾಕ್ಟರಿ ನಡುವಿನ ಹೊರವರ್ತುಲ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 15ರಂದು ಸಂಚಾರ ಉಲ್ಲಂಘನೆಗಾಗಿ ಪೊಲೀಸರು 500 ರೂಪಾಯಿ ದಂಡ ವಿಧಿಸಿದ್ದರು. ಅವರಿಗೆ ಲಭಿಸಿದ ಚಲನ್‌ನಲ್ಲಿ "ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ" ಎಂಬ ಕಾರಣ ನೀಡಲಾಗಿತ್ತು. ಆ ರಸ್ತೆಯಲ್ಲಿ ತಾವೊಬ್ಬರೇ ಸಂಚರಿಸಿದ್ದರಿಂದ ದತ್ತಾ ಅವರಿಗೆ ಗೊಂದಲವಾಗಿತ್ತು.
ದತ್ತಾ ಚಲನ್‌ನೊಂದಿಗೆ ಲಗತ್ತಿಸಲಾದ ಫೋಟೊವನ್ನು ಸಹ ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ದತ್ತಾ ಅವರ ಗೊಂದಲಕ್ಕೆ ಉತ್ತರವಿತ್ತು. ಆ ಚಿತ್ರದಲ್ಲಿ, ಅವರು ಹೆಲ್ಮೆಟ್ ಧರಿಸಿದ್ದು, ಗಿಟಾರ್ ಬ್ಯಾಗ್ ಬೆನ್ನಿನಲ್ಲಿರುವುದು ಕಂಡುಬಂದಿದೆ. ಇದನ್ನೇ ಸಹ ಸವಾರ ಎಂದು ತಪ್ಪಾಗಿ ಅರ್ಥೈಸಲಾಗಿದೆ.
ತಮಗೆ ಬಂದ ದಂಡದ ಪತ್ರ ಹಾಗೂ ಫೋಟೊವನ್ನು ಸೋಷಿಯಲ್ ಮೀಡಿಯಾದ ಖಾತೆಯಲ್ಲಿ ಹಂಚಿಕೊಂಡ ಸೌವಿಕ್ ದತ್ತಾ, ಬೆಂಗಳೂರು ಸಂಚಾರ ಪೊಲೀಸರನ್ನು ಟ್ಯಾಗ್ ಮಾಡಿ ದಂಡ ರದ್ದುಗೊಳಿಸುವಂತೆ ವಿನಂತಿಸಿದ್ದಾರೆ. ವಿಷಯ ಗಮನಕ್ಕೆ ಬರುತ್ತಿದ್ದಂತೆ ಬೆಂಗಳೂರು ಸಂಚಾರ ಪೊಲೀಸರು ಪೋಸ್ಟ್‌ಗೆ ಸ್ಪಂದಿಸಿದ್ದು, ಈ ತಪ್ಪಾದ ದಂಡವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಬಗ್ಗೆ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು, ʼʼಈ ಗಿಟಾರ್‌ಗೂ ತಲೆ ಇದೆ ಎಂಬುದು ಎಐಗೆ ಮಾತ್ರ ಗೊತ್ತು. ಅದಕ್ಕೂ ಹೆಲ್ಮೆಟ್ ಹಾಕಬೇಡವೇ?" ಎಂದು ಕಾಲೆಳೆದಿದ್ದಾರೆ.