ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bee Humming Bird: ಜಗತ್ತಿನ ಅತಿ ಚಿಕ್ಕದಾದ ಪಕ್ಷಿ ನೋಡಿದ್ರಾ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ

ಜಗತ್ತಿನ ಅತಿ ಚಿಕ್ಕದಾದ ಪಕ್ಷಿ ಎಂದರೆ ಅದು ಬೀ ಹಮ್ಮಿಂಗ್ ಬರ್ಡ್. ಇದು ಕೇವಲ 5ರಿಂದ 6 ಸೆಂಟಿಮೀಟರ್ ಉದ್ದಕ್ಕೆ ಬೆಳೆಯುತ್ತದೆ ಮತ್ತು ಇದರ ತೂಕ ಕೇವಲ 1.5ರಿಂದ 2 ಗ್ರಾಂನಷ್ಟು ಇರುತ್ತದೆ. ಇದು ಹೂವಿನ ಮಕರಂದವನ್ನು ಹೀರಿ ಬದುಕುತ್ತವೆ.

ಇದು ವಿಶ್ವದ ಅತೀ ಚಿಕ್ಕ ಪಕ್ಷಿ; ಏನಿದರ ವಿಶೇಷತೆ?

Profile pavithra Jul 5, 2025 4:05 PM

ಹವಾನಾ: ಪ್ರಕೃತಿಯ ಸೃಷ್ಟಿ ಅದ್ಭುತವಾಗಿರುತ್ತದೆ. ದೈತ್ಯ ಜೀವಿಯಿಂದ ಹಿಡಿದು ಪುಟ್ಟದಾದ ಹಕ್ಕಿಯ ತನಕ ಎಲ್ಲವೂ ಇಲ್ಲಿವೆ. ನಿಮ್ಮ ಕಣ್ಣುಗಳು ನಂಬಲಾರದಷ್ಟು ಬಹಳ ಚಿಕ್ಕದಾದ ಪಕ್ಷಿಯನ್ನು ಕೂಡ ಸೃಷ್ಟಿಸಿದೆ. ಅದು ಎಷ್ಟು ಚಿಕ್ಕದೆಂದರೆ ಅದು ನಿಮ್ಮ ಮುಂದೆಯೇ ಹಾರಿದರೆ, ನೀವು ಅದನ್ನು ಕೀಟ ಎಂದು ತಪ್ಪಾಗಿ ಭಾವಿಸಬಹುದು. ಅರೇ...ಇದ್ಯಾವುದು ಹಕ್ಕಿ ಎಂದು ಯೋಚನೆ ಮಾಡುತ್ತಿದ್ದೀರಾ...? ಹೌದು ಅದೇ ಬೀ ಹಮ್ಮಿಂಗ್ ಬರ್ಡ್ (Bee Humming Bird). ಇದು ಭಾರತದಲ್ಲಿ ಕಂಡುಬರುವುದಿಲ್ಲ. ಕ್ಯೂಬಾದ ಕಾಡುಗಳು ಮತ್ತು ಉದ್ಯಾನಗಳಲ್ಲಿ ಕಂಡುಬರುತ್ತದೆ. ಇದನ್ನು ಅಧಿಕೃತವಾಗಿ ವಿಶ್ವದ ಅತ್ಯಂತ ಚಿಕ್ಕ ಹಕ್ಕಿ ಎಂದು ಕರೆಯಲಾಗಿದೆ.

ಬೀ ಹಮ್ಮಿಂಗ್ ಬರ್ಡ್ ದೇಹ ರಚನೆ ಮತ್ತು ಆಹಾರ ಪದ್ಧತಿ

ಬೀ ಹಮ್ಮಿಂಗ್ ಬರ್ಡ್ ಕೇವಲ 5ರಿಂದ 6 ಸೆಂಟಿಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಕಿರುಬೆರಳಿಗಿಂತ ಚಿಕ್ಕದಾಗಿದೆ. ಇನ್ನೂ ಆಶ್ಚರ್ಯಕರವೆಂದರೆ ಅದರ ತೂಕ ಕೇವಲ 1.5ರಿಂದ 2 ಗ್ರಾಂ. ಅಂದರೆ ಅಕ್ಕಿಯ ಕಾಳಿನಷ್ಟೇ. ಇದರ ಚಿಕ್ಕ ಗಾತ್ರ ಮತ್ತು ಝೇಂಕರಿಸುವ ಶಬ್ದದಿಂದಾಗಿ, ಜನರು ಇದನ್ನು ಜೇನುನೊಣವೆಂದು ಭಾವಿಸುತ್ತಾರೆ. ಇದು ಜೇನು ನೋಣಗಳಂತೆ ಹೂವಿನ ಮಕರಂದವನ್ನು ಹೀರಿ ಬದುಕುತ್ತವೆ.

ಗಂಡು ಮತ್ತು ಹೆಣ್ಣು ಬೀ ಹಮ್ಮಿಂಗ್ ಬರ್ಡ್‍ಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಗಂಡು ಹಕ್ಕಿಗಳು ತಮ್ಮ ತಲೆ ಮತ್ತು ಕುತ್ತಿಗೆಯ ಮೇಲೆ ಕೆಂಪು ಅಥವಾ ಕಿತ್ತಳೆ ಬಣ್ಣದ ಛಾಯೆಗಳಲ್ಲಿ ಗಾಢವಾದ ಬಣ್ಣ ಬಣ್ಣದ ಗರಿಗಳನ್ನು ಹೊಂದಿದ್ದು, ಅವು ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತವೆ. ಹೆಣ್ಣು ಹಕ್ಕಿಗಳು ಸ್ವಲ್ಪ ಮಂದ ಬಣ್ಣದಲ್ಲಿರುತ್ತವೆ ಮತ್ತು ಹೆಚ್ಚು ಆಕರ್ಷಕ ಬಣ್ಣವನ್ನು ಹೊಂದಿರುವುದಿಲ್ಲ.

ಅದ್ಭುತವಾಗಿ ಹಾರಬಲ್ಲ ಬೀ ಹಮ್ಮಿಂಗ್ ಬರ್ಡ್

ಸಾಮಾನ್ಯವಾಗಿ ನಾವು ಮುಂದೆ ಹಾರುವಂತಹ ಪಕ್ಷಿಗಳನ್ನು ನೋಡಿರುತ್ತೇವೆ. ಆದರೆ ಮುಂದೆ ಮಾತ್ರ ಹಾರಬಲ್ಲ ಹೆಚ್ಚಿನ ಪಕ್ಷಿಗಳಿಗಿಂತ ಭಿನ್ನವಾಗಿ, ಬೀ ಹಮ್ಮಿಂಗ್ ಬರ್ಡ್ ಹಿಮ್ಮುಖವಾಗಿ ಸಹ ಹಾರಬಲ್ಲದು. ಮಕರಂದವನ್ನು ಹೀರಲು ತನ್ನ ಕೊಕ್ಕನ್ನು ಹೂವಿನೊಳಗೆ ಸೇರಿಸಿದ ನಂತರ, ಅದು ಹಿಮ್ಮುಖವಾಗಿ ಹಾರುತ್ತಾ ಇನ್ನೊಂದು ಅರಳಿದ ಹೂವಿನ ಕಡೆಗೆ ಸಾಗುತ್ತದೆ. ಇದರ ರೆಕ್ಕೆಗಳು, ಸೆಕೆಂಡಿಗೆ 80ಕ್ಕೂ ಹೆಚ್ಚು ಬಾರಿ ಬಡಿಯುತ್ತವೆ ಮತ್ತು ವೇಗವಾಗಿ ಹಾರುವಾಗ ಇದು ಸೆಕೆಂಡಿಗೆ ಸುಮಾರು 200 ಬಾರಿ ಹೆಚ್ಚಾಗಬಹುದು.

ಗೂಡು ಕಟ್ಟುವ ವಿಧಾನ

ಅವುಗಳ ಗಾತ್ರದ ಹೊರತಾಗಿಯೂ, ಈ ಪಕ್ಷಿಗಳು ಗೂಡು ಕಟ್ಟುವಲ್ಲಿ ನಿಪುಣವಾಗಿದೆ. ಅವು ತೊಗಟೆಯ ತುಂಡುಗಳನ್ನು ಬಳಸಿ ಜೇಡರ ಬಲೆಯಂತೆ ಚಿಕ್ಕದಾದ ಗೂಡುಗಳನ್ನು ಕಟ್ಟುತ್ತವೆ. ಅವುಗಳನ್ನು ತೆಳುವಾದ ಮರದ ಕೊಂಬೆಗಳ ಮೇಲೆ ಎಚ್ಚರಿಕೆಯಿಂದ ಕಟ್ಟುತ್ತವೆ. ಈ ಗೂಡುಗಳು ತುಂಬಾ ಚಿಕ್ಕದಾಗಿರುತ್ತವೆ, ಅವುಗಳನ್ನು ಗುರುತಿಸುವುದು ಅಸಾಧ್ಯ. ಹೆಣ್ಣು ಸಾಮಾನ್ಯವಾಗಿ ಒಂದು ಸಮಯದಲ್ಲಿ ಕೇವಲ ಎರಡು ಮೊಟ್ಟೆಗಳನ್ನು ಇಡುತ್ತದೆ. ಪ್ರತಿಯೊಂದೂ ಮೊಟ್ಟೆಯು ಬಟಾಣಿಗಿಂತ ಚಿಕ್ಕದಾಗಿರುತ್ತದೆ.

ಅಳಿವಿನಂಚಿನಲ್ಲಿರುವ ಬೀ ಹಮ್ಮಿಂಗ್ ಬರ್ಡ್ಸ್

ಬೀ ಹಮ್ಮಿಂಗ್ ಬರ್ಡ್ಸ್ ದಟ್ಟವಾದ ಕಾಡುಗಳು ಮತ್ತು ತೆರೆದ ಪ್ರದೇಶಗಳಲ್ಲಿ ಕಂಡುಬರುತ್ತವೆ. ಆದರೆ ಅರಣ್ಯನಾಶ, ಕೃಷಿ ವಿಸ್ತರಣೆ, ನಗರೀಕರಣ ಮತ್ತು ಕೀಟನಾಶಕಗಳ ಬಳಕೆಯಿಂದಾಗಿ ಇವುಗಳಿಗೆ ನೈಸರ್ಗಿಕ ಆವಾಸಸ್ಥಾನಗಳು ಸಿಗದೆ ಸಂತಾನೋತ್ಪತ್ತಿ ಮಾಡಲಾಗದೆ ಅವುಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ.

ಈ ಸುದ್ದಿಯನ್ನೂ ಓದಿ:Viral News: ಈ ಆದಿವಾಸಿ ಜನಾಂಗದಲ್ಲಿ ಹೆಣ್ಣು ಮಕ್ಕಳ ತುಟಿಯನ್ನೇ ಕತ್ತರಿಸುತ್ತಾರಂತೆ! ಇದೇನಿದು ವಿಚಿತ್ರ ಸಂಪ್ರದಾಯ?

ಹಾಗಾಗಿ ಅಂತಹ ಅದ್ಭುತವಾದ ಜೀವಿಗಳನ್ನು ರಕ್ಷಿಸುವುದು ಅವುಗಳ ಉಳಿವಿಗಾಗಿ ಮಾತ್ರವಲ್ಲದೆ ಪ್ರಕೃತಿಯ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಲು ಅತ್ಯಗತ್ಯ.