ಮಹೀಂದ್ರಾ ಥಾರ್ ಖರೀದಿಸಲು ಚಿಕ್ಕಪ್ಪನ ಮನೆಗೆ ಕನ್ನ ಹಾಕಿದ ಯುವಕ; ಪೂಜೆಯಲ್ಲಿ ಕಳ್ಳ ಸಿಕ್ಕಿಬಿದ್ದಿದ್ದು ಹೇಗೆ?
ಮಹೀಂದ್ರಾ ಥಾರ್ ಕಾರು ಖರೀದಿಸಬೇಕು ಎನ್ನುವ ಗೀಳು 19 ವರ್ಷದ ಯುವಕನೊಬ್ಬನನ್ನು ಜೈಲು ಪಾಲಾಗುವಂತೆ ಮಾಡಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪನ್ಹಾಲಾ ತಾಲೂಕಿನ ಸಾತ್ವೆ ಗ್ರಾಮದಲ್ಲಿ ನಡೆದಿದೆ. ತನ್ನ ಆಸೆಯ ಕಾರನ್ನು ಕೊಳ್ಳಲು ಸ್ವಂತ ಚಿಕ್ಕಪ್ಪನ ಮನೆಯಲ್ಲೇ ಕನ್ನ ಹಾಕಿದ್ದಾನೆ.
ಸಂಗ್ರಹ ಚಿತ್ರ -
ಮುಂಬೈ: ಮಹೀಂದ್ರಾ ಥಾರ್ (Mahindra Thar) ಕಾರು ಖರೀದಿಸಬೇಕು ಎನ್ನುವ ಗೀಳು 19 ವರ್ಷದ ಯುವಕನೊಬ್ಬನನ್ನು ಜೈಲು ಪಾಲಾಗುವಂತೆ ಮಾಡಿರುವ ವಿಲಕ್ಷಣ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪನ್ಹಾಲಾ ತಾಲೂಕಿನ ಸಾತ್ವೆ ಗ್ರಾಮದಲ್ಲಿ ನಡೆದಿದೆ. ತನ್ನ ಆಸೆಯ ಕಾರನ್ನು ಕೊಳ್ಳಲು ಸ್ವಂತ ಚಿಕ್ಕಪ್ಪನ ಮನೆಯಲ್ಲೇ ಕನ್ನ ಹಾಕಿ, ಬಳಿಕ ಅದೇ ಕಾರಿನ ಪೂಜೆಗೆ (Viral News) ಕಳ್ಳತನಕ್ಕೊಳಗಾದ ಚಿಕ್ಕಪ್ಪನ ಕುಟುಂಬವನ್ನೇ ಆಹ್ವಾನಿಸಿ ಕಳ್ಳ ಸಿಕ್ಕಿಬಿದ್ದಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 19 ವರ್ಷದ ಆರೋಪಿ ಸಮರ್ ಪೋಪಟ್ ಚವಾಣ್ ಹಾಗೂ ಕದ್ದ ಒಡವೆಗಳನ್ನು ಖರೀದಿಸಿದ ಅಕ್ಕಸಾಲಿಗ ಸಂಗ್ರಾಮ್ ಬಾಬಾಸೋ ಮೋರೆ ಎಂಬಾತನನ್ನು ಕೊಲ್ಹಾಪುರ ಜಿಲ್ಲೆಯ ಕೋಡೋಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಸಮರ್ ಚವಾಣ್ಗೆ ಹೊಸ ಮಹೀಂದ್ರಾ ಥಾರ್ ಕಾರನ್ನು ಖರೀದಿಸುವ ಕ್ರೇಜ್ ಇತ್ತು. ಆದರೆ ಅದಕ್ಕೆ ತಕ್ಕ ಹಣ ಆತನ ಬಳಿ ಇರಲಿಲ್ಲ. ಹೀಗಾಗಿ ಶಾರ್ಟ್ಕಟ್ ಮಾರ್ಗ ಹುಡುಕಿದ ಈತ, ಸುಮಾರು ಒಂದು ತಿಂಗಳ ಹಿಂದೆ ತನ್ನದೇ ಸ್ವಂತ ಚಿಕ್ಕಪ್ಪ ಉಮೇಶ್ ಮಾರುತಿ ಚವಾಣ್ ಅವರ ಮನೆಗೆ ನುಗ್ಗಿ ಯಾರಿಗೂ ತಿಳಿಯದಂತೆ ಸುಮಾರು 15 ಗ್ರಾಂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿದ್ದನು. ಇದರ ಒಟ್ಟು ಮೌಲ್ಯ ಸುಮಾರು 14.5 ಲಕ್ಷ ರೂ. ಎನ್ನಲಾಗಿದೆ.
ಹೊಸ ಕಾರು ಮನೆಗೆ ಬಂದ ಖುಷಿಯಲ್ಲಿ ಆರೋಪಿ ಸಮರ್, ಕಾರಿಗೆ ಶಾಸ್ತ್ರೋಕ್ತವಾಗಿ ಪೂಜೆ ನೆರವೇರಿಸಲು ತೀರ್ಮಾನಿಸಿದ್ದಾನೆ. ವಿಪರ್ಯಾಸವೆಂದರೆ, ತಾನು ಯಾರ ಮನೆಯಲ್ಲಿ ಕಳ್ಳತನ ಮಾಡಿದ್ದನೋ, ಅದೇ ಚಿಕ್ಕಪ್ಪ ಉಮೇಶ್ ಚವಾಣ್ ಮತ್ತು ಅವರ ಕುಟುಂಬದವರನ್ನು ಕಾರಿನ ಪೂಜಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದ. ಚಿಕ್ಕಪ್ಪನ ಕುಟುಂಬಸ್ಥರು ತಮ್ಮ ಅಣ್ಣನ ಮಗ ಹೊಸ ಕಾರು ಖರೀದಿಸಿದ್ದಾನೆ ಎಂದು ಖುಷಿಯಿಂದ ಪೂಜೆಗೆ ಹೊರಡಲು ಸಿದ್ಧರಾದರು. ಶುಭ ಸಮಾರಂಭವಾದ್ದರಿಂದ ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ಧರಿಸೋಣ ಎಂದು ಬೀಗ ತೆರೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು. ಲಾಕರ್ನಲ್ಲಿದ್ದ 15 ಗ್ರಾಂ ಆಭರಣ ಕಾಣೆಯಾಗಿತ್ತು.
ಬಳಿಕ ಅವರು ಪೊಲೀಸರಿಗೆ ದೂರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ ಅವರಿಗೆ ಮೊದಲ ಅನುಮಾನ ಬಂದಿದ್ದೇ ಹೊಸ ಥಾರ್ ಕಾರು ಕೊಂಡ ಸಮರ್ ಮೇಲೆಯೇ. ಯಾವುದೇ ಉದ್ಯೋಗ ಅಥವಾ ಆದಾಯದ ಮೂಲ ಇಲ್ಲದ 19 ವರ್ಷದ ಯುವಕ ಏಕಾಏಕಿ 15-18 ಲಕ್ಷ ರೂ. ಮೌಲ್ಯದ ಐಷಾರಾಮಿ ಥಾರ್ ಕಾರನ್ನು ಹೇಗೆ ಕೊಂಡುಕೊಂಡ ಎಂಬ ಪ್ರಶ್ನೆ ಪೊಲೀಸರನ್ನು ಕಾಡಿತು.
ತಕ್ಷಣವೇ ಸಮರ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ, ತಾನೇ ಚಿಕ್ಕಪ್ಪನ ಮನೆಯಲ್ಲಿ ಕಳ್ಳತನ ಮಾಡಿ ಕಾರು ಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಪ್ರಸ್ತುತ ಕೋಡೋಲಿ ಪೊಲೀಸರು ಆರೋಪಿ ಸಮರ್ ಚವಾಣ್ ಮತ್ತು ಕದ್ದ ಚಿನ್ನವನ್ನು ಅಕ್ರಮವಾಗಿ ಖರೀದಿಸಿದ ಅಕ್ಕಸಾಲಿಗ ಇಬ್ಬರನ್ನೂ ಜೈಲಿಗಟ್ಟಿದ್ದಾರೆ. ಅಲ್ದೇ ಕಳ್ಳತನದ ಹಣದಿಂದ ಖರೀದಿಸಲಾಗಿದ್ದ ಥಾರ್ ಕಾರು ಮತ್ತು ಒಡವೆಗಳನ್ನು ಜಪ್ತಿ ಮಾಡಿದ್ದಾರೆ.