‘ಐ ಲವ್ ಯು’ ಎಂದು ಮಹಿಳೆಗೆ ಮೆಸೇಜ್ ಮಾಡಿದ ರ‍್ಯಾಪಿಡೋ ಚಾಲಕ; ಪೊಲೀಸ್ ದೂರಿಗೂ ಹೆದರದ ಡೆಲಿವರಿ ಬಾಯ್
Viral News: ಪಾರ್ಸೆಲ್ ಬುಕ್ಕಿಂಗ್ ಆ್ಯಪ್‌ಗಳ ಮೂಲಕ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವುದನ್ನು ಪುಷ್ಟಿಕರಿಸುವ ಮತ್ತೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ರ‍್ಯಾಪಿಡೋ ಆ್ಯಪ್ ಮೂಲಕ ಪಾರ್ಸೆಲ್ ಕಳುಹಿಸಿದ ಮಹಿಳೆಗೆ ಡೆಲಿವರಿ ಬಾಯ್ 'ಐ ಲವ್ ಯು' ಎಂಬ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದಾನೆ. ಮಹಿಳೆ ತನ್ನ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ದೂರು ನೀಡುವುದಾಗಿ ಹೇಳಿದ ಬಳಿಕವೂ ಸಂದೇಶ ಕಳುಹಿಸುತ್ತಲೇ ಇದ್ದ ಎಂದಿದ್ದಾರೆ.
ಸಾಂದರ್ಭಿಕ ಚಿತ್ರ -
ಲಖನೌ, ಸೆ. 9: ಡೆಲಿವರಿ ಸಿಬ್ಬಂದಿ ಇತ್ತೀಚೆಗೆ ಮಹಿಳೆಯರ ಜತೆ ಅನುಚಿತ ವರ್ತಿಸುವ ಅನೇಕ ಘಟನೆಗಳು ವರದಿಯಾಗುತ್ತಲೇ ಇದೆ. ಪಾರ್ಸೆಲ್ ಬುಕ್ಕಿಂಗ್ ಆ್ಯಪ್‌ಗಳ ಮೂಲಕವೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎನ್ನುವಂತಹ ಮತ್ತೊಂದು ಘಟನೆ ವರದಿಯಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ರ‍್ಯಾಪಿಡೋ ಆ್ಯಪ್ ಮೂಲಕ ಪಾರ್ಸೆಲ್ ಕಳುಹಿಸಿದ ನಂತರ ಮಹಿಳೆಗೆ 'ಐ ಲವ್ ಯು' ಎಂಬ ಸಂದೇಶ ಕಳುಹಿಸಿ ಕಿರುಕುಳ ನೀಡಿರುವ ಘಟನೆ (Viral News) ವರದಿಯಾಗಿದೆ. ಮಹಿಳೆ ತನ್ನ ಅನುಭವವನ್ನು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದು, ಡೆಲಿವರಿ ಬಾಯ್ ವಿರುದ್ಧ ದೂರು ದಾಖಲಿಸುವುದಾಗಿ ಹೇಳಿದ ನಂತರವೂ ತನಗೆ ಸಂದೇಶ ಕಳುಹಿಸುತ್ತಲೇ ಇದ್ದ ಎಂದು ತಿಳಿಸಿದ್ದಾರೆ.
ಗೀತಿಕಾ ಶ್ರೀವಾಸ್ತವ ಎಂಬ ಮಹಿಳೆ ರ‍್ಯಾಪಿಡೋ ಸೇವೆ ಬಳಸಿಕೊಂಡು ಪಾರ್ಸೆಲ್ ಕಳುಹಿಸಿದ್ದರು. ಪಾರ್ಸೆಲ್ ತಲುಪಿಸಿದ ನಂತರ ಡೆಲಿವರಿ ಬಾಯ್ ಮಹಿಳೆಯ ಮೊಬೈಲ್ ಸಂಖ್ಯೆಗೆ "ಹಲೋ, ಹೇಗಿದ್ದೀರಾ?"ಎಂದು ಮೆಸೇಜ್ ಕಳುಹಿಸಿದ್ದಾನೆ. ಅದಕ್ಕೆ ರಿಪ್ಲೈ ಮಾಡದೇ ಇದ್ದಾಗ "ಐ ಲವ್ ಯು" ಎಂದು ಸಂದೇಶ ಕಳುಹಿಸಿದ್ದಾನೆ. ಈ ಸಂದೇಶದಿಂದ ಆಘಾತಕ್ಕೊಳಗಾದ ಅವರು, ಮತ್ತೆ ತನ್ನನ್ನು ಸಂಪರ್ಕಿಸದಂತೆ ಎಚ್ಚರಿಸಿದ್ದು ಮೆಸೇಜ್ ಕಳುಹಿಸಿದರೆ ಪೊಲೀಸರನ್ನು ಸಂಪರ್ಕಿಸುವುದಾಗಿ ಹೇಳಿದ್ದರು.
ರೀಲ್ಸ್‌ಗಾಗಿ ಸ್ಕೂಟರ್‌ನಲ್ಲಿ ಐವರ ಅಪಾಯಕಾರಿ ಪ್ರಯಾಣ
ಆದರೆ, ಇದಕ್ಕೆ ಭಯಪಡದ ಆ ಡೆಲಿವರಿ ಬಾಯ್, "ಹೋಗಿ ದೂರು ನೀಡಿ. ರ‍್ಯಾಪಿಡೋಗೆ ಬೇಕಿದ್ದರೂ ದೂರು ಕೊಡಬಹುದು'' ಎಂದು ಸವಾಲು ಹಾಕಿದ್ದಾನೆ. ಈ ಪೋಸ್ಟ್ ಶೇರ್ ಮಾಡಿದ ಮಹಿಳೆ ಅಪ್ಲಿಕೇಶನ್ ಆಧಾರಿತ ಸೇವೆಗಳನ್ನು ಬಳಸುವ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ''ಮಹಿಳೆಯರು ಬದುಕುವುದು ನಿಜಕ್ಕೂ ಕಷ್ಟ. ಸಣ್ಣ ಪಾರ್ಸೆಲ್ ಕಳುಹಿಸಲು ರ‍್ಯಾಪಿಡೋ ಬಳಸಿದರೂ ಲೈಂಗಿಕ ಕಿರುಕುಳ ಎದುರಿಸಬೇಕಾಗಿದೆ. ಆನ್‌ಲೈನ್ ಕಂಪನಿಗಳು ಎಂತಹವರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿವೆ?ʼʼ ಎಂದು ಪ್ರಶ್ನಿಸಿದ್ದಾರೆ.
ಅವರ ಪೋಸ್ಟ್ ಶೀಘ್ರದಲ್ಲೇ ರ‍್ಯಾಪಿಡೋ ಗಮನ ಸೆಳೆಯಿತು. ಈ ಅಹಿತಕರ ಅನುಭವಕ್ಕಾಗಿ ಕ್ಷಮೆಯಾಚಿಸಿದ್ದು, ಗ್ರಾಹಕರ ಸುರಕ್ಷತೆ, ಗೌರವ ತಮಗೆ ಅತ್ಯಂತ ಮುಖ್ಯ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ನೆಟ್ಟಿಗರು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.