ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮದುವೆ ವೇಳೆ ಅಷ್ಟ ವಚನ ನೀಡಿ ವಧುವನ್ನೇ ಶಾಕ್‌ಗೊಳಿಸಿದ ವರ: ವಿಡಿಯೊ ವೈರಲ್

ವರನೊಬ್ಬ ತನ್ನ ಮದುವೆ ಸಂದರ್ಭದಲ್ಲಿ ಅಷ್ಟ ವಚನಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದಾನೆ. ತನ್ನ ವಿವಾಹ ಸಮಾರಂಭದಲ್ಲಿ ಎಂಟು ವಚನಗಳನ್ನು ಹೇಳುವ ಮೂಲಕ ಅತಿಥಿಗಳನ್ನು ಅಚ್ಚರಿಗೊಳಿಸಿದ ಘಟನೆ ದೆಹಲಿಯಲ್ಲಿ ನಡೆದಿದ್ದು, ಸದ್ಯ ಈ ಕುರಿತಾದ ವಿಡಿಯೊ ವೈರಲ್ ಆಗಿದೆ.

ಅಷ್ಟ ವಚನ ನೀಡಿದ ವರ; ಅಚ್ಚರಿಗೊಳಗಾದ ವಧು: ವಿಡಿಯೊ ವೈರಲ್

ಅಷ್ಟ ವಚನ ನೀಡಿದ ವರ -

Profile
Pushpa Kumari Dec 7, 2025 5:50 PM

ನವದೆಹಲಿ, ಡಿ. 7: ಭಾರತೀಯ ಹಿಂದೂ ಪರಂಪರೆಯಲ್ಲಿ ವಿವಾಹ ಸಂಪ್ರದಾಯಗಳಿಗೆ ವಿಶೇಷ ಮಹತ್ವವಿದೆ. ವಿವಾಹ ಸಂದರ್ಭದಲ್ಲಿ ಪಾಲಿಸಿಕೊಂಡು ಬರುವ ಪ್ರತಿ ಆಚರಣೆಗೂ ಅದರದ್ದೇ ಆದ ಅರ್ಥವಿದೆ. ಅಂತಹವುಗಳಲ್ಲಿ ಸಪ್ತಪದಿ ಸಂಪ್ರದಾಯ ಕೂಡ ಒಂದು. ವಧು-ವರರು ಅಗ್ನಿಯ ಸುತ್ತ ಏಳು ಹೆಜ್ಜೆಗಳನ್ನು ಹಾಕುತ್ತಾ ಏಳು ಪ್ರತಿಜ್ಞೆಗಳನ್ನು ಕೈಗೊಳ್ಳುವ ಈ ಒಂದು ಸಂಪ್ರದಾಯವು ವೈವಾಹಿಕ ಜೀವನದಲ್ಲಿ ಬೆಂಬಲ, ಗೌರವ, ಸಮೃದ್ಧಿಗಾಗಿ ಪರಸ್ಪರ ವಾಗ್ದಾನ ನೀಡುವುದಾಗಿದೆ. ಈ ಏಳು ಹೆಜ್ಜೆಗಳು ಆಹಾರ, ಬಲ, ಸಂಪತ್ತು, ಸಂತೋಷ, ಮಕ್ಕಳ ಪಾಲನೆ ಹೀಗೆ ವಿವಿಧ ಅಂಶಗಳನ್ನು ಒಳಗೊಂಡಿದೆ. ಇದೀಗ ವರನೊಬ್ಬ ತನ್ನ ಮದುವೆ ಸಂದರ್ಭದಲ್ಲಿ ಅಷ್ಟ ವಚನಗಳನ್ನು ಹೇಳುವ ಮೂಲಕ ಖ್ಯಾತಿ ಪಡೆದಿದ್ದಾನೆ. ತನ್ನ ವಿವಾಹ ಸಮಾರಂಭದಲ್ಲಿ ಎಂಟು ವಚನಗಳನ್ನು ಹೇಳುವ ಮೂಲಕ ಅತಿಥಿಗಳನ್ನು ಅಚ್ಚರಿಗೊಳಿಸಿದ ಈ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

ವೈರಲ್ ಆದ ವಿಡಿಯೊದಲ್ಲಿ ವಿವಾಹ ಸಮಾರಂಭದಲ್ಲಿ ವರನು ಸಪ್ತಪದಿಯ ಏಳು ವಚನದ ಜತೆಗೆ ಎಂಟನೆಯದನ್ನೂ ಸೇರಿಸಿದ್ದಾನೆ. ನವದಂಪತಿ ತಮ್ಮ ಆಪ್ತರ ಸಮ್ಮುಖದಲ್ಲಿ ವೇದಿಕೆ ಮೇಲೆ ಕುಳಿತಿದ್ದರು. ವರನು ಇದ್ದಕ್ಕಿದ್ದಂತೆ ಮೈಕ್ರೊಫೋನ್ ತೆಗೆದುಕೊಂಡು ತನ್ನ ಪತ್ನಿಗೆ ಎಂಟನೆಯ ವಚನ ನೀಡಿದ್ದಾನೆ. ಇದನ್ನು ಕೇಳಿ ಅಲ್ಲಿದ್ದ ಕುಟುಂಬದವರು, ಸ್ನೇಹಿತರು ತಮಾಷೆಯಾಗಿ ನಗುತ್ತಿರುವ ದೃಶ್ಯ ವೈರಲ್ ವಿಡಿಯೊದಲ್ಲಿ ಕಾಣಬಹುದು.

ವಿಡಿಯೊ ನೋಡಿ:

ಮೊದಲಿಗೆ ಆತನು ಸಪ್ತಪದಿಯ ಎಲ್ಲ ಸಂಪ್ರದಾಯ ಪಾಲಿಸಿದ್ದಾನೆ. ಬಳಿಕ ತನ್ನ ವಿವಾಹ ವಿಧಿವಿಧಾನಗಳಿಗೆ ಹೆಚ್ಚುವರಿಯಾಗಿ ಒಂದು ಪ್ರತಿಜ್ಞೆಯನ್ನು ಕೈಗೊಳ್ಳುದಾಗಿ ತಿಳಿಸಿದ್ದಾನೆ. ಆಗ ಅಲ್ಲಿದ್ದವರೆಲ್ಲ ಆ ವರ ಏನು ಹೇಳಬಹುದು ಎಂದು ಕುತೂಹಲದಿಂದ ನೋಡುತ್ತಿದ್ದರು. ಬಳಿಕ ಆತನು ಇಂದಿನಿಂದ ನನ್ನ ರೂಮಿನ ಎಸಿ ಟೆಂಪರೇಚರ್ ಅನ್ನು ನಾನೆ ಸೆಟ್ ಮಾಡುವೆ ಎಂದು ತಮಾಷೆಯಾಗಿ ಹೇಳಿದ್ದಾನೆ. ಅದನ್ನು ಕೇಳಿ ವಧು ನಾಚಿಕೆಯಿಂದ ಆತನ ಕಡೆಗೆ ನೋಡುತ್ತಿದ್ದರೆ ಉಳಿದವರು ತಮಾಷೆ ಮಾಡಿ ನಗುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು.

ಇಂಡಿಗೋ ವಿಮಾನ ಎಡವಟ್ಟು: ಕೈಯಲ್ಲಿ ಅಸ್ಥಿ ಹಿಡಿದು ಏರ್‌ಪೋರ್ಟ್‌ನಲ್ಲೇ ಕುಳಿತ ಯುವತಿ!

ವಿಡಿಯೊ ನೋಡಿದ ಸೋಶಿಯಲ್‌ ಮೀಡಿಯಾ ಬಳಕೆದಾರರು ಈ ಬಗ್ಗೆ ನಾನಾ ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆಯು ಹೆಚ್ಚು ಸ್ಮರಣೀಯವಾಗಿ ಉಳಿಯಲು ಇಂತಹ ಸಂಗತಿಗಳು ಪ್ರಧಾನ ಪಾತ್ರ ವಹಿಸುತ್ತದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಈ ದಂಪತಿ ನಡುವೆ ಮದುವೆಗೂ ಮುನ್ನವೇ ಎಸಿ ಸೆಟ್ಟಿಂಗ್‌ ವಿಚಾರದ ಬಗ್ಗೆ ಜಗಳವಾಗಿರಬಹುದು. ಅದಕ್ಕೆ ವರ ಈ ಎಂಟನೇ ವಚನ ನೀಡಿರಬಹುದು ಎಂದು ಬಳಕೆದಾರರೊಬ್ಬರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ‌.

ಮದುವೆ ಎಂದರೆ ಹೀಗೆ ಇರಬೇಕು. ಸಂಪ್ರದಾಯವನ್ನು ಅರ್ಥೈಸಿಕೊಳ್ಳದೆ ಕಾಟಾಚಾರಕ್ಕೆ ವಾಗ್ದಾನ ನೀಡುವ ಬದಲು ಅದನ್ನು ಮನಪೂರ್ವಕವಾಗಿ ನಂಬಿ ವಚನ ನೀಡಬೇಕು. ಈ ಹಿನ್ನೆಲೆಯಲ್ಲಿ, ವರನ ಬುದ್ಧಿವಂತಿಕೆಯು ನಿಜಕ್ಕೂ ಖುಷಿ ತರಿಸುವಂತಿದೆ‌. ಪುರಾತನ ಆಚರಣೆಗೆ ಆಧುನಿಕ ಸ್ಪರ್ಶ ನೀಡಿದಂತಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.