ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Narayan Yaji Column: ಮಕ್ಕಳ ಲೇಖನಿಯಲ್ಲಿ ಅರಳಿದ ಮಹಾನ್ ಸಾಹಿತಿ!

ಜಾಗತಿಕ ಸಾಂಸ್ಕೃತಿಕ ರಂಗದಲ್ಲಿ ಲಿಯೋನಾರ್ಡ್ ಡ ವಿನ್ಸಿ ಅಥವಾ ರವೀಂದ್ರನಾಥ ಟ್ಯಾಗೋ ರರಂತವರ ಜೊತೆ ಹೋಲಿಸಬಹುದಾದ ಮಹಾನ್ ವ್ಯಕ್ತಿತ್ವ ಕಾರಂತರದ್ದು. ಮೂಲ ಇಂಗ್ಲಿಷ್ ಕೃತಿಯ ಕುರಿತು ಡಿಸೆಂಬರ್ ತಿಂಗಳಲ್ಲಿ ನಡೆದ ಬೆಂಗಳೂರು ಲಿಟ್-ಫೆಸ್ಟಿನಲ್ಲಿ ಕಾರಂತ ಮೂವ ರೂ ಮಕ್ಕಳ ಜೊತೆ ವಿಮರ್ಶಕ ಎಸ್.ಆರ್.ವಿಜಯಶಂಕರ ಅವರು ಸಂವಾದ ನಡೆಸಿದ್ದರು

Narayan Yaji Column: ಮಕ್ಕಳ ಲೇಖನಿಯಲ್ಲಿ ಅರಳಿದ ಮಹಾನ್ ಸಾಹಿತಿ!

-

Profile
Ashok Nayak Apr 5, 2026 5:20 PM

ನಾರಾಯಣ ಯಾಜಿ

ಕನ್ನಡದ ಪ್ರಮುಖ ಕಾದಂಬರಿಕಾರ, ಪ್ರಯೋಗಶೀಲ ಕಲಾವಿದ, ಜ್ಞಾನಪೀಠ ವಿಜೇತ ಸಾಹಿತಿ ಶಿವರಾಮ ಕಾರಂತರ ಮೂವರು ಮಕ್ಕಳು, ತಮ್ಮ ತಂದೆಯನ್ನು ನೆನಪಿಸಿಕೊಂಡು ಬರೆದ ಕೃತಿಯು ಈಗ ಕನ್ನಡಕ್ಕೆ ಅನುವಾದಗೊಂಡಿದೆ. ಕಾರಂತರ ಬದುಕಿನ ಅಪೂರ್ವ ಒಳನೋಟಗಳನ್ನು ಅವರು ಮಕ್ಕಳು ಕಟ್ಟಿಕೊಟ್ಟಿರುವ ಪರಿಯೇ ಅನನ್ಯ, ವಿಶಿಷ್ಟ.

ವಿಶ್ವೇಶ್ವರ ಭಟ್ಟರು ಯುಗಾದಿಯ ಹೊಸ ವರ್ಷದ ಕೊಡುಗೆಯಾಗಿ ಕೋಟ ಶಿವರಾಮ ಕಾರಂತರ ಮಕ್ಕಳಾದ ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಅವರು ಜತೆಯಾಗಿ ರಚಿಸಿದ “ಗ್ರೋಯಿಂಗ್ ಅಪ್ ಕಾರಂತ್" ಕೃತಿಯನ್ನು ಕನ್ನಡಕ್ಕೆ “ಕಾರಂತರ ಸುಳಿಯಲ್ಲಿ" ಎನ್ನುವ ಹೆಸರಲ್ಲಿ ಅನುವಾದಿಸಿದ್ದಾರೆ.

ಜಾಗತಿಕ ಸಾಂಸ್ಕೃತಿಕರಂಗದಲ್ಲಿ ಲಿಯೋನಾರ್ಡ್ ಡ ವಿನ್ಸಿ ಅಥವಾ ರವೀಂದ್ರನಾಥ ಟ್ಯಾಗೋರರಂತವರ ಜೊತೆ ಹೋಲಿಸಬಹುದಾದ ಮಹಾನ್ ವ್ಯಕ್ತಿತ್ವ ಕಾರಂತರದ್ದು. ಮೂಲ ಇಂಗ್ಲಿಷ್ ಕೃತಿಯ ಕುರಿತು ಡಿಸೆಂಬರ್ ತಿಂಗಳಲ್ಲಿ ನಡೆದ ಬೆಂಗಳೂರು ಲಿಟ್-ಫೆಸ್ಟಿನಲ್ಲಿ ಕಾರಂತ ಮೂವರೂ ಮಕ್ಕಳ ಜೊತೆ ವಿಮರ್ಶಕ ಎಸ್.ಆರ್.ವಿಜಯಶಂಕರ ಅವರು ಸಂವಾದ ನಡೆಸಿದ್ದರು.

ಅದೇ ವೇದಿಕೆಯಲ್ಲಿ ವಿಶ್ವೇಶ್ವರ ಭಟ್ಟರೂ ಇದ್ದರು. ಉಲ್ಲಾಸ, ಮಾಲವಿಕಾ. ಕ್ಷಮಾರಾವ್ ಅವರು ಕಾರಂತರ ಟವರಿಂಗ್ ಪರ್ಸನಾಲಿಟಿ ಜೊತೆಗೆ ತಾವು ಅದರಿಂದ ಹೇಗೆ ಪ್ರಭಾವಿತ ರಾಗಿದ್ದೇವೆ ಎಂದು ವಿವರಿಸುವ ಅನೇಕ ಸಂಧರ್ಭಗಳನ್ನು ವಿವರಿಸುವಾಗ ರೋಮಾಂಚಿತ ನಾಗಿದ್ದೆ.

ಕೊನೆಯಲ್ಲಿ ಭಟ್ಟರು ಸಂವಾದದಲ್ಲಿ ಭಾಗವಹಿಸುತ್ತಾ, ಆ ಕೃತಿ ತನ್ನನ್ನು ಹೇಗೆ ಸೆಳೆಯಿತು ಎನ್ನುವುದನ್ನು ವಿವರವಾಗಿ ಹೇಳಿದ್ದರು. ಭಟ್ಟರ ಲೇಖನ ಮತ್ತು ಮಾತಿನಲ್ಲಿ ಸಾಹಿತ್ಯದ ಬನಿ ಮತ್ತು ಎದುಗಿದ್ದವರನ್ನು ಸೆಳೆಯುವ ಮಾಂತ್ರಿಕತೆ ಎರಡೂ ಇದೆ.

“ಗ್ರೋವಿಂಗ್ ಅಪ್ ಕಾರಂತ" ಅವರನ್ನು ಆವರಿಸಿಕೊಂಡ ಬಗೆಯನ್ನು ವಿವರಿಸುತ್ತಾ ಸಭೆಯ ಗಮನವನ್ನು ಈ ಕೃತಿಯತ್ತ ಸೆಳೆದಿದ್ದರು. ಜೊತೆಗೆ ಈ ಕೃತಿಯನ್ನು ತಾನು ಕನ್ನಡ ದಲ್ಲಿ ಅನುವಾದಿಸುತ್ತಿದ್ದೇನೆ, ಸಧ್ಯದಲ್ಲಿಯೇ “ಕಾರಂತರ ಸುಳಿಯಲ್ಲಿ" ಎನ್ನುವ ತಲೆಬರಹ ದೊಂದಿಗೆ ಪ್ರಕಟವಾಗುವುದಾಗಿ ತಿಳಿಸಿದ್ದರು.

ಇದನ್ನೂ ಓದಿ: Narayana Yaji Column: ನಗುವಿನೊಳಗಿನ ಬದುಕು

ಲಿಟ್-ಫೆಸ್ಟ್‌ನ ಸಂವಾದದ ಹೆಸರೂ ಸಹ “ಕಾರಂತರ ಸುಳಿಯಲ್ಲಿ" ಎಂದಿತ್ತು. ಆ ದಿನದ ಸಂವಾದದ ಸುಳಿಯಲ್ಲಿ ಸಿಕ್ಕ ನಾನು ಅಂದೇ ಈ ಕೃತಿಯನ್ನು ಓದಬೇಕೆಂದುಕೊಂಡಿದ್ದೆ. ಮೂರು ಮಕ್ಕಳು ಸೇರಿ ಬರೆದ ಕೃತಿಯಾವ ಮಕ್ಕಳಿಗಾದರೂ ತಮ್ಮ ತಂದೆ ತಾಯಿ ಎಂದರೆ ಹೆಮ್ಮೆಯೇ. ಅದರಲ್ಲಿಯೂ ಕಾರಂತರಂತಹ ದೊಡ್ಡ ವ್ಯಕ್ತಿತ್ವದವರ ಮಕ್ಕಳಿಗೂ ಅವರ ತಂದೆ ತಾಯಿಯರಿಗೂ ಆಂತರಿಕವಾದ ಸಂಬಂಧ ಹೇಗಿರಬಹುದು ಎನ್ನುವ ಕುತೂಹಲ ಇರುವುದು ಸಹಜ.

ಅದರಲ್ಲಿಯೂ ಡಾ.ಕೆ.ಶಿವರಾಮ ಕಾರಂತರೆಂದರೆ ಕನ್ನಡಿಗರಿಗೆ ಕೇವಲ ಒಬ್ಬ ಸಾಹಿತಿ ಯಲ್ಲ; ಅವರೊಬ್ಬ ಸಾಂಸ್ಕೃತಿಕ ಮೇರು ಪರ್ವತ. ಅವರೇ ತನ್ನ ಕುರಿತು ಬರೆದ ಆತ್ಮಕತೆ ಗಳು “ಹುಚ್ಚುಮನಸ್ಸಿನ ಹತ್ತು ಮುಖಗಳು" (1948) ಸ್ಕೃತಿ ಪಟಲದಿಂದ (1977-79) ಈಗಾ ಗಲೇ ಸಾರಸ್ವತಲೋಕಕ್ಕೆ ಪರಿಚಿತ. ಆದರೆ ಈ ಕಲ್ಪವೃಕ್ಷದ ಅಡಿಯಲ್ಲಿದ್ದ ಕುಟುಂಬ ದವರ ದೃಷ್ಟಿಕೋನ ಹೇಗಿತ್ತು ಎನ್ನುವ ಕುತೂಹಲಕ್ಕೆ ಉತ್ತರವೇ ‘ಕಾರಂತರ ಸುಳಿಯಲ್ಲಿ’. ಕಾರಂತರ ಮೂವರು ಮಕ್ಕಳು ತಮ್ಮ ತಂದೆಯೊಂದಿಗಿನ ಒಡನಾಟವನ್ನು ಅತ್ಯಂತ ಪ್ರಾಮಾಣಿಕವಾಗಿ ಇಲ್ಲಿ ದಾಖಲಿಸಿದ್ದಾರೆ.

ಒಟ್ಟೂ ಹತ್ತು ಅಧ್ಯಾಯದಲ್ಲಿ ಹರಡಿಕೊಂಡಿರುವರ ಕಾರಂತರ ಸುಳಿಯಲ್ಲಿ ಮೊದಲ ಎರಡು ಮತ್ತು ಕೊನೆಯ ಅಧ್ಯಾಯವನ್ನು ಮೂವರೂ ಮಕ್ಕಳು ಒಟ್ಟಾಗಿಯೇ ಬರೆದಿ ದ್ದಾರೆ. ಮೂರು ಮತ್ತು ನಾಲ್ಕು ಕಾರಂತರ ಹಿರಿಯ ಮಗಳು ಮಾಲವಿಕಾ ಕಪೂರ, ಐದು, ಆರು, ಏಳನೇ ಅಧ್ಯಾಯವನ್ನು ಉಲ್ಲಾಸ ಕಾರಂತ ಮತ್ತು ಎಂಟು ಒಂಭತ್ತನೆಯ ಅಧ್ಯಾಯಗಳಲ್ಲಿ ಕ್ಷಮಾ ರಾವ್ ಕಾರಂತರ ಒಳ ವ್ಯಕ್ತಿತ್ವವನ್ನು ಕಾವ್ಯಾತ್ಮಕವಾಗಿ ತೆರೆದಿರಿಸಿ ದ್ದಾರೆ.

ಮೂವರು ಮಕ್ಕಳು ಕಾರಂತರ ಕುರಿತು ಕೊಡುವ ಅಭಿಪ್ರಾಯ “ತಾತ ಅದೃಷ್ಟವಂತ" ಎನ್ನುವುದನ್ನು. ಮಕ್ಕಳೆಲ್ಲ ತಮ್ಮ ಬಾಲ್ಯವನ್ನು ಕಳೆದಿದ್ದು ಪುತ್ತೂರಿನ ಬಾಲವನದಲ್ಲಿ. ಕಾರಂತರ ಅಸಾಂಪ್ರದಾಯಿಕ ವಿದ್ಯಾಭ್ಯಾಸ ಯೋಜನೆಯ ಪ್ರಯೋಗದ ಫಲಾನುಭವಿಗಳು ಅವರ ಮಕ್ಕಳು.

ಹತ್ತು ವರ್ಷದ ತನಕ ಅವರ ಯಾವ ಮಕ್ಕಳೂ ಶಾಲೆಗೆ ಹೋಗಿ ಕಲಿಯಲಿಲ್ಲ. ಕಾರಂತರ ಬೆಳವಣಿಗೆಯಲ್ಲಿ ಅವರಿಗಿಂತ ಹಿರಿಯರ ಮಾರ್ಗದರ್ಶನ, ನಂತರ ಸಮಾಜದ ಉನ್ನತ ವ್ಯಕ್ತಿಗಳ, ಸಮಕಾಲೀನರ ನಿರಪೇಕ್ಷ, ನಿಸ್ವಾರ್ಥ ಬೆಂಬಲ ತಾತನಿಗಿದ್ದಿದ್ದನ್ನು ಸ್ಪಷ್ಟವಾಗಿ ಹೇಳುತ್ತಾರೆ.

ಮಾನವಜನ್ಮದ ಯಾರನ್ನೂ ಗುರುಗಳೆಂದು ಒಪ್ಪದ, ನರಸಿಂಹನನ್ನೇ ಗುರುವೆಂದು ಆರಾಧಿಸುವ ಅಪ್ಪಟ ಸಂಪ್ರದಾಯದ ಕೋಟ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಕಾರಂತರ ಏಳು ಸಹೋದರು ಇಬ್ಬರು ಸಹೋದರಿಯರನ್ನೂ ಸೇರಿಸಿ ಒಂಭತ್ತು ಮಕ್ಕಳಲ್ಲಿ ಆಸ್ತಿಕ, ವಾಸ್ತವಿಕ, ನಾಸ್ತಿಕ ಎಲ್ಲಾ ಬಗೆಯ ಪ್ರತಿಭಾವಂತರು ಇದ್ದಾರೆ.

ಎಲ್ಲರಲ್ಲಿಯೂ ಇರುವ ಸಾಮಾನ್ಯ ಗುಣವೆಂದರೆ ಶಿಸ್ತು ಮತ್ತು ನೇರ ನುಡಿ. ಇವರ ಅಪ್ಪ ಅಮ್ಮ ಶೇಷ ಕಾರಂತ ಮತ್ತು ಮಹಾಲಕ್ಷ್ಮಿ ತಮ್ಮ ಮಕ್ಕಳಂತೆ ಬೆಳೆಸಿದ ಹೊಳ್ಳ ದಂಪತಿಯ ಮಗನಾದ ಡಾ.ಎಚ್.ವಿ.ಹಂದೆ ರಾಜಗೋಪಾಲಾಚಾರಿಯವರಿಗೆ ಅತ್ಯಂತ ಆತ್ಮೀಯನಾಗಿ ಮದ್ರಾಸಿನಲ್ಲಿ ಪ್ರಸಿದ್ಧ ವೈದ್ಯರಾಗಿ ಮಂತ್ರಿಯಾಗಿ ಪ್ರಸಿದ್ಧರಾದವರು.

2026ರಲ್ಲಿ ಕೇಂದ್ರ ಸರಕಾರ ಅವರನ್ನು ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಾರಂತರ ಕುಟುಂಬದ ನೆರಳು ತಾಗಿದರೂ ಅದೇ ಗುಣ ಅವರಲ್ಲಿ ಬರುತ್ತದೆ ಎಂದು ತೋರು ತ್ತದೆ. ಮೊದಲ ಅಧ್ಯಾಯದಲ್ಲಿ ಕಾರಂತರನ್ನು ಮೂವರೂ ಮಕ್ಕಳು ನೋಡುವ ರೀತಿಗೂ ಅವರವರ ಅಧ್ಯಾಯದಲ್ಲಿ ಅವರು ನೋಡುವ ವಿಧಾನಕ್ಕೂ ವಿಭಿನ್ನತೆಯಿದೆ. ಮಾಲವಿಕಾ ಕಪೂರ ಅವರು ಹಿರಿಯ ಮಗಳಾಗಿ ತಂದೆಯೊಡನೆ ಇಟ್ಟುಕೊಂಡಷ್ಟು ನವಿರತೆಯ ಭಾವನೆ ಇನ್ನಿಬ್ಬರಲ್ಲಿ ಕಂಡುಬರುವುದಿಲ್ಲ.

ಅವರಿಗೆ ಎಂಟು ವರ್ಷಗಳ ನಂತರ ಉಲ್ಲಾಸ ಜನಿಸಿರುವುದರಿಂದ ಅಲ್ಲಿಯ ತನಕ ಒಬ್ಬಳೇ ಮಗಳು ಎನ್ನುವ ಭಾವನೆ ಕಾರಂತರಲ್ಲಿ ಇತ್ತು. ಮುಕ್ತವಾಗಿ ಕಾರಂತರೊಡನೆ ಅವರು ಬೆರೆಯುತ್ತಿದ್ದರು. ಕಾರಂತರು ಇವರ ಲೋಕದಲ್ಲಿ ಓದುಗರಿಗೆ ಹತ್ತಿರದಲ್ಲೇ ಎಟಕುತ್ತಾರೆ.

ಮಗಳ ಮೇಲೆ ನಂಬಿಕೆ ಆದರೆ ಆಕೆ ಹೆಣ್ಣಾದುದರಿಂದ ತೊಂದರೆಯಾಗಬಾರದು ಎನ್ನುವ ಕಳಕಳಿ ಕಾರಂತರಲ್ಲಿತ್ತು. ಅವರು ಕಾಲೇಜಿನಲ್ಲಿ ಅಗತ್ಯಕ್ಕನುಗುಣವಾಗಿ ಪ್ಯಾಂಟ್ ಹಾಕಿ ಕೊಳ್ಳುವುದಕ್ಕೆ ಕಾರಂತರಿಗೆ ಇಷ್ಟವಿರಲಿಲ್ಲ ಎನ್ನುವಲ್ಲಿ ಇದು ಗೋಚರವಾಗುತ್ತದೆ.

ಮದುವೆಯ ವಿಷಯದಲ್ಲಿ ಅವರು ಡಾ.ರವಿ ಕಪೂರರನ್ನು ಪ್ರೀತಿಸಿದಾಗ ಮಗಳು ಯಾರನ್ನೂ ಬೇಕಾದರೂ ಪ್ರೀತಿಸಲಿ ಎನ್ನುವ ತಾಯಿಯ ಮನಸ್ಥಿತಿ ಮತ್ತು “ನಿನಗೆ ಕರೆದು ಕೊಂಡು ಬರಬೇಕೆನಿಸಿದರೆ ಕರೆದುಕೊಂಡು ಬಾ" ಎನ್ನುವ ಕಾರಂತರ ಟೆಲಿಗ್ರಾಮ್ ಸಂದೇಶಕ್ಕೂ ಅಂತರವಿದೆ.

ವರನ ಕಡೆಯವರು ಐದು ಬಾದಾಮಿ ಸಾಕು ಎಂದುದಕ್ಕೆ (ಅದರರ್ಥ ಐದು ಬಾಸ್ಕೆಟ್) ಕೇವಲ ಐದು ಬಾದಾಮಿಯನ್ನು ಪಂಜಾಬಿಗೆ ರಜಿಸ್ಟರ್ಡ್ ಅಂಚೆಯಲ್ಲಿ ಕಳುಹಿಸಿದ, ಉಲ್ಲಾಸ ಕಾರಂತರ ಲಗ್ನದ ಆಮಂತ್ರಣವನ್ನು ಕೊಟ್ಟು ಮದುವೆಗೆ ಬರಬೇಡಿ ಎನ್ನುವ (ಇದಕ್ಕೆ ಕಾರಣ ಅವರಿಗೆಲ್ಲಾ ಕೋಟದಲ್ಲಿ ಪ್ರತ್ಯೇಕ ಔತಣದ ವ್ಯವಸ್ಥೆ ಮಾಡಿದ್ದರು) ಕಾರಂತರ ಮುಗ್ಧತೆಯ ಮುಖವೂ ಇಲ್ಲಿದೆ.

ಉಲ್ಲಾಸ ಕಾರಂತರ ವಿಷಯದಲ್ಲಿ ಹೀಗಲ್ಲ. ಅವರಿಗೆ ತಂದೆಯಲ್ಲಿ ಸಲಿಗೆ ಇರಲಿಲ್ಲ. ಎಲ್ಲಾ ಅಪ್ಪಂದಿರಂತೆ ಗಂಡು ಮಕ್ಕಳಿಗೆ ಅಪ್ಪನಲ್ಲಿ ಹೆಣ್ಣುಮಕ್ಕಳಷ್ಟು ಸಲುಗೆ ಇರುವುದಿಲ್ಲ ಎನ್ನುವ ಸಾಮಾನ್ಯ ನಿಯಮ ಲಾಗೂ ಆಗಿದೆ ಅನಿಸುತ್ತದೆ. ಬಹುಶಃ ಹಿರಿಯ ಮಗ ಹರ್ಷನ ಕೆಲವೊಂದಿಷ್ಟು ಹದ ತಪ್ಪಿದ ನಡತೆಯಿಂದಾಗಿ ಉಲ್ಲಾಸ ಕಾರಂತರನ್ನು ಹದ್ದುಬಸ್ತಿ ನಲ್ಲಿಡಬೇಕೆಂದು ಬಯಸಿತ್ತಿದ್ದರೋ ಏನೋ, ಆದರೆ ಅವರ ಸಿದ್ಧಾಂತ ಅಡ್ಡಬಂದಿರ ಬಹುದೆನ್ನುವ ತಾಕಲಾಟ ಉಲ್ಲಾಸ ಕಾರಂತರ ಬರಹದಲ್ಲಿ ವ್ಯಕ್ತವಾಗಿವೆ. ಆದರೂ ಉಲ್ಲಾಸ ಕಾರಂತರಿಗೆ ಹುಲಿಯ ಅಧ್ಯಯನಕ್ಕೆ ಪ್ರೇರಣೆಯೇ ಬಾಲ್ಯದಲ್ಲಿ ಕಾರಂತರು ರಚಿಸಿಕೊಟ್ಟ ಚಿತ್ರ ಎಂದು ಅನಿಸುತ್ತದೆ.

ಪ್ರೀತಿಯ ಕಿರಿಯ ಮಗಳು

ಕ್ಷಮಾ ಕಿರಿಯವಳಾದ ಕಾರಣ ಆಕೆಯಲ್ಲಿ ತುಸು ಹೆಚ್ಚೇ ಪ್ರೀತಿ. ಅವರು ಮತ್ತು ಉಲ್ಲಾಸ ಸೇರಿ ಕಾರಂತರು ಚಿತ್ರೀಕರಣ ಮಾಡಿದ ನೆಗೆಟಿವ್ ರೋಲನ್ನು ಇವರಿಬ್ಬರು ಹುಡುಗಾಟ ದಲ್ಲಿ ಕಾರಂತರ ಟೇಬಲ್ಲಿಗೆ ಸುತ್ತಿಟ್ಟಿದ್ದರಂತೆ. ಕೇಂಡಾಮಂಡಲರಾದ ಕಾರಂತರು ಹೊಡೆಯಲು ನೋಡಿದಾಗ ಲೀಲಾ ಕಾರಂತರು ಊಟಕ್ಕೆ ಕರೆದರು. ಸರಿ ಊಟ ಮಾಡಿ ಬನ್ನಿ ಎಂದು ಕಳಿಸಿದರು. ಕಾರಂತರು ಹೇಳಿದರೆಂದರೆ ಮುಗಿಯಿತು ಊಟಮಾಡಿದ ಮೇಲೆ ಹೊಡೆತ ತಿನ್ನಲು ಸಿದ್ಧರಾಗಿ ಮೇಲೆ ಬಂದರು. ಆಗ ಅವರು ಕಾರಂತರೇ ಕೊಡಿಸಿದ ಬೆಂಡೋಲೆಯೊಂದನ್ನು ಧರಿಸಿದ್ದರು. ಅದನ್ನು ನೋಡಿ ಬೇಡ ಬೇಡ ಹೊಸ ಬೇಂಡೋಲೆ ಹಾಕ್ಕೊಂಡು ಅತ್ತರೆ ಚಂದಕಾಣೋಲ್ಲ, ಹೋಗು ಎಂದು ಕಳಿಸಿದ ಸಂಗತಿ ಕ್ಷಮಾ ಮತ್ತು ಅವರ ತಾತನ ಸಂಬಂಧದ ಕುರಿತು ವಿವರಿಸುತ್ತದೆ.

ಕಾರಂತ ದಂಪತಿಗಳು ತಮ್ಮ ಮಕ್ಕಳನ್ನು ಹೇಗೆ ಬೆಳೆಸಿದರು ಎನ್ನುವುದಕ್ಕೆ “ನಿಮ್ಮ ನಿಮ್ಮ ಕನಸುಗಳನ್ನು ಪ್ರಾಮಾಣಿಕವಾಗಿ ಬೆನ್ನೆತ್ತಿ ಹೋಗಿ ಮಾಡಿ. ಫಲಿತಾಂಶ ಏನಾಗುತ್ತದೆ ಎನ್ನು ವುದಕ್ಕೆ ತಲೆಕೆಡಿಸಿ ಕೊಳ್ಳಬೇಡಿ" (ಪು.235) ಪ್ರೋತ್ಸಾಹದ ನುಡಿಗಳು ಸಾಕ್ಷಿ.

ಯಕ್ಷಗಾನಕ್ಕೂ ಕಾರಂತರಿಗೂ ಅವಿನಾಭಾವ ಸಂಬಂಧ. ಯಕ್ಷಗಾನದಲ್ಲಿನ ಅನೇಕ ಅಪಸವ್ಯಗಳನ್ನು ಮುಲಾಜಿಲ್ಲದೇ ಟೀಕಿಸಿ ಅದರ ಮೂಲ ನಿರ್ವಚನವನ್ನು ಪುನಃ ಸ್ಥಾಪಿಸಿದವರು ಕಾರಂತರು. ಅವರ “ಯಕ್ಷಗಾನ ಬಯಲಾಟ" ಇಂದಿಗೂ ಈ ಪ್ರದರ್ಶನ ಕಲೆಗೆ ಭಗವದ್ಗೀತೆ. ಯಕ್ಷಗಾನದಲ್ಲಿ ಮಾಡಿದ ಪ್ರಯೋಗ, ಮುಖ್ಯವಾಗಿ ಚಕ್ರವ್ಯೂಹದಲ್ಲಿ ಮರಣ ಹೊಂದಿದ ಬಾಲಕನನ್ನು ಅರೆ ತೆರೆದ ತೆರೆಯಲ್ಲಿ ನಾಚಿಕೊಂಡು ಕರೆದುಕೊಂಡು ಹೋಗುವ ಸೈನಿಕರ ಚಲನೆ ಖ್ಯಾತ ಒಡಿಸ್ಸಿ ನೃತ್ಯಗಾತಿಯಾದ ಕ್ಷಮಾರಾವ್ ಪರಿಣಾಮ ಕಾರಿಯಾಗಿ ವರ್ಣಿಸಿದ್ದಾರೆ.

ಇಂದು ಬಡಗುತಿಟ್ಟನ ಸ್ತ್ರೀ ವೇಷದ ಶಿರೋ ಭೂಷಣ ಕಾರಂತರ ಸೃಷ್ಟಿ, ಕಲಾವಿದ ಕಾರಂತರು ಕ್ಷಮಾರಾವ್ ಅವರ ಲೇಖನಿಯಲ್ಲಿ ಮನಮುಟ್ಟುವಂತೆ ಮೂಡಿ ಬಂದಿದೆ. ಹಿರಿಯ ಮಗ ಹರ್ಷನ ಗುಣಸ್ವಭಾವ ಉಲ್ಲಾಸ ಕಾರಂತರ ಮೂಲಕ ಕಾಣಿಸಿದರೂ ಅಲ್ಲಿ ಅಣ್ಣನ ಮೇಲಿನ ಆಕ್ಷೇಪಣೆಯಿಲ್ಲ.

ಅಪ್ಪನಿಗೆ ಆಕಾಶ ಎನ್ನುತ್ತಾರೆ. ಎಷ್ಟು ದೂರಸಾಗಿದರೂ ಸಿಗುವುದಿಲ್ಲ; ಆದರೆ ಸದಾ ಜೊತೆ ಯಲ್ಲಿರುತ್ತಾನೆ. ಮಕ್ಕಳನ್ನು ಆಗಾಗ ಪ್ರವಸಕ್ಕೆ ಕರೆದೊಯ್ಯುವ, ಅವರಲ್ಲಿ ಸ್ವತಂತ್ರ ವ್ಯಕ್ತಿತ್ವ ವನ್ನು ರೂಪಿಸಿದ ಕಾರಂತರು ಮೂವರೂ ಮಕ್ಕಳಿಗೂ ಎಟುಕಿಯೂ ಎಟುಕ ದಂತಿದ್ದಾರೆ.

ಶಿವರಾಮ ಕಾರಂತರ ಕಾಳಜಿ, ಸ್ವಾತಂತ್ರ್ಯಪೂರ್ವದಲ್ಲೇ ಅವರು ಸಮಾಜದಲ್ಲಿ ಸ್ವತಃ ಆಚರಣೆಗೆ ಅಂದ ಸುಧಾರಣೆಗಳು, ಸುಮಾರು ನಲವತ್ತು ದಶಕಗಳ ನಂತರ ಹುಟ್ಟೂರಿಗೆ ಬಂದು ನೆಲಸಬೇಕು ಅಂದುಕೊಂಡಾಗ ಅವರ ಇರುವತನಕ ಅವರಿಗೆ ಘನತೆಯಿಂದ ಉಳಿಯಲು ಹೊಸ ಮನೆಯನ್ನೇ ಬಿಟ್ಟುಕೊಟ್ಟ ರಾಮಕೃಷ್ಣ ಐತಾಳರು ಎಲ್ಲಾ ಸಂಗತಿ ಇಲ್ಲಿ ಪ್ರಾಮುಖ್ಯ ಪಡೆಯುತ್ತದೆ.

ಅವರ ಮಕ್ಕಳಷ್ಟೇ ಅವರನ್ನು ಕಕ್ಕುಲತೆಯಿಂದ ನೋಡಿಕೊಂಡ ಅವರ ದಾಯಾದಿ ಸೂರ್ಯನಾರಾಯಣ ಕಾರಂತ ಅವರ ಅಕಾಲಿಕ ಸಾವು ಕಾರಂತರ ಬದುಕಿನಲ್ಲಿ ಆದ ಬಹುದೊಡ್ಡ ಆಘಾತವಾಗಿದೆ. ಅವರ ಹಿರಿಯ ಮಗ ಹರ್ಷ 1961ರಲ್ಲಿ ಕ್ಯಾನ್ಸರಿನಿಂದ ದೂರದ ಮುಂಬೈಯಲ್ಲಿ ತೀರಿಕೊಂಡಾಗ ಕಾರಂತರ ಹೃದಯ ಘಾಸಿಗೊಂಡಿತ್ತು.

ಕಾರಂತರಿಗೆ ತಾನೋರ್ವ ಸೆಲ್ಫ್-ಮೇಡ್ ಮನುಷ್ಯ ಎನ್ನುವ ಭ್ರಮೆಯನ್ನು ಕಳಚಿ ಹೋದ ಬಿಂದು ಹರ್ಷನ ಸಾವು. ಮಾಲವಿಕಾ ಕಪೂರ ಬರಹ ಮನಮಿಡಿಯುತ್ತದೆ.‌

ಲೀಲಾ ಕಾರಂತರ ಘನ ವ್ಯಕ್ತಿತ್ವ

ಆಕಾಶವನ್ನು ನೋಡಬೇಕಾದರೆ ಅದಕ್ಕೆ ಭೂಮಿಯ ನೆಲೆ ಬೇಕು. ಕಾರಂತರ ಹಾಗೂ ಅವರ ಮಕ್ಕಳ ಬದುಕಿನಲ್ಲಿ ಭದ್ರವಾದ ನೆಲೆಯನ್ನು ಒದಗಿಸಿಕೊಟ್ಟಿದ್ದು ಅವರ ಹೆಂಡತಿ ಲೀಲಾ ಕಾರಂತರು. ಎರಡನೇ ಅಧ್ಯಾಯ ಬಾಲವನದ ಅಮ್ಮ ಈ ಕೃತಿಯ ಅಂತಃಶಕ್ತಿ ಮತ್ತು ಪ್ರೇರಣೆ. ಕಾರಂತರ ಸುಳಿಯನ್ನು ಮೀರಿ ನಮ್ಮನ್ನು ಆವರಿಸಿಕೊಳ್ಳುವುದು ಲೀಲಾ ಕಾರಂತರ ಬದುಕು. ಈ ಕೃತಿಯ ಕುರಿತು ಮುನ್ನುಡಿ ಬರೆದ ಚಿರಂಜೀವಿ ಸಿಂಘ್, ಬಿ.ಎ.ವಿವೇಕ ರೈ ಅವರೆಲ್ಲರೂ ಲೀಲಾ ಕಾರಂತರ ಕುರಿತು ಬರೆಯುವಾಗ ಭಾವುಕರಾಗಿ ದ್ದಾರೆ. ಕಾರಂತರನ್ನು ತಾವೇ ಮನಸಾರೆ ಪ್ರೀತಿಸಿ, ಬಯಸಿ ಮದುವೆಯಾದವರು ತಮ್ಮ ತವರುಮನೆಯ ಅಗರ್ಭ ಶ್ರೀಮಂತ ಮನೆತನದಿಂದ ಹೇಳಿಕೊಳ್ಳಲು ಯಾವ ಉದ್ಯೋಗವೂ ಇಲ್ಲದ, ಕಾಲೇಜಿನ ಮೆಟ್ಟಿಲನ್ನೂ ಹತ್ತದ ನೃತ್ಯ ಮಾಸ್ತರರನ್ನು ಮದುವೆಯಾಗಿ ಬಾಲ ವನಕ್ಕೆ ಬಂದು ತವರುಮನೆ ಗಂಡನ ಮನೆ ಎರಡನ್ನೂ ಸಂಭಾಳಿಸಿದವರು.

ಅವರ ಘನವ್ಯಕ್ತಿತ್ವದ ಎದುರು ಕಡಲತೀರದ ಭಾರ್ಗವ ಕುಬ್ಜರಾಗಿ ಕಾಣಿಸುತ್ತಾರೆ. ಕಾರಂತರು ಪ್ರವಾಸಪ್ರಿಯರು, ಯುರೋಪು ಅಮೆರಿಕಗಳಿಗೆಲ್ಲಾ ಹೋಗುವಾಗ ಸಾಲ ಮಾಡಿಯೇ ಹೋದವರು. ಬಾಲವಿಜ್ಞಾನ, ಇನ್ನಿತರ ಕೃತಿಗಳ ಪ್ರಕಟಣೆಗಾಗಿ ಸಹ ಸಾಲ ಮಾಡಿದವರು. ಮನೆಯ ಮುಂದೆ ಲಾರಿಗಳಲ್ಲಿ ಕಾಗದದ ರೀಮುಗಳು ಬಂದಾಗ ಅವರ ಮನಸ್ಸು ತಳಮಳಗೊಳ್ಳುತ್ತಿತ್ತಂತೆ.

ಗಂಡನ ಆದರ್ಶಬದುಕಿಗೆ ಮುಕ್ಕಾಗದಂತೆ ಜೊತೆಯಾದವರು. ಇಲ್ಲಿ ಎರಡು ಸಂಗತಿ ಗಳನ್ನು ಗಮನಿಸಬಹುದು. ಮೊದಲನೆಯದು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಕಾರಂತರು; ಎರಡನೆಯದು ದಕ್ಷಿಣ ಕನ್ನಡದಲ್ಲಿ ಪ್ರಭಾವಶಾಲಿಯಾದ ಬಂಟರ ಮನೆತನದ ಲೀಲಾ ಆಳ್ವರು.

ಅಪರೂಪದ ಅಂತರ್ಜಾತಿ ವಿವಾಹ!

1936ರ ಕಾಲ ಘಟನೆ ಇದು. ಬ್ರಾಹ್ಮಣರಲ್ಲೇ ಒಳಪಂಗಡಗಳ ನಡುವೆ ಸಂಬಂಧ ನಿಷಿದ್ಧ ವಾದ ಕಾಲದಲ್ಲಿ ತನ್ನ ಮನೆತನದ ಎಲ್ಲರನ್ನೂ ಒಪ್ಪಿಸಿ ಕಾರಂತರ ಕೈಹಿಡಿದದ್ದು ಸಾಮಾನ್ಯ ಸಂಗತಿಯಲ್ಲ. ಅವರ ತಂದೆ ಕಾಮು ಆಳ್ವ ಓದಿದ್ದು ಕಡಿಮೆಯಿರಬಹುದು. ಆದರೆ ತನ್ನ ಮಗಳು ಮೆಚ್ಚಿದವನನ್ನು ಧಾರೆಯೆರೆದು ಕೊಡುವ ಪ್ರಗತಿಶೀಲತೆ ಅವರಲ್ಲಿತ್ತು. ಲೀಲಾ ಕಾರಂತರು ಮಲತಾಯಿಯ ಕಾಟದಿಂದ ನೊಂದ ತನ್ನ ತಂಗಿಯರಿಗೂ ಬಾಳನ್ನು ಕಲ್ಪಿಸಿದವರು. ಅವರೊಳಗೂ ಸಹ ಓರ್ವ ಸಾಹಿತಿ ಇದ್ದ ಎನ್ನುವುದನ್ನು ಅವರು ಹರಿ ನಾರಾಯಣ್ ಅಪ್ಟೆಯವರ ಪ್ರಸಿದ್ಧ ಮರಾಠಿ ಕೃತಿ ಪನ್ ಲಕ್ಷತ್ ಕೋನ್ ಘೆತೋ? ಕನ್ನಡಕ್ಕೆ ‘ಯಾರು ಲಕ್ಷಿಸುವರು?’ ಎಂದು ಅನುವಾದ ಮಾಡಿದ್ದರು ಎಂದು ತಿಳಿದು ಬರುತ್ತದೆ.

ಮಾಲವಿಕಾ ಅವರು ಹುಟ್ಟುವಾಗ ಲೀಲಾ ಅವರಿಗೆ 19 ವರ್ಷ. ಆಗಲೇ ಅವರು ಸಿಗ್ಮಂಡ್ ಫ್ರಾಯ್ಡ್‌ನ ಮನಃಶಾಸ್ತ್ರದ ಕೃತಿಗಳನ್ನು ಓದಿದ್ದರು. ಅಂತಹ ಅವರೇ ಮಾನಸಿಕ ಒತ್ತಡ ವನ್ನು ತಾಳಲಾರದೇ ಡಿಪ್ರೆಷನ್ನಿಗೆ ಹೋಗಿದ್ದನ್ನು ನೋಡುವಾಗ ಬೇಸರವಾಗುತ್ತದೆ.

ಕಾರಂತರು ತಮ್ಮ ಹೆಂಡತಿಯನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ಕಾರಂತರಂತಹ ಮಹಾನ್ ವ್ಯಕ್ತಿಗಳ ಆದರ್ಶ ರೂಪುಗೊಳ್ಳುವಲ್ಲಿ ತನ್ನನ್ನು ತಾನು ತೇದುಕೊಳ್ಳಬೇಕಾದಾಗ ಅಪಾರಮಾನಸಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ. ಬಹುಶಃ ಇದುವೇ ಅವರಿಗೆ ಡಿಪ್ರೆಷೆನ್ ಬರುಲು ಕಾರಣವಾಯಿತೆನಿಸುತ್ತದೆ. ಮಗ ಹರ್ಷನ ಮರಣ ಅದನ್ನು ಇನ್ನಷ್ಟು ಹೆಚ್ಚುಮಾಡಿತು. ಪ್ರೀತಿಯಿಂದ ಆರಂಭವಾದ ಬದುಕು, ಸೃಜನಶೀಲತೆಯ ಒತ್ತಡದಲ್ಲಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದನ್ನು ಈ ಕೃತಿಯುದ್ದಕ್ಕೂ ಮಕ್ಕಳಿಂದ ವ್ಯಕ್ತ ವಾಗುತ್ತಲೇ ಹೋಗಿದೆ.

ಇನ್ನೊಂದು ಮಹತ್ವದ ವಿಷಯ ಕಾರಂತರ ಬದುಕಿನ ಕೊನೆಗಾಲದಲ್ಲಿ ಬಂದು ಸೇರಿದ ‘ಮ’ ಎನ್ನುವ ಮಹಿಳೆಯ ಕುರಿತು. ಮಕ್ಕಳಿಗೆ ಅಪ್ಪನ ಮೇಲೆ ಅಪಾರವಾದ ಗೌರವಿದೆ. ಆದರೆ ಯಾವುದು ಆಗಬಾರದಿತ್ತೋ ಅದಾದುದಕ್ಕೆ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಾಗದೇ ಇದ್ದುದಕ್ಕೆ ವಿಷಾದವೂ ಇದೆ.

ಚುನಾವಣೆಯಲ್ಲಿ ಕಾರಂತರು

ಮಣಿಪಾಲದ ಮೆಡಿಕಲ್ ಕಾಲೇಜಿಗೆ ಮಾನ್ಯತೆ, ಚಿಣ್ಣಪ್ಪ ಎನ್ನುವ ಪ್ರಾಮಾಣಿಕ ಅಽಕಾರಿಗೆ ಆದ ತೊಂದರೆ ತಪ್ಪಿಸಿದ್ದು ಜೊತೆಗೆ ಉತ್ತರಕನ್ನಡದಿಂದ ಲೋಕಸಭೆಗೆ ಚುನಾವಣೆಗೆ ನಿಂತು, ಅದರ ಪರಿಣಾಮವಾಗಿ ಅನಂತನಾಗ್ ಸೋತಿದ್ದು ಇವೆಲ್ಲವೂ ಕಾರಂತರ ಮನಸ್ಸಿನ ವಿವಿಧ ಮುಖಗಳು. ಆಧುನಿಕತೆ ಪ್ರಗತಿಯನ್ನು ಮೆಚ್ಚುತ್ತಲೇ ಅವರ ಕೆಲ ಹೋರಾಟಗಳನ್ನು ಮಕ್ಕಳು ಪ್ರಶ್ನಿಸುವಾಗ ಅವರಲ್ಲಿಯೂ ಕಾರಂತರೇ ಕಾಣಿಸುತ್ತಾರೆ.

ಇಲ್ಲಿ ಮುಖ್ಯವಾಗಿ ಕಾರಂತರ ಮಕ್ಕಳಷ್ಟೇ ಇದನ್ನು ಅನುವಾದಿಸಿದ ವಿಶ್ವೇಶ್ವರ ಭಟ್ಟರನ್ನು ನೆನೆಸಿಕೊಳ್ಳಬೇಕು. ಅನುವಾದನ ಕಾರ್ಯ ಯಾವತ್ತಿಗೂ ಸವಾಲಿನದೇ. ಮೂಲ ಲೇಖಕರ ಜಾಡಿನಲ್ಲಿ ಸ್ವಲ್ಪವೂ ಆಚೇಯೀಚೆ ಹೆಜ್ಜೆಯಿಡದೇ ಸಾಗಬೇಕು. ಯಾವ ಭಾಷೆಗೆ ಅನುವಾದ ಮಾಡುತ್ತಾರೋ ಆ ಭಾಷೆಯ ಓದುಗರಿಗೆ ತಲುಪಬೇಕು. ಇಲ್ಲಿ ಅನುವಾದಕನಿಗೆ ಮೂಲದ ವಿಷಯಗಳ ಮೇಲೆ ಎಷ್ಟುಹಿಡಿತ ಇದೆ ಎನ್ನುವಲ್ಲಿ ಆ ಕೃತಿಯ ಯಶಸ್ಸು ಇದೆ. ಭಟ್ಟರಿಗೆ ಈ ಕೆಲಸ ಸವಾಲಿನದೆನಿಸಲೇ ಇಲ್ಲ. ಇದಕ್ಕೆ ಕಾರಣ ಕಾರಂತರು ಅವರ ಮನಸ್ಸಿನಲ್ಲಿ ಯಾವತ್ತಿಗೋ ಬೇರು ಬಿಟ್ಟಿದ್ದರು. ಮೂಲ ಕೃತಿಯ ಹೆಸರು ‘ಗ್ರೋಯಿಂಗ್ ಅಪ್ ಕಾರಂತ್’ ಇದು ಮಕ್ಕಳ ಅನುಭವೞ ಅದರ ಅರ್ಥ ‘ಕಾರಂತರ ನೆರಳಿನಲ್ಲಿ ಬೆಳೆದ ಬದುಕು ಕಾರಂತರೊಂದಿಗೆ ಬೆಳೆದ ಜೀವನಾನುಭವ, ಕಾರಂತರ ಪ್ರಭಾವದಲ್ಲಿ ಬೆಳೆದ ಬಾಲ್ಯ’ ಎನ್ನುವುದಾಗಿ ಅರ್ಥೈಸಿಕೊಳ್ಳಬಹುದು. ಆದರೆ ಅವರ ಕುಟುಂಬದ ಹೊರಗಿ ನವರಿಗೆ ಕಾರಂತರೆನ್ನುವ ಪ್ರವಾಹದಲ್ಲಿ ಈಜುವ ಹುಮ್ಮಸ್ಸು. ಹಾಗಾಗಿ ಇವುಗಳನ್ನು ಆಧರಿಸಿಯೇ ಭಟ್ಟರು ಈ ಕೃತಿಗೆ “ಕಾರಂತರ ಸುಳಿಯಲ್ಲಿ" ಎನ್ನುವ ಅರ್ಥಪೂರ್ಣ ಹೆಸರನ್ನು ನೀಡಿದ್ದಾರೆ.