Ramesh Kumar Naik Column: ಬೇಡ್ತಿ ನದಿ: ತಿರುವು ಎಂಬ ವ್ಯರ್ಥ ಕಸರತ್ತು !
ಬತ್ತಿ ಹೋದ ಬಾವಿಗಳು, ನೀರಿನ ಕುರುಹೇ ಇಲ್ಲದ ಹೊಳೆಗಳು, ಒಣಗಿ ಹೋದ ಅಡಿಕೆ-ತೆಂಗಿನ ಮರಗಳು, ಮನೆಯ ಗೇಟಿನ ಮುಂದೆ ಗ್ರಾಮ ಪಂಚಾಯಿತಿ ನೀರಿಗಾಗಿ ಕಾದಿರುವ ಖಾಲಿ ಕೊಡಗಳ ಸಾಲು... ಇದು ಉತ್ತರ ಕರ್ನಾಟಕ ಅಥವಾ ಬಯಲು ಸೀಮೆಯ ದೃಶ್ಯವಲ್ಲ. ಪಶ್ಚಿಮ ಘಟ್ಟದ ಸಾಲು ಮತ್ತು ಹಲವಾರು ನದಿಗಳ ಬೀಡಾಗಿರುವ ಉತ್ತರ ಕನ್ನಡದ ಹಲವು ಪ್ರದೇಶಗಳ ಸ್ಥಿತಿ!
-
ರಮೇಶ್ ಕುಮಾರ್ ನಾಯಿಕ್
ಒಂದು ಕಾಲವಿತ್ತು; ವಿದ್ಯುತ್ ಉತ್ಪಾದಿಸಲು, ಕಾರ್ಖಾನೆ ಸ್ಥಾಪಿಸಲು, ರಸ್ತೆ ವಿಸ್ತರಿಸಲು ಅಪಾರ ಪ್ರಮಾಣದ ಕಾಡನ್ನು ಕಡಿಯುತ್ತಿದ್ದರು; ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿ, ಅಭಿವೃದ್ಧಿಯ ಪಥವನ್ನು ತುಳಿಯಲು, ಕಾಮಗಾರಿಗೆ ಅಗ್ರ ಸ್ಥಾನ; ಪರಿಸರ ರಕ್ಷಣೆಯ ಕೂಗು ಇನ್ನೂ ಎದ್ದಿರಲಿಲ್ಲ. ಕಳೆದ ಆರೇಳು ದಶಕಗಳಲ್ಲಿ, ಸಾಕಷ್ಟು ಕಾಡು ಪ್ರದೇಶವನ್ನು ನಾಶ ಮಾಡಿ, ಅವೆಷ್ಟೋ ಜೀವಿಗಳನ್ನು ಅಳಿವಿನಂಚಿಗೆ ತಳ್ಳಿ, ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಆದರೆ, ಇಪ್ಪತ್ತೊಂದನೆಯ ಶತಮಾನದಲ್ಲೂ ನಾವು ನಮ್ಮ ಪರಿಸರವನ್ನು ನಾಶಪಡಿಸಿದರೆ, ಮುಂದಿನ ಬದುಕು ತುಂಬಾ ಕಷ್ಟಕ್ಕೆ ಸಿಲುಕುತ್ತದೆ. ಅಭಿವೃದ್ಧಿ ಸಾಧಿಸಲು ಪರಿಸರ ನಾಶ ಮಾಡುವ ಕಾಲ ಮುಗಿದುಹೋಗಿದೆ. ಇನ್ನೇನಿದ್ದರೂ, ಉಳಿದಿರುವ ಪರಿಸರವನ್ನು ರಕ್ಷಿಸಿ, ಕಾಡು ಪ್ರದೇಶಕ್ಕೆ ಹಾನಿಯಾಗದಂತೆ ಅಭಿವೃದ್ಧಿಯನ್ನು ಕೈಗೊಳ್ಳ ಬೇಕಿದೆ. ಇದನ್ನು ಪರಿಸರ ತಜ್ಞರು ಪುರಾವೆ ಸಹಿತ ಹೇಳಿದ್ದಾರೆ; ನಮ್ಮನ್ನು ಆಳುವವರು ಈ ವಿಷಯನ್ನು ಅರಿತು, ಮುಂದಡಿ ಇಡಬೇಕಿದೆ.
ಬತ್ತಿ ಹೋದ ಬಾವಿಗಳು, ನೀರಿನ ಕುರುಹೇ ಇಲ್ಲದ ಹೊಳೆಗಳು, ಒಣಗಿ ಹೋದ ಅಡಿಕೆ-ತೆಂಗಿನ ಮರಗಳು, ಮನೆಯ ಗೇಟಿನ ಮುಂದೆ ಗ್ರಾಮ ಪಂಚಾಯಿತಿ ನೀರಿಗಾಗಿ ಕಾದಿರುವ ಖಾಲಿ ಕೊಡಗಳ ಸಾಲು... ಇದು ಉತ್ತರ ಕರ್ನಾಟಕ ಅಥವಾ ಬಯಲು ಸೀಮೆಯ ದೃಶ್ಯವಲ್ಲ. ಪಶ್ಚಿಮ ಘಟ್ಟದ ಸಾಲು ಮತ್ತು ಹಲವಾರು ನದಿಗಳ ಬೀಡಾಗಿರುವ ಉತ್ತರ ಕನ್ನಡದ ಹಲವು ಪ್ರದೇಶಗಳ ಸ್ಥಿತಿ!
ವಾಸ್ತವ ಹೀಗಿರುವಾಗ ಉತ್ತರ ಕನ್ನಡ ಜಿಲ್ಲೆಯ ಜೀವನಾಡಿ ಎನಿಸಿರುವ ನದಿಗಳ ದಿಕ್ಕನ್ನೇ ಅನೈಸರ್ಗಿಕವಾಗಿ ತಿರುಗಿಸಿದರೆ ಭವಿಷ್ಯದಲ್ಲಿ ಇಲ್ಲಿಯ ಪರಿಸ್ಥಿತಿ ಹೇಗಿರಬಹುದು? ಇದು ಉತ್ತರ ಕನ್ನಡದ ಮಣ್ಣಿನ ಮಕ್ಕಳ ಪ್ರಶ್ನೆ. ಪರಿಸರ ಸೂಕ್ಷ್ಮ ಜಿಲ್ಲೆ ಉತ್ತರ ಕನ್ನಡದಲ್ಲಿ ಕೈಗಾ, ಶರಾವತಿ ಟೇಲ್‌ರೇಸ್, ಕಾಳಿ ಜಲ ವಿದ್ಯುತ್, ಕಾಸರಕೋಡಿನ ಟೊಂಕ ಖಾಸಗಿ ಬಂದರು ನಿರ್ಮಾಣ, ಪ್ರಸ್ತಾಪಿತ ಶರಾವತಿ ಪಂಪ್ಡ್ ಸ್ಟೋರೇಜ್ ಇತ್ಯಾದಿ ಸರಣಿಯೋ ಪಾದಿ ಪರಿಸರ ಘಾತಕ ಯೋಜನೆಗಳ ಬಳಿಕ ಇದೀಗ ಬೇಡ್ತಿ ನದಿಯ ಮೇಲೆ ಪ್ರಹಾರ ಮಾಡಲು ಸರಕಾರದ ಹೊಸ ಹೊಸ ಯೋಜನೆಗಳು ತವಕಿಸುತ್ತಿವೆ. ಆದರೆ ಉತ್ತರ ಕನ್ನಡದ ಜನರಿಗೆ ಇದು ಜೀವಣ್ಮರಣದ ಪ್ರಶ್ನೆ. ಪಶ್ಚಿಮ ದಿಕ್ಕಿನಿಂದ ಪೂರ್ವಕ್ಕೆ !
ಪಶ್ಚಿಮ ಘಟ್ಟದಿಂದ ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರ ಸೇರುವ ಬೇಡ್ತಿ ನದಿಯ ನೀರನ್ನು, ಪೂರ್ವಾಭಿಮುಖವಾಗಿ ಹರಿಯುವ ತುಂಗಭದ್ರಾದ ಉಪ ನದಿ ವರದಾ ನದಿಗೆ ಸೇರಿಸುವ ಸುಮಾರು 10 ಸಾವಿರ ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ಇದು. ಈ ಯೋಜನೆಗೆ ರಾಜ್ಯ ಸರಕಾರದ ಸಂಪೂರ್ಣ ಒಪ್ಪಿಗೆ ಇದೆ ಎಂದು ಕೇಂದ್ರ ಸರಕಾರದ ಸಂಬಂಧಪಟ್ಟ ಸಚಿವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: Vishweshwar Bhat Column: ಸಂಸತ್ತಿನ ಅಭೂತ ಭಿತ್ತಿಪತ್ರಗಳಿಗೆ ಸುಧಾಮೂರ್ತಿಯವರ ಅಕ್ಷರ ರೂಪ
ಹಾಗಾಗಿ ಈ ಯೋಜನೆ ಇನ್ನು ಪರಿಶೀಲನೆಯ ಪರಿಧಿ ದಾಟಿ ಮುಂದೆ ಹೋದಂತಾಗಿದೆ. ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ರಾಜ್ಯ ಜಲ ಸಂಪನ್ಮೂಲ ಇಲಾಖೆ ಜಂಟಿಯಾಗಿ ನಡೆಸುವ ಯೋಜನೆ ಇದು. ಬೇಡ್ತಿ ಪಶ್ಚಿಮ ಘಟ್ಟಗಳ ಮೂಲಕ ಸುಮಾರು 150 ಕಿ.ಮೀ ಉದ್ದಕ್ಕೆ ಹರಿದು ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಜನರಿಗೆ ಆಸರೆ ಆಗಿರುವ ನದಿ. ಹಾಗೆ ನೋಡಿದರೆ ಈ ಯೋಜನೆಯ ಗುಮ್ಮ ಮೊದಲು ಸಣ್ಣಗೆ ಗುಟುರು ಹಾಕಿದ್ದು 90ರ ದಶಕದಲ್ಲಿ. ಆಗ ಎದ್ದಿದ್ದ ಪ್ರತಿರೋಧದ ದನಿ 2005ರ ಹೊತ್ತಿಗೆ ತೀವ್ರವಾಯಿತು.
ನಂತರದ ಹಲವು ವರ್ಷ ತೆಪ್ಪಗಿದ್ದ ಈ ಯೋಜನೆ 2017ರಲ್ಲಿ ಪರಿಷ್ಕರಣೆಯ ಲೇಬಲ್ ಧರಿಸಿ ‘ಪರಿಸರ ನಾಶದ ಪ್ರಮಾಣ ಸಾಕಷ್ಟು ತಗ್ಗಿಸಲಾಗಿದೆ’ ಎಂಬ ಷರಾದೊಂದಿಗೆ ಮತ್ತೆ ಹೆಡೆ ಎತ್ತಿತು.
2022ರಲ್ಲಿ ಈ ಯೋಜನೆಯ ಡಿಪಿಆರ್, ಅಂದರೆ ವಿಸ್ತೃತ ಯೋಜನಾ ವರದಿ ಪೂರ್ಣಗೊಂಡಿತು. 2025ರಲ್ಲಿ ಪಿಡಿಎಸ್, ಅಂದರೆ ಪರ್ಯಾಯ ಮಾರ್ಗದ ಪೂರ್ವ ಕಾರ್ಯ ಸಾಧ್ಯತಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಯಿತು. ಇದೀಗ ಕಾವೇರಿ-ಗೋದಾವರಿ ನದಿ ಜೋಡಣೆ ಜತೆಗೆ, ಬೇಡ್ತಿ-ವರದಾ ನದಿ ಜೋಡಣೆಗೂ ತಾತ್ವಿಕ ಒಪ್ಪಿಗೆ ನೀಡಿರುವ ರಾಜ್ಯ ಸರ್ಕಾರದ ಅಧಿಕೃತ ಪತ್ರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದರೊಂದಿಗೆ ಈ ಯೋಜನೆಯ ಜಾರಿ ಪ್ರಕ್ರಿಯೆ ಚುರುಕಾದಂತಾಗಿದೆ.
ನೀರನ್ನು ಹೇಗೆ ತಿರುಗಿಸುತ್ತಾರೆ? ‘ಬೇಡ್ತಿ ನದಿ ತಿರುವಿನಿಂದ ಹಾವೇರಿ, ಗದಗ, ಕೊಪ್ಪಳ, ರಾಯಚೂರು ಭಾಗಗಳಿಗೆ ಅನುಕೂಲವಾಗುತ್ತದೆ. ಇದರಿಂದ ಆ ಭಾಗಗಳಲ್ಲಿ ವಾರ್ಷಿಕ 1.05 ಲಕ್ಷ ಹೆಕ್ಟೆರ್ ನೀರಾವರಿ ವ್ಯವಸ್ಥೆ ಸಾಧ್ಯ’ ಎನ್ನುವುದು ಸರಕಾರದ ವಾದ. ಯೋಜನೆಯ ಅಸಲಿ ರೂಪ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಆದರೆ ಪರಿಸರ ತಜ್ಞರ ಬಳಿ ಇರುವ ಪ್ರಾಥಮಿಕ ಮಾಹಿತಿ ಪ್ರಕಾರ, ಇದು ಎರಡು ಹಂತಗಳ ಪ್ರಕ್ರಿಯೆ. ಶಿರಸಿಯ ಶಿರಾಲಬೈಲು ಗ್ರಾಮದಲ್ಲಿ ಬೇಡ್ತಿ ಉಪ ನದಿಯಾದ ಪಟ್ಣದಹೊಳೆಗೆ ಕಿರು ಅಣೆಕಟ್ಟೆ ಕಟ್ಟಿ, ಅದರಲ್ಲಿ ಸಂಗ್ರಹವಾದ ನೀರನ್ನು 6.5 ಕಿ.ಮೀ ಸುರಂಗ ಕೊರೆದು, ಹುಳಗೋಳ ಗ್ರಾಮದ ಬಳಿಯ ಮತ್ತೊಂದು ಉಪ ನದಿ ಶಾಲ್ಮಲಾ ಹೊಳೆಗೆ ಹರಿಸುವುದು ಒಂದು ಹಂತ.
ಶಾಲ್ಮಲಾ ಹೊಳೆಗೆ ಹುಳಗೋಳ ಗ್ರಾಮದಲ್ಲಿ ಮತ್ತೊಂದು ಕಿರು ಅಣೆಕಟ್ಟೆ ಕಟ್ಟಿ, ಅಲ್ಲಿ ಪಟ್ಣದ ಹೊಳೆ ಮತ್ತು ಶಾಲ್ಮಲಾ ಹೊಳೆಯಿಂದ ಸಂಗ್ರಹವಾದ ನೀರನ್ನು ಮತ್ತೆ 6.7 ಕಿ.ಮೀ ಉದ್ದದ ಸುರಂಗ ಸೇರಿದಂತೆ ಸುಮಾರು 18 ಕಿ.ಮೀವರೆಗೆ ಹರಿಸಿ ವರದಾ ಉಪ ನದಿಯಾದ ಧರ್ಮಾ ನದಿಗೆ ಸೇರಿಸುವುದು ಮತ್ತೊಂದು ಹಂತ.
ಸಮುದ ಸೇರುವ ನೀರು ವ್ಯರ್ಥವೇ? ‘ಬೇಡ್ತಿ ನದಿಯ ನೀರು ಹರಿದು ಸಮುದ್ರ ಸೇರುತ್ತದೆ. ಹೀಗೆ ವ್ಯರ್ಥ ವಾಗಿ ಸಮುದ್ರದ ಪಾಲಾಗುವ ನೀರನ್ನು ಬೇರೆ ಜಿಲ್ಲೆಗಳ ಜನರ ಬಳಕೆಗೆ ಹರಿಸಬಾರದೇಕೆ?’ ಎನ್ನುವುದು ಈ ಯೋಜನೆಯ ಪರ ಇರುವವರ ವಾದ. ವಾಸ್ತವಿಕವಾಗಿ, ನದಿಯ ನೀರು ಸಮುದ್ರಕ್ಕೆ ಸೇರುವುದು ವೇಸ್ಟ್ ಅನ್ನೋದೇ ಮೂರ್ಖತನ. ಏಕೆಂದರೆ ಇದೊಂದು ನೈಸರ್ಗಿಕ ಜಲ ಚಕ್ರ. ಸಮುದ್ರಕ್ಕೆ ನಿರಂತರವಾಗಿ ಸಿಹಿ ನೀರು ಸೇರುತ್ತಿದ್ದರೆ ಮಾತ್ರ ಜಲಚರಗಳ ಸಂತತಿ ಉಳಿಯಲು, ಬೆಳೆಯಲು ಸಾಧ್ಯ. ಹಾಗೆಯೇ ನದಿಯ ನೀರು ಸಮುದ್ರದತ್ತ ಹರಿಯುವ ರಭಸ ನಿಂತು ಹೋದರೆ, ಸಮುದ್ರದ ಉಪ್ಪು ನೀರು ಅಂತರ್ಜಲ ಸೇರತೊಡಗಿ ಬಾವಿಗಳ ನೀರು ಕುಡಿಯಲಾಗದ ಸ್ಥಿತಿ ಉಂಟಾಗಬಹುದು.
ವ್ಯರ್ಥ ಮತ್ತು ದುಬಾರಿ! ಈ ಯೋಜನೆ ಬೇಡ ಎಂದು ವಾದ ಮಂಡಿಸುತ್ತಿರುವ ಪರಿಣತರ ಪ್ರಕಾರ, ಬೇಡ್ತಿ ನದಿ ನೀರು ತಿರುಗಿಸಲು ವರ್ಷಕ್ಕೆ ಸುಮಾರು 3.2 ಕೋಟಿ ಯುನಿಟ್ ವಿದ್ಯುತ್ ಬೇಕು! ಅಂದರೆ ಉತ್ತರ ಕನ್ನಡದ ಗೇರುಸೊಪ್ಪಾ ಜಲ ವಿದ್ಯುತ್ ಯೋಜನೆಯಿಂದ ಉತ್ಪಾದನೆ ಯಾಗುವ ಅಷ್ಟೂ ವಿದ್ಯುತ್ ಇಲ್ಲಿಗೇ ಬಳಸ ಬೇಕಾಗುತ್ತದೆ! ಬೇಡ್ತಿ ನದಿಯ ನೀರನ್ನು ವರದಾ ನದಿಗೆ ಸೇರಿಸಲು ಪ್ರತಿ ವರ್ಷ 200 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ!
ಜೂನ್‌ನಿಂದ ನವೆಂಬರ್‌ವರೆಗೆ ಆರು ತಿಂಗಳು ಮಾತ್ರ ತುಂಬಿ ಹರಿಯುವ ಬೇಡ್ತಿ ನದಿ ಆ ಬಳಿಕ ಬಯಲು ಸೀಮೆಯ ನದಿಗಳಂತೆ ಸೊರಗುತ್ತದೆ. ಹೀಗಿರುವಾಗ, ನೂರಾರು ಹೆಕ್ಟೆರ್ ಅರಣ್ಯ ನಾಶ ಮಾಡಿ, ಸುರಂಗ ಕೊರೆದು, ಅಣೆಕಟ್ಟು ಕಟ್ಟಿ, ಪಶ್ಚಿಮ ಘಟ್ಟಗಳ ಸೂಕ್ಷ್ಮ ವಲಯದ ಸಮತೋಲನ ವನ್ನೇ ಏರುಪೇರು ಮಾಡಿ, ಜಲಚರ, ಜಲಮೂಲಕ್ಕೆ ಧಕ್ಕೆ ತಂದು ಮಾಡುವ ಕಸರತ್ತೇ ವ್ಯರ್ಥ!
ಈ ಯೋಜನೆಯಿಂದ ಅಂತರ್ಜಲ ಕುಸಿಯಲಿದೆ. ಮಾನವ - ವನ್ಯ ಜೀವಿ ಸಂಘರ್ಷ ಹೆಚ್ಚಲಿದೆ. ಜಿಲ್ಲೆಯ ಕನಿಷ್ಠ ಸಾವಿರ ಹೆಕ್ಟೆರ್ ಭೂಮಿ ಮುಳುಗಡೆ ಆಗಲಿದೆ. 787 ಹೆಕ್ಟೆರ್ ಅರಣ್ಯ ಭೂಮಿ, 130 ಹೆಕ್ಟೆರ್ ಕೃಷಿ ಯೋಗ್ಯ ಭೂಮಿ, 88 ಹೆಕ್ಟೆರ್ ಕೃಷಿಯೇತರ ಭೂಮಿ ನಾಶ ಆಗಲಿದೆ. ಹಲವು ಹಳ್ಳಿಗಳ ಜನಜೀವನ ಏರುಪೇರಾಗಲಿದೆ. ನೂರಾರು ಜಾತಿಯ ಅಪರೂಪದ ಪ್ರಾಣಿ, ಪಕ್ಷಿ ಸಂಕುಲ ನಲುಗಲಿದೆ.
ಸ್ಥಳೀಯ ರೈತರು, ಮೀನು ಗಾರರ ಬದುಕು ಹದಗೆಡಲಿದೆ. ಉತ್ತರ ಕನ್ನಡ ಜಿಲ್ಲೆಯ ಪರಿಸರ ಧಾರಣ ಸಾಮರ್ಥ್ಯ ಮುಗಿದಿದೆ ಎನ್ನುವುದು ಗೊತ್ತಿದ್ದರೂ ಜೀವ ವೈವಿಧ್ಯವನ್ನು ಹದಗೆಡಿಸಿ ಮತ್ತೆ ಮತ್ತೆ ಇಂಥ ಘಾತುಕ ಯೋಜನೆಗಳನ್ನು ಹೇರುವುದೇಕೆ ಎನ್ನುವುದು ಪರಿಸರ ವಿಜ್ಞಾನಿಗಳ ಪ್ರಶ್ನೆ. ಯಲ್ಲಾಪುರ, ಶಿರಸಿ, ಅಂಕೋಲಾ ತಾಲೂಕುಗಳ ಸುಮಾರು ಒಂದು ಲಕ್ಷ ರೈತರು ಬೇಡ್ತಿ ನದಿಯ ನೀರನ್ನೇ ಅವಲಂಬಿಸಿದ್ದಾರೆ. ಈ ಭಾಗದ ಜನರ ಕುಡಿಯುವ ನೀರಿನ ಅಗತ್ಯವನ್ನೂ ಈ ನದಿ ಪೂರೈಸುತ್ತಿದೆ.
ಕಾರವಾರದಲ್ಲಿರುವ ಬೃಹತ್ ನೌಕಾ ನೆಲೆಗೂ ಭಾರೀ ಪ್ರಮಾಣದಲ್ಲಿ ಈ ನೀರೇ ಬೇಕು. ಬೇಡ್ತಿಯ ಉಪ ನದಿಯಾದ ಗಂಗಾವಳಿ ನದಿಯ ನೀರನ್ನು ಕಾರವಾರ, ಅಂಕೋಲಾ ನಗರಗಳಿಗೆ ಪೂರೈಸ ಲಾಗುತ್ತಿದೆ. ಬೇಡ್ತಿ ತಿರುವು ಯೋಜನೆಯಿಂದ ಈ ಪ್ರದೇಶಗಳ ನೀರಿನ ಅಗತ್ಯದ ಮೇಲೂ ಭವಿಷ್ಯ ದಲ್ಲಿ ಭಾರೀ ದುಷ್ಪರಿಣಾಮ ಬೀರಲಿದೆ ಎನ್ನುವುದು ಪರಿಸರ ತಜ್ಞರ ಎಚ್ಚರಿಕೆ. ಕಡಿಮೆಯಾಗಿರುವ ಮಳೆ ಬೇಡ್ತಿ-ವರದಾ ನದಿಗಳ ಜೋಡಣೆ 90ರ ದಶಕದ ಪ್ರಸ್ತಾಪ.
ಕಳೆದ 30 ವರ್ಷಗಳ ಅವಧಿಯಲ್ಲಿ ಉತ್ತರ ಕನ್ನಡದ ಮಳೆಗಾಲದ ಚಿತ್ರಣವೇ ಬದಲಾಗಿದೆ. ಅರ್ಧದಷ್ಟೂ ಮಳೆಯಾಗುತ್ತಿಲ್ಲ. ಈ ವರ್ಷವಂತೂ ಅಕ್ಟೋಬರ್‌ನಲ್ಲೇ ಬರದ ಛಾಯೆ. ಈ ಯೋಜನೆ ಕಾರ್ಯ ರೂಪಕ್ಕೆ ಇಳಿಸಿದರೂ ಇದು ಮುಗಿಯುವಷ್ಟರಲ್ಲಿ ಇನ್ನೂ ಕನಿಷ್ಠ ಹತ್ತು ವರ್ಷಗಳು ಕಳೆದಿರುತ್ತವೆ. ಆಗ ಇತ್ತ ಬೇಡ್ತಿಯೂ ಖಾಲಿ, ಅತ್ತ ವರದಾಗೂ ನೀರಿಲ್ಲ ಎಂಬ ಪರಿಸ್ಥಿತಿ ನಿರ್ಮಾಣ ಆಗಬಹುದು. ಆದರೆ ಈ ಯೋಜನೆಯಿಂದ ಪರಿಸರದ ಮೇಲೆ ಉಂಟಾದ ಗಾಯವನ್ನು ಎಂದೂ ಗುಣಪಡಿಸಲು ಆಗುವುದಿಲ್ಲ
ಬೆಂಗಳೂರಿನಲ್ಲಿ ಅ.10ರಂದು ಪ್ರತಿಭಟನೆ
ಬೇಡ್ತಿ ಯೋಜನೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಜನ ಈಗ ಸಿಡಿದೆದ್ದಿದ್ದಾರೆ. ಬೇಡ್ತಿ ನದಿಯ ನೀರನ್ನು ತಿರುಗಿಸುವ ವಿನಾಶಕಾರಿ ಪ್ರಯತ್ನ ತಡೆಯಲು ಸಂಘಟಿತರಾಗುತ್ತಿದ್ದಾರೆ. ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನೇತೃತ್ವದಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಪ್ರತಿಭಟನೆಗಳು, ಜಾಗೃತಿ ಜಾಥಾಗಳು ನಡೆದಿವೆ. ಇದರ ಮುಂದುವರಿದ ಭಾಗವಾಗಿ ಪಶ್ಚಿಮ ಘಟ್ಟದ ಜೀವ ನದಿಗಳ ಸಂರಕ್ಷಣೆಗಾಗಿ ಅ.10ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಪರಿಸರ ತಜ್ಞರು, ಜಲ ಪರಿಣತರ ಜತೆಗೆ ಬೆಂಗಳೂರಿನಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಜನ ಮತ್ತು ಪರಿಸರ ಕಾಳಿಜಿ ಇರುವವರೆಲ್ಲರೂ ಒಂದಾಗಿ ಈ ಯೋಜನೆ ವಿರುದ್ಧ ದನಿ ಎತ್ತಲಿದ್ದಾರೆ. ಬೇಡ್ತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳ ಸಂರಕ್ಷಣೆ ಪ್ರತಿಭಟನೆಯ ಪ್ರಮುಖ ವಿಷಯವಾಗಿದೆ.
ಉ.ಕ. ಜಿಲ್ಲೆಯಲ್ಲಿ ಪರಿಸರ ನಾಶ!
ಕಾಳಿ ಜಲ ವಿದ್ಯುತ್ ಯೋಜನೆ: ಜಲವಿದ್ಯುತ್ ಯೋಜನೆ. ಪಶ್ಚಿಮ ಘಟ್ಟಗಳ ಸಾವಿರಾರು ಹೆಕ್ಟೇರ್ ದಟ್ಟ ನಿತ್ಯಹರಿದ್ವರ್ಣ ಅರಣ್ಯ ಪ್ರದೇಶ ಮುಳುಗಡೆ.
ಕೈಗಾ ಅಣು ವಿದ್ಯುತ್ ಸ್ಥಾವರ: ದಟ್ಟ ಕಾಡಿನ ನಡುವೆ ಸ್ಥಾಪನೆ ಗೊಂಡ ವಿದ್ಯುತ್ ಸ್ಥಾವರ. ಈಗ ಇದರ ವಿಸ್ತರಣೆಯಿಂದ ಮತ್ತಷ್ಟು ಪರಿಸರ ನಾಶದ ಆತಂಕ. ಈ ಅಣು ಸ್ಥಾವರದಿಂದಾಗಿ ಜಿಲ್ಲೆಯಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದ ಆರೋಪ.
ಶರಾವತಿ ಟೇಲರೇಸ್: ಹೊನ್ನಾವರ ತಾಲೂಕಿನ ಗೇರುಸೊಪ್ಪ ಬಳಿ ಶರಾವತಿ ನದಿಗೆ ಕಟ್ಟೆ ಕಟ್ಟಿ, ಕಾಡು ನಾಶ ಮಾಡಿ ನಿರ್ಮಿಸಲಾದ ಜಲ ವಿದ್ಯುತ್ ಯೋಜನೆ.
ಶರಾವತಿ ಪಂಪ್ಡ್ ಸ್ಟೋರೇಜ್: ಶರಾವತಿ ನದಿ ನೀರು ಬಳಸಿ ರೂಪಿಸುವ 2000 ಮೆಗಾ ವ್ಯಾಟ್ ಸಾಮರ್ಥ್ಯದ ಜಲ ವಿದ್ಯುತ್ ಯೋಜನೆ. ನೂರಾರು ಎಕರೆ ಹಸಿರು ಕಾಡು ನಾಶ. ಪಶ್ಚಿಮ ಘಟ್ಟದ ಜೀವವೈವಿಧ್ಯಕ್ಕೆ ಧಕ್ಕೆ. ಅಪರೂಪದ ಸಿಂಹಬಾಲದ ಸಿಂಗಳೀಕ ವನ್ಯಜೀವಿ ಸಂಕುಲಕ್ಕೆ ಆತಂಕ.
ಅಘನಾಶಿನಿ-ವೇದಾವತಿ ನದಿ ತಿರುವು: ಉತ್ತರ ಕನ್ನಡದ ಅಘನಾಶಿನಿ ನದಿಯ ನೀರು ತಿರುಗಿಸಿ ಚಿತ್ರದುರ್ಗದ ವೇದಾವತಿ ನದಿಗೆ ಸೇರಿಸುವ ಯೋಜನೆ. ಈ ಯೋಜನೆ ಯಿಂದ 120000 ಮರಗಳ ನಾಶ, ನೂರಾರು ಹೆಕ್ಟೆರ್ ಭೂಮಿ ಮುಳುಗಡೆ ಭೀತಿ.
ಟೊಂಕದಲ್ಲಿ ಖಾಸಗಿ ಬಂದರು: ಹೊನ್ನಾವರ ತಾಲೂಕಿನ ಕಾಸರ ಕೋಡ-ಟೊಂಕ ಪ್ರದೇಶದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಖಾಸಗಿ ವಾಣಿಜ್ಯ ಬಂದರಿನಿಂದ ಮೀನುಗಾರರ ಬದುಕು ಏರುಪೇರು. ಮತ್ಸ್ಯ, ಆಮೆ ಸಂತತಿಗೆ ಅಪಾಯ.