ʼಕೃಷಿಕರ ಸಮಸ್ಯೆʼಗಳೇ ಕಥಾಹಂದರ !: ಹಳ್ಳಿಯಲ್ಲಿ ಅರಳಿದ ಪ್ರೇಮಕಥೆ
ಸದಾಕಾಲ ಹೊಸ ಹೊಸ ಕಥೆಯನ್ನು, ಹೊಸ ಹೊಸ ಅನುಭವವನ್ನು ಚಲನಚಿತ್ರದಲ್ಲಿ ನಿರೀಕ್ಷಿಸು ವುದು ಪ್ರೇಕ್ಷಕನ ಹವ್ಯಾಸ. ಹೆಚ್ಚು ಜನರನ್ನು ಥಿಯೇಟರ್ಗೆ ಸೆಳೆಯುವ ಚಲನಚಿತ್ರಗಳು ಯಶಗಳಿಸಿದವು ಎಂಬುದು ಸಾಮಾನ್ಯವಾದ ಮಾನದಂಡ. ಇಂದು ಚಲನಚಿತ್ರ ನಿರ್ಮಾಣ ಎಂದರೆ, ದೊಡ್ಡ ಬಜೆಟ್, ಹೆಸರಾಂತ ನಟರು, ಅದ್ದೂರಿ ಪ್ರಚಾರ ಮತ್ತು ಸಾಹಸಮಯ ದೃಶ್ಯ ಅತಿ ಅಗತ್ಯ ಎಂಬ ಮಾತಿದೆ.
-
ಚಿತ್ತರಂಜನ್ ಎಚ್.
21ನೇ ಶತಮಾನದಲ್ಲಿ, ಕರ್ನಾಟಕದ ಹಳ್ಳಿಯಲ್ಲಿರುವ ಕೃಷಿಕರ ಕಷ್ಟ, ಗ್ರಾಮೀಣ ಯುವಕರ ಮದುವೆಯ ಸವಾಲು, ಕೌಟುಂಬಿಕ ಸಂಬಂಧಗಳ ಎಳೆ ಮತ್ತು ತ್ರಿಕೋಣ ಪ್ರೀತಿಯ ಬಿಕ್ಕಟ್ಟುಗಳನ್ನು ಒಂದು ಹಂದರ ದಲ್ಲಿ ಕಟ್ಟಿಕೊಟ್ಟ ಚಿತ್ರ ‘ಪ್ರೇಮದ ಊರಲಿ’, ಜನರ ಮನ ಗೆದ್ದಿದೆ. ಈ ವರ್ಷ ಬಿಡುಗಡೆಯಾದ, ಕಡಿಮೆ ಬಜೆಟ್ ಇದ್ದರೂ, ಉತ್ತಮ ಸ್ಪಂದನೆ ಪಡೆದ ಚಿತ್ರಗಳಲ್ಲಿ ಈ ಚಿತ್ರವು ಅಗ್ರಗಣ್ಯ. ವಿಶೇಷವೆಂದರೆ ಇದರಲ್ಲಿ ಹೆಸರಾಂತ ಹೀರೋ ಗಳಿಲ್ಲ, ಕಥೆಯೂ ಸರಳ, ಬಜೆಟ್ ಸಹ ಕಡಿಮೆ ಎನ್ನಬಹುದಾದ ಗಾತ್ರದ್ದು; ಬಹುಷಃ ಈ ಸರಳತೆ, ಸಹಜತೆಯೇ ಜನರಿಗೆ ಇಷ್ಟವಾಗಿದೆ. ಹಳ್ಳಿಗಾಡಿನ ಕಥೆ ಹೊಂದಿದ ಚಲನಚಿತ್ರಗಳು ಕನ್ನಡಕ್ಕೆ ಹೊಸದೇನಲ್ಲ; ಆದರೆ, 2026ರಲ್ಲಿ, ಜನರು ಥಿಯೇಟರ್ಗೆ ಹೋಗಿ ಚಲನ ಚಿತ್ರವನ್ನು ವೀಕ್ಷಿಸುವಂತೆ ಮಾಡಿದ ‘ಪ್ರೇಮದ ಊರಲಿ’ ಚಿತ್ರದ ಯಶಸ್ಸು ನಿಜಕ್ಕೂ ಗಮನಾರ್ಹ.
ಮನರಂಜನೆಯ ಕ್ಷೇತ್ರದಲ್ಲಿ ಇಂದು ಚಲನಚಿತ್ರಗಳ ಪಾತ್ರ ಹಿರಿದು. ಚಿತ್ರಮಂದಿರದಲ್ಲಿ ನೋಡುವ ಆಪ್ತ ಎನಿಸುವ ಚಿತ್ರದ ಕಥೆಯು, ಪ್ರೇಕ್ಷಕರನ್ನು ಆ ಒಂದೆರಡು ಗಂಟೆಗಳ ಕಾಲ ಬೇರೊಂದೇ ಲೋಕಕ್ಕೆ ಕರೆದೊಯ್ಯುತ್ತವೆ; ಚಿತ್ರದ ಕಥೆಯಲ್ಲಿ ಮುಳುಗಿದ ಪ್ರೇಕ್ಷಕನು, ಆ ಅವಧಿಯಲ್ಲಿ ಒಂದು ಅನನ್ಯ ಅನುಭವವನ್ನು, ವಿಶಿಷ್ಟ ಮನರಂಜನೆಯನ್ನು ಪಡೆಯಲು ಇಷ್ಟಪಡುತ್ತಾರೆ.
ಸದಾಕಾಲ ಹೊಸ ಹೊಸ ಕಥೆಯನ್ನು, ಹೊಸ ಹೊಸ ಅನುಭವವನ್ನು ಚಲನಚಿತ್ರದಲ್ಲಿ ನಿರೀಕ್ಷಿಸುವುದು ಪ್ರೇಕ್ಷಕನ ಹವ್ಯಾಸ. ಹೆಚ್ಚು ಜನರನ್ನು ಥಿಯೇಟರ್ಗೆ ಸೆಳೆಯುವ ಚಲನಚಿತ್ರಗಳು ಯಶಗಳಿಸಿದವು ಎಂಬುದು ಸಾಮಾನ್ಯವಾದ ಮಾನದಂಡ. ಇಂದು ಚಲನಚಿತ್ರ ನಿರ್ಮಾಣ ಎಂದರೆ, ದೊಡ್ಡ ಬಜೆಟ್, ಹೆಸರಾಂತ ನಟರು, ಅದ್ದೂರಿ ಪ್ರಚಾರ ಮತ್ತು ಸಾಹಸಮಯ ದೃಶ್ಯ ಅತಿ ಅಗತ್ಯ ಎಂಬ ಮಾತಿದೆ.
ಹಲವು ಚಲನಚಿತ್ರಗಳೂ ಅತಿ ಪ್ರಚಾರದಿಂದಲೇ ಜನರ ನಾಲಗೆಯಲ್ಲಿ ಕುಣಿದಾಡುತ್ತಿದ್ದವು; ಆದರೆ, ಕಡಿಮೆ ಪ್ರಚಾರದಲ್ಲಿ, ಜನರ ಮನಗೆದ್ದ ಚಿತ್ರ ಎಂದರೆ, ‘ಪ್ರೇಮದ ಊರಲಿ’. ಒಂದು ಸರಳ ಗ್ರಾಮೀಣ ಕೌಟುಂಬಿಕ ಕಥೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರ ಗಳಿಗೆ ಕರೆತರಬಲ್ಲದು ಎಂಬುದನ್ನು ಈ ಚಿತ್ರವು ತೋರಿಸಿಕೊಟ್ಟಿದೆ.
ಇದನ್ನೂ ಓದಿ: Premada Oorali movie: ಗಂಟೆಗೆ 15 ಸಾವಿರ ಟಿಕೆಟ್ ಮಾರಾಟ; ‘ಪ್ರೇಮದ ಊರಲಿ’ ಸಿನಿಮಾ ಭರ್ಜರಿ ಗಳಿಕೆ
ಮನೋಜ್ ಕುಮಾರ್ ನಿರ್ದೇಶನದ ಈ ಚಿತ್ರ 2026ರ ಸೆಪ್ಟೆಂಬರ್ 25ರಂದು ಬಿಡುಗಡೆಯಾಯಿತು. ರಂಗಾಯಣ ರಘು, ಶ್ರೀರಾಮ್, ರಮಿಕಾ ಶಿವು ಮತ್ತು ತಪಸ್ವಿನಿ ಪೂಣಚ್ಚ ಈ ಚಿತ್ರದ ಪ್ರಮುಖ ನಟರು. ವಿಶೇಷವೆಂದರೆ, ಚಲನಚಿತ್ರ ಬಿಡುಗಡೆಗೊಂಡ ಮೊದಲ ವಾರ ಇದರ ಕಲೆಕ್ಷನ್ ಬಹಳ ಕಡಿಮೆ. ಆದರೆ, ಚಿತ್ರದ ಕಥೆಯು ಜನರ ಮನಗೆದ್ದಿತು, ಬಾಯಿಮಾತಿನ ಪ್ರಚಾರವೇ ನಂತರದ ವಾರಗಳಲ್ಲಿ ಚಿತ್ರದ ಯಶಸ್ಸಿಗೆ ದಾರಿ ಮಾಡಿ ಕೊಟ್ಟಿತು.
ಪ್ರಚಾರಕ್ಕಾಗಿ ದೊಡ್ಡ ಮೊತ್ತದ ಹಣವನ್ನು ವ್ಯಯಿಸುವ ಕೆಲವು ಚಿತ್ರಗಳಿಗೆ ಹೋಲಿಸಿದರೆ, ಪ್ರೇಮದ ಊರಲಿ ಚಿತ್ರದ ಪ್ರಚಾರವು ಸರಳವಾಗಿತ್ತು. ಆದರೂ, ಜನರ ಮಾತಿನಿಂದಲೇ ಪ್ರಚಾರ ದೊರಕಿತು, ಚಿತ್ರ ಗೆದ್ದಿತು! ಇದು ವಿಶೇಷ ಎನಿಸಿದೆ. ಒಂದು ಚಲನಚಿತ್ರವು ಯಶಸ್ಸು ಗಳಿಸಿದೆ ಎಂದಾಗ, ಮೊದಲು ಲೆಕ್ಕಾಚಾರಕ್ಕೆ ಒದಗಿ ಬರುವುದು ಅದು ಗಳಿಸಿದ ಹಣ. ಆದರೆ, ‘ಪ್ರೇಮದ ಊರಲಿ’ ಚಿತ್ರದ ಯಶಸ್ಸನ್ನು ಕೇವಲ ಗಳಿಕೆಯ ಮೊತ್ತದಿಂದ ಅಳೆಯಲಾಗದು.
ಗ್ರಾಮೀಣ ಜನರ ಹಲವು ಆಯಾಮಗಳ ಸಮಸ್ಯೆಗಳನ್ನು ಈ ಚಲನಚಿತ್ರವು ತನ್ನ ಕಥೆಯಲ್ಲಿ ಒಳಗೊಂಡಿದೆ ಮತ್ತು ಅದನ್ನು ಕಥಾಚೌಕಟ್ಟಿನಲ್ಲಿ ಪ್ರೇಕ್ಷಕರಿಗೆ ಇಷ್ಟವಾಗುವಂತೆ, ಬಿಂಬಿಸಿದೆ. ಹಳ್ಳಿಯ ಜನರ ಜೀವನಕ್ರಮ, ಕೌಟುಂಬಿಕ ವ್ಯವಹಾಗಳು, ಅಲ್ಲಿರುವ ಪ್ರೀತಿ ವಿಶ್ವಾಸ ಮತ್ತು ಗ್ರಾಮೀಣ ಸಮಸ್ಯೆಗಳನ್ನು ಉತ್ತಮ ಕಥೆಯೊಂದಿಗೆ ಪ್ರಸ್ತುತಪಡಿಸಿದ್ದೇ ಈ ಚಿತ್ರದ ಹೆಗ್ಗಳಿಗೆ. ಅಚ್ಚರಿಯ ಹೊಳೆ ಮೊದಲ ದಿನ ಈ ಚಿತ್ರದ ಗಳಿಕೆ ಕಡಿಮೆ ಎಂದೇ ಹೇಳಬಹುದು; ಮೊದಲ ವಾರವೂ ಅಷ್ಟೇ. ಆದರೆ, ಚಿತ್ರವನ್ನು ನೋಡಿದವರು ತಮ್ಮ ಸ್ನೇಹಿತರು, ಬಂಧುಗಳು ಮತ್ತು ಪರಿಚಯಸ್ಥರಿಗೆ ಇದರ ವಿಶೇಷತೆಯನ್ನು ಹೇಳತೊಡಗಿದರು. ಬಾಯಿಮಾತಿನ ಪ್ರಚಾರವು ಪ್ರವಾಹದಂತೆ ರಾಜ್ಯದಾದ್ಯಂತ ಹರಿಯಿತು! ಎರಡು ವಾರ ಕಳೆಯುವಷ್ಟರಲ್ಲಿ, ಸಾವಿರಕ್ಕೂ ಹೆಚ್ಚು ಕಡೆ ಚಿತ್ರ ಪ್ರದರ್ಶನಗೊಳ್ಳತೊಡಗಿತು. ಇಂತಹ ಸರಳ ಕಥೆಯು ಇಷ್ಟೊಂದು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸುತ್ತದೆ ಎಂದು ಸಿನಿಮಾ ಪಂಡಿತರು ಊಹಿಸಿರಲಿಲ್ಲ; ಮಧ್ಯಮ ಗಾತ್ರದ ಯಶಸ್ಸನ್ನು ನಿರೀಕ್ಷಿಸಿದ್ದ ಚಲನಚಿತ್ರ ತಂಡಕ್ಕೆ, ‘ಪ್ರೇಮದ ಊರಲಿ’ ತಂದು ಹೆಸರು, ಯಶಸ್ಸು ಅಚ್ಚರಿಯ ಹೊಳೆಯನ್ನೇ ಹರಿಸಿದೆ ಎನ್ನಬಹುದು.
ಹಳ್ಳಿಯಲ್ಲಿದೆ ಬದುಕಿನ ಬೇರು ಈ ಚಿತ್ರದಲ್ಲಿ ಪ್ರಮುಖವಾಗಿ ಗ್ರಾಮೀಣ ಬದುಕಿನ ಕಥೆಯಿದೆ; ಇದು ಸಹಜವಾಗಿ ಹಳ್ಳಿಯಲ್ಲಿರುವ ಜನರನ್ನು, ಪಟ್ಟಣಿಗರನ್ನು ಸೆಳೆದಿದೆ. ಜತೆಗೆ, ನಗರದ ಪ್ರೇಕ್ಷಕರೂ ಇದನ್ನು ಮೆಚ್ಚಿದರು; ಅದಕ್ಕೆ ಮುಖ್ಯ ಕಾರಣವೆಂದರೆ, ನಮ್ಮ ರಾಜ್ಯದ ನಗರದ ಜನತೆಯಲ್ಲಿ ಬಹುಪಾಲು ಜನರ ಬೇರು, ಹಳ್ಳಿಯಲ್ಲಿದೆ! ಗ್ರಾಮೀಣ ಪ್ರದೇಶದ ಗಾಢ ನಂಟು ಹೊಂದಿರುವ ಲಕ್ಷಾಂತರ ಮಂದಿ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರಿಗೂ ಈ ಚಿತ್ರ ಇಷ್ಟವಾಯಿತು; ತಮ್ಮ ಬೇರುಗಳ ಕಥನವನ್ನು ಅವರು ಈ ಚಿತ್ರದಲ್ಲಿ ಕಂಡರು!
ನಾಗಣ್ಣ (ರಂಗಾಯಣ ರಘು) ಮತ್ತು ಆತನ ಮಗ ಸಂತು (ಶ್ರೀರಾಮ್) ಅವರ ಬದುಕಿನ ಕಥನವೇ ‘ಪ್ರೇಮದ ಊರಲಿ’ ಎಂದು ಸ್ಥೂಲವಾಗಿ ಹೇಳಬಹುದು. ಪತ್ನಿಯನ್ನು ಕಳೆದುಕೊಂಡ ನಾಗಣ್ಣ ಮಗನನ್ನು ಪ್ರೀತಿಯಿಂದ ಬೆಳೆಸಿರುತ್ತಾನೆ. ಕೃಷಿಯೇ ಜೀವನಾಧಾರ. ಉನ್ನತ ಶಿಕ್ಷಣ ಇಲ್ಲದ ಮಗನಿಗೆ ಸುಶಿಕ್ಷಿತ ಹುಡುಗಿಯನ್ನು ತರಬೇಕು ಎಂಬುದು ತಂದೆಯ ಆಸೆ. ಆದರೆ, ಇಂದು ಕರ್ನಾಟಕದ ಗ್ರಾಮೀಣ ಪ್ರದೇಶದ ಚಿತ್ರಣ ಭಿನ್ನವಾಗಿದೆ; ಮತ್ತು, ಮದುವೆಯ ದೃಷ್ಟಿಯಲ್ಲಿ ನೋಡುವುದಾದರೆ, ಕೃಷಿಯನ್ನೇ ನಂಬಿಕೊಂಡ ಯುವಕರ ಬದುಕು ಒಂದು ರೀತಿಯ ಸಂಕಷ್ಟದಲ್ಲಿದೆ. ಏಕೆಂದರೆ, ಹುಡುಗಿ ಸಿಕ್ಕುವುದಿಲ್ಲ! ಕೃಷಿಯನ್ನು ಮಾಡುತ್ತಾ ಹಳ್ಳಿಯಲ್ಲೇ ಕಳೆಯುವ ಯುವಕರು ಎಂದರೆ, ಇಂದಿನ ಹುಡುಗಿಯರಿಗೆ ತುಸು ಅವಗಣನೆ ಎಂದೇ ಸಾಮಾನ್ಯವಾಗಿ ಹೇಳಬಹುದು.
ಹುಡುಗಿಯರು ಮತ್ತು ಅವರ ಪೋಷಕರು, ನಗರ ಜೀವನವನ್ನು ಇಷ್ಟಪಡುತ್ತಾರೆ. ಆದ್ದರಿಂದ, ಕೃಷಿಯನ್ನೇ ನಂಬಿಕೊಂಡಿರುವ ಯುವಕನಿಗೆ ಹೆಣ್ಣು ಕೊಡುವುದಕ್ಕೆ ಅನೇಕರು ಹಿಂದೇಟು ಹಾಕುವುದು ಇಂದು ತೀರಾ ಸಾಮಾನ್ಯ. ಈ ಸಮಸ್ಯೆಯನ್ನು ಚಿತ್ರದಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಮಗನಿಗೆ ಹುಡುಗಿ ಸಿಗುವುದಿಲ್ಲ ಎಂಬ ತೊಳಲಾಟ ತಂದೆಯದಾದರೆ, ತಾನು ಹಳ್ಳಿಯಲ್ಲಿದ್ದರೆ, ತನಗೆ ಮದುವೆಯೇ ಆಗುವುದೇ ಇಲ್ಲವೇ ಎಂಬ ಭಾವನಾತ್ಮಕ ಸಂಕಟ, ಮಗನದ್ದು!
ವಾಸ್ತವವೆಂದರೆ, ಈ ರೀತಿ ಗ್ರಾಮೀಣ ಪ್ರದೇಶದಲ್ಲಿ ಇಂದು ಸಾಕಷ್ಟು ಯುವಕರು, ಮದುವೆಗೆ ಸಂಗಾತಿ ದೊರಕದೇ, ತಮ್ಮ ಪಾಡಿಗೆ ತಾವು ಒಂಟಿಯಾಗಿ ಕೃಷಿ ಮಾಡಿಕೊಂಡಿದ್ದಾರೆ. ಈ ವಾಸ್ತವದ ಎಳೆಯನ್ನು ಚಿತ್ರ ನಿರ್ದೇಶಕರು ಕಥೆಯಲ್ಲಿ ಸೂಕ್ಷ್ಮವಾಗಿ, ಮನಸ್ಸಿಗೆ ತಟ್ಟುವಂತೆ ತಂದಿರುವುದು ವಿಶೇಷ. ವಿದೇಶದಿಂದ ಬಂದ ಹುಡುಗಿ ಕೊನೆಗೂ, ‘ಪ್ರೇಮದ ಊರಲಿ’ ಕಥೆ ಯಲ್ಲಿ,ಯುವತಿಯೊಬ್ಬಳು ಪ್ರವೇಶವಾಗುವುದ ರೊಂದಿಗೆ, ಎಲ್ಲರ ಮನದಲ್ಲಿ ಸಂತಸವನ್ನು ತರುತ್ತಾಳೆ; ಕಥೆಯನ್ನು ನೋಡುತ್ತಿರುವ ಪ್ರೇಕ್ಷಕ ರಿಗೂ ಅದೊಂದು ಸಮಾಧಾನವನ್ನು ತಂದಿರಲೇ ಬೇಕು.
ವಸಂತಳ (ರಮಿಕಾ ಶಿವು) ಆಗಮನವು, ಚಲನಚಿತ್ರಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ಸಂತುವಿ ನೊಂದಿಗೆ ಆಪ್ತವಾಗಿ ವ್ಯವಹರಿಸುವ ವಸಂತಳು, ಚಿತ್ರದ ಕಥೆಗೆ ಒಂದು ಲವಲವಿಕೆಯ ಚೌಕಟ್ಟನ್ನು ಒದಗಿಸುತ್ತಾಳೆ. ಇದರ ನಡುವೆ ವಿದೇಶ ದಿಂದ ವಾಪಸಾಗುವ ಇನ್ನೊಬ್ಬ ಯುವತಿಯು (ತಪಸ್ವಿನಿ ಪೂಣಚ್ಚ), ಕಥೆಗೆ ಒಂದು ತಿರುವನ್ನು ನೀಡುತ್ತಾಳೆ. ಆಕೆಯ ಆಗಮನದಿಂದ ಕಥಾ ನಾಯಕನ ಬದುಕು ಹೊಸ ದಾರಿಯನ್ನು ಹಿಡಿಯುತ್ತದೆ. ಇಲ್ಲೊಂದು ತ್ರಿಕೋನ ಪ್ರೇಮವಿದೆ; ಇಂತಹ ಕಥನಗಳಲ್ಲಿ ಭಾವ ತೀವ್ರತೆ ಸಾಮಾನ್ಯ. ಆದರೆ, ಇದು ನಡೆಯುತ್ತಿರುವುದು ಗ್ರಾಮೀಣ ಹಿನ್ನೆಲೆಯಲ್ಲಿ; ಅದರಲ್ಲೂ, ಕೃಷಿ ಮಾಡಿಕೊಂಡಿರುವ ಯುವಕನ ಸುತ್ತ ನಡೆಯುವ ಕಥೆ. ಸಹಜವಾಗಿ ಗ್ರಾಮೀಣ ಸಮಸ್ಯೆಗಳು, ಸನ್ನಿವೇಶಗಳು ಇಲ್ಲಿ ವ್ಯಕ್ತವಾಗಿವೆ.
ಹಳ್ಳಿಯ ವಾತಾವರಣದಲ್ಲಿ ನಡೆಯುವ ಸಣ್ಣ ಮಟ್ಟದ ಹಾಸ್ಯ, ಮಾತುಕತೆ ಎಲ್ಲವೂ ಭಾರತದ ಹಳ್ಳಿ ಜೀವನಕ್ಕೆ ಹಿಡಿದ ಕನ್ನಡಿಯಂತಿವೆ. ನಮ್ಮ ದೇಶದ ಕೃಷಿ ಇಂದು ಸಂಕ್ರಮಣ ಸ್ಥಿತಿಯಲ್ಲಿದೆ. ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬು ಎಂಬುದು ಸಾರ್ವತ್ರಿಕ ಹೇಳಿದೆ; ಆದರೆ, ಕೃಷಿಯನ್ನೇ ನಂಬಿಕೊಂಡಿರುವ ಯುವಕ ಮದುವೆಯಾಗಲು ಹುಡುಗಿ ದೊರಕದಂತಹ ವಿಪರ್ಯಾಸ ಇಲ್ಲಿದೆ! ಈ ಚಿತ್ರದಲ್ಲಿನ ಕಥಾನಾಯಕನು, ಹೆಮ್ಮೆಯ ಕೃಷಿಕ. ಅವನಿಗೆ ನಗರ ಜೀವನ ಇಷ್ಟವಿಲ್ಲ.
ಇತ್ತ, ಹಳ್ಳಿಯ ಯುವತಿಯರಿಗೆ ನಗರ ಎಂದರೆ ಇಷ್ಟ; ಪೇಟೆಯಲ್ಲಿ ಬದುಕೋಣ, ಹಳ್ಳಿಯ ಕಷ್ಟದ ಜೀವನ ಬೇಡ ಎಂಬ ಮನೋಗತ ಅವರದು. ಇಂತಹ ಒಂದು ತಿಕ್ಕಾಟವನ್ನು ಕಥೆಯಲ್ಲಿ ಹೊಂದಿರುವ ಈ ಚಲನಚಿತ್ರವು, ನಮ್ಮ ದೇಶದ ವಾಸ್ತವವನ್ನು ತೆರೆದಿಡುವುದು ಸಹ ಇಲ್ಲಿ ಗಮನ ಸೆಳೆಯುತ್ತದೆ. ಅಂದರೆ, ಇಲ್ಲಿ ಹಳ್ಳಿಗಳೂ ಸೊರಗಿವೆ, ಹಳ್ಳಿಗಳಲ್ಲಿ ಉತ್ತಮ ಕೆಲಸ ದೊರಕುವುದು ಕಷ್ಟ, ಕೃಷಿ ಕೆಲಸ ಹೆಚ್ಚಿನ ದೈಹಿಕ ಶ್ರಮ ಬೇಡುತ್ತದೆ, ನಗರಗಳಲ್ಲಿನ ತುಸು ಆರಾಮದಾಯಕ ಎನ್ನಬಹುದಾದ ಬದುಕನ್ನು ಹುಡುಗಿಯರು ಇಷ್ಟಪಡುತ್ತಾರೆ.
ಆದ್ದರಿಂದಲೇ, ಕೃಷಿಯನ್ನೇ ನಂಬಿಕೊಂಡಿರುವ ಯುವಕರಿಗೆ ಮದುವೆಗೆ ಹೆಣ್ಣು ದೊರಕದಂತಹ ಮನಸ್ಥಿತಿ ಸಾಮಾನ್ಯ ಎನಿಸಿದೆ. ಈ ಸಮಸ್ಯೆಯನ್ನು ಬಳಸಿಕೊಂಡಿದ್ದರಿಂದಲೇ, ಈ ಚಿತ್ರ ಯಶಸ್ಸು ಗಳಿಸಿದೆ ಎನ್ನಬಹುದು. ‘ಪ್ರೇಮದ ಊರಲಿ’ ಚಲನಚಿತ್ರದ ಅನಿರೀಕ್ಷಿತ ಯಶಸ್ಸು, ಇಂಥಹದ್ದೇ ಇನ್ನಷ್ಟು ಚಲನಚಿತ್ರಗಳಿಗೆ ಸೂರ್ತಿ ನೀಡಬಹುದು. ಅದೇನೇ ಇದ್ದರೂ, ಕಡಿಮೆ ಬಜೆಟ್ನ ಒಂದು ಚಲನಚಿತ್ರವು, ಹೆಚ್ಚು ಜನರ ಮನಗೆದ್ದಿರುವುದು ನಿಜಕ್ಕೂ ವಿಶೇಷ.