ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

HariPrasad Nadig Column: ನೈಸರ್ಗಿಕ ಕೃಷಿಯ ಸವಾಲುಗಳು !

ಕಡಿಮೆ ಪ್ರಮಾಣದ ಇಳುವರಿಯನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ತಲುಪಿಸುವ ಕಲೆ ಗೊತ್ತಿದ್ದರೆ, ಇದು ಉತ್ತಮ ಆದಾಯದ ಮೂಲವಾಗುತ್ತದೆ.ಇಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡುವ ಇಂದಿನ ಮಾರುಕಟ್ಟೆಯ ಚೌಕಟ್ಟೇ ಒಂದು ದೊಡ್ಡ ಚಕ್ರವ್ಯೂಹ. ಇಂದು ಭಾರತದಲ್ಲಿ ರೈತರ ಜಮೀನುಗಳು ಚಿಕ್ಕದಾಗುತ್ತಿದ್ದರೂ, ಕೃಷಿ ಮಾರುಕಟ್ಟೆ ಮಾತ್ರ ಇಂದಿಗೂ ‘ದೊಡ್ಡ ಪ್ರಮಾಣದ ಇಳುವರಿ’ಯನ್ನು (ವಾಲ್ಯೂಮ್) ನೆಚ್ಚಿಕೊಂಡೇ ನಡೆಯುತ್ತಿದೆ.

HariPrasad Nadig Column: ನೈಸರ್ಗಿಕ ಕೃಷಿಯ ಸವಾಲುಗಳು !

-

Profile
Ashok Nayak Jun 7, 2026 8:12 PM

ಹರಿಪ್ರಸಾದ್ ನಾಡಿಗ್

ನೈಸರ್ಗಿಕ ಕೃಷಿ ಎಂಬುದು ಈಚಿನ ಒಂದೆರಡು ದಶಕಗಳಲ್ಲಿ ಹೆಚ್ಚು ಚಲಾವಣೆಯಲ್ಲಿರುವ ಪದ; ನಾಲ್ಕಾರು ದಶಕಗಳ ಹಿಂದೆ, ನಮ್ಮ ಹಳ್ಳಿಗಾಡಿನ ರೈತರು ನಡೆಸುತ್ತಿದ್ದ ಸಮಸ್ತ ಕೃಷಿಯು ನೈಸರ್ಗಿಕ ಕೃಷಿಯೇ ಆಗಿತ್ತು! ಕ್ರಮೇಣ ವಿವಿಧ ರೀತಿಯ ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸತೊಡಗುವ ಮೂಲಕ ನೈಸರ್ಗಿಕ ಕೃಷಿಯು, ಅವಸಾನ ಹೊಂದುತ್ತಾ ಸಾಗಿತು. ಆದರೆ, ಇಂತಹ ಆಧುನಿಕ ವಿಧಾನದಿಂದ ಬೆಳೆದ ಕೃಷಿ ಉತ್ಪನ್ನಗಳು ಮನುಷ್ಯನಿಗೂ ಹಾನಿ, ಪರಿಸರಕ್ಕೂ ಹಾನಿ ಎಂಬ ಅರಿವು ಮೂಡಲು ಆರಂಭಿಸಿದ ನಂತರ, ಜನರು ನೈಸರ್ಗಿಕ ಕೃಷಿಯ ಕಡೆ ಮತ್ತೆ ಗಮನ ಹರಿಸತೊಡಗಿದರು. ಆದರೆ, ಇಂದಿನ ಸನ್ನಿವೇಶದಲ್ಲಿ ನೈಸರ್ಗಿಕ ಕೃಷಿ ದುಬಾರಿ, ಆ ವಿಧಾನವನ್ನು ಅನುಸರಿಸಿದರೆ, ತಕ್ಕಮಟ್ಟಿಗಿನ ಲಾಭ ದೊರಕವುದಿಲ್ಲ ಎಂಬ ಅಭಿಪ್ರಾಯವೂ ಅಲ್ಲಲ್ಲಿ ಬಲವಾ ಗಿದೆ. ಕಳೆದ ಕೆಲವು ವರ್ಷಗಳಿಂದ ನೈಸರ್ಗಿಕ ಕೃಷಿಯನ್ನು ನಡೆಸುತ್ತಾ, ವಿವಿಧ ತರಕಾರಿಗಳನ್ನು ಮತ್ತು ಬೆಳೆಯನ್ನು ಬೆಳೆದು, ಕೃಷಿ ಯಲ್ಲಿ ತಮ್ಮದೇ ರೀತಿಯಲ್ಲಿ ಪ್ರಯೋಗಗಳನ್ನು ನಡೆಸುತ್ತಿರುವ ಲೇಖಕರು, ತಮ್ಮ ಅನುಭವಗಳನ್ನು ಸಂಕ್ಷಿಪ್ತವಾಗಿ ಇಲ್ಲಿ ಹಂಚಿಕೊಂಡಿದ್ದಾರೆ.

ನಾನು ಬಯಲುಸೀಮೆಯ ಒಣ ಭೂಮಿಯಲ್ಲಿ ಸುಸ್ಥಿರ ಬೇಸಾಯ ಮಾಡುವ ಕುರಿತು ಹಿಂದೊಮ್ಮೆ ಲೇಖನ ಬರೆದಾಗ, ನನ್ನ ರೈತ ಮಿತ್ರರಿಂದ ತಕ್ಷಣವೇ ಪ್ರತಿಕ್ರಿಯೆಗಳು ಬಂದವು. ಅವರೆಲ್ಲರವಾದವು ಒಂದೇ : ಈ ರೀತಿಯ ಪದ್ಧತಿಯಿಂದ ತಕ್ಷಣಕ್ಕೆ ಲಾಭ ಗಳಿಸಿ ಜೀವನ ನಡೆಸುವುದು ಕಷ್ಟ. ಅವರ ಮಾತು ನೂರಕ್ಕೆ ನೂರು ನಿಜ. ತಕ್ಷಣದ ಆದಾಯದ ದೃಷ್ಟಿಯಿಂದ ನೋಡಿದರೆ ಇಂದಿನ ಮಾರುಕಟ್ಟೆಯ ವ್ಯವಸ್ಥೆ ನಮ್ಮ ಸುಸ್ಥಿರ, ಕಡಿಮೆ ವೆಚ್ಚದ ನೈಸರ್ಗಿಕ ಕೃಷಿ ಪದ್ಧತಿಗಳಿಗೆ ಪೂರಕ ವಾಗಿಲ್ಲ. ಆದರೆ ದೀರ್ಘಾವಧಿಯಲ್ಲಿ, ಕಡಿಮೆ ನಿರ್ವಹಣೆಯ ಮಿಶ್ರ ಬೆಳೆ ಪದ್ಧತಿಯು ಖಂಡಿತ ವಾಗಿಯೂ ಲಾಭ ತಂದುಕೊಡಬಲ್ಲದು.

ಕಡಿಮೆ ಪ್ರಮಾಣದ ಇಳುವರಿಯನ್ನು ಸರಿಯಾದ ರೀತಿಯಲ್ಲಿ ಮಾರುಕಟ್ಟೆಗೆ ತಲುಪಿಸುವ ಕಲೆ ಗೊತ್ತಿದ್ದರೆ, ಇದು ಉತ್ತಮ ಆದಾಯದ ಮೂಲವಾಗುತ್ತದೆ.ಇಲ್ಲಿ ಬೆಳೆದ ಬೆಳೆಯನ್ನು ಮಾರಾಟ ಮಾಡುವ ಇಂದಿನ ಮಾರುಕಟ್ಟೆಯ ಚೌಕಟ್ಟೇ ಒಂದು ದೊಡ್ಡ ಚಕ್ರವ್ಯೂಹ. ಇಂದು ಭಾರತದಲ್ಲಿ ರೈತರ ಜಮೀನುಗಳು ಚಿಕ್ಕದಾಗುತ್ತಿದ್ದರೂ, ಕೃಷಿ ಮಾರುಕಟ್ಟೆ ಮಾತ್ರ ಇಂದಿಗೂ ‘ದೊಡ್ಡ ಪ್ರಮಾಣದ ಇಳುವರಿ’ಯನ್ನು (ವಾಲ್ಯೂಮ್) ನೆಚ್ಚಿಕೊಂಡೇ ನಡೆಯುತ್ತಿದೆ. ನೀವು ಮಂಡಿಗೆ ಲಾರಿಗಟ್ಟಲೆ ಒಂದೇ ಸಮನಾದ ತರಕಾರಿಯನ್ನು ತರದಿದ್ದರೆ, ಅಲ್ಲಿನ ಸಗಟು ವ್ಯಾಪಾರಿಗಳು ನಿಮ್ಮ ಕಡೆ ತಿರುಗಿಯೂ ನೋಡುವುದಿಲ್ಲ.

ಕಡಿಮೆ ಪ್ರಮಾಣದ ಇಳುವರಿಯನ್ನು ಸಾಗಿಸುವುದು ದುಬಾರಿ, ಜೊತೆಗೆ ಅದು ದೊಡ್ಡ ವ್ಯಾಪಾರಿ ಗಳ ಗಮನವನ್ನೂ ಸೆಳೆಯುವುದಿಲ್ಲ. ಹಾಗಾದರೆ ಇದಕ್ಕೆ ಪರ್ಯಾಯವೇನು? ಒಂದು ಹಾದಿ ಯೆಂದರೆ ‘ಗ್ರಾಹಕರಿಗೆ ನೇರ ಮಾರಾಟ’. ಆದರೆ ಕೃಷಿಯಲ್ಲಿ ನೇರ ಮಾರುಕಟ್ಟೆ ಮಾಡುವುದು ಅಂದುಕೊಂಡಷ್ಟು ಸುಲಭವಲ್ಲ, ಹಾಗಂತ ಅಸಾಧ್ಯವೂ ಅಲ್ಲ.

ಇದನ್ನೂ ಓದಿ: Agriculture Department Jobs: ಕೃಷಿ ಇಲಾಖೆಯ 890 ಎಒ, ಎಎಒ ಹುದ್ದೆಗಳಿಗೆ ಅರ್ಜಿ ಆಹ್ವಾನ; ನೇಮಕಾತಿ ಕುರಿತ ಸಂಪೂರ್ಣ ವಿವರ ಇಲ್ಲಿದೆ

ಸಣ್ಣ ಪ್ರಯೋಗ

ಕಳೆದ ವರ್ಷ ನಾನು ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯೋಗ ಮಾಡಿದೆ. ನಮ್ಮ ತೋಟದಿಂದ ಸುಮಾರು 130 ಕೆಜಿಯಷ್ಟು ನಾಟಿ ತಳಿಯ ನುಗ್ಗೆಕಾಯಿಯನ್ನು ಬೆಂಗಳೂರಿನ ಗ್ರಾಹಕರಿಗೆ ನೇರವಾಗಿ ತಲುಪಿಸುವ ಪ್ರಯತ್ನವದು. ಇಂದು ಮಾರುಕಟ್ಟೆಯಲ್ಲಿ ಸಿಗುವ ಹೈಬ್ರಿಡ್ ನುಗ್ಗೆ ಕಾಯಿಗಳು ನೋಡಲು ದಪ್ಪನಾಗಿ, ಗಾಢ ಹಸಿರಾಗಿ, ಏಕರೂಪವಾಗಿ ಇರುತ್ತವೆ. ಆದರೆ ನಮ್ಮ ತೋಟದ ನಾಟಿ ತಳಿ ಹಾಗಲ್ಲ; ಅದು ಸ್ವಲ್ಪ ಬಿಳಿಚಿಕೊಂಡಂತೆ, ಬಣ್ಣಗೆಟ್ಟಂತೆ ಕಾಣುತ್ತಿತ್ತು. ಅಲ್ಲದೆ ತೆಳುವು ಬೇರೆ! ಆದರೆ ಅದರ ಸುಗಂಧ ಮತ್ತು ಸ್ವಾದ ಅದ್ಭುತವಾಗಿತ್ತು. ಅದಕ್ಕೆ ಕುಕ್ಕರ್‌ನ ಅಗತ್ಯವೇ ಇರಲಿಲ್ಲ, ಹಾಗೆಯೇ ಬೇಯಿಸಬಹುದಿತ್ತು. ಆದರೆ ಇದನ್ನು ಮಾರುಕಟ್ಟೆ ಮಾಡುವುದು ಸುಲಭದ ಮಾತಾಗಿರಲಿಲ್ಲ.

ಬೆಂಗಳೂರಿನಂತಹ ಬೃಹತ್ ನಗರದಲ್ಲಿ ಮನೆ ಮನೆಗೆ ಡೆಲಿವರಿ ನಿರ್ವಹಿಸುವುದು ಒಂದು ದೊಡ್ಡ ಹರಸಾಹಸ. ನಾವು ಆರ್ಡರ್ ಬಂದ ಜಾಗಗಳ ‘ಹೀಟ್ʼಮ್ಯಾಪ್’ ಸಿದ್ಧಪಡಿಸಿ, ಹೆಚ್ಚು ಆರ್ಡರ್ ಇದ್ದ ಪ್ರದೇಶಗಳನ್ನು ಮೊದಲು ಕೇಂದ್ರೀಕರಿಸಲು ಯತ್ನಿಸಿದೆವು. ಇದರಿಂದಾಗಿಕಡಿಮೆ ಆರ್ಡರ್ ಇದ್ದ ದೂರದ ಪ್ರದೇಶಗಳ ಗ್ರಾಹಕರಿಗೆ ತಲುಪಿಸುವುದು ತಡವಾಯಿತು.

ಇನ್ನೊಂದು ಕಡೆ ಗ್ರಾಹಕರ ಮನಸ್ಥಿತಿ. ನಗರದಲ್ಲಿ ತರಕಾರಿ ಬೆಲೆಯ ಬಗ್ಗೆ ಚರ್ಚೆಗಳು, ಚೌಕಾಸಿ ಗಳು ಹೆಚ್ಚು. ಕೈತುಂಬಾ ಸಂಪಾದಿಸುವವರೂ ತರಕಾರಿ ಕೊಳ್ಳುವಾಗ ಚೌಕಾಸಿ ಮಾಡುತ್ತಾರೆ. ಸಾರಿಗೆ ವೆಚ್ಚವೇ ಹೆಚ್ಚಾಗಿದ್ದರಿಂದ, ಇದರಲ್ಲಿ ದೊಡ್ಡ ಆರ್ಥಿಕ ಲಾಭವೇನೂ ಇರಲಿಲ್ಲ.

ಕೇವಲ ಇದರ ಅನುಭವಕ್ಕಾಗಿ, ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದು ನೋಡಲು ನಾನು ಈ ಪ್ರಯೋಗ ಮುಂದುವರಿಸಿದೆ. ಪೆಟ್ರೋಲ್ ವೆಚ್ಚ ಉಳಿಸಲು ಎಲೆಕ್ಟ್ರಿಕ್ ವಾಹನ ಬಳಸಿದೆ, ತೋಟದ ಕೆಲಸಗಾರರೇ ಕೆಲವು ವಾರಗಳ ಕಾಲ ಡೆಲಿವರಿ ಜವಾಬ್ದಾರಿ ಹೊತ್ತಿದ್ದರು. ಗ್ರಾಹಕರಿಂದ ಬಂದ ಪ್ರತಿಕ್ರಿಯೆಗಳು ಮಿಶ್ರವಾಗಿದ್ದವು.

ಕೆಲವರು ಆರ್ಡರ್ ತಗೊಂಡು ಮೂರ್ನಾಲ್ಕು ವಾರ ಆದ್ಮೇಲೆ ತರ್ತಿದ್ದೀರಾ ಎಂದು ಕೋಪಿಸಿ ಕೊಂಡರೆ, ಇನ್ನು ಕೆಲವರು ಆರ್ಡರ್ ಮಾಡಿದವರು ಮನೆ ಬಾಗಿಲಿಗೆ ಹೋದಾಗ ‘ಬೇಡ’ ಎಂದರು!

natural krishi

ಹೊಸ ಸಂಶೋಧನೆ!

ಆದರೆ ಈ ನಡುವೆ ನಡೆದ ಒಂದು ಘಟನೆ ಆಧುನಿಕ ಕೃಷಿ ವಿಜ್ಞಾನ ಮತ್ತು ಸಾಂಪ್ರದಾಯಿಕ ವಾಸ್ತವದ ನಡುವಿನ ಅಂತರವನ್ನು ಬಿಚ್ಚಿಟ್ಟಿತು. ಬೆಂಗಳೂರಿನ ಗಣ್ಯ ಲೇಔಟ್ʼ ಒಂದರ ಸಾವಯವ ಗ್ರಾಹಕರ ಗುಂಪಿನಿಂದ ದೊಡ್ಡ ಆರ್ಡರ್ ಬಂದಿತ್ತು. ಡೆಲಿವರಿ ಮಾಡಿದೆವು. ಆದರೆ ಕೆಲವು ದಿನಗಳ ನಂತರ ಆ ಗುಂಪಿನ ಸಂಘಟಕಿ ಗಾಬರಿಯಿಂದ ಫೋನ್ ಮಾಡಿ, ‘ಒಬ್ಬ ಗ್ರಾಹಕರು ನುಗ್ಗೆಕಾಯಿ ಬಣ್ಣಗೆಟ್ಟಿದೆ, ಬಿಳಿಚಿಕೊಂಡಿದೆ ಎಂದು ಸಂಪೂರ್ಣ ಹಣ ವಾಪಸ್ ಕೇಳುತ್ತಿದ್ದಾರೆ’ ಎಂದರು. ಆಶ್ಚರ್ಯವೆಂದರೆ, ಆ ಗ್ರಾಹಕರು ಹಾರ್ಟಿಕಲ್ಚರ್‌ನಲ್ಲಿ (ತೋಟಗಾರಿಕೆ) ಪಿಎಚ್‌ಡಿ ಮಾಡಿದ ಕೃಷಿ ಸಂಶೋಧಕರಾಗಿದ್ದರು!

ಕೃಷಿ ಸಂಶೋಧನೆಯಲ್ಲಿರುವ ಒಬ್ಬ ವ್ಯಕ್ತಿಗೆ ನಾಟಿ ತಳಿಯ ನೈಸರ್ಗಿಕ ಗುಣಲಕ್ಷಣಗಳ ಬಗ್ಗೆ ಗೊತ್ತಿಲ್ಲದೆ, ಹೈಬ್ರಿಡ್ ತರಕಾರಿಯ ಮಾನದಂಡಗಳನ್ನಿಟ್ಟುಕೊಂಡು ಅದನ್ನು ಕಸದ ಬುಟ್ಟಿಗೆ ಎಸೆದಿದ್ದು ನನಗೆ ಆಘಾತ ತಂದಿತು. ನಾನು ಆ ಸಂಘಟಕಿಗೆ ‘ಅವರು ಇದನ್ನು ಬೇಯಿಸಿ, ಅಡುಗೆ ಮಾಡಿ ನೋಡಿದ್ದಾರಾ?’ ಎಂದು ಕೇಳಿದೆ. ಇಲ್ಲ ಎಂದರು.

ಕೊನೆಗೆ ಆಕೆಗೇ ಒಮ್ಮೆ ಅಡುಗೆ ಮಾಡಿ ಅದರ ರುಚಿ ನೋಡಲು ಸೂಚಿಸಿದೆ. ಆಕೆ ಅದನ್ನು ಬೇಯಿಸಿ ತಿಂದಾಗ ಅದರ ಸುವಾಸನೆ ಮತ್ತು ರುಚಿಗೆ ಮಾರು ಹೋದರು. ತಪ್ಪು ತಿಳುವಳಿಕೆ ನಿವಾರಣೆ ಯಾಯಿತು ನಿಜ, ಆದರೆ ಇಂದಿನ ನಗರದ ಗ್ರಾಹಕರು ತರಕಾರಿಯನ್ನು ನಾಲಿಗೆಯಿಂದಲ್ಲ, ಕಣ್ಣಿನಿಂದ ಅಳೆಯುತ್ತಿದ್ದಾರೆ ಎಂಬ ಕಟು ಸತ್ಯ ಮನವರಿಕೆಯಾಯಿತು.

ಇಂದು ನಗರಗಳಲ್ಲಿ ‘ಸಾವಯವ’ ಹೆಸರಿನಲ್ಲಿ ಸಿಗುವ ಬಹುತೇಕ ತರಕಾರಿಗಳು ಕೇವಲ ಒಂದು ಭ್ರಮೆ. ನಗರದ ಸುತ್ತಮುತ್ತಲಿನ ಹಸಿರುಮನೆಗಳಲ್ಲಿ ಅಪಾರ ಪ್ರಮಾಣದ ರಾಸಾಯನಿಕಗಳನ್ನು ಸುರಿದು, ದಷ್ಟಪುಷ್ಟವಾಗಿ ಬೆಳೆಸಿದ ತರಕಾರಿಗಳನ್ನು ಮಧ್ಯವರ್ತಿಗಳ ನೆಟ್‌ವರ್ಕ್ ಮೂಲಕ ಪ್ರೀಮಿಯಂ ಬೆಲೆಗೆ ಮಾರಲಾಗುತ್ತಿದೆ.

ಪರಮಾಕಲ್ಚರ್ ಅಥವಾ ನೈಸರ್ಗಿಕ ಪದ್ಧತಿಯಲ್ಲಿ ಬೆಳೆದ ನಿಜವಾದ ತರಕಾರಿಗಳು ಸೂಪರ್ ಮಾರ್ಕೆಟ್‌ನ ಕ್ಲೋನ್‌ಗಳಂತೆ ಏಕರೂಪವಾಗಿ ಇರುವುದಿಲ್ಲ. ಅವುಗಳ ಗಾತ್ರ, ಬಣ್ಣ ಬೇರೆಯಾಗಿರ ಬಹುದು, ಕೆಲವೊಮ್ಮೆ ಹುಳಗಳೂ ಇರಬಹುದು. ಆದರೆ ತೋಟದಲ್ಲಿ ಜೀವ ವೈವಿಧ್ಯತೆ ಹೆಚ್ಚಾದಂತೆ, ಪ್ರಕೃತಿಯೇ ಕೀಟಗಳನ್ನು ನಿಯಂತ್ರಣಕ್ಕೆ ತರುತ್ತದೆ.

ನಮ್ಮ ತೋಟದಲ್ಲಿ ಪರಿಸರ ವ್ಯವಸ್ಥೆ ಸಮತೋಲನಕ್ಕೆ ಬಂದಿರುವುದ ರಿಂದ, ಈ ವರ್ಷದ ಮಾವಿನ ಬೆಳೆಗೆ ಯಾವುದೇ ಕೀಟನಾಶಕ ಸಿಂಪಡಿಸದಿದ್ದರೂ ಒಂದು ಹುಳವೂ ಇರಲಿಲ್ಲ. ಹಕ್ಕಿಗಳು ಮತ್ತು ಮಿತ್ರ ಕೀಟಗಳೇ ಆ ಕೆಲಸವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದವು.

ಮಿಶ್ರ ಬೆಳೆ: ರಿಸ್ಕ್ ಕಡಿಮೆ

ಸಂಪೂರ್ಣ ನೈಸರ್ಗಿಕ ಕೃಷಿಗೆ ಕಾಲಿಡಲು ರಿಸ್ಕ್ ಹೆಚ್ಚು ಎನಿಸಿದರೆ, ನನ್ನದೊಂದು ಸಲಹೆ: ಆರ್ಥಿಕ ಒತ್ತಡ ಅಥವಾ ಕುಟುಂಬದವರಿಂದ ಒತ್ತಡ ಹೆಚ್ಚಿರುವಾಗ ಇಡೀ ಭೂಮಿಯನ್ನು ಒಂದೇ ಬಾರಿಗೆ ನೈಸರ್ಗಿಕ ಕೃಷಿಗೆ ಬದಲಾಯಿಸಬೇಡಿ. ನಿಮ್ಮ ಜಮೀನಿನ ಒಂದು ಸಣ್ಣ ಭಾಗದಲ್ಲಿ ಸಾಂಪ್ರದಾ ಯಿಕ ಕೃಷಿ ಆರಂಭಿಸಿ, ಉಳಿದ ಭಾಗದಲ್ಲಿ ಸದ್ಯಕ್ಕೆ ಹಳೆ ಪದ್ಧತಿಯನ್ನೇ ಮುಂದುವರಿಸಿ. ಆ ಹಳೆಯ ಜಮೀನು ನಿಮ್ಮ ಆರ್ಥಿಕ ಸುರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ. ಈ ನಡುವೆ ಸಣ್ಣ ಜಾಗದಲ್ಲಿ ಮಾಡಿದರೂ, ನೀವು ನೈಸ ರ್ಗಿಕ ಕೃಷಿಯ ಸೂಕ್ಷ್ಮಗಳನ್ನು ಕಲಿಯಬಹುದು, ಮಣ್ಣನ್ನು ಹದಗೊಳಿಸ ಬಹುದು ಮತ್ತು ಸಣ್ಣ ಮಟ್ಟದ ಮಾರುಕಟ್ಟೆಯನ್ನು ಕಂಡುಕೊಳ್ಳಬಹುದು. ವರ್ಷದಿಂದ ವರ್ಷಕ್ಕೆ ನೈಸರ್ಗಿಕ ಕೃಷಿಯ ವ್ಯಾಪ್ತಿಯನ್ನು ವಿಸ್ತರಿಸಬಹುದು.

ಸಾಂಪ್ರದಾಯಿಕ ಕೃಷಿಯ ಅತಿ ದೊಡ್ಡ ಶಕ್ತಿಯೆಂದರೆ, ನಾವು ಮಣ್ಣಿಗೆ ಹಾಕುವ ಶ್ರಮ ಮತ್ತು ಸಮಯ ಮುಂದೆ ‘ಚಕ್ರಬಡ್ಡಿ’ಯಂತೆ ವಾಪಸ್ ಸಿಗುತ್ತದೆ. ಪ್ರತಿ ವರ್ಷ ನಾವು ಮಣ್ಣಿನ ಫಲವತ್ತತೆ ಹೆಚ್ಚಿಸಿದಾಗ, ಬೆಳೆ ಪರಿವರ್ತನೆ ಮಾಡಿದಾಗ, ತೋಟದ ಒಟ್ಟಾರೆ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ.

ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳು, ಎರೆಹುಳುಗಳು ಹೆಚ್ಚುತ್ತವೆ. ಕಳೆ ನಿರ್ವಹಣೆಯ ವೆಚ್ಚ ಪ್ರತಿ ವರ್ಷ ಶೇಕಡಾ 20 ರಿಂದ 30 ರಷ್ಟು ಕಡಿಮೆಯಾಗುತ್ತಾ ಬರುತ್ತದೆ (ನನ್ನ ತೋಟದಲ್ಲಿಯೇ, ಕಲೆ ಬೆಳೆಯುವಲ್ಲಿ ಅಶ್ವಗಂಧದ ಗಿಡಗಳು ಬೆಳೆಯುತ್ತಿವೆ!

ಅತ್ತಿಗೆ ಸೊಪ್ಪನ್ನು ಕೂಡ ಕೀಳಬಾರದ್ದೆಂದು ನನ್ನ ಕೆಲೆಸಗಾರರಿಗೆ ತಿಳಿಸಿರುವೆ.) ಅಲ್ಲದೆ, ದುಬಾರಿ ಕೀಟನಾಶಕಗಳ ವೆಚ್ಚವೂ ಇಲ್ಲವಾಗುತ್ತದೆ. ಕೀಟನಾಶಕಗಳ ಬದಲಿಗೆ ನಮ್ಮ ತೋಟದ ಬದುಗಳಲ್ಲಿ ಬೆಳೆಯುವ ಆಡುಸೋಗೆ, ನಾಗದಾಳಿ, ನೆಲಬೇವು ಹಾಗೂ ಬೇವಿನಂತಹ ಕಹಿ ಮತ್ತು ಸುಗಂಧಿತ ಔಷಧಿಯ ಸಸ್ಯಗಳ ಎಲೆಗಳನ್ನು ಬಳಸಿ ಕಷಾಯ ತಯಾರಿಸಿ ಸಿಂಪಡಿಸುತ್ತೇವೆ.

ಇದು ಕೋಸು, ಬ್ರೊಕೋಲಿಯಂತಹ ಸೂಕ್ಷ್ಮ ತರಕಾರಿಗಳ ಕೀಟಗಳನ್ನು ದೂರವಿಡುತ್ತದೆ. ಇನ್ನು ಮೆಣಸಿನಕಾಯಿ, ಬದನೆ, ಬೆಂಡೆಯಂತಹ ತರಕಾರಿಗಳ ಮಧ್ಯೆ ಅಲ್ಲಲ್ಲಿ ಹೂವಿನ ಗಿಡಗಳನ್ನು ನೆಟ್ಟರೆ ಕೀಟಗಳ ಕಾಟ ತಾನಾಗಿಯೇ ಕಡಿಮೆ ಯಾಗುತ್ತದೆ. ಇದನ್ನು ಇನ್-ಆರ್ಗ್ಯಾನಿಕ್ (ರಾಸಾಯ ನಿಕ) ಕೃಷಿಗೆ ಹೋಲಿಸಿ ನೋಡಿ; ಅಲ್ಲಿ ಪ್ರತಿ ಹಂಗಾಮಿನಲ್ಲೂ ರೈತಶೂನ್ಯದಿಂದ ಆರಂಭಿಸಬೇಕು.

ರಾಸಾಯನಿಕ ಗೊಬ್ಬರಗಳು ಮಣ್ಣಿನ ನೈಸರ್ಗಿಕ ಸತ್ವವನ್ನು ತೊಳೆದು ಹಾಕುವುದರಿಂದ, ಪ್ರತಿ ವರ್ಷವೂ ಇಳುವರಿಗಾಗಿ ಹೆಚ್ಚು ಹೆಚ್ಚು ಎನ್‌ಪಿಕೆ ಗೊಬ್ಬರಗಳನ್ನು ಸುರಿಯುತ್ತಲೇ ಇರಬೇಕಾ ಗುತ್ತದೆ. ಅದು ಮುಗಿಯದ ವಿಷವರ್ತುಲ.

ತಾಳೆ ಮತ್ತು ವಿವೇಕದ ಹಾದಿ

ಸಗಟು ಮಾರುಕಟ್ಟೆಯ ಈ ಜಾಲದಿಂದ ಹೊರಬರಬೇಕಾದರೆ, ನಮ್ಮ ಉತ್ಪನ್ನದ ಮೌಲ್ಯ ತಿಳಿಯುವ ಗ್ರಾಹಕರನ್ನು ಅಥವಾ ಮಾರುಕಟ್ಟೆಯನ್ನು ನಾವೇ ಕಂಡುಕೊಳ್ಳಬೇಕು. ನಾವು ತುಮಕೂರು, ವಿದ್ಯಾರಣ್ಯಪುರ ಮುಂತಾದೆಡೆ ಸ್ಥಳೀಯ ಸಂತೆಗಳಲ್ಲಿ ತರಕಾರಿ ಮಾರಲು ಪ್ರಯತ್ನಿಸಿದಾಗ, ಹೊಸ ಗ್ರಾಹಕರು ಸಿಕ್ಕಾಪಟ್ಟೆ ಚೌಕಾಸಿ ಮಾಡುತ್ತಿದ್ದರು. ಆದರೆ ಒಮ್ಮೆ ನಮ್ಮ ತರಕಾರಿಯನ್ನು ಮನೆಗೆ ಒಯ್ದು ರುಚಿ ನೋಡಿದ ಹಳೇ ಗ್ರಾಹಕರು ಮುಂದಿನ ಬಾರಿ ಬೆಲೆಯ ಬಗ್ಗೆ ಚರ್ಚೆಯನ್ನೇ ಮಾಡಲಿಲ್ಲ. ಅವರಿಗೆ ಅದರ ಗುಣಮಟ್ಟದ ಅರಿವಿತ್ತು. ಈ ಎಲ್ಲಾ ಸವಾಲುಗಳನ್ನು ದಾಟಬೇಕಾದರೆ ರೈತನಿಗೆ ಅಪಾರ ತಾಳ್ಮೆ, ದೀರ್ಘಾವಧಿಯ ತಂತ್ರಗಾರಿಕೆ ಮತ್ತು ಸಾಂಪ್ರದಾಯಿಕ ಜ್ಞಾನದ ಮೇಲೆ ನಂಬಿಕೆ ಇರಬೇಕು.

ದುರಾಶೆಗೆ ಬಿದ್ದು ತಕ್ಷಣದ ಲಾಭಕ್ಕಾಗಿ ರಾಸಾಯನಿಕ ಕೃಷಿಯತ್ತ ಮುಖ ಮಾಡಿದರೆ ಮತ್ತೆ ಮೊದಲಿನ ಸ್ಥಿತಿಗೇ ತಲುಪುತ್ತೇವೆ. ಕೊನೆಯಲ್ಲಿ, ಯಾವುದೇ ವಿಷವಿಲ್ಲದ ಶುದ್ಧ ತರಕಾರಿಯನ್ನು ತೋಟದಿಂದ ಕೊಯ್ದು ನಮ್ಮ ಕುಟುಂಬಕ್ಕೆ, ಸ್ನೇಹಿತರಿಗೆ ಮತ್ತು ನಮ್ಮ ಮಕ್ಕಳಿಗೆ ನೀಡುವಾಗ ಸಿಗುವ ತೃಪ್ತಿ ಇದೆಯಲ್ಲ, ಅದು ಜಗತ್ತಿನ ಯಾವುದೇ ಆರ್ಥಿಕ ಲಾಭಕ್ಕಿಂತ ಮಿಗಿಲಾದದ್ದು. ನಾನು ಈ ರೀತಿಯ ಕೃಷಿ ಆರಂಭಿಸಿದ್ದೇ ಅದಕ್ಕಾಗಿ. ಕೃಷಿಯಲ್ಲಿ ಸದಾ ಏರಿಳಿತಗಳಿರುತ್ತವೆ; ಆದರೆ ವೈವಿಧ್ಯಮಯ ಬೆಳೆಗಳನ್ನು ಬೆಳೆಯುತ್ತಾ, ಮಣ್ಣಿನ ಆರೋಗ್ಯ ಕಾಪಾಡಿಕೊಂಡರೆ ನಾವು ಕೇವಲ ಒಂದು ಹಂಗಾಮನ್ನು ಗೆಲ್ಲುವುದಿಲ್ಲ, ಮುಂದಿನ ಪೀಳಿಗೆಗೆ ಉಳಿಯುವ ಒಂದು ಸುಸ್ಥಿರ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ.

ಕೊತ್ತಂಬರಿಗೆ ಅದೆಂಥದ್ದೋ ದ್ರವ ಸಿಂಪರಣೆ!

ನಮ್ಮ ಕೃಷಿಭೂಮಿಯ ಸಮೀಪದ ಹಳ್ಳಿಯೊಂದರ ರೈತ ಕೊತ್ತಂಬರಿ ಬೆಳೆಗೆ ಏನೋ ದ್ರವವನ್ನು ಸಿಂಪಡಿಸುತ್ತಿದ್ದ. ಅದೇನು ಎಂದು ಕೇಳಿದಾಗ, ‘ಫರ್ಟಿಲೈಸರ್ʼ ಅಂಗಡಿಯವನು ಕೊಟ್ಟಿದ್ದು, ಇದನ್ನು ಹೊಡೆದರೆ ಬೆಳೆ ತಕ್ಷಣ ಮಾರಾಟಕ್ಕೆ ಸಿದ್ಧವಾಗುತ್ತದೆ’ ಎಂದ. ಸಂಜೆ ಅದನ್ನು ಸಿಂಪಡಿಸಿ ದರೆ, ಮರುದಿನ ಬೆಳಗ್ಗೆ ಕೊತ್ತಂಬರಿ ಸೊಪ್ಪು ನೈಸರ್ಗಿಕವಾಗಿ ಹೊಳೆಯುತ್ತಾ, ತಾಜಾ ಕಾಣುತ್ತಿತ್ತು. ಅದನ್ನು ಕೊಂಡ ಸಗಟು ವ್ಯಾಪಾರಿ ‘ಸಾವಯವ’ ಎಂದೇ ಮಾರುತ್ತಿದ್ದ. ಇಂತಹ ದೊಡ್ಡ ಪ್ರಮಾಣದ ಕೃತಕ ಸರಬರಾಜು ಜಾಲದ ಎದುರು, ಸಣ್ಣ ಮತ್ತು ಪ್ರಾಮಾಣಿಕ ರೈತರು ಸ್ಪರ್ಧಿಸಬೇಕಾಗಿದೆ.