ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Polenahally Ramesh Column: ಮಣ್ಣಿನ ಬೆಲೆಯ ಹೂದಾನಿ

ನನಗಿಷ್ಟವಾದ ಬೊಂಬೆಯನ್ನು ಕೈಗೆತ್ತಿಕೊಂಡು ಅಮ್ಮನ ಕಡೆ ನೋಡಿ ನಕ್ಕಿದ್ದೆ. ಅಮ್ಮ ‘ನಿನಗೆ ಇಷ್ಟವಾಯಿತಾ?’ ಎಂದಿದ್ದಳು. ನಾನು ಅವಳ ಕೈ ಹಿಡಿದು ಜಗ್ಗಿದ್ದೆ. ‘ಸರಿ ಇರು’ ಎಂದು ಹೇಳಿ ಅದರ ಬೆಲೆ ಕೇಳಿದಳು. ಅಂಗಡಿಯವನು 11 ರುಪಾಯಿ ಎಂದ. ಅಮ್ಮ ತನ್ನ ಪರ್ಸನ್ನು ತೆಗೆದು ಜಿಪ್ ತೆಗೆದು, ತಡಕಾಡಿ ಅದರಲ್ಲಿ ಕೇವಲ ಒಂಬತ್ತು ರೂಪಾಯಿ ಇರುವುದು ಕಂಡು, ‘ಕಡಿಮೆ ಇಲ್ಲವೇ?’ ಎಂದು ಮೆಲ್ಲನೆ ಕೇಳಿದ್ದಳು.

Polenahally Ramesh Column: ಮಣ್ಣಿನ ಬೆಲೆಯ ಹೂದಾನಿ

-

Profile
Ashok Nayak Apr 5, 2026 5:45 PM

ಪೋಲೇನಹಳ್ಳಿ ರಮೇಶ್

ಅಂದು ಆ ನನ್ನ ರಸ್ತೆ ಬದಿ ಅಂಗಡಿಯಲ್ಲಿ ಯಥಾ ಪ್ರಕಾರ ಮಣ್ಣಿನ ಬೊಂಬೆಗಳನ್ನ ಮಾರುತ್ತಿದ್ದೆ. ಆ ಹುಡುಗಿ ನಡೆದು ಬಂದಳು. ಮುಂದಿನ ಸಾಲಿನಲ್ಲಿ ಇಟ್ಟಿದ್ದ ಆ ಹೂದಾನಿ ಯನ್ನು ನೋಡುತ್ತಾ ನಿಂತಳು. ಅವಳ ಕಣ್ಣುಗಳಲ್ಲಿ ಏನೋ ಆನಂದ ಕಂಡಿತು. ಅದನ್ನು ತದೇಕಚಿತ್ತ ನೋಡಿ ಈ ಬದಿ ತಿರುಗಿ ಆ ಬದಿ ತಿರುಗಿ ನೋಡಿ, ಕೊನೆಗೆ ಮೆಲ್ಲನೆ ಕೈಗೆತ್ತಿಕೊಂಡು ಅದನ್ನು ಸವರುತ್ತ ಸಂತೋಷಿಸಿದಳು. ‘ಇದಕ್ಕೆ ಎಷ್ಟಾಗುತ್ತದೆ?’ ಎಂದಳು.

ನಾನು ಅವಳ ಕಣ್ಣಿನ ಹೊಳಪನ್ನು ಗಮನಿಸಿದ್ದವನಾಗಿ ಯೋಚಿಸಿ, ‘100 ರೂಪಾಯಿ ಕೊಡಿ ಸಾಕು’ ಎಂದೆ. ಇದೇ ಹೂದಾನಿ ಇತರೆ ಅಂಗಡಿಗಳಲ್ಲಿ 120-130 ರೂಪಾಯಿಗೆ ಮಾರುತ್ತಿದ್ದಾರೆ ಎಂಬ ವಿಷಯ ನನಗೂ ತಿಳಿದಿತ್ತು. ಆದರೆ ಈ ಹೂದಾನಿ ಅವಳಿಗೆ ಇಷ್ಟವಾಗಿದೆ ಎಂದು ಅರಿತು ನಾನು ಕಡಿಮೆ ಬೆಲೆ ಹೇಳಿದೆ. ಅದೇಕೋ ಅವಳು ಮತ್ತೆ ಅದನ್ನು ನನ್ನ ಕೈಯಲ್ಲಿಟ್ಟು ಜೋಲು ಮುಖ ಹಾಕಿ ಹೊರಟೇ ಬಿಟ್ಟಳು. ಅವಳು ಏಕೆ ಹಾಗೆ ಮಾಡಿದಳು ನನಗೆ ಅರ್ಥವಾಗಲಿಲ್ಲ.

ಅವಳು ಮತ್ತೆ ಸುತ್ತಿ ಬಂದು ಅದೇ ಹೂದಾನಿಯನ್ನ ನೋಡುತ್ತಾ ನಿಂತಳು. ‘ಬೆಲೆ ಕಡಿಮೆ ಇಲ್ಲವೇ?’ ಎಂದಳು. ನಾನು ‘ನಿಮಗಾಗಿ 90 ರುಪಾಯಿಗೆ ಕೊಡುತ್ತೇನೆ’ ಎಂದೆ. ಅವಳು ಮರು ಮಾತನಾಡಲಿಲ್ಲ. ಹೊರಟೆ ಹೋದಳು. ನನಗೂ ನಿರಾಸೆಯಾಯಿತು. ನಾನು ಚಿಕ್ಕಂದಿನಲ್ಲಿ ಅಮ್ಮನ ಜೊತೆ ಬೊಂಬೆ ಅಂಗಡಿಗೆ ಹೋಗಿದ್ದ ನೆನಪಾಯಿತು.

ನನಗಿಷ್ಟವಾದ ಬೊಂಬೆಯನ್ನು ಕೈಗೆತ್ತಿಕೊಂಡು ಅಮ್ಮನ ಕಡೆ ನೋಡಿ ನಕ್ಕಿದ್ದೆ. ಅಮ್ಮ ‘ನಿನಗೆ ಇಷ್ಟವಾಯಿತಾ?’ ಎಂದಿದ್ದಳು. ನಾನು ಅವಳ ಕೈ ಹಿಡಿದು ಜಗ್ಗಿದ್ದೆ. ‘ಸರಿ ಇರು’ ಎಂದು ಹೇಳಿ ಅದರ ಬೆಲೆ ಕೇಳಿದಳು. ಅಂಗಡಿಯವನು 11 ರುಪಾಯಿ ಎಂದ. ಅಮ್ಮ ತನ್ನ ಪರ್ಸನ್ನು ತೆಗೆದು ಜಿಪ್ ತೆಗೆದು, ತಡಕಾಡಿ ಅದರಲ್ಲಿ ಕೇವಲ ಒಂಬತ್ತು ರೂಪಾಯಿ ಇರುವುದು ಕಂಡು, ‘ಕಡಿಮೆ ಇಲ್ಲವೇ?’ ಎಂದು ಮೆಲ್ಲನೆ ಕೇಳಿದ್ದಳು. ಅವನು ನಿರ್ಭಾವುಕ ನಾಗಿ ‘ಇಲ್ಲ’ ಎಂದಿದ್ದ.

ಇದನ್ನೂ ಓದಿ: ‌Susan Thomas Column: ಕೈಚೀಲ ಈಗ ಪ್ರಕೃತಿಯಷ್ಟೇ ಸಹಜ, ಸಾಂಕೇತಿಕ

ಅಂದು ನನಗೆ ಅಳು ಬಂದಿತ್ತು. ತಲೆತಗ್ಗಿಸಿ ನಡೆದಿದ್ದೆ. ಅಮ್ಮನ ಕಣ್ಣು ಒದ್ದೆಯಾಗಿತ್ತು. ಹೀಗೆಯೇ ಮುಂದೊಮ್ಮೆ ಮತ್ತೊಂದು ಅಂಗಡಿಯಲ್ಲಿ ಕ್ರಿಕೆಟ್ ಬ್ಯಾಟ್ ನೋಡಿದ್ದೆ. ಅದನ್ನು ಕೊಳ್ಳುವ ಆಸೆ ನನ್ನಲ್ಲಿ. ಆಗಾಗ ಆ ಅಂಗಡಿಗೆ ಹೋಗಿ ಬ್ಯಾಟನ್ನ ಕೈಗೆತ್ತಿ ಕೊಳ್ಳುವುದು, ಅದರ ತೂಕ ನೋಡುವುದು ಹಿಡಿ ಹಿಡಿದು ಧೋನಿಯ ತರಹ ಬೀಸುವುದು, ಸರಿ ಇದೆ ಎಂದು ಖಾತರಿ ಮಾಡಿಕೊಳ್ಳುವುದು ನಡೆದೇ ಇತ್ತು.

ಎಲ್ಲ ಮಾಡಿದ ನಂತರ ಅದರ ಬೆಲೆ ಪ್ರತಿ ಬಾರಿ ಕೇಳುವುದು, ‘ನಮ್ಮ ತಂದೆಯ ಜೊತೆ ಬರುತ್ತೇನೆ’ ಎಂದು ಹೇಳಿ ಹಿಂದಿರುವುದು ನನ್ನ ಅಭ್ಯಾಸವಾಯಿತು. ಕೊನೆಗೊಂದು ದಿಸ ಹಠ ಮಾಡಿ ತಂದೆಯನ್ನ ಕರೆದುಕೊಂಡು ಆ ಬ್ಯಾಟ್ ಕೊಡಿಸಿ ಎಂದೆ. ಅಪ್ಪ ನನ್ನ ಜೊತೆ ಬಂದರು. ನನಗೆ ಒಳಗೊಳಗೇ ಖುಷಿಯಾಗಿತ್ತು. ಅಪ್ಪ ಅದನ್ನು ಕೈಗೆತ್ತಿಕೊಂಡು ‘ಬೆಲೆ ಎಷ್ಟು?’ ಎಂದರು. ಅವನು ಬೆಲೆ ಹೇಳಿದ್ದ. ಅಪ್ಪ ನನ್ನನ್ನು ಪಕ್ಕ ಕರೆದು ಹೇಳಿದರು, ‘ಮುಂದಿನ ವಾರ ಕೆಲಸದ ಮೇಲೆ ಮುಂಬೈಗೆ ಹೋಗುತ್ತಿದ್ದೇನೆ. ಅಲ್ಲಿ ಇನ್ನೂ ಒಳ್ಳೆ ಗುಣ ಮಟ್ಟದ ಬ್ಯಾಟುಗಳು ದೊರೆಯುತ್ತದೆ. ನಿನಗೆ ತಂದುಕೊಡುತ್ತೇನೆ. ಒಂದು ತಿಂಗಳು ತಡ’ ಎಂದರು.

ನನಗೆ ಮತ್ತೆ ಅಳು ಬಂದಿತ್ತು. ಏಕೋ ಇವೆಲ್ಲ ಈಗ ನೆನಪಾಗುತ್ತಿವೆ. ಬಹುಶಃ ಈ ಹುಡುಗಿ ಯ ಕಥೆಯು ಅದೇ ಇರಬಹುದು. ಈ ಬೆಲೆ ಅವಳಿಗೆ ಎಟುಕದೆ ಹೋಗಿರಬೇಕು. ಅವಳ ಕನಸುಗಳನ್ನು ಅವಳ ಕಣ್ಣುಗಳು ಹೇಳುತ್ತಿವೆ. ಕನಸುಗಳು ನನಸಾಗದ ನೋವು ಆ ಕಣ್ಣುಗಳಲ್ಲಿ ಕಂಡಿದೆ. ನಾನು ಪಟ್ಟ ನೋವು ಈ ಹುಡುಗಿಯೂ ಏಕೆ ಪಡಬೇಕು.

ನನ್ನ ಬಗ್ಗೆ ನನಗೆ ಬೇಸರ ಬಂದಿತು. ನಾನು ಬದುಕಿನಿಂದ ಕಲಿತದ್ದು ಏನೂ ಇಲ್ಲವೇ? ನನ್ನ ಚಿಕ್ಕಂದಿನ ಕನಸುಗಳು ಗಾಯಗಳಾಗಿ ಹಾಗೆಯೇ ಮಾಯದೆ ಉಳಿದಿವೆ. ಇಂದು ಮತ್ತೊಂದು ಹುಡುಗಿಯ ಕನಸನ್ನ ನನಸಾಗುಸುವುದರ ಮೂಲಕ ನನ್ನ ಗಾಯದ ಆ ಕಲೆಗಳನ್ನ ಅಳಿಸಬಹುದೇ? ಆ ಹುಡುಗಿ ಮತ್ತೆ ಬರಬಾರದೇ? ಎಂದು ಆಶಿಸಿದೆ.

ಅದೇ ಸಮಯದಲ್ಲಿ ಹುಡುಗಿ ಮತ್ತೆ ನನ್ನ ಅಂಗಡಿಯ ಕಡೆ ಬರುತ್ತಿದ್ದಳು. ಬಂದವಳು ಅದೇ ಹೂದಾನಿ ಕೈಗೆತ್ತಿಕೊಂಡಳು. ಸರಿ ಈ ಬಾರಿ ಅವಳಿಗೆ ಇದನ್ನು ಕೊಟ್ಟುಬಿಡುತ್ತೇನೆ. ಬಿಟ್ಟಿ ಕೊಟ್ಟರೆ ಅವಳಿಗೆ ನೋವಾಗಬಹುದು. ಅವಳ ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು. ಇರಲಿ ಇದಕ್ಕೆ ಆಗಿರುವ ಖರ್ಚು ಮಣ್ಣಿಗೆ 12 ರೂಪಾಯಿ. ಕುಸರಿ ಕೆಲಸಕ್ಕೆ ತಂದ ವಸ್ತುಗಳ ಬೆಲೆ ಮತ್ತೊಂದು ನಾಲ್ಕು ರೂಪಾಯಿ.

ಹಚ್ಚಿದ ಬಣ್ಣಕ್ಕೆ ಒಂದೂವರೆ ರೂಪಾಯಿ. ಎಲ್ಲ ಸೇರಿ ಹದಿನೇಳೂವರೆ. ಸರಿ, ನಾನು 15 ದಿವಸ ಕಷ್ಟ ಬಿದ್ದು ಮಾಡಿ, ಒಣಗಿಸಿ, ಬೇಯಿಸಿ, ಬಣ್ಣ ಹಚ್ಚಿ, ಮನೆಯಿಂದ ಈ ಬಾಡಿಗೆ ಅಂಗಡಿಗೆ ತಂದು ಅದನ್ನು ಇಲ್ಲಿ ಜೋಪಾನ ಇಟ್ಟುಕೊಂಡು ಕಾಪಾಡಿದ್ದೇನೆ.

ನನಗೆ ಲಾಭವು ಬೇಡ. ನನ್ನ ಕೆಲಸದ ಪಗಾರವು ಬೇಡ. ಅವಳಿಗೆ ಆ ಮಣ್ಣಿನ ಬೆಲೆಗೆ ಕೊಟ್ಟು ಬಿಡುತ್ತೇನೆ. ಹಾಗೆಂದು ಯೋಚಿಸಿ ಅವಳಿಗೆ ಹೇಳಿದೆ ‘ನೀವು ಹದಿನೇಳೂವರೆ ಕೊಡಿ ಸಾಕು’ ಎಂದೆ. ಅವಳ ಕಣ್ಣಲ್ಲಿ ಆನಂದ ಜಿನುಗಬಹುದೆಂದು ಎಣಿಸಿದ್ದೆ. ಆದರೆ ನೋವು, ಕೋಪ ಕಂಡಿತ್ತು.

‘ಹದಿನೇಳೂವರೆ ರುಪಾಯಿ ಬೆಲೆಯ ವಸ್ತುವನ್ನ ನನಗೆ ನೂರು ರುಪಾಯಿ ಕೊಡು ಎಂದು ಕೇಳಿ ಇಷ್ಟು ಹೊತ್ತು ಮೋಸ ಮಾಡಲು ಹೊರಟಿದ್ದೆ ನೀನು. ನಿನಗೆ ಕನಿಕರವೇ ಇಲ್ಲವೇ?’ ಎಂದವಳು, ನನ್ನ ಕೈಯಲ್ಲಿ ಹೂದಾನಿ ಇಟ್ಟು ಸರಸರನೆ ಹೊರಟು ಹೋದಳು.

(ಕವಿಯೊಬ್ಬರು ಊಟದ ನಡುವೆ ಪ್ರಾಸ್ತಾವಿಕವಾಗಿ ಹೇಳಿದ ಸಂಗತಿಯ ಆಧಾರಿತ ಕತೆ)