ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ShashidharaSwamy R Hiremath Colummn: ಕರ್ಕಶ ಕೂಗೇ ಇವುಗಳ ಶಕ್ತಿ !

ದಂಪತಿ ಹಕ್ಕಿಗಳೆರಡು ಎದುರಿಗಿದ್ದ ಒಣಗಿದ ಟೊಂಗೆಯ ಮೇಲೆ ಬಂದು ಆಸೀನವಾದವು; ಏನೋ ಗಾಬರಿಗೊಂಡಂತೆ ಆ ಹಕ್ಕಿಗಳೆರಡೂ ಅಲ್ಲಿಂದ ಹಾರಿದವು, ಒಂದೇ ಒಂದು ಪೊಟೋ ಕ್ಲಿಕ್ಕಿಸಿದ ನಲ್ಲಾ ಎಂದು ಬೇಜಾರಿನಲ್ಲಿದ್ದವನಿಗೆ ಹತ್ತಿರದಲ್ಲಿದ್ದ ಒಣಗಿದ ಬಡ್ಡೆಯ ಮೇಲೆ ಬೂದು ಹರಟೆ ಮಲ್ಲ ಹಕ್ಕಿ ಬಂದು ಕುತು ಬಿಡೋದೆ! ತಕ್ಷಣವೇ ಪೊಟೊ ಕ್ಲಿಕ್ಕಿಸತೊಡಗಿದೆ.

ಕರ್ಕಶ ಕೂಗೇ ಇವುಗಳ ಶಕ್ತಿ !

Profile Ashok Nayak May 11, 2025 1:18 PM

ಶಶಿಧರಸ್ವಾಮಿ ಆರ್.ಹಿರೇಮಠ

ಕಾಕೋಳ ಗ್ರಾಮದ ವೆಂಕಟಾಪುರ ಹಾಡಿಯ ಹೊರ ವಲಯದ ಕುರುಚಲು ಕಾಡಂಚಿನ ಹೊಲದ ಅಂಚು; ಬೇಸಿಗೆಯ ದಾಹ ತಣಿಯಲು ಹಕ್ಕಿಗಳ ಗುಂಪು ಇಲ್ಲಿ ಸೇರುತ್ತವೆ. ನಾನು, ಚಂದ್ರು, ಮಾಲ ತೇಶ ಬಡಿಗೇರ ಅವುಗಳ ಪೊಟೋಗ್ರಫಿಗೆಂದು ಹತ್ತಿರದ ಪೊದೆಯಲ್ಲಿ ಅವಿತು ಕುಳಿತೇವು.ಸಮಯ ಜಾರುತ್ತಿತ್ತು. ಕ್ಯಾ.. ಕ್ಯಾ ಕ್ಯಾ ಎಂಬ ಎತ್ತರದ ದ್ವನಿಯ ಕರ್ಕಶ ಕೂಗು ಕೇಳಿಸಿತು. ಇದು ಬೂದು ಹರಟೆ ಮಲ್ಲ ಹಕ್ಕಿಯ ಕೂಗು, ನಾವು ಕ್ಯಾಮೆರಾ ಹಿಡಿದು ಸಿದ್ಧರಾಗಿ ಅತ್ತ ಬರುವ ಹಕ್ಕಿಗಳಿಗಾಗಿ ನೋಟ ಹರಿಸತೊಡಗಿದೇವು.

ದಂಪತಿ ಹಕ್ಕಿಗಳೆರಡು ಎದುರಿಗಿದ್ದ ಒಣಗಿದ ಟೊಂಗೆಯ ಮೇಲೆ ಬಂದು ಆಸೀನವಾದವು; ಏನೋ ಗಾಬರಿಗೊಂಡಂತೆ ಆ ಹಕ್ಕಿಗಳೆರಡೂ ಅಲ್ಲಿಂದ ಹಾರಿದವು, ಒಂದೇ ಒಂದು ಪೊಟೋ ಕ್ಲಿಕ್ಕಿಸಿದ ನಲ್ಲಾ ಎಂದು ಬೇಜಾರಿನಲ್ಲಿದ್ದವನಿಗೆ ಹತ್ತಿರದಲ್ಲಿದ್ದ ಒಣಗಿದ ಬಡ್ಡೆಯ ಮೇಲೆ ಬೂದು ಹರಟೆ ಮಲ್ಲ ಹಕ್ಕಿ ಬಂದು ಕುತು ಬಿಡೋದೆ! ತಕ್ಷಣವೇ ಪೊಟೊ ಕ್ಲಿಕ್ಕಿಸತೊಡಗಿದೆ.

ಅದೇಕೋ, ಅತ್ತಣ ಗುಂಪಿನಿಂದ ಬೂದು ಹರಟೆ ಮಲ್ಲ ಹಕ್ಕಿಗಳ ಕೂಗು ಜೋರಾಗಿತು, ತಕ್ಷಣವೇ ಆ ಹಕ್ಕಿಯು ಅಲ್ಲಿಂದ ಹಾರಿ ಗುಂಪಿನ ಗೆಳೆಯರನ್ನು ಸೇರಿಕೊಂಡಿತು. ಬೂದು ಹರಟೆ ಮಲ್ಲ ಹಕ್ಕಿಗ ಳನ್ನು, ತರಗೆಲೆ ಹಕ್ಕಿ, ದೊಡ್ಡ ಬೂದು ಗೀಜುಗಾರ‍್ಲು ಹಕ್ಕಿ, ಗೊಂಗ್ಯಎಂತೆಲ್ಲಾ ಕರೆಯುತ್ತಾರೆ. ಕಾಯಾಪಿಲ್ಲಾ ಎಂದು ಲಂಬಾಣಿ ಭಾಷೆಯಲ್ಲಿ ಕರೆದರೆ, ಗೆಜ್ಜಳಬಾಯ ಎಂದು ಕೊಡವರು ಕರೆಯುತ್ತಾರೆ. ಇಂಗ್ಲೀಷನಲ್ಲಿ ಲಾರ್ಜ್ ಗ್ರೇ ಬ್ಯಾಬ್ಲರ್ ಎಂದು ಕರೆದಿದ್ದಾರೆ.

ಇದನ್ನೂ ಓದಿ: Venkateshwara Swamy: ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಉತ್ತರ ದ್ವಾರ ಪ್ರವೇಶ

ಗೊರವಂಕಕ್ಕಿಂತ ದೊಡ್ಡ, 28 ಸೆಂ.ಮಿ ಗಾತ್ರದ ಬೂದು ಮಿಶ್ರಿತ ತಿಳಿಗಂದು ವರ್ಣದ ಹಕ್ಕಿ, ಉದ್ದ ವಾದ ಕಂದು ವರ್ಣದ ಬಾಲ ಅದನ್ನು ಅಗಲಿಸಿದಾಗ ಬಿಳಿ ಅಂಚು ಸ್ಪಷ್ಟವಾಗಿ ಕಾಣುವದು, ಹಳದಿ ಕಣ್ಣು ಹಾಗೂ ಹಳದಿ ಕೊಕ್ಕನ್ನು ಹೊಂದಿದೆ. ವರ್ಣಿಸಲು ಹೊರಟರೆ, ಇದೇನೂ ಬಹು ಸುಂದರ ಪಕ್ಷಿ ಅಲ್ಲ; ಬಣ್ಣಗಳ ವೈವಿಧ್ಯ ಇಲ್ಲ. ತಮ್ಮ ಕರ್ಕಶ ಕೂಗಿನಿಂದಲೇ ಹೆಚ್ಚು ಪ್ರಸಿದ್ಧ. ಬಂಡೆ ಪ್ರದೇಶ, ಕುರುಚಲು ಕಾಡುಗಳ ಮರಗಳಲ್ಲಿ. ಅರಣ್ಯದಂಚಿನ ಪ್ರದೇಶಗಳಲ್ಲಿ ಸಣ್ಣ ಗುಂಪು ಗಳಲ್ಲಿ ಕಂಡುಬರುತ್ತದೆ.

ದೊಡ್ಡ ದನಿಯಲ್ಲಿ ಜೋರಾಗಿ ಕೂಗುವುದರ ಮೂಲಕ, ಪರಸ್ಪರ ಸಂಪರ್ಕದಲ್ಲಿರುತ್ತವೆ ಮತ್ತು ಒಗ್ಗಟ್ಟನ್ನು ಕಾಪಾಡಿಕೊಳ್ಳುತ್ತವೆ. ಆದ್ದರಿಂದ, ಇವುಗಳ ದೊಡ್ಡ ದನಿಯೇ ಇವುಗಳ ಶಕ್ತಿ ಎನ್ನಬಹುದು! ಇವುಗಳ ಗಲಾಟೆಯನ್ನು ಕೇಳಿದರೆ ಬಾಯಿ ಇದ್ದವನು ಗೆದ್ದ ಎಂಬ ನಾಣ್ಣುಡಿ ನೆನಪಾಗುತ್ತದೆ. ಗುಂಪಿನ ಸದಸ್ಯರು ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಗುಂಪಾಗಿ ಸೇರುತ್ತವೆ.

Bird 2 R

ಇವು ಹೆಚ್ಚಾಗಿ ತೆರೆದ ಪೊದೆ ಸಸ್ಯ ಪ್ರದೇಶಗಳಲ್ಲಿ ಕಂಡುಬರುತ್ತವೆ, ಅಲ್ಲಿ ಅವು ನೆಲದ ಮೇಲೆ ಅಥವಾ ಹತ್ತಿರದಲ್ಲಿ ಕೀಟಗಳನ್ನು ಹುಡುಕುತ್ತವೆ. ಹೂವಿನ ಮಕರಂದ, ಹಣ್ಣು, ಬೀಜ ಹಾಗೂ ಕೀಟಗಳನ್ನು ಆಹಾರವಾಗಿ ಭಕ್ಷಿಸಿಸುತ್ತವೆ.

ಸಂತಾನೋತ್ಪತ್ತಿಯು ನಿರ್ದಿಷ್ಟ ಕಾಲಮಿತಿ ಇಲ್ಲ, ವರ್ಷವಿಡೀ ಸಂತಾನೋತ್ಪತ್ತಿ ಮಾಡುತ್ತವೆ. ಮರದ ಟೊಂಗೆಗಳ ಕವಲುಗಳ ಮದ್ಯ ಬೇರು ಹುಲ್ಲು ಕಡ್ಡಿಗಳಿಂದ ಕೂಡಿದ ಬಟ್ಟಲಿನಾಕಾರದ ಗೂಡನ್ನು ಕಟ್ಟಿ 3-4 ನೀಲಿ ವರ್ಣದ ಮೊಟ್ಟೆಗಳನ್ನಿಟ್ಟು ಮರಿ ಮಾಡಿಸುತ್ತವೆ. ಅವುಗಳ ಗೂಡನ್ನು ಚಾತಕ ಪಕ್ಷಿ ಮತ್ತು ಕೋಗಿಲೆ ಚಾಣ ಹಕ್ಕಿಗಳು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುವುದುಂಟು!

ಹರಟೆ ಮಲ್ಲ ಹಕ್ಕಿಯ ಗೂಡಿನಲ್ಲಿ ತಮ್ಮ ಮೊಟ್ಟೆಗಳನ್ನಿಟ್ಟು, ಮರಿ ಮಾಡಿಸಿಕೊಳ್ಳುವ ಇಂತಹದೊಂದು ಪ್ರಕ್ರಿಯೆ, ಪಕ್ಷಿಲೋಕದ ಇನ್ನೊಂದು ವಿಸ್ಮಯ!