ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ: ಹಲಗೇರಿಯ ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ
ಇಲ್ಲಿ ತರಬೇತಿ ಪಡೆದ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪ್ರತಿ ವರ್ಷ ವಿವಿಧ ವಸತಿ ಶಾಲೆಗಳಿಗೆ ಆಯ್ಕೆ ಯಾಗುತ್ತಿರುವುದು ವಿಶೇಷ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಎತ್ತರಕ್ಕೆ ಬೆಳೆಸುವುದು ಸುಲಭ ದ ಮಾತಲ್ಲ. ಇಲ್ಲಿ ಸಾಕಷ್ಟು ಸವಾಲುಗಳಿರುತ್ತವೆ. ಕಷ್ಟ-ನಷ್ಟಗಳು ಇರುತ್ತವೆ. ಆದರೆ, ಇವುಗಳನ್ನೆಲ್ಲ ಮೆಟ್ಟಿನಿಂತು ದೊಡ್ಡ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸಿರುವುದು ಪವಾಡವೇ ಸರಿ.
-
ಕುಬೇರ ಮಜ್ಜಿಗಿ, ಕೊಪ್ಪಳ
ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದ ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ಗ್ರಾಮೀಣ ಪ್ರದೇಶದ ಸಾವಿರಾರು ಮಕ್ಕಳ ಬಾಳಿಗೆ ಬೆಳಕಾಗಿದೆ. ಇದರ ಹಿಂದೆ ಶಾಲೆಯ ಸಂಸ್ಥಾಪಕ ವೀರಣ್ಣ ಕಂಬಳಿ ಯವರ ಶ್ರಮ ಹಾಗೂ ಸಮರ್ಪಣಾ ಮನೋಭಾವ ಅಪಾರವಾಗಿದೆ.
ಹಲಗೇರಿಯು ಒಂದು ಪುಟ್ಟ ಗ್ರಾಮ; ಹಿಂದುಳಿದ ಪ್ರದೇಶ ಎಂದೇ ಹೇಳಬಹುದು. ಇಲ್ಲಿ, 2007ರಲ್ಲಿ ಗ್ರಾಮದ ಶಾಂಭವಿ ದೇವಸ್ಥಾನದ ಪಕ್ಕದಲ್ಲಿ ತಟ್ಟಿಯಲ್ಲಿ ಆರಂಭವಾದ ಶಾಲೆ ಇಂದು ಎರಡು ಎಕರೆ ವಿಶಾಲವಾದ ಜಾಗದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ವಸತಿ ಶಾಲೆ ಬೆಳೆದು ನಿಂತಿದೆ. 4 ಮತ್ತು 5ನೇ ತರಗತಿ ಮಕ್ಕಳಿಗೆ ನವೋದಯ ಸೇರಿದಂತೆ ಇತರೆ ವಸತಿ ಶಾಲೆಗಳಿಗೆ ನಡೆಯುವ ಪ್ರವೇಶ ಪರೀಕ್ಷೆಗೆ ತರಬೇತಿ ನೀಡುವುದು ಇವರ ಮುಖ್ಯ ಉದ್ದೇಶವಾಗಿದೆ.
ಇಲ್ಲಿ ತರಬೇತಿ ಪಡೆದ ಮಕ್ಕಳು ಅಧಿಕ ಸಂಖ್ಯೆಯಲ್ಲಿ ಪ್ರತಿ ವರ್ಷ ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ವಿಶೇಷ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿ ಎತ್ತರಕ್ಕೆ ಬೆಳೆಸು ವುದು ಸುಲಭದ ಮಾತಲ್ಲ. ಇಲ್ಲಿ ಸಾಕಷ್ಟು ಸವಾಲುಗಳಿರುತ್ತವೆ. ಕಷ್ಟ-ನಷ್ಟಗಳು ಇರುತ್ತವೆ. ಆದರೆ, ಇವುಗಳನ್ನೆಲ್ಲ ಮೆಟ್ಟಿನಿಂತು ದೊಡ್ಡ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸಿರುವುದು ಪವಾಡವೇ ಸರಿ. ಇದೆಲ್ಲ ಸಾಧ್ಯವಾಗುವುದು ವೀರಣ್ಣ ಕಂಬಳಿ ಅವರಂತಹ ಛಲದಂಕ ಮಲ್ಲರಿಂದ ಮಾತ್ರ ಸಾಧ್ಯ.
ಇದನ್ನೂ ಓದಿ: Ravi Hunj Column: ಜಾತಿಗಳ ಅಸ್ಮಿತೆಗೆ ಐಕಾನುಗಳು ಅವಶ್ಯವೇ ?
ಮೂಲಭೂತ ಸೌಕರ್ಯಗಳು
ಶ್ರೀ ರಾಜರಾಜೇಶ್ವರಿ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯ ಗಳಿಗೆ ಕೊರತೆ ಇಲ್ಲ. 25ಕ್ಕೂ ಹೆಚ್ಚು ಕೊಠಡಿಗಳಿವೆ. ವಿಶಾಲವಾದ ಫಂಕ್ಷನ್ ಹಾಲ್ ಮತ್ತು ಊಟದ ಹಾಲ್ ಇದೆ. ಬಾಲಕ, ಬಾಲಕಿಯರಿಗೆ ಸಾಕಷ್ಟು ಸ್ನಾನ ಗೃಹ ಹಾಗೂ ಶೌಚಾಲಯಗಳಿವೆ. ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರು ವ್ಯವಸ್ಥೆ ಇದೆ. ಮೆನು ಪ್ರಕಾರ ಶುಚಿ-ರುಚಿಯಾದ ಊಟ ಹಾಗೂ ಉಪಹಾರ ಕೊಡಲಾಗುತ್ತದೆ. ಸಾಯಂಕಾಲ ಸ್ನಾಕ್ಸ್ ಕೊಡಲಾಗುತ್ತದೆ. ನುರಿತ ಹಾಗೂ ಅನುಭವಿ ಶಿಕ್ಷಕರಿಂದ ಪಾಠ ಬೋಧನೆ ಮಾಡಲಾಗುತ್ತದೆ. ಪ್ರತಿದಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ಮಾಡಲಾಗುತ್ತದೆ.
ಗುಣಮಟ್ಟದ ಶಿಕ್ಷಣ
ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತದೆ. ಸ್ಮಾರ್ಟ್ ಬೋರ್ಡ್ ಪ್ರೊಜೆಕ್ಟರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿ ಪಾಠ ಮಾಡಲಾಗುತ್ತದೆ. ಕ್ರಿಯಾಶೀಲ ಅನುಭವಿ ಹಾಗೂ ಅರ್ಹತೆ ಹೊಂದಿದ ವಿಷಯ ವಾರು 30 ಜನ ಶಿಕ್ಷಕರ ತಂಡ ಇದೆ. ಬೇರೆ ಬೇರೆ ಭಾಗದಿಂದ ಮಕ್ಕಳನ್ನು ಕರೆ ತರಲು ಏಳು ಬಸ್ಸುಗಳಿವೆ.
ನಾಗಾಲ್ಯಾಂಡ್ ಶಿಕ್ಷಕಿಯರು
ಗ್ರಾಮೀಣ ಪ್ರದೇಶದ ತಮ್ಮ ವಿದ್ಯಾರ್ಥಿಗಳು ಕೂಡ ಸುಲಲಿತವಾಗಿ ಇಂಗ್ಲಿಷ್ ಕಲಿಯಬೇಕು ಎಂಬ ಉದ್ದೇಶದಿಂದ 3 ಜನ ನಾಗಾಲ್ಯಾಂಡ್ ಶಿಕ್ಷಕಿಯರನ್ನು ಕರೆ ತರಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಭಾಷೆಯನ್ನು ಸರಳವಾಗಿ ಕಲಿಯಬಹುದು ಎಂಬ ಉದ್ದೇಶದಿಂದ ನಾಗಾ ಲ್ಯಾಂಡ್ ಶಿಕ್ಷಕಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ.
ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ತರಬೇತಿ ಪಡೆದು ನವೋದಯ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ಹಲವಾರು ವಿದ್ಯಾರ್ಥಿಗಳು ಇಂದು ಉತ್ತಮ ಸ್ಥಾನಮಾನದಲ್ಲಿದ್ದಾರೆ. ನೂರಾರು ವಿದ್ಯಾರ್ಥಿಗಳು ಎಂಬಿಬಿಎಸ್, ಎಂಜಿನಿಯರಿಂಗ್, ಐಐಟಿಯಲ್ಲಿ ಓದುತ್ತಿದ್ದಾರೆ. ಕೆಲವರು ಸರಕಾರದ ಅತ್ಯುನ್ನತ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಲವರು ವಿದೇಶದಲ್ಲಿ ಕೆಲಸ ಮಾಡುತ್ತಿರುವುದು ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.
ಲೋಕಧ್ವನಿ ಪ್ರಶಸ್ತಿ
ಶೈಕ್ಷಣಿಕ ಕ್ಷೇತ್ರದಲ್ಲಿ ವೀರಣ್ಣ ಕಂಬಳಿ ಅವರ ಸಾಧನೆಯನ್ನು ಗುರುತಿಸಿ, ‘ಲೋಕಧ್ವನಿ’ ದಿನಪತ್ರಿಕೆ ಕೊಡಮಾಡುವ ‘ನಮ್ಮ ಸಾಧಕರು’ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದು ವಿಶೇಷ. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹಾಗೂ ವಿಶ್ವವಾಣಿ ದಿನ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಹಲವು ಮಹನೀಯರ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.
ನವೋದಯ ಕೋಚಿಂಗ್
ನವೋದಯ, ಕಿತ್ತೂರು, ಸೈನಿಕ, ಮೊರಾರ್ಜಿ, ಆದರ್ಶ, ಅಳಿಕೆ, ಮುದ್ದೇನಹಳ್ಳಿ, ಸೈನಿಕ ಸ್ಕೂಲ್ ಸೇರಿದಂತೆ ಅನೇಕ ವಸತಿ ಶಾಲೆಗಳಿಗೆ ನಡೆಯುವ ಪ್ರವೇಶ ಪರೀಕ್ಷೆಗೆ ಇಲ್ಲಿ ತರಬೇತಿ ನೀಡಲಾಗು ತ್ತದೆ. ಈ ಶಾಲೆಯಲ್ಲಿ ತರಬೇತಿ ಪಡೆದ ಮಕ್ಕಳು ಹೆಚ್ಚು ಹೆಚ್ಚು ನವೋದಯ ಸೇರಿದಂತೆ ಇತರೆ ಶಾಲೆಗಳಿಗೆ ಆಯ್ಕೆಯಾಗುತ್ತಿರುವುದು ವಿಶೇಷವಾಗಿದೆ. ಪ್ರತಿ ವರ್ಷ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋಚಿಂಗ್ ಪಡೆಯುತ್ತಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಐದನೇ ತರಗತಿಯ 100 ವಿದ್ಯಾರ್ಥಿಗಳು ಹಾಗೂ ನಾಲ್ಕನೇ ತರಗತಿಯ 50 ವಿದ್ಯಾರ್ಥಿ ಗಳಿಗೆ ಮಾತ್ರ ತರಬೇತಿ ನೀಡಲಾಗು ವುದು ಎಂದು ಸಂಸ್ಥಾಪಕ ಅಧ್ಯಕ್ಷ ವೀರಣ್ಣ ಕಂಬಳಿ ತಿಳಿಸಿದ್ದಾರೆ.
![]()
ಗ್ರಾಮೀಣ ಮಕ್ಕಳ ಭವಿಷ್ಯ ಉಜ್ವಲ ಮಾಡುವುದು ನಮ್ಮ ಗುರಿ. ಅದಕ್ಕಾಗಿ ನಾನು ಸೇರಿದಂತೆ ನಮ್ಮ ತಂಡ ಸಾಕಷ್ಟು ಶ್ರಮಿಸುತ್ತಿದೆ. ಶಿಕ್ಷಣ ಸಂಸ್ಥೆ ಇಷ್ಟು ಎತ್ತರಕ್ಕೆ ಬೆಳೆಯಲು ಹಲಗೇರಿ ಗ್ರಾಮಸ್ಥರು, ಹಲವಾರು ಸ್ನೇಹಿತರು ಸೇರಿದಂತೆ ಸಾಕಷ್ಟು ಜನರ ಸಹಾಯ ಸಹಕಾರವಿದೆ. ಸಮಸ್ಯೆ ಗಳು ಸಂಕಷ್ಟಗಳು ಸಾಕಷ್ಟು ಬರುತ್ತವೆ ಅವುಗಳನ್ನು ಸವರಾಗಿ ಸ್ವೀಕರಿಸಿ ಮುಂದೆ ಸಾಗಿದರೆ ಯಶಸ್ಸು ಸಾಧ್ಯ. ನಮ್ಮಲ್ಲಿ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಇದು ಸಂಸ್ಥೆಗೆ ಹೆಮ್ಮೆಯ ವಿಷಯ. ನಮ್ಮನ್ನು ನಂಬಿ ಬಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದು ನಮ್ಮ ಆದ್ಯ ಕರ್ತವ್ಯ. ಆ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲಿಯ ಶಿಕ್ಷಣದ ಗುಣಮಟ್ಟ ಕಂಡು ಬೇರೆ ಬೇರೆ ಜಿಲ್ಲೆಗಳಿಂದ ಮಕ್ಕಳನ್ನು ಕಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಶಿಕ್ಷಣ ನೀಡುವ ಸಂಕಲ್ಪ ಮಾಡುತ್ತೇವೆ.
-ವೀರಣ್ಣ ಕಂಬಳಿ, ಸಂಸ್ಥಾಪಕ, ಶ್ರೀ ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆ ಹಲಗೇರಿ