ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಒಂದು ವೇಳೆ ವಿದ್ಯುಚ್ಛಕ್ತಿ ಉತ್ಪಾದನೆ ಏನಾದರೂ ನಿಂತುಹೋದರೆ, ತಕ್ಷಣ ಅದರ ಕೆಲಸವನ್ನು ನಿಭಾಯಿಸುವಂಥ ‘ಸ್ಟ್ಯಾಂಡ್ ಬೈ’ ವ್ಯವಸ್ಥೆಯೂ ಇರಬೇಕು. ವಿದ್ಯುತ್ತಿನ ಜತೆಯಲ್ಲಿ, ತನ್ನ ಅಗತ್ಯಕ್ಕೆ ಬೇಕಾದ ಇತರ ಎಲ್ಲ ವಸ್ತುಗಳನ್ನು ತಾನೇ ಪೂರೈಸಿ ಕೊಳ್ಳಬೇಕು. ಈ ಪಂಪು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಾಗುತ್ತದೆ; ಕೆಲವು ಸಲ ಸಾವಕಾಶವಾಗಿ ಪಂಪ್ ಮಾಡಬೇಕಾಗುತ್ತದೆ.

ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

-

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ನಮಗೆ ಒಂದು ಪಂಪ್ ಬೇಕಾಗಿದೆ. ಈ ಪಂಪ್, ನಿಮಿಷಕ್ಕೆ ೭೦ ಸಲ ಪಂಪ್ ಮಾಡಬೇಕು. ಪ್ರತಿಸಲವೂ ಸುಮಾರು ೮೦ ಎಂ.ಎಲ್ ದ್ರಾವಣವನ್ನು ಪಂಪ್ ಮಾಡಬೇಕು. ಈ ದ್ರಾವಣ ವು ಪ್ರತಿಸಲ 100000 ಕಿ.ಮೀ. ಉದ್ದದ ಕೊಳವೆ ವ್ಯವಸ್ಥೆಯಲ್ಲಿ ಏಕಮುಖವಾಗಿ ಚಲಿಸ ಬೇಕು. ಅಂದರೆ ಒಂದು ನಿಮಿಷದಲ್ಲಿ ಸುಮಾರು ೫ ಲೀಟರ್ ದ್ರಾವಣವನ್ನು, ಅಂದರೆ ಒಂದು ಗಂಟೆಯಲ್ಲಿ 300 ಲೀಟರ್ ದ್ರಾವಣವನ್ನು, 24 ಗಂಟೆಯಲ್ಲಿ 7200 ಲೀಟರ್ ದ್ರಾವಣವನ್ನು ಪಂಪ್ ಮಾಡಬೇಕು.

ಅಂದರೆ ಒಂದು ವರ್ಷದಲ್ಲಿ ಸುಮಾರು 2600000 ಲೀಟರ್ ದ್ರಾವಣವನ್ನು ಪಂಪ್ ಮಾಡುವ ಸಾಮರ್ಥ್ಯವಿರಬೇಕು. ಒಂದು ದಿನದಲ್ಲಿ 100000 ಸಲ ಪಂಪ್ ಮಾಡುವುದರ ಜತೆಯಲ್ಲಿ, ಪ್ರತಿವರ್ಷ ೩೫ ದಶಲಕ್ಷ (ಮಿಲಿಯನ್) ಸಲ ಪಂಪ್ ಮಾಡಬೇಕು ಹಾಗೂ ತನ್ನ ಜೀವಮಾನದಲ್ಲಿ ೨.೫ ಶತಕೋಟಿ (ಬಿಲಿಯನ್) ಸಲ ಪಂಪ್ ಮಾಡಬೇಕು. ಈ ಪಂಪ್, ತನ್ನ ಕೆಲಸಕ್ಕೆ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ತಾನೇ ಉತ್ಪಾದಿಸಿಕೊಳ್ಳಬೇಕು.

ಒಂದು ವೇಳೆ ವಿದ್ಯುಚ್ಛಕ್ತಿ ಉತ್ಪಾದನೆ ಏನಾದರೂ ನಿಂತು ಹೋದರೆ, ತಕ್ಷಣ ಅದರ ಕೆಲಸವನ್ನು ನಿಭಾಯಿಸುವಂಥ ‘ಸ್ಟ್ಯಾಂಡ್ ಬೈ’ ವ್ಯವಸ್ಥೆಯೂ ಇರಬೇಕು. ವಿದ್ಯುತ್ತಿನ ಜತೆಯಲ್ಲಿ, ತನ್ನ ಅಗತ್ಯಕ್ಕೆ ಬೇಕಾದ ಇತರ ಎಲ್ಲ ವಸ್ತುಗಳನ್ನು ತಾನೇ ಪೂರೈಸಿ ಕೊಳ್ಳಬೇಕು. ಈ ಪಂಪು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಾಗುತ್ತದೆ; ಕೆಲವು ಸಲ ಸಾವಕಾಶವಾಗಿ ಪಂಪ್ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ಸಮಯ ಸಂದರ್ಭಕ್ಕೆ ತಕ್ಕ ಹಾಗೆ ಕೆಲಸ ಮಾಡುವ ಗುಣವಿರಬೇಕು. ಈ ಪಂಪ್ 70-100 ವರ್ಷಗಳ ಕಾಲ ನಿರಂತರವಾಗಿ ಪಂಪ್ ಮಾಡುತ್ತಲೇ ಇರಬೇಕು.

ಇದನ್ನೂ ಓದಿ: Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

ಒಂದೇ ಒಂದು ನಿಮಿಷವೂ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಹಾಗಿಲ್ಲ. ಬಿಸಿಲು, ಮಳೆ, ಗಾಳಿಯೆಂದು ಗೊಣಗದೆ, ದಿನದ ೨೪ ಗಂಟೆಯೂ ಕೆಲಸ ಮಾಡುತ್ತ, ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ತಾನೇ ಮಾಡಿಕೊಳ್ಳಬೇಕು. ದುರಸ್ತಿಗೆಂದು ಕೆಲಸವನ್ನು ಮಾತ್ರ ನಿಲ್ಲಿಸುವ ಹಾಗಿಲ್ಲ. ಕೆಲಸವನ್ನು ಮಾಡುತ್ತಲೇ ದುರಸ್ತಿಯನ್ನು ಮಾಡಿಕೊಳ್ಳಬೇಕು. ಈ ಪಂಪ್ ಅಡಕನಾಗಿರಬೇಕು (ಕಾಂಪ್ಯಾಕ್ಟ್). ಒಬ್ಬ ವ್ಯಕ್ತಿಯ ಮುಷ್ಟಿಗಿಂತ ಬೆಂಗಳೂರು 12112025 ಬುಧವಾರ ದೊಡ್ಡದು ಇರಬಾರದು. ಈ ಪಂಪಿನ ಶಕ್ತಿಯ ದಕ್ಷತೆ (ಎನರ್ಜಿ ಎಫಿಶಿಯನ್ಸಿ) ಶೇ.೯೦ಕ್ಕೂ ಮಿಗಿಲಾಗಿರಬೇಕು. ಇಂಥ ಒಂದು ಪಂಪ್ ನಮಗೆ ಬೇಕಾಗಿದೆ. ಅದುವೇ ನಮ್ಮ ನಿಮ್ಮ ಎಲ್ಲರ ಎದೆಗೂಡಿನಲ್ಲಿ ಮಿಡಿಯುತ್ತಿರುವ ಹೃದಯ ಎನ್ನುವ ಪಂಪ್!

ಈ ಪಂಪಿನಲ್ಲಿ ಉತ್ಪಾದನೆಯಾಗುವ ವಿದ್ಯುತ್ತಿನಲ್ಲಿ ಅಥವಾ ವಿತರಣೆಯ ಜಾಲದಲ್ಲಿ ಏನಾದರೂ ದೋಷಗಳುಂಟಾದಾಗ, ವಿದ್ಯುತ್ ಸರಬರಾಜು ಹಠಾತ್ ನಿಲ್ಲಬಹುದು. ಆಗ ಹೃದಯವೂ ತನ್ನ ಕೆಲಸವನ್ನು ಹಠಾತ್ತನೇ ನಿಲ್ಲಿಸುತ್ತದೆ. ಇದುವೇ ಹೃದಯ ಸ್ತಂಭನ ಅಥವಾ ಕಾರ್ಡಿಯಾಕ್ ಅರೆಸ್ಟ್.

ಕೆಲವು ಸಲ ಹೃದಯವು ಅನಿಯಮಿತವಾಗಿ ಹಾಗೂ ಅತಿ ವೇಗವಾಗಿ ತುಡಿಯಲಾ ರಂಭಿಸುತ್ತದೆ. ಹೃದಯ ಸ್ನಾಯುವಿನ ಈ ಅಸಹಜ ಮಿಡಿತವು ಅಪಾಯಕಾರಿ. ಇದನ್ನು ತತ್ತರಿಕೆ (ಫಿಬ್ರಿಲ್ಲೇಶನ್) ಎನ್ನುವರು. ಇದನ್ನು ತ್ವರಿತವಾಗಿ ಸರಿಪಡಿಸದಿದ್ದರೆ, ಜೀವಾಪಾಯ ಖಂಡಿತ! 1899. ಜೀನ್ ಲೂಯಿಸ್ ಪ್ರೆವೋಸ್ಟ್ ಮತ್ತು ಫ್ರೆಡೆರಿಕ್ ಬ್ಯಾಟೆಲ್ಲಿ ಎಂಬ ಸಂಶೋಧಕರು ಸ್ವಿಜ಼ರ್ಲೆಂಡಿನ ಜಿನೀವ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದರು. ಇವರು ನಾಯಿಯ ಹೃದಯದ ಮೇಲೆ ಪ್ರಯೋಗವನ್ನು ಮಾಡುತ್ತಿದ್ದರು. ನಾಯಿಗೆ ಅರಿವಳಿಕೆಯನ್ನು ನೀಡಿದರು. ಒಂದು ಎಲೆಕ್ಟ್ರೋಡನ್ನು ನಾಯಿಯ ಬಾಯಿಯಲ್ಲಿ ಹಾಗೂ ಮತ್ತೊಂದನ್ನು ಅದರ ಕರುಳಿನಲ್ಲಿ ಇಟ್ಟರು. ಅತ್ಯಲ್ಪ ಪ್ರಮಾಣದ ವಿದ್ಯುತ್ತನ್ನು ಹಾಯಿಸಿದರು.

ಆ ವಿದ್ಯುತ್ತು, ನಾಯಿಯ ಹೃದಯದ ಮಿಡಿತದ ಗತಿಯನ್ನು ಅಲ್ಲೋಲ ಕಲ್ಲೋಲ ಮಾಡಿತು. ಆಗ ಹೃದಯವು ಥರಗುಟ್ಟಲಾರಂಭಿಸಿತು. ಆಗ ತಕ್ಷಣವೇ ಸ್ವಲ್ಪ ದೊಡ್ಡ ಪ್ರಮಾಣದ ವಿದ್ಯುತ್ತನ್ನು ಹಾಯಿಸಿದರು. ಕೂಡಲೇ ಆ ನಾಯಿಯ ಹೃದಯದ ಥರಗುಟ್ಟುವಿಕೆಯು (ತತ್ತರಿಕೆಯು) ಸಂಪೂರ್ಣವಾಗಿ ಮಾಯವಾಯಿತು.

ಹೃದಯದ ತತ್ತರಿಕೆಗೆ ಕಾರಣ ವಿದ್ಯುತ್ತು! ಆ ತತ್ತರಿಕೆಯನ್ನು ನಿವಾರಿಸಿದ್ದೂ ವಿದ್ಯುತ್ತು! ಹರಿಯುವ ವಿದ್ಯುತ್ ಪ್ರಮಾಣವು ನಾಯಿಯನ್ನು ಕೊಲ್ಲುತ್ತಿತ್ತು ಇಲ್ಲವೇ ಜೀವವನ್ನು ಉಳಿಸುತ್ತಿತ್ತು! 1947. ಅಮೆರಿಕನ್ ಹೃದಯ ಶಸ್ತ್ರವೈದ್ಯ ಕ್ಲಾಡ್ ಶೇಫರ್ ಬೆಕ್ (1894-1971), ಓರ್ವ ಹದಿಹರೆಯದ ಹುಡುಗನ ಹೃದಯದ ಮೇಲೆ ಶಸ್ತ್ರಚಿಕಿತ್ಸೆಯನ್ನು ನಡೆಸುತ್ತಿದ್ದ. ಕೂಡಲೇ ಹೃದಯಸ್ತಂಭನವು ಸಂಭವಿಸಿತು. ಆಗ ಕ್ಲಾಡ್ ಬೆಕ್ ಎರಡು ವಿದ್ಯುತ್ ಒರೆ (ಇಲೆಕ್ಟ್ರಿಕ್ ಪ್ಯಾಡಲ್) ಎದೆಯ ಮೇಲೆ ಎರಡು ಕಡೆ ಇಟ್ಟ. ನಿಗದಿತ ಪ್ರಮಾಣದ ವಿದ್ಯುತ್ ಶಾಕ್ ನೀಡಿದ.

ಸ್ಥಗಿತವಾಗಿದ್ದ ಹೃದಯವು ಮತ್ತೆ ಕೆಲಸವನ್ನು ಮಾಡಲಾರಂಭಿಸಿತು. ಇಂಥ ಪವಾಡ ಈ ಹಿಂದೆ ಎಲ್ಲೂ ನಡೆದಿರಲಿಲ್ಲ. ಮೃತ್ಯುಮುಖದಲ್ಲಿದ್ದ ಹುಡುಗನ ಜೀವವನ್ನು ಒಂದು ಬಟನ್ ಒತ್ತುವುದರ ಮೂಲಕ ಜೀವ ಮತ್ತೆ ಹಿಮ್ಮರಳುವಂತೆ ಮಾಡಿದ. ಮೊದಲ ಬಾರಿ ಮೃತ್ಯುವನ್ನು ‘ಸೋಲಿಸಿದ’ ಕೀರ್ತಿ ಮನುಷ್ಯನಿಗೆ ದಕ್ಕಿತು!

ಎರಡನೆಯ ಮಹಾಯುದ್ಧ ವಿಶ್ವದ ಎರಡನೆಯ ಮಹಾಯುದ್ಧವು ಬಹು ದೊಡ್ಡ ಪ್ರಮಾಣದಲ್ಲಿ ನಡೆಯಿತು. ಈ ಯುದ್ಧದಲ್ಲಿ ಜೆಟ್ ವಿಮಾನಗಳನ್ನು, ರಡಾರುಗಳನ್ನು ಹಾಗೂ ಪರಮಾಣು ಬಾಂಬುಗಳನ್ನು ಬಳಸಿದ ವಿಷಯ ನಮಗೆ ತಿಳಿದೇ ಇದೆ. ವೈದ್ಯ ವಿಜ್ಞಾನದ ಮುಂದಿನ ಮೈಲಿಗಲ್ಲನ್ನು ನೆಡಲು ಈ ಫೈಟರ್ ಪೈಲಟ್ಟುಗಳು ನೆರವಾದರು.

ಗುರುತ್ವಾಕರ್ಷಣೆ ಅಥವಾ ಗ್ರಾವಿಟೇಷನ್ ನಮಗೆಲ್ಲ ಗೊತ್ತು. ಇದನ್ನು ‘ಜಿ’ ಎಂದು ಸಂಕ್ಷಿಪ್ತವಾಗಿ ದಾಖಲಿಸುವುದು ವಾಡಿಕೆ. ಭೂಮಿಯು ನಮ್ಮ ದೇಹವನ್ನು 9.8 ಮೀಟರ್/ ಸೆಕೆಂಡ್ ಸ್ಕ್ವೇರ್ ವೇಗೋತ್ಕರ್ಷದಲ್ಲಿ (ಆಕ್ಸಿಲರೇಷನ್) ತನ್ನೆಡೆಗೆ ಸೆಳೆಯುತ್ತಿರುತ್ತದೆ. ಇದು ನಮ್ಮ ಅನುಭವಕ್ಕೆ ಬರುವುದಿಲ್ಲ. ಇದು ‘೧-ಜಿ’ಗೆ ಸಮ. ಜೆಟ್ ವಿಮಾನಗಳಲ್ಲಿ ಸಂಚರಿಸು ವಾಗ ಪೈಲಟ್ಟುಗಳು ೪-೬ ಜಿ ಅನುಭವಕ್ಕೆ ಒಳಗಾಗಬಹುದು.

೫-ಜಿ ಗಿಂತ ಹೆಚ್ಚಿನ ಜಿ ಯನ್ನು ‘ಹೈ ಜಿ-ಫೋರ್ಸ್’ ಎಂದು ಕರೆಯುವರು. ಈ ಹೆಚ್ಚಿನ ಜಿ ವೇಗೋತ್ಕರ್ಷಕ್ಕೆ ಸಿಲುಕಿದ ದೇಹದ ರಕ್ತದಲ್ಲಿ ಬಹುಪಾಲು ರಕ್ತವು ದೇಹದ ಕೆಳಗಿನ ಭಾಗಕ್ಕೆ ಹರಿದು, ಮಿದುಳಿಗೆ ಸರಬರಾಜಾಗುವ ರಕ್ತದ ಪ್ರಮಾಣವು ಕಡಿಮೆಯಾಗುತ್ತದೆ. ಆಗ ಕಣ್ಣು ಕತ್ತಲಿಡುತ್ತದೆ ಹಾಗೂ ಕ್ರಮೇಣ ಸ್ಮೃತಿಯು ಪೂರ್ಣ ಪ್ರಮಾಣದಲ್ಲಿ ನಾಶವಾಗುತ್ತದೆ.

ಪೈಲಟ್ಟನ್ನು ಈ ಪ್ರಜ್ಞಾಹೀನ ಸ್ಥಿತಿಯಿಂದ ಬೇಗ ಸ್ಮೃತಿಗೆ ತರದಿದ್ದರೆ, ಮಿದುಳಿಗೆ ಶಾಶ್ವತ ಹಾನಿಯಾಗಬಹುದು ಹಾಗೂ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಜೀವವು ಹೋಗಬಹುದು. 1956. ಆಸ್ಟ್ರಿಯಾ ಸಂಜಾತ ಪೀಟರ್ ಸೇಫರ್ (1924-2003) ಎಂಬ ಅರಿವಳಿಕೆಯ ತಜ್ಞ ಹಾಗೂ ಅಮೆರಿಕದ ಜೇಮ್ಸ್ ಓಟಿಸ್ ಈಲಮ್ (1918-1995) ಎಂಬ ಶ್ವಾಸಕೋಶಗಳ ಅಂಗಕ್ರಿಯಾ ಸಂಶೋಧಕ ಇಬ್ಬರೂ ಸೇರಿಕೊಂಡು, ಈಗಾಗಲೇ ವೈದ್ಯವಿಜ್ಞಾನವು ಮರೆತು ಹೋಗಿದ್ದ, ಬಾಯಿಂದ ಬಾಯಿಗೆ ಉಸಿರನ್ನು ತುಂಬುವ ವಿಧಾನವನ್ನು ಮರು-ಅನ್ವೇಷಿಸಿ ದರು.

ಪ್ರಜ್ಞೆ ತಪ್ಪಿರುವ ಪೈಲಟ್ಟನಿಗೆ ಈ ರೀತಿ ಕೃತಕ ಉಸಿರಾಟವನ್ನು ನೀಡುತ್ತಿದ್ದರೆ, ಜೀವ ಉಳಿಯುವಷ್ಟು ಆಕ್ಸಿಜನ್ ದೇಹಕ್ಕೆ ಪೂರೈಕೆಯಾಗುತ್ತದೆ ಎನ್ನುವ ವಿಚಾರವನ್ನು ಪ್ರಯೋಗ ಸಮೇತ ನಿರೂಪಿಸಿದರು. ಕೂಡಲೇ ಈ ವಿಧಾನವನ್ನು ಎಲ್ಲ ಪೈಲಟ್ಟುಗಳು ಕರಗತ ಮಾಡಿಕೊಂಡರು.

ಈಗ ಉಳಿದದ್ದು ಹೃದಯ ಮತ್ತು ಶ್ವಾಸಕೋಶಗಳನ್ನು ಒಟ್ಟಿಗೆ ಪುನಃಶ್ಚೇತನಗೊಳಿಸುವ ಪ್ರಮಾಣಬದ್ಧ ಕಾರ್ಯವಿಧಾನವನ್ನು ರೂಪಿಸುವುದಾಗಿತ್ತು.

ಶವವು ಮತ್ತೆ ಉಸಿರಾಡಿತು: 1960. ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ. ಡಾ. ವಿಲಿಯಂ ಕೌವೆನ್‌ಹೋವೆನ್ (1886-1975) ಎಂಬ ಇಲೆಕ್ಟ್ರಿಕಲ್ ಎಂಜಿನಿಯರ್. ಇವರು ತತ್ತರ ನಿವಾರಕ (ಡಿಫಿಬ್ರಿಲ್ಲೇಟರ್) ಗಳನ್ನು ಬಳಸಿ ನಾಯಿಗಳ ಮೇಲೆ ಅಧ್ಯಯನವನ್ನು ಮಾಡುತ್ತಿದ್ದರು. ಆಗ ಅವರು ಒಂದು ಕುತೂಹಲಕರ ವಿಚಾರವನ್ನು ಗಮನಿಸಿದರು. ಒಂದು ಸಲ ಶಾಕ್ ನೀಡಿ ಆದ ಮೇಲೆ, ಮತ್ತೊಂದು ಶಾಕ್ ನೀಡುವ ಮೊದಲು, ಎದೆಯ ಪ್ರದೇಶವನ್ನು ಒತ್ತಿದರೆ, ಅದು ಹೃದಯದಿಂದ ರಕ್ತವನ್ನು ಚಿಮ್ಮಿಸುತ್ತದೆ ಎನ್ನುವ ವಿಚಾರವನ್ನು ಮತ್ತೆ ಮತ್ತೆ ಪ್ರಯೋಗಗಳನ್ನು ಮಾಡಿ ಖಚಿತಪಡಿಸಿಕೊಂದರು.

ಇದನ್ನು ಸೇ-ರ್ ಮತ್ತು ಈಲಮ್ ಅವರಿಗೆ ತಿಳಿಸಿದರು. ಮೂವರೂ ಸೇರಿ ಅಧ್ಯಯನವನ್ನು ಮುಂದುವರಿಸಿದರು. ಒಂದು ನಿಮಿಷದಲ್ಲಿ ೬೦ ಸಲ ಎದೆಯನ್ನು ಒತ್ತಿ, ಎರಡು ಸಲ ಬಾಯಿಯಿಂದ ಬಾಯಿಗೆ ಗಾಳಿಯನ್ನು ತುಂಬಿದರೆ, ಹೃದಯವು ಮಿದುಳಿಗೆ ಅಗತ್ಯವಾದ ಆಕ್ಸಿಜನ್ ಅನ್ನು ರಕ್ತದ ಮೂಲಕ ಪೂರೈಸುತ್ತದೆ ಎನ್ನುವುದನ್ನು ಮನವರಿಕೆ ಮಾಡಿ ಕೊಂಡರು. ಈಗ ಪ್ರಪಂಚದ ಮುಂದೆ ಹೃದಯ ಮತ್ತು ಶ್ವಾಸಕೋಶಗಳನ್ನು ಏಕಕಾಲ ದಲ್ಲಿ ಪುನಶ್ಚೇತನಗೊಳಿಸುವ ಕಾರ್ಯವಿಧಾನ ‘ಸಿಪಿಆರ್’ ರೂಪುಗೊಂಡಿತು!

ರಿಸಸಿ ಆನಿ: ವಿಜ್ಞಾನಿಗಳೇನೋ ಪ್ರಮಾಣಬದ್ಧ ‘ಸಿಪಿಆರ್’ ಅನ್ನು ರೂಪಿಸಿದರು. ಆದರೆ ಇದನ್ನು ಎಲ್ಲ ಯೋಧರಿಗೆ ಹಾಗೂ ಶ್ರೀಸಾಮಾನ್ಯರಿಗೆ ಹೇಗೆ ಕಲಿಸುವುದು? ಬದುಕಿರು ವವರ ಹಾಗೂ ಆರೋಗ್ಯವಾಗಿರುವವರ ಎದೆಯನ್ನು ಒತ್ತುವ ಅಥವಾ ಬಾಯಿಂದ ಬಾಯಿಗೆ ಉಸಿರನ್ನು ತುಂಬುವ ವಿಧಾನವನ್ನು ಕಲಿಯುವುದಂತೂ ಪ್ರಾಯೋಗಿಕವಾಗಿ ಅಸಾಧ್ಯವಾದ ಮಾತು. ಹಾಗಾಗಿ ಮಕ್ಕಳಿಂದ ಮುದುಕರವರೆಗೆ, ಎಲ್ಲರಿಗೂ ಸಿಪಿಆರ್ ಕಲಿಸುವುದು ಹೇಗೆ?

1961. ನಾರ್ವೇ ದೇಶದಲ್ಲಿ ಅಸ್ಮಂಡ್ ಲೆರ್ಡಲ್ ಎಂಬ ಬೊಂಬೆ ತಯಾರಕನಿದ್ದ. ಸೇಫರ್ ಹಾಗೂ ಅಸ್ಮಂಡ್ ಇಬ್ಬರು ಸೇರಿ ಮಾನವರೂಪಿ ಬೊಂಬೆಯೊಂದನ್ನು ತಯಾರಿಸಿದರು. ಆ ಬೊಂಬೆಗೆ ಮನುಷ್ಯನ ಮುಖವೊಂದನ್ನು ತೊಡಿಸಬೇಕಿತ್ತು.

ಫ್ರಾನ್ಸಿನ ಸೀನ್ ನದಿಯಲ್ಲಿ ಓರ್ವ ಅಜ್ಞಾತ ಮಹಿಳೆಯು ಮುಳುಗಿ ಸತ್ತಿದ್ದಳು. ಆಕೆಯ ಮುಖವನ್ನೇ ಈ ಹೊಸ ಬೊಂಬೆಗೆ ಜೋಡಿಸಿದರು. ಆ ಬೊಂಬೆಗೆ ಆನಿ ಎಂದು ಹೆಸರಿಟ್ಟರು. ಈಕೆಯ ಪೂರ್ತಿ ಹೆಸರು ಆನಿ ರಿಸಸಿ. ರಿಸಸಿ ಎನ್ನುವುದು ರಿಸಸಿಟೇಷನ್ ಅಥವಾ ಪುನಃಶ್ಚೇತನ ಎನ್ನುವ ಹೆಸರಿನ ಸಂಕ್ಷಿಪ್ತ ರೂಪ. ಆನಿಯ ಮುಖವು ಸುಂದರವಾಗಿದೆ ಹಾಗೂ ಪ್ರಶಾಂತವಾಗಿದೆ. ಬಾಯಿಯಿಂದ ಬಾಯಿಗೆ ಉಸಿರನ್ನು ತುಂಬುವ ವಿಧಾನವನ್ನು ಈಕೆಯ ಮೇಲೆ ಪ್ರಯೋಗಿಸಿ ಕಲಿಯಬೇಕಾಗುತ್ತಿತ್ತು.

ಹಾಗೆಯೇ ಎದೆಯನ್ನು ನಿಮಿಷಕ್ಕೆ ೬೦ ಸಲ ಒತ್ತುವುದನ್ನು ಈಕೆಯ ಒಡಲಿನ ಮೇಲೆಯೇ ಕಲಿಯಬೇಕಾಗಿತ್ತು. ಹಾಗಾಗಿ ಆನಿ ಎಂಬ ಹೆಸರಿನ ಈ ಅಜ್ಞಾತ ಗುರುವು ಲಕ್ಷಾಂತರ ಜನರಿಗೆ ಸಿಪಿಆರ್ ಕಾರ್ಯವಿಧಾನವನ್ನು ಕಲಿಯಲು ಸಹಾಯ ಮಾಡಿದ್ದಾಳೆ.

ಸಿಪಿಆರ್ ಪ್ರಮಾಣಬದ್ಧವಾಗುತ್ತಿದ್ದ ಹಾಗೆ ಅಮೆರಿಕನ್ ಹಾರ್ಟ್ ಅಸೋಸಿಯೇಷನ್, ರೆಡ್ ಕ್ರಾಸ್ ಮತ್ತು ವಿಶ್ವದ ಮಿಲಿಟರಿ ಪಡೆಗಳು ಈ ಸಿಪಿಆರ್ ಕಾರ್ಯವಿಧಾನವನ್ನು ಕಲಿಸಲಾ ರಂಭಿಸಿದರು. ಈ ಬಗ್ಗೆ ಅನೇಕ ಪೋಸ್ಟರುಗಳು, ಪುಸ್ತಕಗಳು, ಕೈಪಿಡಿಗಳು, ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳು ಮತ್ತು ಅಸಂಖ್ಯ ಕಾರ್ಯಾಗಾರ ಗಳನ್ನು ಜಗತ್ತಿನ ಎಲ್ಲ ದೇಶಗಳು ನಡೆಸಲಾರಂಭಿಸಿದವು.

ಕರ್ನಾಟಕದಲ್ಲಿ ರೆಡ್ ಕ್ರಾಸ್ ಮತ್ತು ಅನೇಕ ಆಸ್ಪತ್ರೆಗಳು ಸಿಪಿಆರ್ ಅನ್ನು ಕನ್ನಡ ಹಾಗೂ ಸ್ಥಳೀಯ ಭಾಷೆಗಳಲ್ಲಿ ಕಲಿಸುತ್ತಿವೆ. ಈಗ ಒಬ್ಬ ಹೈಸ್ಕೂಲು ವಿದ್ಯಾರ್ಥಿಯೂ, ಹೃದಯಾಘಾತ ಇಲ್ಲವೇ ಹೃದಯ ಸ್ತಂಭನವಾಗಿ ಮೃತ್ಯುಮುಖನಾಗಿರುವ ವಯಸ್ಕನನ್ನು ಮತ್ತೆ ಹಿಂದಕ್ಕೆ ಕರೆತರಬಲ್ಲ! ಸಿಪಿಆರ್, ಅಷ್ಟು ಶಕ್ತಿಶಾಲಿಯಾಗಿದೆ. ಮಕ್ಕಳೂ ತಮ್ಮ ಬರಿಗೈಯಲ್ಲಿ ಸಾವಿನೊಡನೆ ಯಶಸ್ವಿಯಾಗಿ ಹೋರಾಡಲು ಸಾಧ್ಯವಾಗಿದೆ.

ಸಮಯದೊಡನೆ ಸ್ಪರ್ಧೆ: ನಮ್ಮ ಇಡೀ ದೇಹಕ್ಕೆ ಎಷ್ಟು ಆಕ್ಸಿಜನ್ ಬೇಕೋ, ಆಷ್ಟು ಆಕ್ಸಿಜನ್‌ನನಲ್ಲಿ ಶೇ.೨೦ರಷ್ಟನ್ನು ಮಿದುಳೊಂದೇ ಬಳಸಿಕೊಳ್ಳುತ್ತದೆ. ಮಿದುಳಿನ ನರಕೋಶಗಳು ಹೆಚ್ಚೆಂದರೆ ೪ ನಿಮಿಷಗಳವರೆಗೆ ಜೀವವನ್ನು ಹಿಡಿದಿಟ್ಟುಕೊಳ್ಳಬಲ್ಲವು. ನಂತರ ಆಕ್ಸಿಜನ್ ಪೂರೈಕೆ ಒಂದು ನಿಮಿಷ ತಡವಾದರೆ ಶೇ.೧೦ರಷ್ಟು ನರಕೋಶಗಳು ಸತ್ತಿರುತ್ತವೆ. ಮತ್ತೊಂದು ನಿಮಿಷ ತಡವಾದರೆ ಇನ್ನೂ ಶೇ.೧೦ರಷ್ಟು ನರಕೋಶಗಳು ಸಾಯುತ್ತವೆ. ಹೀಗೆ ಒಂದೊಂದು ನಿಮಿಷ ತಡವಾದರೂ ಶೇ.೧೦ರಷ್ಟು ನರಕೋಶಗಳು ಸಾಯುವುದು ಮುಂದುವರಿಯುತ್ತದೆ.

ಸಿಪಿಆರ್ ಎಂದರೆ ಸಮಯದೊಡನೆ ಸ್ಪರ್ಧೆ, ಸಾವಿನೊಡನೆ ಸ್ಪರ್ಧೆ. ಸಿಪಿಆರ್, ಮಿದುಳಿಗೆ ಅಗತ್ಯವಾದ ಆಕ್ಸಿಜನ್ ಅನ್ನು ತಾತ್ಕಾಲಿಕವಾಗಿ ಪೂರೈಸುತ್ತಿರುತ್ತದೆ.

ಅಷ್ಟರಲ್ಲಿ ಸೂಕ್ತ ಔಷಧಿಗಳು ಅಥವಾ ಡಿಫಿಬ್ರಿಲ್ಲೇಟರ್ ದೊರೆಯಬೇಕು. ಆಗ ಹೃದಯವು ಸ್ವತಂತ್ರವಾಗಿ ಕೆಲಸವನ್ನು ಮಾಡಲಾರಂಬಿಸಿ, ಸಾವನ್ನು ಸೋಲಿಸುತ್ತದೆ.

1970ರಿಂದ, ವಿದೇಶಗಳ ಅಂಬ್ಯುಲೆನ್ಸಿನಲ್ಲಿ ಸಿಪಿಆರ್ ತಜ್ಞರು, ಡಿಫಿಬ್ರಿಲ್ಲೇಟರ್ ಹಾಗೂ ತುರ್ತು ಔಷಧಿಗಳನ್ನು ನೀಡಬಲ್ಲ ನುರಿತವರು ಇರುತ್ತಾರೆ. ಭಾರತದಲ್ಲಿ ಹಾಗೂ ಬೆಂಗಳೂರಿನಲ್ಲಿ ೫ ಜಿ ಆಂಬುಲೆನ್ಸ್ ಸೇವೆ ಈಗ ದೊರೆಯುತ್ತದೆ. ೫ ಜಿ ಆಂಬುಲೆನ್ಸ್ ಎಂದರೆ ಐದನೆಯ ತಲೆಮಾರಿನ ವೈರ್ ಲೆಸ್ ನೆಟ್‌ವರ್ಕ್ ತಂತ್ರಜ್ಞಾನದ ಅನುಕೂಲತೆ ಯಿರುವಂಥದ್ದು.

ಆಂಬುಲೆನ್ಸ್ ಎಂದರೆ ರೋಗಿಯನ್ನು ಸಾಗಿಸುವ ವಾಹನ ಎಂದೇ ಬಹಳ ಜನರ ಕಲ್ಪನೆ. ಆದರೆ ೫ ಜಿ ಅಂಬುಲೆನ್ಸ್ ಒಂದು ‘ಸಂಚಾರಿ ತುರ್ತು ನಿಗಾ ಘಟಕ’ (ಎಮರ್ಜೆನ್ಸಿ ಇಂಟೆನ್ಸಿವ್ ಕೇರ್ ಯೂನಿಟ್) ಎಂದು ಹೆಚ್ಚಿನ ಜನರಿಗೆ ತಿಳಿದಿರಲಾರದು. ರೋಗಿಯು ಆಸ್ಪತ್ರೆಯನ್ನು ತಲುಪುವ ಮೊದಲೇ ಅಗತ್ಯವಾಗಿ ನೀಡಬೇಕಾದ ತುರ್ತು ಚಿಕಿತ್ಸೆಯನ್ನು ನೀಡಿ, ರೋಗಿಯ ಜೀವಾಧಾರಕ ಲಕ್ಷಣಗಳನ್ನು ಸ್ಥಿರಗೊಳಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಒಂದು ಅದ್ಭುತ ಆಧುನಿಕ ವ್ಯವಸ್ಥೆಯಾಗಿದೆ.

ಇದರ ಫೋನ್ ನಂಬರ್ 1066 ಹಾಗೂ 108. ತುರ್ತು ಸಂದರ್ಭಗಳಲ್ಲಿ ಈ ನಂಬರಿಗೆ‌ ಫೋನ್ ಮಾಡಲು ಮರೆಯಬೇಡಿ.