ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishweshwar Bhat Column: ಹೀಗೊಬ್ಬ ಶ್ವಾನ ಅಂಕಣಕಾರ

ಪತ್ರಿಕೋದ್ಯಮದ ಇತಿಹಾಸದಲ್ಲಿ ಪತ್ರಿಕೆಯ ಅಂಕಣವೊಂದು ಜಾಗತಿಕ ಮಟ್ಟದ ಸಾಹಿತ್ಯಿಕ ಬೆಸ್ಟ್ ಸೆಲ್ಲರ್ ಆಗಿ, ನಂತರ ಹಾಲಿವುಡ್‌ನ ಯಶಸ್ವಿ ಚಲನಚಿತ್ರವಾಗಿ ಜನಮನ ಗೆದ್ದ ಅಪರೂಪದ ಉದಾಹರಣೆ ಜಾನ್ ಗ್ರೋಗನ್ ಕೃತಿ. ಅವರ ಅಂಕಣಗಳಲ್ಲಿ ಜೀವಂತವಾಗಿ ಮೈತಳೆದ ಮುದ್ದು, ಚೇಷ್ಟೆಯ ಲ್ಯಾಬ್ರಡಾರ್ ರಿಟ್ರೀವರ್ ಶ್ವಾನ ‘ಮಾರ್ಲೆ’, ಕೇವಲ ಒಂದು ಕುಟುಂಬದ ನಾಯಿಯಾಗಿ ಉಳಿಯದೇ ಜಗತ್ತಿನ ಕೋಟ್ಯಂತರ ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದು ಒಂದು ರೋಚಕ ಕಥೆಯೇ ಸರಿ.

Vishweshwar Bhat Column: ಹೀಗೊಬ್ಬ ಶ್ವಾನ ಅಂಕಣಕಾರ

-

ಸಂಪಾದಕರ ಸದ್ಯಶೋಧನೆ

‘ಪ್ರೆಸ್ ರೀಡರ್’ ಆಪ್‌ನಲ್ಲಿ ನಾನು ನಿತ್ಯವೂ ಅಮೆರಿಕದ ಪ್ರಸಿದ್ಧ ಪತ್ರಿಕೆ- ‘ದ ಫಿಲಡೆಲ್ಫಿಯಾ ಇನ್‌ಕ್ವೈರರ್’ನ್ನು ಓದುತ್ತೇನೆ. ಇದರಲ್ಲಿ ಜಾನ್ ಗ್ರೋಗನ್ ಎಂಬವರು ಬಹಳ ವರ್ಷಗಳಿಂದ ಅಂಕಣ ಬರೆಯುತ್ತಿದ್ದಾರೆ. ನಾನು ಅವರ ಬರಹಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ಅವರು ಬರೆಯುವುದು ನಾಯಿಗಳ ಬಗ್ಗೆ ಮಾತ್ರ. ಅವರಿಗೆ ಜಗತ್ತಿನಾದ್ಯಂತ ಓದುಗರಿದ್ದಾರೆ.

ಪತ್ರಿಕೋದ್ಯಮದ ಇತಿಹಾಸದಲ್ಲಿ ಪತ್ರಿಕೆಯ ಅಂಕಣವೊಂದು ಜಾಗತಿಕ ಮಟ್ಟದ ಸಾಹಿತ್ಯಿಕ ಬೆಸ್ಟ್ ಸೆಲ್ಲರ್ ಆಗಿ, ನಂತರ ಹಾಲಿವುಡ್‌ನ ಯಶಸ್ವಿ ಚಲನಚಿತ್ರವಾಗಿ ಜನಮನ ಗೆದ್ದ ಅಪರೂಪದ ಉದಾಹರಣೆ ಜಾನ್ ಗ್ರೋಗನ್ ಕೃತಿ. ಅವರ ಅಂಕಣಗಳಲ್ಲಿ ಜೀವಂತವಾಗಿ ಮೈತಳೆದ ಮುದ್ದು, ಚೇಷ್ಟೆಯ ಲ್ಯಾಬ್ರಡಾರ್ ರಿಟ್ರೀವರ್ ಶ್ವಾನ ‘ಮಾರ್ಲೆ’, ಕೇವಲ ಒಂದು ಕುಟುಂಬದ ನಾಯಿಯಾಗಿ ಉಳಿಯದೇ ಜಗತ್ತಿನ ಕೋಟ್ಯಂತರ ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದು ಒಂದು ರೋಚಕ ಕಥೆಯೇ ಸರಿ.

ಜಾನ್ ಗ್ರೋಗನ್ ‘ಡೆಟ್ರಾಯಿಟ್ ಫ್ರೀ ಪ್ರೆಸ್’, ‘ಸನ್-ಸೆಂಟಿನೆಲ್’ ಹಾಗೂ ‘ದ ಫಿಲಡೆಲ್ಫಿಯಾ ಇನ್‌ಕ್ವೈರರ್’ ಪತ್ರಿಕೆಗಳಲ್ಲಿ ಮೆಟ್ರೋ ಅಂಕಣಕಾರರಾಗಿ ಕರ್ತವ್ಯ ನಿರ್ವಹಿಸಿದರು. ಸಾಮಾನ್ಯವಾಗಿ ಇಂಥ ಅಂಕಣಗಳು ನಗರದ ಸವಾಲುಗಳು, ಅಪರಾಧ ಜಗತ್ತು ಅಥವಾ ರಾಜಕೀಯ ತಿಕ್ಕಾಟಗಳಿಗೆ ಸೀಮಿತವಾಗಿರುತ್ತವೆ. ಆದರೆ ಗ್ರೋಗನ್ ತಮ್ಮದೇ ಆದ ನವಿರಾದ, ಪ್ರಾಮಾಣಿಕ ಮತ್ತು ಹಾಸ್ಯಭರಿತ ಶೈಲಿಯನ್ನು ಮೈಗೂಡಿಸಿಕೊಂಡರು.

ಇದನ್ನೂ ಓದಿ: Vishweshwar Bhat Column: ಒಬ್ಬ ಮೊಂಡು ಸಂಪಾದಕನ ʼಫ್ಯಾಕ್ಟ್-ಚೆಕಿಂಗ್‌ʼ

ಮಾನವೀಯ ಸಂಬಂಧಗಳ ಸೂಕ್ಷ್ಮ ಎಳೆಗಳು ಮತ್ತು ಮನೆಯ ಒಳಗಿನ ಸಣ್ಣಪುಟ್ಟ ಪ್ರಸಂಗ ಗಳನ್ನು ಅವರು ತೆರೆದಿಡುತ್ತಿದ್ದ ರೀತಿ ಓದುಗರಿಗೆ ತಮ್ಮದೇ ಮನೆಯ ಕಥೆಯೆಂಬ ಆಪ್ತತೆಯನ್ನು ತಂದು ಕೊಡುತ್ತಿತ್ತು. ಗ್ರೋಗನ್ ಬದುಕಿಗೆ ಹಾಗೂ ಅವರ ಬರಹ ಲೋಕಕ್ಕೆ ದೊಡ್ಡ ತಿರುವು ನೀಡಿದ್ದು ಹಳದಿ ಬಣ್ಣದ ಲ್ಯಾಬ್ರಡಾರ್ ತಳಿಯ ನಾಯಿ ‘ಮಾರ್ಲೆ’.

ಜಾನ್ ಮತ್ತು ಅವರ ಪತ್ನಿ ಜೆನ್ನಿ ತಮ್ಮ ವೈವಾಹಿಕ ಜೀವನದ ಆರಂಭಿಕ ದಿನಗಳಲ್ಲಿ, ಮಕ್ಕಳಾಗುವ ಮುನ್ನ ಜವಾಬ್ದಾರಿಯನ್ನು ಕಲಿಯುವ ಉದ್ದೇಶದಿಂದ ಒಂದು ನಾಯಿಮರಿಯನ್ನು ತರಲು ನಿರ್ಧರಿಸಿದರು. ರೆಗ್ಗೇ ಸಂಗೀತ ದಿಗ್ಗಜ ಬಾಬ್ ಮಾರ್ಲೆಯ ನೆನಪಿನಲ್ಲಿ ಆ ನಾಯಿಗೆ ‘ಮಾರ್ಲೆ’ ಎಂದು ಹೆಸರಿಟ್ಟರು. ಆದರೆ ಆ ಮುಗ್ಧ ಮುಖದ ಹಿಂದೆ ಒಂದು ಅವ್ಯಕ್ತ ತುಂಟತನ ಅಡಗಿತ್ತು.

ಅತಿಯಾದ ಚೈತನ್ಯ, ಅಂಜಿಕೆಯಿಲ್ಲದ ಕುಚೇಷ್ಟೆ ಮತ್ತು ಅಪಾರ ತುಂಟಾಟಗಳಿಂದ ಕೂಡಿದ್ದ ಮಾರ್ಲೆ, ನೋಡನೋಡುತ್ತಿದ್ದಂತೆ ಮನೆಯ ಪ್ರತಿಯೊಂದು ವಸ್ತುವನ್ನು ಕಡಿದು, ಸೋಫಾಗಳನ್ನು ಹರಿದು, ಗೋಡೆಗಳನ್ನು ಕೆರೆದು ಮನೆಯ ನೆಮ್ಮದಿಯನ್ನೇ ಕೆಡಿಸಿತು. ಮಾರ್ಲೆಯ ಈ ಅತಿರೇಕದ ವರ್ತನೆಗಳು ಗ್ರೋಗನ್ ಅವರಿಗೆ ತಮ್ಮ ಅಂಕಣಗಳಿಗೆ ಅಮೂಲ್ಯ ಸರಕಾದವು. ಶ್ವಾನ ತರಬೇತಿ ಶಾಲೆಯಿಂದ ಮಾರ್ಲೆಯನ್ನು ಹೊರಹಾಕಿದ ಪ್ರಸಂಗ, ಗುಡುಗು-ಮಿಂಚಿಗೆ ಬೆದರಿ ಬಾಗಿಲುಗಳನ್ನೇ ಮುರಿದು ಹಾಕಿದ ಘಟನೆಗಳು, ರಸ್ತೆಯಲ್ಲಿ ಜನರತ್ತ ಮುನ್ನುಗ್ಗಿ ಸೃಷ್ಟಿಸುತ್ತಿದ್ದ ತಮಾಷೆಯ ಪ್ರಮಾದಗಳನ್ನು ಗ್ರೋಗನ್ ಅತ್ಯಂತ ರಸವತ್ತಾಗಿ, ಸ್ವಯಂ-ಅಣಕದ ಧಾಟಿಯಲ್ಲಿ ತಮ್ಮ ಅಂಕಣಗಳಲ್ಲಿ ಬರೆದರು.

ಯಾವುದೇ ಕೃತಕತೆಯಿಲ್ಲದ ಈ ನಿರೂಪಣೆ ಪತ್ರಿಕೆಯ ಓದುಗರನ್ನು ಅಪಾರವಾಗಿ ಆಕರ್ಷಿಸಿತು. ಸಾಕುಪ್ರಾಣಿಗಳನ್ನು ಸಾಕುವ ಪ್ರತಿಯೊಬ್ಬ ಕುಟುಂಬದಲ್ಲೂ ಇಂಥ ಅವಾಂತರಗಳು ಸಾಮಾನ್ಯ ವಾಗಿದ್ದರಿಂದ, ಮಾರ್ಲೆಯ ಚೇಷ್ಟೆಗಳು ಪ್ರತಿಯೊಬ್ಬ ಓದುಗನಿಗೂ ಕನ್ನಡಿ ಹಿಡಿದಂತೆ ಭಾಸವಾದವು.

ಗ್ರೋಗನ್ ಅವರ ಅಂಕಣ ಪ್ರಕಟವಾಗುವ ದಿನಕ್ಕಾಗಿ ಜನರು ಕಾತರದಿಂದ ಕಾಯುವಂತಾಯಿತು. ಕಾಲಕ್ರಮೇಣ ಗ್ರೋಗನ್ ಕುಟುಂಬ ವಿಸ್ತಾರವಾಯಿತು. ಮೂವರು ಮಕ್ಕಳು ಜನಿಸಿದರು. ಈ ಮಕ್ಕಳ ಬೆಳವಣಿಗೆಯ ನಡುವೆ ಮಾರ್ಲೆಯೂ ವೃದ್ಧಾಪ್ಯದತ್ತ ಸಾಗಿತು. ಯೌವನದಲ್ಲಿ ಮನೆಯನ್ನೆಲ್ಲ ಅಲ್ಲೋಲ ಕಲ್ಲೋಲ ಮಾಡುತ್ತಿದ್ದ ಅದೇ ನಾಯಿ, ಮಕ್ಕಳಿಗೆ ರಕ್ಷಣೆಯ ಗೋಡೆಯಾಗಿ, ಕುಟುಂಬಕ್ಕೆ ನಿಷ್ಕಲ್ಮಶ ಪ್ರೀತಿಯ ಸಂಕೇತವಾಗಿ ನಿಂತಿತು.

ಹದಿಮೂರು ವರ್ಷಗಳ ಕಾಲ ಆ ಕುಟುಂಬದ ಸುಖ-ದುಃಖ, ಆತಂಕ, ಸಂಭ್ರಮ ಎಲ್ಲದಕ್ಕೂ ಮಾರ್ಲೆ ಮೂಕ ಸಾಕ್ಷಿಯಾಗಿತ್ತು. ಅಂತಿಮವಾಗಿ ವಯೋಸಹಜ ಕಾಯಿಲೆಗಳಿಂದ ಮಾರ್ಲೆ ಸಾವನ್ನಪ್ಪಿದಾಗ, ಜಾನ್ ಗ್ರೋಗನ್ ‘ದ ಫಿಲಡೆಲ್ಫಿಯಾ ಇನ್‌ಕ್ವೈರರ್’ ಪತ್ರಿಕೆಯಲ್ಲಿ ಅದಕ್ಕೊಂದು ಭಾವಪೂರ್ಣ ವಿದಾಯ ಅಂಕಣ ಬರೆದರು.

ಒಬ್ಬ ಅಂಕಣಕಾರ ತನ್ನ ಸಾಕುಪ್ರಾಣಿಗೆ ಬರೆದ ಆ ಶ್ರದ್ಧಾಂಜಲಿ ಅಮೆರಿಕದಾದ್ಯಂತ ಓದುಗರ ಕಣ್ಣಾಲಿ ಗಳನ್ನು ತೇವಗೊಳಿಸಿತು. ನೂರಾರು ಓದುಗರು ತಮ್ಮ ಸಾಂತ್ವನದ ಪತ್ರಗಳನ್ನು ಪತ್ರಿಕೆಗೆ ರವಾನಿಸಿದರು. ಓದುಗರಿಂದ ಹರಿದುಬಂದ ಅಭೂತಪೂರ್ವ ಸ್ಪಂದನೆ ಮತ್ತು ಅಂಕಣಗಳ ಅಪಾರ ಜನಪ್ರಿಯತೆಯು ಗ್ರೋಗನ್ ಅವರನ್ನು ಈ ಇಡೀ ಅನುಭವವನ್ನು ಒಂದು ಸಮಗ್ರ ಪುಸ್ತಕವನ್ನಾಗಿ ರೂಪಿಸಲು ಪ್ರೇರೇಪಿಸಿತು.

ಹೀಗೆ 2005ರಲ್ಲಿ ‘Marley & Me: Life and Love with the World's Worst Dog’ಎಂಬ ಕೃತಿ ಬೆಳಕು ಕಂಡಿತು. ನಂತರ ‘ಮಾರ್ಲೆ & ಮೀ’ ಅದೇ ಹೆಸರಿನ ಚಲನಚಿತ್ರವಾಗಿ ತೆರೆ ಕಂಡಿತು.