Yagati Raghu Naadig Column: ಉಕ್ಕೇರಿದ ಉಪಾಯ, ಮತ್ತೇರಿದ ಮದನ, ಕಿಕ್ಕೇರಿದ ಕಥನ
ಅದಕ್ಕೆ ಹೊಸ ಶಿಷ್ಯರೊಬ್ಬರು, “ಅರೆ! ಹೌದಾ ಗುರುಗಳೇ? ಬಾಳೆಹಣ್ಣು-ಊದುಬತ್ತಿ-ಕರ್ಪೂರ ಮಾರುವ ನಮ್ಮೂರಿನ ಗೂಡಂಗಡಿಯಲ್ಲಿ ನೇತು ಹಾಕಿರೋ ಕ್ಯಾಲೆಂಡರ್‌ನಲ್ಲಿ ಒಂದಿಷ್ಟು ರೂಪದರ್ಶಿಗಳ ಜತೆ ಈ ಕಳ್ಳಬೆಕ್ಕು ನಿಂತಿರೋದನ್ನು ನೋಡಿದ್ದ ನೆನಪಿದೆ. ಸಂತ್ರಸ್ತೆಯ ಜಮೀನು ಕಸಿದ, ಶಾರದೆಯ ಮಾನ ಕಸಿಯಲು ಹೋದ ಈ ‘ಮದ್ಯ-ದೊರೆ’ ಜನನಾಯಕನಾ?!" ಎಂದು ಉದ್ಗರಿಸಿದಕ್ಕೆ ಹಳೆ ಶಿಷ್ಯರೆಲ್ಲರೂ ನಕ್ಕರು...

-

ರಸದೌತಣ (ಭಾಗ-19)
naadigru@gmail.com
ಗುರುಮಾತೆ ತಂದಿಟ್ಟ ಸುಡುಸುಡು ಕಾಫಿ-ಹಪ್ಪಳವನ್ನು ಕೈಗೆತ್ತಿಕೊಳ್ಳುವ ಬದಲು ಅವಧೂತರು, “ಬಯಸಿದಾಗೆಲ್ಲಾ ಹೀಗೆ ‘ಜಠರಬಾಧೆ’ ಯನ್ನು ನೀಗುವ ಅನ್ನಬ್ರಹ್ಮನನ್ನು, ಕಳ್ಳಬೆಕ್ಕಿನ ‘ಕಾಮಬಾಧೆ’ ನೀಗಿಸುವ ಸಂಚಿನ ನೆರವೇರಿಕೆಗೆ ಬಳಸಿಕೊಳ್ಳಲು ಆ ಅಡುಗೆಭಟ್ಟ ಹೊರಟಿದ್ದನಲ್ಲಾ" ಎಂದಿದ್ದು ಶಿಷ್ಯರ ಕುತೂಹಲವನ್ನು ಮತ್ತಷ್ಟು ಕೆರಳಿಸಿತು. ಶಾರದೆಯ ಪ್ರಕರಣದಲ್ಲಿ ಈ ಅಡುಗೆಭಟ್ಟನ ಕೀಟಲೆ-ಕೋಟಲೆಗಳೇ ಸಾಕಷ್ಟಿವೆ ಎಂಬ ಅವರ ಪೂರ್ವಗ್ರಹಿಕೆ ಮತ್ತಷ್ಟು ಗಟ್ಟಿಯಾಯಿತು.
ಮನೆಯ ಹಜಾರದಲ್ಲಿ ಕ್ಷಣಕಾಲ ಮೌನ ಆವರಿಸಿತ್ತು. ಅದಕ್ಕೆ ಕಾರಣ, ಒಂದೆಡೆ ಅವಧೂತರು ‘ಶಿವ ಶಿವಾ...’ ಎನ್ನುತ್ತಾ ಕಣ್ಣು ಮುಚ್ಚಿಕೊಂಡು ಅದ್ಯಾರೊಂದಿಗೋ ಮೌನ ಅನುಸಂಧಾನದಲ್ಲಿದ್ದರೆ, ಮತ್ತೊಂದೆಡೆ ಶಿಷ್ಯರು ‘ಮೌನ ಮೆಲುಕಿಗೆ’ ಒಡ್ಡಿಕೊಂಡಿದ್ದು. ಸಮಾಜಸೇವೆಯ ಸದಾಶಯ ದೊಂದಿಗೆ ಶುರುವಾದ ಸಂಸ್ಥೆಯಲ್ಲಿನ ಸಿಬ್ಬಂದಿ ಮತ್ತು ಸಹವರ್ತಿಗಳು ಒಂದೊಮ್ಮೆ ಕರ್ತವ್ಯಭ್ರಷ್ಟ ರಾದರೆ, ಅಂಥ ಸಂಸ್ಥೆಯ ಆವರಣದೊಳಗೆ ಪಟ್ಟಭದ್ರ ಹಿತಾಸಕ್ತಿಗಳು ತೂರಿಕೊಂಡು ಆ ಸದಾಶಯಕ್ಕೇ ಹೇಗೆ ಗ್ರಹಣ ಹಿಡಿಸಿಬಿಡುತ್ತವೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಂತಿತ್ತು ಶಾರದೆಯ ಕಥಾನಕ. ಹೀಗಾಗಿ, ಪ್ರಸಿದ್ಧ ಮಠವೊಂದರಲ್ಲಿ ನಡೆದ ಇಂಥದೇ ಪ್ರಸಂಗ ಮತ್ತು ತರುವಾಯದ ಬೆಳವಣಿಗೆ ಗಳೊಂದಿಗೆ ಶಾರದೆಯ ಕಥನವನ್ನೂ ಸಮೀಕರಿಸುತ್ತಿತ್ತು ಶಿಷ್ಯರೆಲ್ಲರ ಮನ.
“ಶಂಭೋ ಶಂಕರ, ಹರಹರ ಮಹಾದೇವ. ನಿನಗೆ ಶುಭವಾಗಲಿ ತಾಯೀ..." ಎಂಬ ದನಿಯು ಮೌನ ಸಾಮ್ರಾಜ್ಯದಲ್ಲಿ ವಿಹರಿಸುತ್ತಿದ್ದ ಶಿಷ್ಯರನ್ನು ಎಬ್ಬಿಸಿತು.
ಅದು ಅವಧೂತರ ದನಿ. ಹಾಗೆ ಅವರು ‘ನಿನಗೆ ಶುಭವಾಗಲಿ ತಾಯೀ..’ ಎಂದಿದ್ದು ಅರೆಕ್ಷಣ ಬೆರಗು ಮೂಡಿಸಿದರೂ, ಪ್ರಾಯಶಃ ಅದು ಅವಧೂತರು ತಾವು ಕೂತಲ್ಲಿಂದಲೇ ‘ಟೆಲಿಪತಿ’ಯ ಮೂಲಕ ಶಾರದೆಯೊಂದಿಗೆ ಸಂವಹನ ನಡೆಸಿ ಸಮಾಧಾನಿಸಿದ ಪರಿಯಿರಬೇಕು ಎಂದು ಶಿಷ್ಯರು ಅರ್ಥಮಾಡಿಕೊಂಡರು (ವ್ಯಕ್ತಿಯೊಬ್ಬರು ಜ್ಞಾನೇಂದ್ರಿಯಗಳನ್ನು ನೆಚ್ಚದೆ ಭಾವಲಹರಿಯ ಮೂಲಕವೇ ಮತ್ತೊಬ್ಬರ ಮನಸ್ಸನ್ನು ಪ್ರವೇಶಿಸಿ, ಸಂವಹನ ನಡೆಸಿ, ಅಲ್ಲಿ ಸುರಿಸುತ್ತಿರುವ ಭಾವನೆ/ ಆಲೋಚನೆಗಳನ್ನು ಅರಿಯುವ ಸಾಮರ್ಥ್ಯಕ್ಕೆ ಸ್ಥೂಲವಾಗಿ ‘ಟೆಲಿಪತಿ‘ ಅಥವಾ ‘ಅನ್ಯಮನಃಸ್ಪರ್ಶನ’ ಎನ್ನಲಾಗುತ್ತದೆ).
ಇದನ್ನೂ ಓದಿ: Yagati Raghu Naadig Column: ಜನಸೇವೆಯ ನೆಪದಲ್ಲಿ ಕಳ್ಳಬೆಕ್ಕಿನ ಶಯನಸೇವೆ...
ಎರಡೂ ಹಸ್ತವನ್ನು ಪರಸ್ಪರ ಉಜ್ಜಿಕೊಂಡು, ಉತ್ಪತ್ತಿಯಾದ ಲಘುಶಾಖವನ್ನು ಕಣ್ಣುಗಳಿಗೆ ನವಿರಾಗಿ ಸವರಿಕೊಂಡು, ನಿಧಾನವಾಗಿ ಕಣ್ತೆರೆದ ಅವಧೂತರು, “ಅರೆ! ಇದೇನ್ರಯ್ಯಾ, ಬಿಸಿಬಿಸಿ ಹುರುಳಿ ಹಪ್ಪಳ, ಕಾಫಿಯನ್ನು ಸವಿಯೋದು ಬಿಟ್ಟು ಸುಮ್ಮನೆ ಕೂತಿದ್ದೀರಲ್ಲಾ?" ಎಂದು ತಮಾಷೆ ಮಾಡಿದರು, ಸ್ವತಃ ತಾವು ಕೂಡ ಕೆಲಕ್ಷಣದವರೆಗೆ ಅದೇ ಸ್ಥಿತಿಯಲ್ಲಿದ್ದರೂ...!
ಅವರು ಲಹರಿಗೆ ಮರಳಿದ್ದನ್ನು ಗ್ರಹಿಸಿದ ಶಿಷ್ಯರೊಬ್ಬರು ಕಾಫಿಯನ್ನು ಸವಿಯುತ್ತಾ, “ಸಂತ್ರಸ್ತ ಮಹಿಳೆಯಿಂದ ಕಳ್ಳ ಬೆಕ್ಕು ಕಸಿದ ಜಮೀನಿನ ತೋಟದ ಮನೆಯಲ್ಲೇ ಶಾರದೆಯ ಮಾನವನ್ನು ಕಸಿಯುವ ಸಂಚು ಕೂಡ ರೂಪುಗೊಂಡಿದ್ದು ಅಂದಿರಲ್ಲಾ ಗುರುಗಳೇ, ಕಥನದಲ್ಲಿ ಇಷ್ಟೊಂದು ಕ್ರೌರ್ಯವಿದೆಯಾ, ಒಳಸುಳಿಗಳಿವೆಯಾ?" ಎಂದು ಕೇಳಿದರು.
ಅವಧೂತರು ಒಂದೆರಡು ಬಾರಿ ಕಾಫಿಯನ್ನು ಗುಟುಕರಿಸಿ, “ಹೌದು. ಸ್ಫಟಿಕಶುಭ್ರ ನೀರಿನಂತೆ ಇರಬೇಕಾದ ‘ಸಂಭಾವಿತ’ ಮನಸ್ಸನ್ನು, ಕಾಮವಿಕೃತಿಯೆಂಬ ಕಡ್ಡಿಯು ಆಳಕ್ಕಿಳಿದು ಕಲಕಿದಾಗ ಅದು ರಾಡಿಯಾಗಿ ‘ಲಂಪಟಮನ’ವಾಗಿ ಬದಲಾಗುತ್ತದೆ. ನಮ್ಮ ಹಿಂದಿನವರು ಕಾಮವನ್ನು ‘ಕೆಟ್ಟದು’ ಎಂದೇನೂ ಹೇಳಿಲ್ಲ. ಆದರೆ ಅದು ಕಡಿವಾಣ ಹಾಕಿದ ಕುದುರೆಯಾಗಿರಬೇಕು, ಅದಕ್ಕೊಂದು ಬೇಲಿಯಿರಬೇಕು, ಇತಿಮಿತಿ ಇರಬೇಕು, ಒಬ್ಬ ಸಂಗಾತಿಗಷ್ಟೇ ಅದು ಸೀಮಿತ ವಾಗಿರಬೇಕು. ಇಲ್ಲವಾದಲ್ಲಿ ಅದಕ್ಕೆ ವಿಕೃತಿಯ ಛಾಯೆ ಒದಗುವುದು ದಿಟ. ಇಂಥ ವಿಕೃತಿಯನ್ನು ಮೈಗಂಟಿಸಿ ಕೊಂಡಿದ್ದ ಕಳ್ಳಬೆಕ್ಕು, ಪಟ್ಟಣದ ಆ ಸಮಾಜಸೇವಾ ಸಂಸ್ಥೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಾಗ ಲಾದರೂ ಲಗಾಮನ್ನು ಭದ್ರವಾಗಿ ಕಟ್ಟಿಕೊಂಡಿರಬೇಕಿತ್ತು. ಆದರೆ ಅಂದು ದೇವರ ಪ್ರಾರ್ಥನೆ ಮಾಡಿದ ಶಾರದೆಯ ಮೇಲೆ ಅದು ಕಣ್ಣುಹಾಕಿತು. ತನ್ನ ವಾಂಛೆಗೆ ಅವಳನ್ನು ಬಳಸಿಕೊಳ್ಳಲು ಹಪಹಪಿಸಿತು, ಆಕೆಗೆ ಹಣದಾಸೆಯನ್ನೂ ತೋರಿಸಿತು.
ಆದರೆ, ಶಾರದೆ ಇಂಥದಕ್ಕೆಲ್ಲ ಬಗ್ಗುವ ಹೆಣ್ಣಲ್ಲ ಎಂದರಿವಾದಾಗ, ಕಳ್ಳಬೆಕ್ಕಿನ ಹಠ ಮತ್ತು ವಾಂಛೆ ತಾರಕಕ್ಕೇರಿದವು. ಇದರ ಸುಳಿವು ಹಿಡಿದ ಅಡುಗೆಭಟ್ಟ ‘ನಳಪಾಕ’ ಈ ನಿಟ್ಟಿನಲ್ಲಿ ಕಳ್ಳಬೆಕ್ಕಿಗೆ ನೆರವಾಗಿ, ಪ್ರತಿಯಾಗಿ ಅದರಿಂದ ದಂಡಿಯಾಗಿ ದುಡ್ಡು ಗಿಟ್ಟಿಸುವ ಸಂಚು ಹೂಡಿದ...
“ಶಾರದೆಯನ್ನು ಕಳ್ಳಬೆಕ್ಕಿನ ತೆಕ್ಕೆಗೆ ಬೀಳಿಸಬೇಕೆಂದರೆ, ಏನಾದರೂ ನೆಪದಲ್ಲಿ ಅವರಿಬ್ಬರು ಮತ್ತೆ ಮತ್ತೆ ಪರಸ್ಪರ ಭೇಟಿಯಾಗುವಂತೆ ‘ನಳಪಾಕ’ ನೋಡಿಕೊಳ್ಳಬೇಕಿತ್ತು. ಆದರೆ ಶಾರದೆಯನ್ನು ವಿದ್ಯಾರ್ಥಿ ನಿಲಯದಿಂದ ಹೊರಗೆ ಕರೆದುಕೊಂಡು ಹೋಗುವುದಕ್ಕಾಗಲೀ, ಸಂಸ್ಥೆಯ ಸಿಬ್ಬಂದಿ ಯನ್ನು ಹೊರತುಪಡಿಸಿದ ಹೊರಗಿನವರಾರೂ ಅದರ ಆವರಣದಲ್ಲಿ ರಾತ್ರಿ ಹೊತ್ತು ತಂಗುವುದಕ್ಕಾಗಲೀ ಆಸ್ಪದವಿರಲಿಲ್ಲ. ಆಗ ಒಂದು ಉಪಾಯವನ್ನು ಕಳ್ಳಬೆಕ್ಕಿನ ಕಿವಿಯಲ್ಲಿ ನಳಪಾಕ ಪಿಸು ಗುಟ್ಟಿದ. ‘ಇದು ಸಾಧ್ಯವಾ?’ ಎಂದು ಕಳ್ಳಬೆಕ್ಕು ಕೇಳಿದ್ದಕ್ಕೆ, ‘ನೀವು ನಾನು ಹೇಳಿದಂತೆ ಮಾಡಿ, ಮಿಕ್ಕ ವಿಚಾರವನ್ನ ನನಗೆ ಬಿಡಿ’ ಎಂದು ನಳಪಾಕ ಭರವಸೆಯಿತ್ತ..." ಎಂದು ಹೇಳಿ ಹಪ್ಪಳವನ್ನೊಮ್ಮೆ ಮುರಿದು ಬಾಯಲ್ಲಿಟ್ಟುಕೊಂಡರು.
“ಅಂದ ಹಾಗೆ, ಆ ನಳಪಾಕ ಹೇಳಿದ ಉಪಾಯವೇನು ಗುರುಗಳೇ?" ಎಂದು ಶಿಷ್ಯರೊಬ್ಬರು ಪ್ರಶ್ನಿಸಿದರು.
ಅದಕ್ಕೆ ಅವಧೂತರು, “ಸಂಸ್ಥೆಯ ತೆಕ್ಕೆಯಲ್ಲೇ ಇದ್ದ ಮಠ, ವಿದ್ಯಾರ್ಥಿಗಳಿಗೆ ಉಚಿತ ಊಟ-ಶಿಕ್ಷಣ ಒದಗಿಸುತ್ತಿದ್ದ ಸಜ್ಜಿಕೆ ಇವೆಲ್ಲದರ ನಿರ್ವಹಣೆಗೆ ದಂಡಿಯಾಗಿ ಹಣ ಬೇಕಾಗುತ್ತಿತ್ತು. ಆದರೆ ಸಂಸ್ಥೆಗೆ ಹಣದ ಹರಿವು ಅಷ್ಟೊಂದು ಇರಲಿಲ್ಲ. ಈ ಸೂಕ್ಷ್ಮವನ್ನು ಕಣ್ಣಳತೆಯಲ್ಲೇ ಅರಗಿಸಿಕೊಂಡಿದ್ದ ‘ನಳಪಾಕ’, ದುಡ್ಡಿನ ಕುಳವೇ ಆಗಿದ್ದ ಕಳ್ಳಬೆಕ್ಕಿನ ಕಡೆಯಿಂದ ಇದಕ್ಕೆ ವ್ಯವಸ್ಥೆ ಮಾಡಿಸಲು ಒಂದು ಉಪಾಯ ಹೂಡಿದ. ಆದರೆ ಅದು ನೆರವೇರಬೇಕೆಂದರೆ, ಆ ಊರಿನ ಹಿರಿಯ ರಾಜಕಾರಣಿ ಮತ್ತು ಅವರ ಮಗ ‘ಮರಿ’ ರಾಜಕಾರಣಿಯ ಒತ್ತಾಸೆಯ ಅಗತ್ಯವಿತ್ತು. ಏಕೆಂದರೆ, ಅವರಿಬ್ಬರು ಆ ಸಂಸ್ಥೆಯ ‘ಅಭಿವೃದ್ಧಿ ಸಮಿತಿ’ಯ ಸದಸ್ಯರಾಗಿದ್ದವರು; ‘ಅಕ್ರಮ ಗಳಿಕೆ’ಯಲ್ಲಿ ನಿಪುಣರೆಂಬುದು ಗೊತ್ತಿದ್ದರೂ, ಹಣ ಮತ್ತು ರಾಜಕೀಯ ಪ್ರಭಾವದ ಕಾರಣಕ್ಕಾಗಿ ಅವರಿಬ್ಬರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕಾಗಿ ಬಂದಿತ್ತು. ಅವರ ಪೈಕಿ, ಹಿರಿಯ ರಾಜಕಾರಣಿಗೆ ಎರಡು ಮುಖ್ಯ ‘ಬಸುರಿ ಬಯಕೆ’ಗಳಿದ್ದವು. ಮೊದಲನೆಯದು, ಸಾಯುವುದರೊಳಗೆ ತಾವು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಬೇಕು ಎಂಬುದು. ಎರಡನೆಯದು, ‘ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ’ ಅಂತ ಒಂದು ಹೊಸಖಾತೆಯನ್ನು ಸೃಷ್ಟಿಸಿದರೂ ಪರವಾಗಿಲ್ಲ, ತಮ್ಮ ನಾಲಾಯಕ್ ಮಗನಿಗೆ ರಾಜ್ಯದಲ್ಲಿ ಒಂದು ಮಂತ್ರಿಗಿರಿ ದಕ್ಕಬೇಕು ಎಂಬುದು. ಆದರೆ ಇವೆರಡಕ್ಕೂ ಮೂಟೆ ಗಟ್ಟಲೆ ಹಣವನ್ನು ಕಕ್ಕಬೇಕಿತ್ತು. ‘ಈ ಹಣಕ್ಕೆ ನೀವು ವ್ಯವಸ್ಥೆ ಮಾಡುವುದಾದರೆ, ಸಂಸ್ಥೆಯ ಆವರಣದಲ್ಲಿ ನೀವು ಎಗ್ಗಿಲ್ಲದಂತೆ ಓಡಾಡಿಕೊಂಡಿರಬಹುದು’ ಎಂದು ಕಳ್ಳಬೆಕ್ಕಿನ ಕಿವಿಯೂದಿದ ನಳಪಾಕ. ಅದರ ಒಳಸುಳಿ ಕಳ್ಳಬೆಕ್ಕಿಗೆ ಅರ್ಥವಾಗಲಿಲ್ಲ. ಆಗ ನಳಪಾಕ, ‘ನೀವು ಈ ಅಪ್ಪ-ಮಗನಿಗೆ ದಂಡಿಯಾಗಿ ನೀಡುವ ಹಣಕ್ಕೆ ಪ್ರತಿಯಾಗಿ, ಅಭಿವೃದ್ಧಿ ಸಮಿತಿಯ ‘ದೇಖರೇಖಿ’ ನೋಡಿಕೊಳ್ಳುವುದಾಗಿ ಅವರಿಬ್ಬರಿಗೆ ತಿಳಿಸಿ. ರಾಜ್ಯ ರಾಜಕಾರಣದಲ್ಲಿನ ಆಯಕಟ್ಟಿನ ಸ್ಥಾನಗಳೆಂಬ ಎರಡು ‘ದೊಡ್ಡ ಗಂಟು’ ಸಿಗುವಾಗ, ಅಭಿವೃದ್ಧಿ ಸಮಿತಿಯ ಮೇಲುಸ್ತುವಾರಿಯು ‘ಜುಜುಬಿ ನಂಟು’ ಎಂದೇ ಭಾವಿಸುವ ಅವರು ಇದಕ್ಕೆ ಒಪ್ಪುತ್ತಾರೆ. ನಂತರ, ಅಭಿವೃದ್ಧಿ ಸಮಿತಿಯ ಮೇಲ್ವಿಚಾರಕರು ಎಂಬ ಹಣೆಪಟ್ಟಿಯೊಂದಿಗೆ ನೀವು ಸಂಸ್ಥೆಯ ಆವರಣದಲ್ಲಿ ನಿರಾಳವಾಗಿ ಮೈಚೆಲ್ಲಬಹುದು’ ಎಂದು ಆ ಉಪಾಯವನ್ನು ಬಿಡಿಸಿ ಹೇಳಿದ. ‘ಹೀಗೆ ಮಾಡುವುದರಿಂದ, ಶಾರದೆ ಹೇಗೆ ಸಿಗುತ್ತಾಳೆ?’ ಎಂದು ಕಳ್ಳಬೆಕ್ಕು ಕೇಳಿತು. ಶಕುನಿಯ ನಗೆ ನಕ್ಕ ನಳಪಾಕ, ‘ಈ ಸಂಸ್ಥೆಯ ನಿಯಮಗಳು ನಿಮಗೆ ಗೊತ್ತಿವೆ ಅಂದುಕೊಂಡಿರುವೆ. ಇಲ್ಲಿ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಸಿಬ್ಬಂದಿಗಳನ್ನು ಬಿಟ್ಟರೆ ಹೊರಗಿ ನವರು ಈ ಆವರಣದಲ್ಲಿ ರಾತ್ರಿ ಹೊತ್ತು ಉಳಿಯುವಂತಿರುವುದಿಲ್ಲ. ಆದರೆ, ಅಭಿವೃದ್ಧಿ ಸಮಿತಿ ಯಲ್ಲಿರುವವರಿಗೆ ಈ ವಿಷಯದಲ್ಲಿ ವಿನಾಯಿತಿಯೂ, ಹೆಚ್ಚುವರಿ ಗೌರವವೂ ಇರುತ್ತವೆ. ನೀವು ಮೊದಲು ನಾನು ಹೇಳಿದಷ್ಟನ್ನು ಮಾಡಿ ಒಳಗೆ ತೂರಿಕೊಳ್ಳಿ, ನಂತರ ಶಾರದೆ ಎಂಬ ಹಣ್ಣನ್ನು ನಿಮ್ಮ ಬುಟ್ಟಿಗೆ ಬೀಳಿಸೋ ಹೊಣೆ ನನ್ನದು’ ಎಂದುಬಿಟ್ಟ..." ಎಂದು ಹೇಳಿ ನಿಡಿದಾದ ಉಸಿರುಬಿಟ್ಟರು.
ಆಗ ಶಿಷ್ಯರೊಬ್ಬರು, “ಅದೆಲ್ಲಾ ಸರಿ ಗುರುಗಳೇ, ‘ಹಿರಿ-ಮರಿ’ ರಾಜಕಾರಣಿಗಳಿಬ್ಬರನ್ನೂ ಹಿಡಿತ ದಲ್ಲಿಟ್ಟುಕೊಳ್ಳುವಷ್ಟು ಪ್ರಭಾವಿ ನಾಯಕನಾ ಆ ಕಳ್ಳಬೆಕ್ಕು? ಅದು ಒತ್ತಟ್ಟಿಗಿರಲಿ, ನಳಪಾಕನಂಥ ಅಡುಗೆಭಟ್ಟನಿಗೆ ಈ ಕಳ್ಳಬೆಕ್ಕಿನಂಥ ದುಡ್ಡಿನ ಕುಳದ ಮತ್ತು ಜನನಾಯಕನ ಸಾಂಗತ್ಯ ಅಷ್ಟು ಸುಲಭವಾಗಿ ಹೇಗೆ ಸಿಗಲು ಸಾಧ್ಯ?" ಎಂದು ಪ್ರಶ್ನಿಸಿದರು.
ಅದಕ್ಕೆ ಅವಧೂತರು ವಿಷಾದದ ನಗೆ ಬೀರಿ, “ಇಂಥ ಗೊಂದಲ/ಸಂದೇಹ ಯಾರಲ್ಲಾದರೂ ಹುಟ್ಟಬಹುದು. ಸಾಮಾಜಿಕ ಸ್ತರಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ನಳಪಾಕ ಮತ್ತು ಕಳ್ಳಬೆಕ್ಕಿನ ಈಗಿನ ಸ್ಥಿತಿಗತಿಗಳಿಗೆ ಭೂಮಿ-ಆಕಾಶದ ನಡುವಿನ ಅಂತರವಿದೆ. ಆದರೆ ನಾನು ಮೊದಲೇ ಹೇಳಿದಂತೆ, ಈ ನಳಪಾಕನು ಕಳ್ಳಬೆಕ್ಕಿನ ಬಾಲ್ಯಸ್ನೇಹಿತ ಮತ್ತು ಕಾಲೇಜು ದಿನಗಳವರೆಗಿನ ‘ಕ್ರೈಮ್ ಪಾರ್ಟ್‌ನರ್’. ಪರಸ್ಪರರ ರಹಸ್ಯಗಳು ಗೊತ್ತಿರುವುದರಿಂದ ಒಬ್ಬರನ್ನೊಬ್ಬರು ಬಿಟ್ಟುಕೊಡೋ ದಿಲ್ಲ, ಸಾಮಾಜಿಕ ಸ್ತರವನ್ನೂ ಮೀರಿದ ‘ಫೆವಿಕಾಲ್ ಬಾಂಡ್’ ಅವರಿಬ್ಬರದ್ದು. ಇನ್ನು, ‘ಹಿರಿ-ಮರಿ’ ರಾಜಕಾರಣಿಗಳನ್ನೂ ಮೀರಿಸಿದ ಪ್ರಭಾವಿಯಾ ಆ ಕಳ್ಳಬೆಕ್ಕು? ಅಂತ ನೀವು ಕೇಳಿದಿರಿ. ನಿಮಗೆ ಗೊತ್ತಿರಲಿ, ಈ ಕಳ್ಳಬೆಕ್ಕಿಗೆ ರಾಜಕಾರಣ ಒಂದು ‘ಉಪವೃತ್ತಿ’ ಅಷ್ಟೇ! ತನ್ನ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲೆಂದು ರಾಜಕಾರಣವನ್ನು ಊರುಗೋಲು ಮಾಡಿಕೊಂಡಿರುವ, ರಾಜಕಾರಣಿಗಳಿಗೆ ದಂಡಿಯಾಗಿ ಹಣ ನೀಡುತ್ತಿರುವ ವಿಕ್ಷಿಪ್ತಜೀವಿ ಅದು. ಆಗೊಮ್ಮೆ ಈಗೊಮ್ಮೆ, ದಾನ- ಧರ್ಮದಂಥ ಲೋಕೋಪಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾಧ್ಯಮಗಳಲ್ಲಿ ಮಿಂಚುವ ಆ ಕಳ್ಳಬೆಕ್ಕನ್ನು ಕಂಡರೆ ನಮ್ಮ ಜನಕ್ಕೆ ಅದೇನೋ ವಿಲಕ್ಷಣ ಸೆಳೆತ..." ಎಂದರು.
“ಈ ಕಳ್ಳಬೆಕ್ಕಿಗೆ ರಾಜಕಾರಣವೆಂಬುದು ತನ್ನ ಸಾಮ್ರಾಜ್ಯದ ರಕ್ಷಣೆಗಿರುವ ಉಪವೃತ್ತಿಯಾ? ಇದೇನು ಗುರುಗಳೇ ಹೀಗಂತೀರಿ? ರಾಜ-ಮಹಾರಾಜರು ಹೋಗಿ ಪ್ರಜಾಪ್ರಭುತ್ವ ಬಂದಾಯಿತಲ್ಲವಾ? ಇನ್ಯಾವ ಸಾಮ್ರಾಜ್ಯ?" ಎಂದು ಶಿಷ್ಯರೊಬ್ಬರು ಕುತೂಹಲಭರಿತರಾದರು.
ಆಗ ಅವಧೂತರು “ಹೌದಯ್ಯಾ, ಕಳ್ಳಬೆಕ್ಕಿನದೊಂದು ಸಾಮ್ರಾಜ್ಯವಿದೆ. ಆತನೊಬ್ಬ ‘ಮದ್ಯ-ದೊರೆ’ ಎಂಬುದೂ ನಿಮಗೆ ಗೊತ್ತಿರಲಿ" ಎಂದರು.
ಅವಾಕ್ಕಾದ ಹೊಸ ಶಿಷ್ಯರೊಬ್ಬರು, “ಮದ್ಯ-ದೊರೆ...?! ಹಾಗೆಂದರೇನು ಗುರುಗಳೇ?" ಎಂದು ಕೇಳಿದರು.
ನಿಗೂಢವಾಗಿ ನಕ್ಕ ಅವಧೂತರು, “ಹಾಗಂದ್ರೆ ಲೌಕಿಕ ಭಾಷೆಯಲ್ಲಿ ‘ಲಿಕ್ಕರ್ ಕಿಂಗ್’ ಅಂತ ಕಣಯ್ಯಾ... ನಾಡಿನ ಉದ್ದಗಲಕ್ಕೂ ಹತ್ತಾರು ಡಿಸ್ಟಿಲರಿಗಳನ್ನು ತೆರೆದಿಟ್ಟುಕೊಂಡು ಮದ್ಯದ ವ್ಯಾಪಾರವನ್ನೂ ರಾಜಕಾರಣವನ್ನೂ ಜತೆಜತೆಗೇ ಮಾಡುತ್ತಿರುವ ಕಳ್ಳಬೆಕ್ಕು ಅದು..." ಎಂದರು.
ಅದಕ್ಕೆ ಹೊಸ ಶಿಷ್ಯರೊಬ್ಬರು, “ಅರೆ! ಹೌದಾ ಗುರುಗಳೇ? ಬಾಳೆಹಣ್ಣು-ಊದುಬತ್ತಿ-ಕರ್ಪೂರ ಮಾರುವ ನಮ್ಮೂರಿನ ಗೂಡಂಗಡಿಯಲ್ಲಿ ನೇತು ಹಾಕಿರೋ ಕ್ಯಾಲೆಂಡರ್‌ನಲ್ಲಿ ಒಂದಿಷ್ಟು ರೂಪದರ್ಶಿಗಳ ಜತೆ ಈ ಕಳ್ಳಬೆಕ್ಕು ನಿಂತಿರೋದನ್ನು ನೋಡಿದ್ದ ನೆನಪಿದೆ. ಸಂತ್ರಸ್ತೆಯ ಜಮೀನು ಕಸಿದ, ಶಾರದೆಯ ಮಾನ ಕಸಿಯಲು ಹೋದ ಈ ‘ಮದ್ಯ-ದೊರೆ’ ಜನನಾಯಕನಾ?!" ಎಂದು ಉದ್ಗರಿಸಿದಕ್ಕೆ ಹಳೆ ಶಿಷ್ಯರೆಲ್ಲರೂ ನಕ್ಕರು...
(ಮುಂದುವರಿಯುವುದು)