G N Bhat Column: ಬ್ರಹ್ಮಾನುಭೂತಿ ತೇಜಸ್ಸಿನ ಅಸಾಧಾರಣ ಮೇಧಾವಿ-ಭಗವತ್ಪಾದ ಶಂಕರಾಚಾರ್ಯರು
ಇವು ಅವೈದಿಕ ಮತಗಳು. ಭಗವತ್ ತತ್ತ್ವವನ್ನು ಅಂಗೀಕರಿಸಿದವರಲ್ಲ. ಅಂದರೆ ನಾಸ್ತಿಕ ಮತಗಳು. ಜತೆಗೆ ಸಾಂಖ್ಯ ಮತ್ತು ಕರ್ಮಮತಗಳು ಬೇರೆ. ಕರ್ಮವಾದವು ವೈದಿಕ ಮತವೇನೋ ಹೌದು. ಆದರೆ ವೇದದಲ್ಲಿ ಕರ್ಮ ಕಾಂಡವೇ ಮುಖ್ಯ. ಯಜ್ಞಯಾಗಾದಿ ಶ್ರೌತಕರ್ಮವೇ ಧರ್ಮ. ಅದರಿಂದಲೇ ಪರಮ ಪುರುಷಾರ್ಥ ಎಂದು ಕುಮಾರಿಲ ಭಟ್ಟರಂತಹ ಪೂರ್ವಮೀಮಾಂಸಕರು ವಾದಿಸುತ್ತಿದ್ದರು.
-
ಶಂಕರ ಜಯಂತಿ
ಗ.ನಾ.ಭಟ್ಟ
ಶ್ರುತಿ ಸ್ಮೃತಿ ಪುರಾಣಾನಾಮಾಲಯಂ ಕರುಣಾಲಯಮ್ |
ನಮಾಮಿ ಭಗವತ್ಪಾದಶಂಕರಂ ಲೋಕಶಂಕರಮ್ ||
ಭಗವತ್ಪಾದ ಶಂಕರಾಚಾರ್ಯರು ಅದ್ವೈತಮತ ಸಿದ್ಧಾಂತಿಗಳಲ್ಲಿ ಒಬ್ಬರು; ಮಹಾಜ್ಞಾನಿಗಳು. ಹಿಂದೂ ಧರ್ಮದ ಪುನರುದ್ಧಾರಕರು. ಪ್ರಭಾವಶಾಲೀ ಮತಪ್ರಚಾರಕರಲ್ಲಿ ಒಬ್ಬರು. ಉನ್ನತ ಮಟ್ಟದ ಆಲೋಚನಾಪರರೂ, ಭಾವುಕರೂ, ಮಹಾಮೇಧಾವಿಗಳೂ ಆಗಿದ್ದರು.
ಬ್ರಹ್ಮಾನುಭೂತಿಯ ತೇಜಸ್ಸಿನಿಂದ ಕಂಗೊಳಿಸುತ್ತಿದ್ದರು. ಅವರ ಹೃದಯ ರಾಷ್ಟ್ರಸೇವೆಯ ಔತ್ಸುಕ್ಯ ದಿಂದ ಸದಾ ಮಿಡಿಯುತ್ತಿತ್ತು. ಮಧುರವಾದ ಭಾವಾವೇಶವುಳ್ಳವರೂ, ನಿರ್ದಯತಾರ್ಕಿಕರೂ, ಆಧ್ಯಾತ್ಮಿಕ ದಿಗ್ದರ್ಶಕರೂ ಆಗಿದ್ದರು. ಅಸಾಧಾರಣ ಧೀಶಕ್ತಿಯನ್ನು ಹೊಂದಿದ್ದ ಅವರ ಸಾಧನೆ ಯನ್ನು ಕುರಿತು ಸ್ತುತಿಸುವ ಒಂದು ಶ್ಲೋಕ ಹೀಗಿದೆ-
ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವಶಾಸ್ತ್ರವಿತ್ |
ಷೋಡಶೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್ ||
“ಬಾಲಕ ಶಂಕರನು ತನ್ನ ಎಂಟನೇಯ ವಯಸ್ಸಿನಲ್ಲಿ ನಾಲ್ಕು ವೇದಗಳನ್ನೂ ಹೃದ್ಗತ ಮಾಡಿ ಕೊಂಡನು. ತನ್ನ ಹನ್ನೆರಡನೇಯ ವರ್ಷ ವಯಸ್ಸಿನಲ್ಲಿ ತರ್ಕ-ವ್ಯಾಕರಣಾದಿ ಸಕಲ ಶಾಸ್ತ್ರ ಗಳನ್ನೂ ಓದಿ ಅವುಗಳಲ್ಲಿ ಪಾಂಡಿತ್ಯ ಗಳಿಸಿದನು. ತನ್ನ ಹದಿನಾರನೇಯ ವಯಸ್ಸಿನಲ್ಲಿ ಗೀತೆ, ಉಪನಿಷತ್ತು, ಬ್ರಹ್ಮಸೂತ್ರಕ್ಕೆ ಭಾಷ್ಯ ಬರೆದು ವಿಖ್ಯಾತಿ ಗಳಿಸಿದನು. ತನ್ನ ಮೂವತ್ತೆರಡನೆಯ ವಯಸ್ಸಿನಲ್ಲಿ ಇಹಲೋಕಯಾತ್ರೆ ಮುಗಿಸಿದನು".
ಶಂಕರರು ಬದುಕಿದ್ದು ಕೇವಲ 32 ವರ್ಷ. ಅಷ್ಟರಲ್ಲೇ ಅವರು ಸಾಧಿಸಿದ್ದು ಅಪರಿಮಿತ. ಊಹೆಗೆ ಎಟುಕದ್ದು. ಶ್ರೀ ಶಂಕರಾಚಾರ್ಯರು ಜನಿಸಿದ ಸಂದರ್ಭದಲ್ಲಿ ಭರತ ಖಂಡವು ಒಂದು ರಾಷ್ಟ್ರ ವಾಗಿ ಉಳಿಯದೆ ಒಡೆದು ಹೋಗಿ, ಅನೇಕ ರಾಜ್ಯಗಳಾಗಿ, ಪ್ರಾಂತಗಳಾಗಿ ಹಂಚಿಹೋಗಿದ್ದವು.
ಇದನ್ನೂ ಓದಿ: G N Bhat Column: ಭೈರಪ್ಪನವರ ಚಿಂತನೆ ಮತ್ತು ವಿಚಾರಧಾರೆಗಳು: ಯಥಾರ್ಥವಾದಿಗಳಿಗೆ ಸುಗ್ಗಿ
ರಾಜರುಗಳಲ್ಲಂತೂ ಐಕಮತ್ಯವೇ ಇರಲಿಲ್ಲ. ಪರಸ್ಪರ ಕಚ್ಚಾಡಿಕೊಂಡು ಬದುಕುತ್ತಿದ್ದರು. ಈ ನಡುವೆ ಶಾಕ್ತ, ಸೌರ, ಗಾಣಪತ, ಭೈರವ, ಕಾಪಾಲಿಕ ಮೊದಲಾದ ನಾನಾ ಮತಗಳು ಹುಟ್ಟಿಕೊಂಡು ತಮ್ಮ ತಮ್ಮ ಮತ, ಆಚರಣೆಗಳೇ ಶ್ರೇಷ್ಠವೆಂದು ಪ್ರತಿಪಾದಿಸುತ್ತಿದ್ದವು. ಇವುಗಳ ಜತೆಗೆ ಬೌದ್ಧ, ಜೈನ ಮತಗಳೂ ವಿಜೃಂಭಿಸುತ್ತಿದ್ದವು.
ಇವು ಅವೈದಿಕ ಮತಗಳು. ಭಗವತ್ ತತ್ತ್ವವನ್ನು ಅಂಗೀಕರಿಸಿದವರಲ್ಲ. ಅಂದರೆ ನಾಸ್ತಿಕ ಮತಗಳು. ಜತೆಗೆ ಸಾಂಖ್ಯ ಮತ್ತು ಕರ್ಮಮತಗಳು ಬೇರೆ. ಕರ್ಮವಾದವು ವೈದಿಕ ಮತವೇನೋ ಹೌದು. ಆದರೆ ವೇದದಲ್ಲಿ ಕರ್ಮ ಕಾಂಡವೇ ಮುಖ್ಯ. ಯಜ್ಞಯಾಗಾದಿ ಶ್ರೌತಕರ್ಮವೇ ಧರ್ಮ. ಅದರಿಂದಲೇ ಪರಮಪುರುಷಾರ್ಥ ಎಂದು ಕುಮಾರಿಲ ಭಟ್ಟರಂತಹ ಪೂರ್ವ ಮೀಮಾಂಸಕರು ವಾದಿಸುತ್ತಿದ್ದರು.
ಇನ್ನು ಸಾಂಖ್ಯ ಮತ. ಇವರು ಅವೈದಿಕರಲ್ಲದಿದ್ದರೂ ಜಗದ್ರಚನೆಯ ಮೂಲಪದಾರ್ಥಗಳು ಹಲ ವೆಂದೂ ಅವುಗಳ ಕಾರ್ಯ-ಕಾರಣ ಸಂಬಂಧಗಳು ಪ್ರಕೃತಿ- ಪುರುಷರೆಂಬ ಎರಡು ತತ್ತ್ವ ಗಳಿಂದ ಆಗಿವೆಯೆಂದು ವಾದಿಸುತ್ತಿದ್ದರು. ಇವು ಶಂಕರಾಚಾರ್ಯರು ಹುಟ್ಟಿದ ಸಂದರ್ಭದಲ್ಲಿ ಇವು ತುಂಬಾ ಪ್ರಬಲಿಸಿ, ದಾಂಧಲೆ ಎಬ್ಬಿಸಿದ್ದವು.
ಇವು ನಾಲ್ಕೂ ಮತಗಳೂ ತತ್ತ್ವಸಿದ್ಧಾಂತಗಳನ್ನು ಕುರಿತವು. ಇಂತಹ ಮತಗಳನ್ನು ಪ್ರಮಾಣ ಪೂರ್ವಕವಾಗಿ, ಯುಕ್ತಿಯುಕ್ತವಾಗಿ ಖಂಡಿಸಿ ಸರ್ವಸಮ್ಮತವಾದ ಶುದ್ಧವೇದಾಂತವೊಂದನ್ನು ಸ್ಥಾಪಿಸುವ ಒಬ್ಬ ಮಹನೀಯ ಬೇಕಾಗಿದ್ದ. ಆ ಮಹನೀಯರೇ ಶಂಕರಾಚಾರ್ಯರು.
ಶಂಕರಾಚಾರ್ಯರು ಜನಿಸಿದ್ದು ವೈಶಾಖ ಶುದ್ಧ ಪಂಚಮೀ. ಆದರೆ, ಆಚಾರ್ಯರು ಜನಿಸಿದ್ದು ಎಷ್ಟು ವರ್ಷಗಳ ಹಿಂದೆ? ಅವರ ಕಾಲ ಯಾವುದು? ಎಂಬುದು ಮಾತ್ರ ಸರಿಯಾಗಿ ತಿಳಿದಿಲ್ಲ. ಇತ್ತೀಚಿನ ಸಂಶೋಧನೆಯ ಪ್ರಕಾರ ಅವರ ಜನನವಾದದ್ದು ಕ್ರಿ.ಶ. ಏಳನೇಯ ಶತಮಾನವೆಂದು ತಿಳಿದುಬಂದಿದೆ.
7ನೇಯ ಶತಕದ ಅಂತ್ಯ ಮತ್ತು 8ನೇಯ ಶತಕದ ಆದಿ ಎಂದು ಅವರ ಜನನದ ಕಾಲವನ್ನು ನಿಶ್ಚಯಿಸಿದ್ದಾರೆ. ಸುಮಾರು 1200 ವರ್ಷಗಳ ಹಿಂದೆ ಅಂತ ಹೇಳಬಹುದು. ಅವರ ಜನ್ಮಸ್ಥಳ ಕೇರಳದ ಪೂರ್ಣಾನದಿ ತಟದಲ್ಲಿರುವ ಕಾಲಟಿ ಎಂಬ ಪ್ರದೇಶ. ಅಲ್ಲಿ ಶಿವಗುರು ಎಂಬ ನಂಬೂದರಿ ಬ್ರಾಹ್ಮಣ ಪಂಡಿತನಿದ್ದ. ಆತನ ಮಡದಿಯ ಹೆಸರು ಆರ್ಯಾಂಬೆ. ಇವರಿಬ್ಬರೂ ಪರಮ ದೈವಭಕ್ತ ರಾಗಿದ್ದು, ಪರಶಿವನ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದರು.
ಕೆಲವು ಕಾಲದ ನಂತರ ಇವರಿಗೆ ಅಪೂರ್ವ ತೇಜಸ್ಸಿನ ಗಂಡುಮಗುವೊಂದು ಜನಿಸಿತು. ಪರಶಿವನ ಅನುಗ್ರಹದಿಂದಲೇ ಮಗು ಜನಿಸಿತೆಂದು ಸಂತೋಷಪಟ್ಟ ಆ ದಂಪತಿಗಳು ಮಗುವಿಗೆ ಶಂಕರ ಎಂದೇ ನಾಮಕರಣ ಮಾಡಿದರು.
ಶಂಕರನಿಗೆ ಮೂರು ವರ್ಷ ತುಂಬುವಷ್ಟರಲ್ಲಿ ಆವನ ತಂದೆ ಕಾಲವಾದನು. ಒಬ್ಬನೇ ಮಗನಾದ ಶಂಕರನನ್ನು ಆರ್ಯಾಂಬೆ ತುಂಬಾ ಪ್ರೀತಿ, ವಾತ್ಸಲ್ಯದಿಂದ ಸಲಹಿದಳು. ವಿದ್ವಾಂಸರ ಕುಟುಂಬ ವಾದ್ದರಿಂದ ಆರ್ಯಾಂಬೆ ಅವನಿಗೆ ಬಾಲ್ಯದಲ್ಲೇ ಸಂಸ್ಕೃತವನ್ನು ಕಲಿಸಿದಳು. ಆತನ ಐದನೇಯ ವರ್ಷದಲ್ಲಿ ತನ್ನ ಬಂಧುಗಳಿಂದ ಅವನಿಗೆ ಉಪನಯನ ಮಾಡಿಸಿ, ಅವನನ್ನು ಸವೇದ ಸಂಸ್ಕೃತ ಪಾಠಶಾಲೆಗೆ ಹಾಕಿದಳು.
ಅಲ್ಲಿ ಆತ ಅತ್ಯಲ್ಪ ಕಾಲದಲ್ಲೇ ತರ್ಕ-ವ್ಯಾಕರಣಾದಿ ಶಾಸ್ತ್ರಗಳಲ್ಲಿ ಪಾಂಡಿತ್ಯ ಗಳಿಸಿದನು. ವೇದ ಗಳನ್ನು ಸ್ವರಸಹಿತವಾಗಿ ಕಂಠಪಾಠ ಮಾಡಿದನು. ಅವನ ಗ್ರಹಣಶಕ್ತಿ ಬಹಳ ತೀಕ್ಷ್ಣವಾದುದು. ಒಮ್ಮೆ ಕೇಳಿದರೆ ಸಾಕು; ನೋಡಿದರೆ ಸಾಕು. ಅವನ್ನು ನೆನಪಿಟ್ಟುಕೊಳ್ಳುತ್ತಿದ್ದ. ಅವನ ಮೇಧಾಶಕ್ತಿ ವಿಸ್ಮಯಾವಾದುದು. ಇಂತಹ ಅಪೂರ್ವ, ಪ್ರಚಂಡ ಮೇಧಾಶಕ್ತಿಯಿರುವ ಅನೇಕ ಬಾಲಕರ ಇತಿಹಾಸವನ್ನು ನಾವು ಅಲ್ಲಲ್ಲಿ ಓದುತ್ತಿರುತ್ತೇವೆ.
ಅಂತಹ ಬಾಲಕರಲ್ಲಿ ಶಂಕರನೂ ಒಬ್ಬ. ಶಂಕರಾಚಾರ್ಯರು ಪ್ರಕಾಂಡ ವಿದ್ವಾಂಸರಾಗಿರುವಂತೆ ಮಹಾಕವಿಗಳೂ ಕೂಡಾ ಆಗಿದ್ದರು. ಶಿವಾಪರಾಧಕ್ಷಮಾಪಣ ಸ್ತೋತ್ರ, ವೇದಸಾರಶಿವಸ್ತೋತ್ರ, ವಿಷ್ಣುಸ್ತೋತ್ರ, ವಿಷ್ಣು ಷಟ್ಪದೀ, ಲಕ್ಷ್ಮೀನೃಸಿಂಹಸ್ತೋತ್ರ, ತ್ರಿಪುರಸುಂದರೀಅಷ್ಟಕ, ಅನ್ನಪೂರ್ಣಾ ಸ್ತೋತ್ರ, ದಕ್ಷಿಣಾಮೂರ್ತಿಸ್ತೋತ್ರ, ಸೌಂದರ್ಯಲಹರೀ, ಮನೀಷಾಪಂಚಕ, ಭಜಗೋವಿಂದಮ್ ಮುಂತಾಗಿ ನೂರಾರು ಕವಿತೆಗಳನ್ನು ರಚಿಸಿದ್ದಾರೆ.
ಅವರ ಒಂದೊಂದು ರಚನೆಯೂ ಅವರ ಹೃದಯದ ತಾಳಕ್ಕೆ ತಕ್ಕಂತೆ, ಭಾವಕ್ಕೆ ತಕ್ಕಂತೆ ನರ್ತಿಸಿ, ಓದುಗರನ್ನು ಇನ್ನಿಲ್ಲದಂತೆ ಆಕರ್ಷಿಸಿವೆ.
ಶಂಕರರಿಗೆ ಬಾಲ್ಯದಿಂದಲೂ ವೈರಾಗ್ಯದ ಕಡೆಗೇ ಒಲವು ಹೆಚ್ಚು. ಪ್ರವೃತ್ತಿ ಮಾರ್ಗಕ್ಕಿಂತ ನಿವೃತ್ತಿ ಮಾರ್ಗದಲ್ಲೇ ಆಸಕ್ತಿ ಹೆಚ್ಚು. ಗೃಹಸ್ಥ್ಯಕ್ಕಿಂತ ಸಂನ್ಯಾಸದ ಕಡೆಗೇ ಒಲವು ಅಧಿಕವಾಗಿತ್ತು. ವೇದ ಶಾಸ್ತ್ರಗಳಲ್ಲಿ ಬೋಧಿಸುವ ಪರಮತತ್ತ್ವ ಯಾವುದು? ಅದನ್ನು ತಾನು ತಿಳಿದುಕೊಳ್ಳಬೇಕು ಮತ್ತು ಅದನ್ನು ಜಗತ್ತಿಗೆ ಹಂಚಬೇಕು ಎಂಬ ತುಡಿತ ಅವರನ್ನು ಬಲವಾಗಿ ಬಾಧಿಸತೊಡಗಿತು.
ಹನ್ನೆರಡು ವರ್ಷವಾಗಿರುವಾಗಲೇ ಈ ಸನ್ಯಾಸದ ಆಕರ್ಷಣೆ ಉಂಟಾಯಿತು. ಹಾಗೆಯೇ ತಾಯಿ ಯಿಂದ ಅನುಮತಿ ಪಡೆದು, ಕಾಷಾಯವನ್ನುಟ್ಟು, ದಂಡ-ಕಮಂಡಲು ಧರಿಸಿ, ಯತಿಯಾಗಿ, ಗುರುವನ್ನು ಅನ್ವೇಷಿಸುತ್ತಾ ಬಾಲಕ ಶಂಕರ ಕಾಲಟಿಯನ್ನು ಬಿಟ್ಟು ಹೊರಟು ಬಿಟ್ಟ. ಅಂತಹ ಒಬ್ಬ ಗುರು ಉತ್ತರದ ನರ್ಮದಾ ನದಿಯ ತೀರದಲ್ಲಿ ವಾಸವಾಗಿದ್ದಾರೆಂದೂ, ಅವರ ಹೆಸರು ಶ್ರೀ ಗೋವಿಂದ ಭಗವತ್ಪಾದರೆಂದೂ ತಿಳಿದುಬಂತು.
ಏಕಾಕಿಯಾಗಿ ಕಾಲ್ನಡಿಗೆಯಲ್ಲೇ ಹೊರಟ ಬಾಲಕ ಶಂಕರ ಅಲ್ಲಲ್ಲಿ ಭಿಕ್ಷೆಯಿಂದ ಪ್ರಾಣ ಹಿಡಿದು ಕೊಂಡು ಯಾತ್ರೆ ಮಾಡುತ್ತಾ, ಗೋವಿಂದ ಭಗವತ್ಪಾದರನ್ನು ಕಂಡು, ಅವರಿಗೆ ಶಿರಸಾಷ್ಟಾಂಗ ಪ್ರಣಾಮ ಸಲ್ಲಿಸಿ, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಬೇಡಿಕೊಂಡನು. ಅವರು ಕಸ್ವ್ತಂ-ನೀನು ಯಾರು ಎಂದು ಕೇಳಿದರು. ಅದಕ್ಕೆ ವಟುವರೇಣ್ಯ ಶಂಕರ ಚಿದಾನಂದರೂಪಃ ಶಿವೋಹಂ ಶಿವೋಹಮ್ ಚಿದನಂದಸ್ವರೂಪನಾದ ಶಿವನು ನಾನು, ಶಿವನು ನಾನು ಎಂದು ಹೇಳಿದನು.
ಹೀಗೆ ಹೇಳಿದ ಬಾಲಕ ಶಂಕರನನ್ನು ಗೋವಿಂದ ಭಗವತ್ಪಾದರು ಶಿವನ ಅವತಾರವೆಂದೇ ಭಾವಿಸಿ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಿದರು. ಗೋವಿಂದ ಭಗವತ್ಪಾದರ ಸನ್ನಿಧಿಯಲ್ಲಿ ಶಂಕರರು ವೇದಾಂತಶಾಸ್ತ್ರವನ್ನು ಅಧ್ಯಯನ ಮಾಡಿದರು ಮತ್ತು ಗೀತೆ, ಉಪನಿಷತ್ತು ಮತ್ತು ಬ್ರಹ್ಮಸೂತ್ರ ಗಳನ್ನು ಆತ್ಮಸಾತ್ ಮಾಡಿಕೊಂಡರು. ಆಗ ಅವರಿಗೆ ಹದಿನಾರು ವರ್ಷ.
ಅದೊಂದು ದಿನ ಗೋವಿಂದಗುರುಗಳು ಅಸಾಧಾರಣ ಗ್ರಹಣಶಕ್ತಿಯನ್ನು ಹೊಂದಿದ ಮತ್ತು ಮಹಾಮೇಧಾವಿಯಾದ ಶಂಕರನನ್ನು ಹತ್ತಿರ ಕರೆದು “ಮಗು, ನೀನು ಎಲ್ಲವನ್ನೂ ಕಲಿತಾಯಿತು. ನನ್ನಿಂದ ಕಲಿಯಬೇಕದುದೇನೂ ಇಲ್ಲ. ನಿನ್ನಿಂದ ಒಂದು ಮಹಾ ಕಾರ್ಯವಾಗಬೇಕಿದೆ. ಈ ಭರತಖಂಡದಲ್ಲಿ ವೈದಿಕಮತಕ್ಕೆ ಎಂತಹ ದುರ್ಗತಿ ಬಂದಿದೆಯೆಂದು ನೋಡು. ವೇದವಿರುದ್ಧವಾದ ಹಲವಾರು ಮತಗಳು ವಿಜೃಂಭಿಸುತ್ತಿವೆ. ಅವೇ ವೇದಸಮ್ಮತವೆಂದು ಬೋಧಿಸುತ್ತಿದ್ದಾರೆ.
ಅವುಗಳಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳು. ಚಾರ್ವಾಕರೆಂಬ ನಾಸ್ತಿಕರು ದೇವರಿಲ್ಲ, ಪರಲೋಕವಿಲ್ಲ, ಪುನರ್‌ಜನ್ಮವಿಲ್ಲ, ಧರ್ಮ, ಅಧರ್ಮ ಎಂಬಿವು ವೈದಿಕರ ಕಲ್ಪನೆಗಳು ಎಂದು ಪ್ರಚಾರ ಮಾಡುತ್ತಾ ಮುಗ್ಧರ ಮನಸ್ಸನ್ನು ತಿರುಗಿಸುತ್ತಿದ್ದಾರೆ. ನೀನೀಗ ಎಲ್ಲ ಮತಗಳಲ್ಲಿರುವ ತಪ್ಪುಗಳನ್ನು ತೋರಿಸಿ ಸರ್ವಧರ್ಮಸಮನ್ವಯವಿರುವ ಒಂದು ಮಾರ್ಗವನ್ನು ತಿಳಿಸಿಕೊಡಬೇಕು.
ಅದೆಂದರೆ ವೇದೋಕ್ತವಾದ ಉಪನಿಷತ್ತುಗಳ ಸಾರ. ಅದೇ ಅದ್ವೈತ ತತ್ತ್ವ. ದೇಶ-ದೇಶ ತಿರುಗಿ ಅದನ್ನು ಪ್ರಚುರಪಡಿಸು" ಎಂದು ಆದೇಶಿಸಿದರು. ಗುರುಗಳ ವಾತ್ಸಲ್ಯಪೂರಿತ, ಅಂತಃಕರಣದ ಮಾತನ್ನು ಕೇಳಿ ಶಂಕರನಿಗೆ ಕಣ್ಣಲ್ಲಿ ನೀರು ತುಂಬಿಬಂತು. ಗುರುಗಳಿಗೆ ನಮಿಸಿ ಅವರ ಆಶೀರ್ವಾದ ಹೊತ್ತು ಶಂಕರರು ವಿಜಯಯಾತ್ರೆಗೆ ಹೊರಟು, ಮೊದಲಿಗೆ ಕಾಶಿ ವಿಶ್ವನಾಥನ ದರ್ಶನಕ್ಕೆ ಹೊರಟರು. ಅವರ ಯಾತ್ರಾಜೀವನ ಹೇಗಿತ್ತು ಎಂದರೆ ಅವರೇ ಹೇಳಿದಂತೆ- ಹಸಿವೆಗೆ ಭಿಕ್ಷಾನ್ನ, ಮಲಗುವುದಕ್ಕೆ ಮರದ ನೆರಳು. (ಕರತಲಭಿಕ್ಷಸ್ತರುತಲವಾಸಃ) ಅಲ್ಲಿ ಗಂಗೆಯಲ್ಲಿ ಸ್ನಾನ ಮಾಡಿ ವಿಶ್ವನಾಥನ ದರ್ಶನ ಮಾಡಿ ಪುನೀತರಾದರು. ಅಲ್ಲಿ ಅವರು ಸ್ವಲ್ಪ ದಿನ ಇದ್ದರು. ಶಂಕರರ ಅದ್ಭುತವಾದ ಪಾಂಡಿತ್ಯ, ಬ್ರಹ್ಮತೇಜಸ್ಸು, ವಾಕ್‌ಶಕ್ತಿ ಅಲ್ಲಿಯ ವಿದ್ವಾಂಸರನ್ನು ಬೆರಗುಗೊಳಿಸಿತು.
ಹಾಗೆಯೇ ಶಂಕರರ ಕೀರ್ತಿಯೂ ಎಲ್ಲಡೆ ಹಬ್ಬಿತು. ಚೋಳದೇಶದಿಂದ ಬಂದ ಸನಂದನ ಎಂಬ ವಿದ್ವಾಂಸನು ಶ್ರೀ ಶಂಕರರಿಂದ ಸಂನ್ಯಾಸ ಸ್ವೀಕರಿಸಿ, ಪದ್ಮಪಾದಾಚಾರ್ಯನೆಂದು ಪ್ರಸಿದ್ಧನಾದನು. ತದನಂತರ ಶಂಕರರಿಗೆ ಅನೇಕ ಶಿಷ್ಯರು ಒದಗಿಬಂದರು. ಅಂತಹ ಶಿಷ್ಯರನ್ನೊಳಗೊಂಡು ಶಂಕರ ರು ಬದರಿಕಾಶ್ರಮಕ್ಕೆ ಹೋದರು. ಅಲ್ಲಿ ಕೆಲವು ಕಾಲ ತಪೋನಿಷ್ಠರಾಗಿ ಬ್ರಹ್ಮಸೂತ್ರ, ಭಗವದ್ಗೀತೆ ಮತ್ತು ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದರು. ಆಗ ಅವರಿಗೆ ಹದಿನಾರು ವರ್ಷ. ಷೋಡಶೇ ಕೃತವಾನ್ ಭಾಷ್ಯಮ್.
ಈ ಮೂರನ್ನೇ ಪ್ರಸ್ಥಾನತ್ರಯ ಎಂದು ಕರೆಯುವುದು. ಇಷ್ಟಾದ ಮೇಲೆ ಶಂಕರರಿಗೆ ತಮ್ಮ ಗ್ರಂಥ ಗಳನ್ನು ಲೋಕದಲ್ಲಿ ಪ್ರಸಾರ ಮಾಡಬೇಕೆಂದೂ, ಗುರುಗಳ ಆದೇಶದಂತೆ ವೈದಿಕ ಸಿದ್ಧಾಂತವನ್ನು ಜನರಿಗೆ ಸರಿಯಾಗಿ ತಿಳಿಸಿಕೊಡಬೇಕೆಂದೂ ಸಂಕಲ್ಪವುದಿಸಿತು. ಅದೇ ಕಾಲ ಘಟ್ಟದಲ್ಲಿ ತತ್ತ್ವ ಜಿಜ್ಞಾಸುಗಳಲ್ಲಿ ಒಂದು ತಕರಾರು ಎದ್ದಿತ್ತು. ಮೋಕ್ಷಕ್ಕೆ ಎಂದರೆ ಪರಮ ಪುರುಷಾರ್ಥದ ಸಾಧನೆಗೆ ಜ್ಞಾನಮಾರ್ಗ ತಕ್ಕದ್ದೇ, ಕರ್ಮಮಾರ್ಗ ತಕ್ಕದ್ದೇ ಅಥವಾ ಎರಡೂ ಬೆರೆತುಕೊಂಡಿರಬೇಕೆ? ಎಂಬ ಜಿಜ್ಞಾಸೆ ತಲೆದೋರಿ ಜನರಲ್ಲಿ ಗೊಂದಲವೇರ್ಪಟ್ಟಿತ್ತು.
ಇನ್ನೂ ಸ್ಪಷ್ಟಭಾಷೆಯಲ್ಲಿ ಹೇಳುವುದಾದರೆ ಬ್ರಹ್ಮದರ್ಶನಕ್ಕೆ ಜ್ಞಾನಮಾರ್ಗ ಸರಿಯೇ ಅಥವಾ ಕರ್ಮಮಾರ್ಗ ಸರಿಯೇ ಎಂಬ ವಾದ ಹುಟ್ಟಿಕೊಂಡಿತ್ತು. ಇಂತಹ ಸಂದರ್ಭದಲ್ಲೇ ಶಂಕರರ ವಿಜಯಯಾತ್ರೆ ಆರಂಭವಾಗಿ ಅವರು ಹೋದೆಡೆಯಲ್ಲೆಲ್ಲ ಜ್ಞಾನಮಾರ್ಗವೇ ಶ್ರೇಷ್ಠ ಎಂದು ಸ್ಥಾಪಿಸಿದರು. ಅವರು ಪ್ರತಿಪಾದಿಸಿ, ಸಮರ್ಥಿಸಿದ ಆ ಮತವೇ ಅದ್ವೈತ ಮತ. ಹಾಗೆಂದು ಅವರು ಕರ್ಮಮತವನ್ನು ತಿರಸ್ಕರಿಸಲಿಲ್ಲ.
ಜ್ಞಾನಮಾರ್ಗ ಸಾಧನೆಗೆ ಕರ್ಮಮಾರ್ಗ ಒಂದು ಮೆಟ್ಟಿಲು ಎಂದು ಸಾರಿದರು. ಭಗವಂತ ನಿರಾಕಾರ, ನಿರ್ಗುಣ. ಆತ ರೂಪ-ಕಾಲ-ದೇಶಗಳಿಗೆ ಅತೀತ ಅನ್ನುವುದು ಜ್ಞಾನಮಾರ್ಗದ ಮುಖ್ಯ ತಿರುಳು. ಆದರೆ ಈ ತತ್ತ್ವ ಸಾಮಾನ್ಯರಿಗೆ ಎಟುಕುವುದಿಲ್ಲ. ಸಾಮಾನ್ಯ ಮನುಷ್ಯರ ಚಿತ್ತವನ್ನು ಕೇಂದ್ರೀಕರಿಸಲು ವಿಗ್ರಹವು ಒಂದು ಮಹತ್ತರ ಸಾಧನ. ಅದು ಸಾಧಕನ ಊರ್ಧ್ವ ಮುಖಮಾರ್ಗ ದಲ್ಲಿ ಇರುವ ಒಂದು ಸಹಾಯಕ ಏಣಿ.
ಹಾಗಾಗಿ ವಿಗ್ರಹಪೂಜೆ ತಿರಸ್ಕರಣೀಯವಲ್ಲ. ಬುದ್ಧಿಶಕ್ತಿಯ ಮಿತಿಯನ್ನು ಬುದ್ಧಿಶಕ್ತಿಯಿಂದಲೇ ಗುರುತಿಸುವ ಒಂದು ಸುಲಭೋಪಾಯ ಎಂದು ಹೇಳುತ್ತಾ ಅವರು ಭಾರತದ ನಾಲ್ಕು ದಿಕ್ಕುಗಳಲ್ಲಿ- ದಕ್ಷಿಣದಲ್ಲಿ ಶೃಂಗೇರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಜಗನ್ನಾಥಪುರಿ ಹೀಗೆ ನಾಲ್ಕು ಸ್ಥಳಗಳಲ್ಲಿ ಮಠವನ್ನು ಸ್ಥಾಪಿಸಿ ತಮ್ಮ ಮೂವತ್ತರಡನೇಯ ವಯಸ್ಸಿನಲ್ಲಿ ನಿರ್ವಾಣವನ್ನು ಹೊಂದಿದರು.
ತಮ್ಮ ಜೀವನದ ಅತ್ಯಲ್ಪ ಕಾಲದಲ್ಲೇ ಅನುಪಮ ಸಾಧನಗೈದ ಶಂಕರಾಚಾರ್ಯರನ್ನು ಅವರ ಭಕ್ತಜನರು ಸಾಕ್ಷಾತ್ ಪರಶಿವನ ಅವತಾರವೆಂದೇ ನಂಬಿದ್ದಾರೆ.