ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಶೋಕ್‌ ಸಿಂಘಾಲ್:‌ ರಾಷ್ಟ್ರ ನಿರ್ಮಾಣದ ಕರ್ಮಯೋಗಿ

ಭಾರತದ ಆತ್ಮಪ್ರಜ್ಞೆಯನ್ನು ಜಾಗೃತಗೊಳಿಸಲು ಮತ್ತು ಹಿಂದೂ ಸಮಾಜದಲ್ಲಿ ಧೈರ್ಯ-ವಿಶ್ವಾಸ ಗಳನ್ನು ತುಂಬಲು ನಿರಂತರವಾಗಿ ಶ್ರಮಿಸಿದ ಅಗ್ರಮಾನ್ಯ ಧುರೀಣರಲ್ಲಿ ಅಶೋಕ್ ಸಿಂಘಾಲ್‌ಜಿ ಯವರ ಹೆಸರು ಮುಂಚೂಣಿಯಲ್ಲಿದೆ. ಸಮಾಜವು ಅವರ ಮೇಲಿನ ಅಪಾರ ಗೌರವದಿಂದ ಅವರನ್ನು ಹಲವು ಬಿರುದು ಗಳಿಂದ ಕರೆದಿದೆ. ಕೆಲವರು ಅವರನ್ನು ‘ಹಿಂದೂ ಹೃದಯ ಸಾಮ್ರಾಟ’ ಎಂದರು, ಇನ್ನೂ ಕೆಲವರು ‘ರಾಮಜನ್ಮಭೂಮಿ ಹೋರಾಟದ ಹರಿಕಾರ’, ‘ಹಿಂದೂ ಸಮಾಜದ ಜಾಗೃತಿಯ ನಾಯಕ’ ಅಥವಾ ‘ರಾಷ್ಟ್ರೀಯ ಜಾಗೃತಿ ಅಭಿಯಾನದ ಸೇನಾಪತಿ’ ಎಂದೂ ಕೊಂಡಾ ಡಿದ್ದಾರೆ.

ಅಶೋಕ್‌ ಸಿಂಘಾಲ್:‌ ರಾಷ್ಟ್ರ ನಿರ್ಮಾಣದ ಕರ್ಮಯೋಗಿ

-

Profile
Ashok Nayak Oct 4, 2026 10:51 AM

ಸಮಾಜ ಪುರುಷ

ದತ್ತಾತ್ರೇಯ ಹೊಸಬಾಳೆ

ಭಾರತಕ್ಕೆ ಇದು ರಾಷ್ಟ್ರನಿರ್ಮಾಣದ ಕಾಲ. ಹೊಸದೊಂದು ಆತ್ಮವಿಶ್ವಾಸದೊಂದಿಗೆ ನವ ಭಾರತ ವನ್ನು ಕಟ್ಟಲು ಇಡೀ ದೇಶವೇ ಸಂಕಲ್ಪ ತೊಟ್ಟಿದೆ. ಭಾರತವು ಆತ್ಮಹೀನಾಯತೆಯ ಭಾವದಿಂದ ಸರಿದು ಆತ್ಮಗೌರವದೆಡೆಗೆ ಸಾಗುತ್ತಿದೆ ಹಾಗೂ ತನ್ನತನದ ಅರಿವೂ ಭಾರತದಲ್ಲಿ ಹೆಚ್ಚುತ್ತಿದೆ. ಈ ಪರಿವರ್ತನೆ ಯನ್ನು ‘ಭಾರತದ ಪುನರುತ್ಥಾನ’ ಎಂದೇ ಕರೆಯಬಹುದು.

ಭಾರತದ ಆತ್ಮಪ್ರಜ್ಞೆಯನ್ನು ಜಾಗೃತಗೊಳಿಸಲು ಮತ್ತು ಹಿಂದೂ ಸಮಾಜದಲ್ಲಿ ಧೈರ್ಯ-ವಿಶ್ವಾಸ ಗಳನ್ನು ತುಂಬಲು ನಿರಂತರವಾಗಿ ಶ್ರಮಿಸಿದ ಅಗ್ರಮಾನ್ಯ ಧುರೀಣರಲ್ಲಿ ಅಶೋಕ್ ಸಿಂಘಾಲ್‌ಜಿ ಯವರ ಹೆಸರು ಮುಂಚೂಣಿಯಲ್ಲಿದೆ. ಸಮಾಜವು ಅವರ ಮೇಲಿನ ಅಪಾರ ಗೌರವದಿಂದ ಅವರನ್ನು ಹಲವು ಬಿರುದು ಗಳಿಂದ ಕರೆದಿದೆ. ಕೆಲವರು ಅವರನ್ನು ‘ಹಿಂದೂ ಹೃದಯ ಸಾಮ್ರಾಟ’ ಎಂದರು, ಇನ್ನೂ ಕೆಲವರು ‘ರಾಮಜನ್ಮಭೂಮಿ ಹೋರಾಟದ ಹರಿಕಾರ’, ‘ಹಿಂದೂ ಸಮಾಜದ ಜಾಗೃತಿಯ ನಾಯಕ’ ಅಥವಾ ‘ರಾಷ್ಟ್ರೀಯ ಜಾಗೃತಿ ಅಭಿಯಾನದ ಸೇನಾಪತಿ’ ಎಂದೂ ಕೊಂಡಾ ಡಿದ್ದಾರೆ.

ಆದರೆ, ಅಶೋಕ್ ಜಿಯವರ ವ್ಯಕ್ತಿತ್ವವನ್ನು ಒಂದೇ ಒಂದು ಪದದಲ್ಲಿ ಹೇಳುವುದಾದರೆ, ಅವರೊಬ್ಬ ‘ಕರ್ಮಯೋಗಿ’. ಅವರು ಯಾವುದೇ ಅಪೇಕ್ಷೆಯಿಲ್ಲದೆ ನಿಸ್ವಾರ್ಥ-ಭಾವದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ತಾವು ಕೈಗೊಂಡ ಯಾವುದೇ ಕೆಲಸ ಯಶಸ್ವಿಯಾದಾಗ, ಅದರ ಶ್ರೇಯಸ್ಸನ್ನು ದೇವರ ಚರಣಗಳಿಗೆ ಅರ್ಪಿಸುತ್ತಿದ್ದರು ಮತ್ತು ಯಶಸ್ಸಿನಿಂದ ಬರುವ ಪ್ರಚಾರದಿಂದ ಸದಾ ದೂರವಿರುತ್ತಿದ್ದರು. ಮನ್ನಣೆಯ ಉತ್ತುಂಗ ಶಿಖರ ತಲುಪಿದಾಗಲೂ ಅವರು ಎಂದಿಗೂ ಪ್ರಸಿದ್ಧಿ ಬಯಸಲಿಲ್ಲ.

ಇದನ್ನೂ ಓದಿ: Dattatreya Hosabale: ಮುಸ್ಲಿಮರು ಸೂರ್ಯ ನಮಸ್ಕಾರ ಮಾಡಬೇಕು, ನದಿಗಳನ್ನು ಪೂಜಿಸಬೇಕು: ಆರ್‌ಎಸ್‌ಎಸ್ ನಾಯಕ ಹೇಗೆ ಹೇಳಿದ್ಯಾಕೆ?

ಯಾರಾದರೂ ಅವರ ಮುಂದೆಯೇ ಅವರನ್ನು ಹೊಗಳಿದರೆ ಅವರಿಗೆ ಕಸಿವಿಸಿಯಾಗುತ್ತಿತ್ತು. ಮಾನ-ಅಪಮಾನ, ಜಯ-ಅಪಜಯಗಳೆರಡನ್ನೂ ಮೀರಿ ಸಮಚಿತ್ತದಿಂದ ಕರ್ತವ್ಯದ ಹಾದಿಯಲ್ಲಿ ಸಾಗುವುದೇ ನಿಜವಾದ ಕರ್ಮಯೋಗಿ ಹಾಗೂ ಸ್ವಯಂಸೇವಕನ ಲಕ್ಷಣ. ಈ ಗುಣವು ಅಶೋಕ್ ಜಿಯವರ ಬದುಕಿನಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು.

ರಾಷ್ಟ್ರಕಾರ್ಯಕ್ಕಾಗಿ ಪ್ರತಿಭೆಯ ಸಮರ್ಪಣೆ: ಅಶೋಕ್ ಜಿ ಅಸಾಧಾರಣ ಪ್ರತಿಭೆ ಹಾಗೂ ತೀಕ್ಷ್ಣ ಬುದ್ಧಿಯ ವಿದ್ಯಾರ್ಥಿಯಾಗಿದ್ದರು. ಆದರೆ ಅವರ ಆ ಬುದ್ಧಿವಂತಿಕೆಯನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳದೆ, ರಾಷ್ಟ್ರದ ಉನ್ನತಿಗಾಗಿಯೇ ಮುಡಿಪಾಗಿಟ್ಟರು. ಅವರು ಅತ್ಯಂತ ಪ್ರತಿಷ್ಠಿತ ಮತ್ತು ಯಶಸ್ವಿ ಕುಟುಂಬ ದಿಂದ ಬಂದವರು. ಅವರ ಒಬ್ಬ ಸೋದರ ಭಾರತೀಯ ಪೊಲೀಸ್ ಸೇವೆಯಲ್ಲಿ ಸೇವೆ ಸಲ್ಲಿಸಿ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಾದರು.

ಮತ್ತೊಬ್ಬರು ಯಶಸ್ವಿ ವ್ಯಾಪಾರಿ ಹಾಗೂ ಕೈಗಾರಿಕೋದ್ಯಮಿಯಾದರು. ಅಶೋಕ್ ಜಿ ಸ್ವತಃ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಲೋಹಶಾಸ್ತ್ರದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದರು. ವೈಯಕ್ತಿಕ ಬದುಕಿನಲ್ಲಿ ಉಜ್ವಲ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅವರಿಗೆ ಹತ್ತಾರು ಅವಕಾಶಗಳಿದ್ದವು, ಆದರೆ ಅವೆಲ್ಲವನ್ನೂ ಬಿಟ್ಟು ಅವರು ತಮ್ಮ ಇಡೀ ಜೀವನವನ್ನೇ ರಾಷ್ಟ್ರಕ್ಕಾಗಿ ಅರ್ಪಿಸಿದರು.

Ashok singhal ok

ಅವರು ಮೂಲತಃ ತೀವ್ರವಾದ ಆಧ್ಯಾತ್ಮಿಕ ಸಾಧಕರಾಗಿದ್ದರು. ಸ್ವಾಮಿ ವಿವೇಕಾನಂದರಂತೆ ಅವರಿಗೂ ಕೂಡ ತಮಗಾಗಿ ಬೇಕೆಂಬುದು ಏನೂ ಇರಲಿಲ್ಲ; ಸಮಾಜ ಮತ್ತು ರಾಷ್ಟ್ರವೇ ಅವರ ಬದುಕಿನ ಸರ್ವಸ್ವ ವಾಗಿತ್ತು. ಅವರ ಅಧ್ಯಾತ್ಮ ಸಾಧನೆಯ ಕೇಂದ್ರಬಿಂದು ಸ್ವಾರ್ಥವಲ್ಲ, ಬದಲಿಗೆ ಸಮಾಜ ಮತ್ತು ರಾಷ್ಟ್ರ ವಾಗಿತ್ತು.

ಸಂಘದ ಸಂಸ್ಕಾರಗಳಿಂದ ರೂಪುಗೊಂಡ ವ್ಯಕ್ತಿತ್ವ: ಅಶೋಕ್ ಜಿ ವಿದ್ಯಾರ್ಥಿ ದೆಸೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕಕ್ಕೆ ಬಂದರು. ತಮ್ಮ ಬದುಕಿನ ಆರಂಭಿಕ ದಿನಗಳಲ್ಲಿ ಪ್ರೊ. ರಾಜೇಂದ್ರ ಸಿಂಗ್ (ರಜ್ಜು ಭಯ್ಯಾ) ಅವರ ಒಡನಾಟ ಹಾಗೂ ಮಾರ್ಗದರ್ಶನ ದೊರೆಯಿತು. ಭಾವುರಾವ್ ದೇವರಸ್ ಅವರು ಒಬ್ಬ ಕುಶಲ ಶಿಲ್ಪಿಯಂತೆ ಇವರ ವ್ಯಕ್ತಿತ್ವವನ್ನು ತಿದ್ದಿ ತೀಡಿದರು. ಜೊತೆಗೆ ಗುರೂಜಿ ಗೋಳ್ವಲ್ಕರ್ ಅವರ ಆಶೀರ್ವಾದ ಹಾಗೂ ಮಾರ್ಗದರ್ಶನವೂ ಅವರಿಗೆ ನಿರಂತರವಾಗಿ ಸಿಗುತ್ತಿತ್ತು. ಈ ಮಹನೀಯರ ಪ್ರಭಾವವು ಅವರ ಸಮರ್ಪಣಾ ಭಾವ, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಂಘಟನಾತ್ಮಕ ಕೌಶಲ್ಯ ಹಾಗೂ ದೂರದೃಷ್ಟಿಯಲ್ಲಿ ಸ್ಪಷ್ಟವಾಗಿ ಪ್ರತಿ-ಲಿಸಿತ್ತು. ಎಂಜಿನಿಯರಿಂಗ್ ಮುಗಿಸಿದ ತಕ್ಷಣವೇ ಅವರು ಸಂಘದ ಪ್ರಚಾರಕರಾದರು. ಅವರಿಗೆ ಯಾವ ಜವಾಬ್ದಾರಿಯನ್ನು ವಹಿಸಿದರೂ ಅದನ್ನು ಅಷ್ಟೇ ಶ್ರದ್ಧೆ ಹಾಗೂ ಪರಿಶ್ರಮದಿಂದ ನಿರ್ವಹಿಸುತ್ತಿದ್ದರು. ಆ ಕೆಲಸಕ್ಕಾಗಿಯೇ ಆ ದೇವರೇ ಅವರನ್ನು ಸೃಷ್ಟಿಸಿದ್ದನೋ ಎಂಬಂತೆ ಅವರು ಶ್ರಮಿಸುತ್ತಿದ್ದರು.

ವಿರಾಟ್ ಹಿಂದೂ ಸಮ್ಮೇಳನ ಮತ್ತು ವಿಶ್ವ ಹಿಂದೂ ಪರಿಷತ್ತಿನ ಜವಾಬ್ದಾರಿ: ಅಶೋಕ್ ಜಿ ದೆಹಲಿಯ ಪ್ರಾಂತ ಪ್ರಚಾರಕರಾಗಿದ್ದಾಗ (ಆಗ ದೆಹಲಿ ಮತ್ತು ಹರಿಯಾಣ ಒಳಗೊಂಡಿತ್ತು), ಮೀನಾಕ್ಷಿಪುರಂನಲ್ಲಿ ನಡೆದ ಮತಾಂತರದ ಘಟನೆಯು ಇಡೀ ಸಮಾಜದಲ್ಲಿ ತೀವ್ರ ಕಳವಳ ವನ್ನುಂಟು ಮಾಡಿತ್ತು.

ಹಿಂದೂ ಸಮಾಜದಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಎಡೆ ಕೇಳಿಬರುತ್ತಿತ್ತು. ದೆಹಲಿಯಲ್ಲಿ ‘ವಿರಾಟ್ ಹಿಂದೂ ಸಮ್ಮೇಳನ’ವನ್ನು ಆಯೋಜಿಸುವ ಜವಾಬ್ದಾರಿಯನ್ನು ಅಶೋಕ್ ಜಿಯವರಿಗೆ ವಹಿಸಲಾಯಿತು. ಡಾ. ಕರಣ್ ಸಿಂಗ್ ಸೇರಿದಂತೆ ಸಮಾಜದ ನಾನಾ ವರ್ಗದ ಗಣ್ಯರನ್ನು ಒಟ್ಟುಗೂಡಿಸಿ, ಆ ಸಮ್ಮೇಳನದ ಕನಸನ್ನು ಅವರು ನನಸಾಗಿಸಿದರು. ಪೂಜ್ಯ ಸಂತರ ಮಾರ್ಗ ದರ್ಶನದಲ್ಲಿ ವಿವಿಧ ಸಮುದಾಯಗಳನ್ನು ಒಗ್ಗೂಡಿಸಿ, ತಮ್ಮ ಅದ್ಭುತ ಸಂಘಟನಾ ಚಾತುರ್ಯ ದಿಂದ ಅಂತಹ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಇದರೊಂದಿಗೆ ಸಮಾಜವನ್ನು ಸಂಘಟಿಸುವ ಹಾಗೂ ಮುನ್ನಡೆಸುವ ಅವರ ಸಾಮರ್ಥ್ಯವು ಎಲ್ಲರಿಗೂ ಮನವರಿಕೆಯಾಯಿತು.

ಮತಾಂತರದ ಸವಾಲಿನ ವಿರುದ್ಧ ಸಮಾಜದಲ್ಲಿ ಜಾಗೃತಿಯ ಕಿಚ್ಚು ಹಚ್ಚಲು ಈ ಸಮ್ಮೇಳನವು ಬಹಳಷ್ಟು ನೆರವಾಯಿತು. ತದನಂತರ, ಧಾರ್ಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಇನ್ನೂ ಆಳವಾದ ಜಾಗೃತಿ ಮೂಡಿಸಲು ಅವರಿಗೆ ‘ವಿಶ್ವ ಹಿಂದೂ ಪರಿಷತ್’ನ ಜವಾಬ್ದಾರಿಯನ್ನು ನೀಡಲಾಯಿತು. ಅವರು ಈ ಜವಾಬ್ದಾರಿಯನ್ನೂ ಅದೇ ಬದ್ಧತೆಯಿಂದ ಸ್ವೀಕರಿಸಿದರು. ಸಮಾಜದ ಸ್ಥಿತಿಗತಿಗಳನ್ನು ಸೂಕ್ಷ ವಾಗಿ ಗ್ರಹಿಸುವುದು, ಅದರ ಬಗ್ಗೆ ಗಂಭೀರವಾಗಿ ಚಿಂತಿಸುವುದು, ಅದಕ್ಕೆ ತಕ್ಕಂತೆ ಯೋಜನೆಗಳನ್ನು ಮಾಡುವುದು ಮತ್ತು ಆ ಯೋಜನೆಗಳನ್ನು ತಳಮಟ್ಟದಲ್ಲಿ ಕಾರ್ಯ ರೂಪಕ್ಕೆ ತರುವುದು ಅವರ ಕಾರ್ಯಶೈಲಿಯ ಮುಖ್ಯ ಲಕ್ಷಣಗಳಾದವು.

ಸಮರಸ ಹಿಂದೂ ಸಮಾಜ ನಿರ್ಮಾಣದ ಹೆಜ್ಜೆಗಳು: ಅಸ್ಪೃಶ್ಯತೆಯು ಶತಶತಮಾನಗಳಿಂದ ಹಿಂದೂ ಸಮಾಜವನ್ನು ಕಾಡುತ್ತಿರುವ ಒಂದು ಗಂಭೀರ ಪಿಡುಗು. ಅದನ್ನು ಸಂಪೂರ್ಣವಾಗಿ ಅಳಿಸದೆ ಸಮರಸ ಸಮಾಜದ ಕನಸು ನನಸಾಗದು. ಅಶೋಕ್ ಜಿ ಈ ಸಮಸ್ಯೆಯ ಪರಿಹಾರಕ್ಕಾಗಿ ಕೇವಲ ಸಹಭೋಜನ ಗಳಿಗೋ ಅಥವಾ ಸಾಂಕೇತಿಕ ಕಾರ್ಯಕ್ರಮಗಳಿಗೋ ತಮ್ಮನ್ನು ಸೀಮಿತ ಗೊಳಿಸಿಕೊಳ್ಳಲಿಲ್ಲ.

ಅಸ್ಪೃಶ್ಯತೆಯು ಹಿಂದೂ ಧರ್ಮದ ಮೂಲ ತತ್ವಗಳಿಗೆ ವಿರುದ್ಧವಾದುದು ಎಂಬ ಕಟು ಸತ್ಯವನ್ನು ಹಿಂದೂ ಸಮಾಜಕ್ಕೆ ಮುಟ್ಟಿಸುವಂತೆ ಅವರು ಪೂಜ್ಯ ಸಂತರಿಗೆ ವಿನಂತಿಸಿದರು. ಸಂತರು ಪರಿಶಿಷ್ಟ ಸಮುದಾಯಗಳ ಕೇರಿಗಳಿಗೆ ಕಾಲಿಡಲಾರಂಭಿಸಿದರು, ಜೊತೆಗೆ ಈ ಕುರಿತು ಸಮಾಜದಲ್ಲಿ ಅಧ್ಯಯನ ಹಾಗೂ ವಿಚಾರವಿನಿಮಯಗಳು ಮುಂದುವರೆದವು.

ನವೆಂಬರ್ 9, 1989ರಂದು ಅಯೋಧ್ಯೆಯಲ್ಲಿ ನಡೆದ ರಾಮಜನ್ಮಭೂಮಿ ಮಂದಿರದ ಶಂಕುಸ್ಥಾಪನೆ ಸಮಾರಂಭದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕಾಮೇಶ್ವರ ಚೌಪಾಲ್ ಅವರಿಂದ ಶಿಲೆ ಇರಿಸಿದ್ದು ಸಾಮಾಜಿಕ ಸಮರಸತೆಯ ಆ ವಿಶಾಲ ಸಂದೇಶದ ಒಂದು ಮೈಲಿಗಗಿತ್ತು. ಈ ಪವಿತ್ರ ಕಾರ್ಯದಲ್ಲಿ ಅನೇಕ ಪೂಜ್ಯ ಸಂತರು ಮತ್ತು ಧರ್ಮಾಚಾರ್ಯರು ಭಾಗವಹಿಸಿದ್ದರು. ಅದೇ ರೀತಿ, ವಾರಣಾಸಿಯಲ್ಲಿ ಪೂಜ್ಯ ಸಂತರು ಡೊಮ್ ರಾಜರ ಮನೆಯಲ್ಲಿ ಭೋಜನ ಸ್ವೀಕರಿಸಿದ್ದು ಸಾಮಾಜಿಕ ಸಾಮರಸ್ಯಕ್ಕೆ ಮತ್ತೊಂದು ದೊಡ್ಡ ನಿದರ್ಶನವಾಯಿತು. ಈ ಎಲ್ಲಾ ಪ್ರಾಮಾಣಿಕ ಪ್ರಯತ್ನಗಳು ಸಮಾಜದಲ್ಲಿ ಬೇರೂರಿದ್ದ ತಾರತಮ್ಯವನ್ನು ಹೋಗಲಾಡಿಸಿ, ಒಂದು ಸಮರಸ ಹಾಗೂ ಒಗ್ಗಟ್ಟಿನ ಹಿಂದೂ ಸಮಾಜವನ್ನು ಕಟ್ಟಬಹುದು ಎಂಬ ನಂಬಿಕೆಯನ್ನು ಗಟ್ಟಿಗೊಳಿಸಿದವು.

ರಾಮಜನ್ಮಭೂಮಿ ಆಂದೋಲನ ಮತ್ತು ಅಶೋಕ್ ಜಿ: ರಾಮಜನ್ಮಭೂಮಿ ಆಂದೋಲನವು ಆಧುನಿಕ ಭಾರತದ ಅತ್ಯಂತ ದೊಡ್ಡ ಹಾಗೂ ವ್ಯಾಪಕ ಜನಪರ ಆಂದೋಲನ ಗಳಲ್ಲಿ ಒಂದಾಗಿದೆ.

1982ರ ದಶಕದಿಂದ ಹಿಡಿದು 2019ರ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಇಂದಿನ ಭವ್ಯ ಮಂದಿರ ನಿರ್ಮಾಣದವರೆಗೆ ಈ ಹೋರಾಟವು ಹಲವು ಹಂತಗಳನ್ನು ಕಂಡಿದೆ. ರಾಮ-ಜಾನಕಿ ರಥಯಾತ್ರೆ, ಶಿಲಾ ಪೂಜೆ, ಚರಣ-ಪಾದುಕೆ ಪೂಜೆ ಹಾಗೂ ರಾಮಜ್ಯೋತಿಯಂತಹ ಕಾರ್ಯಕ್ರಮಗಳು ದೇಶದ ಮೂಲೆಮೂಲೆಯಲ್ಲೂ ಜನಜಾಗೃತಿಯ ಅಲೆ ಎಬ್ಬಿಸಿದವು. ಈ ಇಡೀ ಐತಿಹಾಸಿಕ ಆಂದೋಲನ ದಲ್ಲಿ ಅಶೋಕ್ ಜಿ ಮುಂಚೂಣಿಯ ಪಾತ್ರ ವಹಿಸಿದರು.

1990ರ ಕರಸೇವೆಯ ಸಂದರ್ಭದ ಕಠಿಣ ಪರಿಸ್ಥಿತಿಗಳು ಮತ್ತು ಅನೇಕ ಕಾರ್ಯಕರ್ತರ ಬಲಿದಾನ ಗಳು ಈ ಹೋರಾಟವನ್ನು ಒಂದು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿದವು. ಎಂತಹ ಬಿಕ್ಕಟ್ಟಿನ ಸಮಯದಲ್ಲೂ ಅಶೋಕ್ ಜಿಯವರ ದೃಢ ವಿಶ್ವಾಸವೇ ಸಾವಿರಾರು ಕಾರ್ಯಕರ್ತರಿಗೆ ದೊಡ್ಡ ಚೈತನ್ಯದ ಮೂಲವಾಗಿತ್ತು. ಇದು ಶ್ರೀರಾಮನ ಕೆಲಸ. ಶ್ರೀರಾಮನೇ ಈ ಕೆಲಸವನ್ನು ಪೂರ್ಣಗೊಳಿಸುತ್ತಾನೆ ಎಂದು ಅವರು ಅಚಲವಾಗಿ ನಂಬಿದ್ದರು. ಅವರ ಜೀವಿತಾವಧಿಯಲ್ಲಿ ಭವ್ಯ ರಾಮ ಮಂದಿರ ಪೂರ್ಣಗೊಳ್ಳಲಿಲ್ಲವಾದರೂ, ಅವರು ದಶಕಗಳ ಕಾಲ ಮುತುವರ್ಜಿ ವಹಿಸಿ, ಸಂಘಟಿಸಿ, ಚೈತನ್ಯ ತುಂಬಿದ ಆಂದೋಲನವು ಅವರ ನಿಧನದ ನಂತರ ತನ್ನ ಅಂತಿಮ ಗುರಿಯನ್ನು ತಲುಪಿತು.

ನವೆಂಬರ್ 9, 2019ರ ಸುಪ್ರೀಂ ಕೋರ್ಟ್ ತೀರ್ಪಿನೊಂದಿಗೆ ಶ್ರೀ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣದ ಹಾದಿ ಮುಕ್ತವಾಯಿತು. ಆಗ 5, 2020ರಂದು ಭೂಮಿಪೂಜೆ ನೆರವೇರಿತು. ಜನವರಿ 22, 2024ರಂದು ಶ್ರೀ ರಾಮಲ ಪ್ರಾಣಪ್ರತಿಷ್ಠೆ ಸಂಭ್ರಮದಿಂದ ಜರುಗಿತು. ಇಂದು ಅಲ್ಲಿ ಅತ್ಯಂತ ಭವ್ಯವಾದ ರಾಮಮಂದಿರ ತಲೆಎತ್ತಿ ನಿಂತಿದೆ.

ರಾಮಜನ್ಮಭೂಮಿಗೆ ಮಾತ್ರ ಸೀಮಿತವಾಗಿರದ ವ್ಯಕ್ತಿತ್ವ: ಅಶೋಕ್ ಜಿ ರಾಮಜನ್ಮಭೂಮಿ ಆಂದೋಲನದ ಪ್ರಮುಖ ಮುಖಂ ಡರೆಂದೇ ಹೆಚ್ಚು ಪರಿಚಿತರಾಗಿದ್ದರೂ, ಅವರ ಸೇವಾಕ್ಷೇತ್ರವು ಅದಕ್ಕೂ ಮೀರಿದ ವಿಶಾಲ ಹರವನ್ನು ಹೊಂದಿತ್ತು.

ರಾಮಸೇತು ರಕ್ಷಣೆ, ಅಮರನಾಥ ಯಾತ್ರೆ, ಗೋ ಸಂಶೋಧನೆ ಹಾಗೂ ಗೋ ಸಂರಕ್ಷಣೆ, ಸಾಮಾಜಿಕ ಸಮರಸತೆ, ವಿಚಾರವಂತರನ್ನು ಹಿಂದೂ ಚಿಂತನೆಯೊಂದಿಗೆ ಬೆಸೆಯುವುದು ಮತ್ತು ಸಮಾಜದ ನಾನಾ ರಾಷ್ಟ್ರೀಯ ಸಮಸ್ಯೆಗಳ ಕುರಿತು ಜನಜಾಗೃತಿ ಮೂಡಿಸುವುದು ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರ. ಅವರು ಮೂಲತಃ ವಿಜ್ಞಾನಿಯಾದರೂ (ಲೋಹಶಾಸ್ತ್ರಜ್ಞ), ನಮ್ಮ ಸಮಾಜದ ನಾಡಿಮಿಡಿತ, ಸಾಮರ್ಥ್ಯ ಹಾಗೂ ಅದರ ಕಷ್ಟ- ನಷ್ಟಗಳ ಬಗ್ಗೆ ಅತ್ಯಂತ ಆಳವಾದ ಅರಿವು ಅವರಿಗಿತ್ತು. ಅವರ ಕಾರ್ಯವೈಖರಿಯಲ್ಲಿ ವೈಜ್ಞಾನಿಕ ದೃಷ್ಟಿ ಕೋನ, ಸಂಘಟನಾ ಚಾತುರ್ಯ, ಆಧ್ಯಾತ್ಮಿಕ- ರಾಷ್ಟ್ರೀಯ ಪ್ರಜ್ಞೆಯ ಸಂಗಮವಿತ್ತು.

ದೂರದೃಷ್ಟಿಯ ಕರ್ಮಯೋಗಿ: ಅಶೋಕ್ ಜಿಯವರ ವ್ಯಕ್ತಿತ್ವದ ಅತ್ಯಂತ ದೊಡ್ಡ ವಿಶೇಷತೆ ಯೆಂದರೆ, ಒಂದು ಕೆಲಸ ಮುಗಿಯಿತು ಎಂದು ಸುಮ್ಮನೆ ಕೂರುತ್ತಿರಲಿಲ್ಲ. ಒಂದು ಗುರಿ ಸಾಧನೆ ಯಾಗುತ್ತಿದ್ದಂತೆ ಮುಂದಿನ ದೊಡ್ಡ ಗುರಿಯತ್ತ ಹೆಜ್ಜೆ ಹಾಕುತ್ತಿ ದ್ದರು. ಸಮಾಜದ ಮುಂದಿನ ಪ್ರತಿಯೊಂದು ಸವಾಲನ್ನು ಧೈರ್ಯವಾಗಿ ಸ್ವೀಕರಿಸಿ, ಅದನ್ನು ಪರಿಹರಿಸಲು ಇಡೀ ಸಮಾಜವನ್ನು ಸಂಘಟಿಸುವುದೇ ಅವರ ಜೀವನದ ವ್ರತವಾಗಿತ್ತು. ಅವರಿಗೆ ಸಂಘಟನೆಯೇ ಸಾಧನವಾಗಿತ್ತು, ಸಮಾಜವೇ ಗುರಿಯಾಗಿತ್ತು ಮತ್ತು ರಾಷ್ಟ್ರಸೇವೆಯೇ ಜೀವನದ ಪರಮ ಉದ್ದೇಶವಾಗಿತ್ತು.

ವೈಯಕ್ತಿಕ ಸುಖಗಳನ್ನು ಬದಿಗಿಟ್ಟು ದೇಶಸೇವೆಯ ದಾರಿ ಹಿಡಿದರು. ಹಿಂದೂ ಸಮಾಜದಲ್ಲಿ ಆತ್ಮವಿಶ್ವಾಸವನ್ನು ಮರುಕಳಿಸಲು, ಸಾಮಾಜಿಕ ಸಮರಸತೆಯನ್ನು ಗಟ್ಟಿಗೊಳಿಸಲು ಹಾಗೂ ರಾಷ್ಟ್ರೀಯ ಪ್ರeಯನ್ನು ಜಾಗೃತಗೊ ಳಿಸಲು ಅವರು ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಅವರನ್ನು ರಾಮಜನ್ಮಭೂಮಿ ಹೋರಾಟದ ಒಬ್ಬ ನಾಯಕ ಎಂದು ಮಾತ್ರ ಭಾವಿಸುವುದು ಅವರ ವಿಶಾಲ ವ್ಯಕ್ತಿತ್ವವನ್ನು ಸೀಮಿತಗೊಳಿಸಿದಂತೆ. ಅವರು ಅಕ್ಷರಶಃ ಒಬ್ಬ ‘ಕರ್ಮಯೋಗಿ’- ಅವರ ಬದುಕು ಮುಂಬರುವ ತಲೆಮಾರುಗಳಿಗೆ ಸದಾ ಕಾಲ ಸ್ಪೂರ್ತಿ.

(ಲೇಖಕರು ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ)