ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌N Mahesh Column: ಸಂವಿಧಾನದ ಆಶಯಗಳನ್ನು ಸೋಲಿಸಿದವರಾರು ?

ಜಾತಿ, ಧರ್ಮ, ಜನಾಂಗ, ಲಿಂಗ ಮತ್ತು ಜನ್ಮಸ್ಥಳಗಳ ಆಧಾರದ ಮೇಲೆ ಯಾರನ್ನೂ ಶೋಷಣೆ ಮಾಡಬಾರದು; ದೇಶದ ಜನಸಂಖ್ಯೆಯ ಶೇ.50ರಷ್ಟು ಭಾಗವಿರುವ ಹಿಂದೂ ಮಹಿಳೆಯರಿಗೆ, ಪುರುಷರಿಗೆ ಸರಿಸಮಾನವಾದ ಹಕ್ಕುಗಳನ್ನು ಕೊಡಬೇಕು ಎಂಬುದು ಸಂವಿಧಾನದ ಅನುಚ್ಛೇದ ೧೫ರ ಆಶಯ.

ಸಂವಿಧಾನದ ಆಶಯಗಳನ್ನು ಸೋಲಿಸಿದವರಾರು ?

-

Ashok Nayak
Ashok Nayak Nov 26, 2025 10:38 AM

ತನ್ನಿಮಿತ್ತ

ಎನ್.ಮಹೇಶ್

ಕೇಂದ್ರ ಸರಕಾರವು ನವೆಂಬರ್ ೨೬ರ ದಿನವನ್ನು ‘ಸಂವಿಧಾನ ದಿನ’ ಎಂದು 2016ರಲ್ಲಿ ಘೋಷಣೆ ಮಾಡಿ, ಸಂವಿಧಾನ ಕುರಿತಾದ ಜಾಗೃತಿ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರುತ್ತಿದೆ. ನಿಮಗೆ ಗೊತ್ತಿರಲಿ, 1950ರಿಂದ 2016ರವರೆಗೆ ಸರಿಸುಮಾರು 66 ವರ್ಷಗಳ ಕಾಲ ನವೆಂಬರ್ 26ರ ದಿನವನ್ನು ‘ರಾಷ್ಟ್ರೀಯ ಕಾನೂನು ದಿನ’ ಎಂದು ಆಚರಿಸಲಾಗುತ್ತಿತ್ತು.

‘ರಾಷ್ಟ್ರೀಯ ಕಾನೂನು ದಿನ’ ಎಂದರೆ, ಅದು ಸಂವಿಧಾನ ಮಂಡನೆಯಾದ ದಿನ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಇದನ್ನು ನೇರವಾಗಿ ರಾಷ್ಟ್ರದ ಜನತೆಗೆ ಅರ್ಥಮಾಡಿಸುವ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2016ರಲ್ಲಿ ನವೆಂಬರ್ 26ರ ದಿನವನ್ನು ‘ಸಂವಿಧಾನ ದಿನ’ ಎಂದು ಘೋಷಣೆ ಮಾಡಿದರು.

ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಎರಡು ದಿನಗಳ ಕಾಲ ಸಂವಿಧಾನದ ಕುರಿತು ಚರ್ಚೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷದ ನವೆಂಬರ್ 26ರಂದು ಸಂವಿಧಾನ ದಿನ ವನ್ನು ಆಚರಿಸಲಾಗುತ್ತಿದೆ. ಪರಿಣಾಮವಾಗಿ, ಇಡೀ ರಾಷ್ಟ್ರದಲ್ಲಿ ಆ ದಿನದಂದು ಶಾಲಾ-ಕಾಲೇಜುಗಳು, ಸರಕಾರಿ ಕಚೇರಿಗಳು ಮತ್ತು ಸಾರ್ವಜನಿಕರ ನಡುವೆ ಸಂವಿಧಾನದ ಮಹತ್ವದ ಕುರಿತು ಚರ್ಚೆಗಳು ನಡೆಯುತ್ತಿವೆ.

1949ರ ನವೆಂಬರ್ 25ರಂದು ಸಂವಿಧಾನ ರಚನಾ ಸಭೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕ ರರು ಭಾಷಣ ಮಾಡುತ್ತಾ, “1950ರ ಜನವರಿ 26೬ರಿಂದ, ಭಾರತೀಯರಾದ ನಾವು ಅನೇಕ ವೈರುಧ್ಯಗಳನ್ನು ಒಳಗೊಂಡ ಒಂದು ಹೊಸ ಜೀವನವನ್ನು ಪ್ರವೇಶಿಸುತ್ತಿದ್ದೇವೆ. ‘ಒಬ್ಬ ವ್ಯಕ್ತಿಗೆ ಒಂದು ವೋಟು, ಒಂದು ವೋಟಿಗೆ ಒಂದು ಮೌಲ್ಯ’ ಎಂಬ ರಾಜಕೀಯ ಸಮಾನತೆ ಯನ್ನು ಗಳಿಸಿಕೊಂಡಿದ್ದೇವೆ.

ಇದನ್ನೂ ಓದಿ: Vishweshwar Bhat Column: ಒಂದು ತಮಾಷೆಯ ಪ್ರಸಂಗ

ಆದರೆ, ಸಾಮಾಜಿಕ-ಆರ್ಥಿಕ ಅಸಮಾನತೆ ಹಾಗೆಯೇ ಉಳಿದುಕೊಂಡಿದೆ. ಇನ್ನೆಷ್ಟು ದಿನ ಈ ಪರಿಸ್ಥಿತಿಯನ್ನು ಹೀಗೇ ಮುಂದುವರಿಸೋಣ? ಆದಷ್ಟು ಬೇಗ ಈ ಅಸಮಾನತೆಯನ್ನು ಹೋಗಲಾಡಿಸಬೇಕು. ಇಲ್ಲದಿದ್ದರೆ ಅಸಮಾನತೆಗೆ ಒಳಗಾದ ಜನರು ನಾವು ತುಂಬಾ ಶ್ರಮ ಪಟ್ಟು ಗಳಿಸಿಕೊಂಡಿರುವ ಈ ಪ್ರಜಾತಂತ್ರ ವ್ಯವಸ್ಥೆಯನ್ನು ಧ್ವಂಸ ಮಾಡುತ್ತಾರೆ" ಎಂದು ಎಚ್ಚರಿಸಿದರು.

ಆ ಎಚ್ಚರಿಕೆಯ ಮಾತುಗಳನ್ನು ಅಂದಿನ ಕಾಂಗ್ರೆಸ್ ಸರಕಾರ ಕೇಳಿಸಿಕೊಳ್ಳಲೇ ಇಲ್ಲ. ಬಾಬಾಸಾಹೇಬರು ಬದುಕಿರುವಾಗಲೇ ಕಾಂಗ್ರೆಸ್ಸಿಗರು ಸಂವಿಧಾನದ ಆಶಯಗಳನ್ನು ಹೇಗೆ ಸೋಲಿಸಿದರು ನೋಡಿ!

ಜಾತಿ, ಧರ್ಮ, ಜನಾಂಗ, ಲಿಂಗ ಮತ್ತು ಜನ್ಮಸ್ಥಳಗಳ ಆಧಾರದ ಮೇಲೆ ಯಾರನ್ನೂ ಶೋಷಣೆ ಮಾಡಬಾರದು; ದೇಶದ ಜನಸಂಖ್ಯೆಯ ಶೇ.50ರಷ್ಟು ಭಾಗವಿರುವ ಹಿಂದೂ ಮಹಿಳೆಯರಿಗೆ, ಪುರುಷರಿಗೆ ಸರಿಸಮಾನವಾದ ಹಕ್ಕುಗಳನ್ನು ಕೊಡಬೇಕು ಎಂಬುದು ಸಂವಿಧಾನದ ಅನುಚ್ಛೇದ ೧೫ರ ಆಶಯ. ಈ ಆಶಯವನ್ನು ಒಳಗೊಂಡ ‘ಹಿಂದೂ ಕೋಡ್ ಬಿಲ್’ ಅನ್ನು ಕಾನೂನು ಸಚಿವರಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರರು ಸಂಸತ್ತಿನಲ್ಲಿ ಮಂಡಿಸಿದರು.

Constitution-of-India-ok

ಆದರೆ ನೆಹರು ನೇತೃತ್ವದ ಕಾಂಗ್ರೆಸ್ ಸರಕಾರವು ಆ ವಿಧೇಯಕವು ಅನುಮೋದನೆಗೊಳ್ಳಲು ಬಿಡದೆ ಸೋಲಿಸಿತು. ಇದು ಸಂವಿಧಾನದ ಸಮಾನತೆಯ ಆಶಯಕ್ಕೆ ಆದ ಮೊದಲ ಸೋಲು. ಈ ಕಾರಣಕ್ಕೆ ಅಂಬೇಡ್ಕರರು 1951ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶದ ಹಕ್ಕು ಕಾನೂನು ಮಂತ್ರಿಯಾಗಿ ಅಂಬೇಡ್ಕರರು ಹೇಳಿದ್ದಿಷ್ಟು: ಸಂವಿಧಾನ ಜಾರಿಯಾಗಿ ಒಂದು ವರ್ಷವಾದರೂ, ಎಸ್‌ಸಿ/ ಎಸ್‌ಟಿಗಳಷ್ಟೇ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಇತರೆ ದುರ್ಬಲ ವರ್ಗಗಳಿಗೂ ಸಾರ್ವಜನಿಕ ಸೇವೆಗಳಲ್ಲಿ ಸೂಕ್ತ ಮೀಸಲಾತಿ ಒದಗಿಸಬೇಕು ಹಾಗೂ ಅವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಸಮೀಕ್ಷೆ ನಡೆಸಲು ಸಂವಿಧಾನದ ಅನುಚ್ಛೇದ 340ರ ಪ್ರಕಾರ ಹಿಂದುಳಿದ ವರ್ಗಗಳ ಆಯೋಗವನ್ನು ನೇಮಕ ಮಾಡಬೇಕು ಎಂದು ಅಂಬೇಡ್ಕರರು ಆಗ್ರಹಿಸಿದರು.

ಆದರೆ ಬಾಬಾಸಾಹೇಬರ ಬೇಡಿಕೆಗೆ ನೆಹರು ಸರಕಾರ ಕಿವಿಗೊಡಲಿಲ್ಲ. ಇದರ ಪರಿಣಾಮ, 1990ರವರೆಗೆ ಸುಮಾರು 40 ವರ್ಷಗಳ ಕಾಲ, ದೇಶದ ಜನಸಂಖ್ಯೆಯ ಶೇ.52ರಷ್ಟು ಭಾಗ ವಿರುವ ಒಬಿಸಿ ಸಮುದಾಯಗಳಿಗೆ ಮೀಸಲಾತಿಯನ್ನು ವಂಚಿಸಿ, ಸಂವಿಧಾನದ 16 ಮತ್ತು 240 ಅನುಚ್ಛೇದಗಳನ್ನು ಉಲ್ಲಂಘನೆ ಮಾಡಲಾಯಿತು.

ಆ ಕಾರಣದಿಂದಲೇ ಬಾಬಾಸಾಹೇಬರು ಪ್ರತಿಭಟಿಸಿ 1951ರಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು. ಎಸ್‌ಸಿ/ಎಸ್‌ಟಿ ಮತ್ತು ಇತರೆ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಉತ್ತೇಜನ ಕೊಡುವ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವಂತೆ ಅನುಚ್ಛೇದ 46 ಸೂಚಿಸಿದೆ.

ಬಾಬಾಸಾಹೇಬರು ಕಾನೂನು ಮಂತ್ರಿಯಾಗಿ ಸಂವಿಧಾನ ರಚನಾ ಕಾರ್ಯವನ್ನು ಮುಗಿಸಿ, ದೇಶದ ದುರ್ಬಲ ವರ್ಗಗಳ ಅಭಿವೃದ್ಧಿಗೆ ಸೂಕ್ತ ಯೋಜನೆಗಳನ್ನು ರೂಪಿಸಲು ತಮಗೆ ಯೋಜನಾ ಖಾತೆಯನ್ನು ನೀಡಬೇಕೆಂದು ಒತ್ತಾಯಿಸಿದರು. ಪ್ರಧಾನಿ ನೆಹರು ಭರವಸೆ ನೀಡಿ ವಂಚಿಸಿದರು. ಅಂಬೇಡ್ಕರರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಇದೂ ಒಂದು ಕಾರಣವಾಗಿತ್ತು.

ಇದರ ಪರಿಣಾಮ, ಅಂದಿನ ಸರಕಾರಗಳು ಜಾರಿಗೆ ತಂದ ಮೊದಲ ೬ ಪಂಚವಾರ್ಷಿಕ ಯೋಜನೆಗಳಲ್ಲಿ 30 ವರ್ಷಗಳ ಕಾಲ, ಶೋಷಿತ ವರ್ಗಗಳ ಆರ್ಥಿಕ ಅಭಿವೃದ್ಧಿಗೆ ಯಾವ ಯೋಜನೆಗಳೂ ರೂಪುಗೊಳ್ಳಲಿಲ್ಲ. ಹೀಗಾಗಿ ಶೋಷಿತ ವರ್ಗಗಳ ಜನರು ಇಂದಿಗೂ ಆರ್ಥಿಕವಾಗಿ ದುರ್ಬಲರಾಗೇ ಉಳಿದಿದ್ದಾರೆ.

ದೇಶದ ಪ್ರತಿಯೊಂದು ಮಗುವಿಗೂ ಉಚಿತ, ಕಡ್ಡಾಯ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದು ಅನುಚ್ಛೇದ ೨೧ ಮತ್ತು 45 ಸೂಚಿಸುತ್ತವೆ. ಆದರೆ ನಮ್ಮ ದೇಶವನ್ನು ಆಳಿದ ಕಾಂಗ್ರೆಸ್ ಸರಕಾರ ಮೊದಲ ೨೦ ವರ್ಷಗಳ ಕಾಲ ಒಂದು ಸಮಗ್ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲೇ ಇಲ್ಲ. ಇದರಿಂದಾಗಿ ಇಂದಿನ ಶಿಕ್ಷಣ ವ್ಯವಸ್ಥೆಯು ಹಳಿ ತಪ್ಪಿ, ವಿದ್ಯಾವಂತ ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಯಾಗಿದೆ.

ಅನುಚ್ಛೇದ ೧೯, ೨೦, ೨೧ಮತ್ತು ೨೨ರ ಪ್ರಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ, ಜೀವಿಸುವ ಹಕ್ಕು, ಸಂಘಟನೆ ಮಾಡುವ ಹಕ್ಕು, ಕಾನೂನುಬಾಹಿರ ದಸ್ತಗಿರಿ ವಿರುದ್ಧದ ರಕ್ಷಣೆಯ ಹಕ್ಕು ಇತ್ಯಾದಿ ಮೂಲಭೂತ ಹಕ್ಕುಗಳನ್ನು ಭಾರತದ ಎಲ್ಲಾ ಪ್ರಜೆಗಳಿಗೆ ನೀಡಲಾಗಿದೆ. 1971ರ ಲೋಕಸಭಾ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರು ಉತ್ತರ ಪ್ರದೇಶದ ರಾಯ್‌ ಬರೇಲಿ ಕ್ಷೇತ್ರದಲ್ಲಿ ‘ವೋಟುಚೋರಿ’ ಮಾಡಿ, ಸರಕಾರಿ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ಗೆದ್ದಿದ್ದಾರೆ ಎಂದು ಆರೋಪಿಸಿ ರಾಜ್‌ ನಾರಾಯಣ್ ಅವರು ಅಲಹಾಬಾದ್ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು.

ವಿಚಾರಣೆ ನಡೆಸಿದ ನ್ಯಾಯಾಲಯ, 1975ರ ಜೂನ್ ೧೨ರಂದು ಇಂದಿರಾ ಗಾಂಧಿಯವರ ಆಯ್ಕೆಯನ್ನು ಅಸಿಂಧುಗೊಳಿಸಿ, ಮುಂದಿನ ೬ ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸ ದಂತೆ ಷರತ್ತು ವಿಧಿಸಿತು. ಆಗ ಇಂದಿರಾ ಗಾಂಧಿಯವರು ತಮ್ಮ ಪ್ರಧಾನಿ ಸ್ಥಾನವನ್ನು ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿಯನ್ನು ಅಕ್ರಮವಾಗಿ ಜಾರಿಗೊಳಿಸಿ, ಸಂವಿಧಾನಕ್ಕೆ ಅತ್ಯಂತ ಕ್ರೂರಿಯಾದ ೫ ತಿದ್ದುಪಡಿಗಳನ್ನು ಮಾಡಿ, ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನಗೊಳಿಸಿದರು.

ಸಂಸತ್ತು ಮತ್ತು ಮಂತ್ರಿಮಂಡಲವನ್ನು ತಮ್ಮ ಕೈಗೊಂಬೆ ಮಾಡಿಕೊಂಡು, ಸಂವಿಧಾನ ವನ್ನು ಅಮಾನತಿನಲ್ಲಿಟ್ಟು, ೫ ವರ್ಷಗಳ ಸಂಸತ್ತಿನ ಅವಧಿಯನ್ನು ೬ ವರ್ಷ ಮಾಡಿ ಕೊಂಡು, ೨೧ ತಿಂಗಳುಗಳ ಅವಧಿಯಲ್ಲಿ 120000 ಜನರನ್ನು ಜೈಲಿಗಟ್ಟಿ ಸರ್ವಾಧಿಕಾರಿ ಆಡಳಿತವನ್ನು ನಡೆಸಿದರು.

ಬಾಬಾಸಾಹೇಬ್ ಅಂಬೇಡ್ಕರರ ವಿರೋಧದ ನಡುವೆಯೂ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಅಂದಿನ ನೆಹರು ಸರಕಾರವು ಸಂವಿಧಾನದಲ್ಲಿ ಸೇರಿಸಿತು. ‘ತಾತ್ಕಾಲಿಕ’ ಎಂದು ಸೇರ್ಪಡೆಯಾದ ಈ ವಿಧಿಯು 70 ವರ್ಷಗಳ ಕಾಲ ಜಾರಿ ಯಲ್ಲಿತ್ತು!

ಇದರ ಪರಿಣಾಮವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಥ ಬಿಕ್ಕಟ್ಟುಗಳನ್ನು ಎದುರಿಸ ಬೇಕಾಗಿ ಬಂತು, ಎಷ್ಟು ನಾಗರಿಕರ ಪ್ರಾಣ ಮತ್ತು ಆಸ್ತಿಪಾಸ್ತಿಗಳ ನಷ್ಟವಾದವು ಎಂಬು ದನ್ನು ಯೋಚಿಸಿ. 70 ವರ್ಷಗಳ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರವು ಈ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಪ್ರಜಾಪ್ರಭುತ್ವವನ್ನು ಜಾರಿಗೊಳಿಸಿದೆ.

(ಲೇಖಕರು ಮಾಜಿ ಸಚಿವರು)