Ravi Hunj Column: ಬೌದ್ಧಿಕ ದಾರಿದ್ರ್ಯಕ್ಕೆ ಕವಚವಾಗಿ ಬಳಕೆಯಾದ ಬಸವಣ್ಣ !
ಭೋಗವನ್ನು ಈಡೇರಿಸಿಕೊಳ್ಳಲು ಅನುವಾಗುವ ವೃತ್ತಿಗಳನ್ನು ತುಚ್ಛವಾಗಿ ಕಾಣುವುದಿಲ್ಲ. ಈ ಜಗದಾದಿ ಗಳೇ ಜೀವನು ಶಿವನಾಗುವ ವಿಕಾಸಮಾರ್ಗಕ್ಕೆ ಮುಖ್ಯ ಸಾಧನಗಳೆಂಬ ವಾಸ್ತವಾಂಶವನ್ನು ಹೇಳುತ್ತವೆ. ಜೀವಜಗತ್ತುಗಳೆಲ್ಲವೂ ದೇವರ ಅಂಶಗಳೇ ಆಗಿವೆ. ಹಾಗಾಗಿ ಜೀವನಿಗೆ ದೇಹವೇ ದೇವಾಲಯ. ಅವನು ತನ್ನ ವಿಕಾಸರೂಪವಾದ ಆತ್ಮಲಿಂಗವನ್ನು ದೇಹದಲ್ಲಿಟ್ಟು ಪೂಜಿಸುವನು. ಅವನ ಕಾಯಕ ವೃತ್ತಿಗಳೆ ಲ್ಲವೂ ದೇವರಪೂಜೆಯೇ ಆಗಿವೆ. ಜೀವನ ಭೋಗವೇ ದೇವರ ಪ್ರಸಾದವಾಗಿದೆ.


ಬಸವ ಮಂಟಪ
ರವಿ ಹಂಜ್
ವಚನಗಳು ವೇದಾಗಮೋಪನಿಷತ್ತುಗಳ ಭಾಷಾಂತರವಲ್ಲ. ಈ ವೈದಿಕತನಗಳನ್ನು ವಚನಕಾರರು ವಿರೋಧಿಸಿದ್ದರು ಎಂಬುದು ಇಂದಿನ ಸಿದ್ಧ ಸಿದ್ಧಾಂತವಾಗಿದೆ. ಇದನ್ನು ನವ್ಯಯುಗದ 80ರ ದಶಕ ದಿಂದ ಈವರೆಗೆ ಕತ್ತಿಯಾಗಿಸಿಕೊಂಡು ಇರಿಯಲು ಮತ್ತು ಗುರಾಣಿಯಾಗಿ ರಕ್ಷಿಸಿಕೊಳ್ಳಲು ಸಾಕಷ್ಟು ಶೋಷಿಸಲಾಗಿದೆ. ಇದೇ ಹಾದಿಯಲ್ಲಿ ಬಸವನಷ್ಟೇ ಅಲ್ಲದೆ ಬುದ್ಧ, ಅಂಬೇಡ್ಕರ್, ಗಾಂಧಿ, ಕುವೆಂಪು ಸಹ ಬಳಕೆಯಾಗುತ್ತಿದ್ದಾರೆ. ಯಾವ ವಿಚಾರದಲ್ಲಿ ಸತ್ವವಿರುವುದಿಲ್ಲವೋ ಅಂಥವರು ತಮ್ಮ ತೆವಲಿನ ಸಿದ್ಧಾಂತವನ್ನು ಹೇರಲು ಹೀಗೆ ಒಂದು ಪ್ರಬಲ ಆಸರೆಯನ್ನು ಬಯಸಿ ಬಳಸುವುದು ನವ್ಯದ ಉಡುಗೊರೆಯಾಗಿದೆ. ಇರಲಿ, ಸದ್ಯಕ್ಕೆ ಇವರುಗಳು ನಿರೂಪಿಸಿದಂತೆ ವಚನಗಳು ವೇದಾಗ ಮೋಪನಿಷತ್ತುಗಳನ್ನು ಬಹಿಷ್ಕರಿಸಿರುವುದು ಸತ್ಯವೇ? ಛಾಂದೋಗ್ಯೋಪನಿಷತ್ತಿನಲ್ಲಿ ಉದ್ದಾಲಕ ಮತ್ತು ಅವನ ಮಗನಾದ ಶ್ವೇತಕೇತು ನಡುವಿನ ಒಂದು ಕತೆ ಹೀಗಿದೆ: ಉದ್ದಾಲಕನು ತನ್ನ ಮಗನಿಗೆ ಒಂದು ಅತ್ತಿಯ ಹಣ್ಣನ್ನು ತಂದು ಕುಯ್ಯಲು ಹೇಳುತ್ತಾನೆ. ಕತ್ತರಿಸಿದ ಹಣ್ಣಿನಲ್ಲಿ ಏನು ಕಾಣುತ್ತದೆ ಎಂದಾಗ ಶ್ವೇತಕೇತುವು ಸಣ್ಣ ಸಣ್ಣ ಬೀಜಗಳು ಕಾಣುತ್ತವೆ ಎನ್ನುತ್ತಾನೆ.
ಆಗ ಉದ್ದಾಲಕನು ಒಂದು ಬೀಜವನ್ನು ಕತ್ತರಿಸಿ ಏನು ಕಾಣುತ್ತದೆ ಎನ್ನುತ್ತಾನೆ. ಅದರಲ್ಲಿ ಏನೂ ಇಲ್ಲ ಎಂದ ಶ್ವೇತಕೇತುವಿಗೆ, “ಮಗು, ಏನೂ ಇಲ್ಲದ ಈ ಸೂಕ್ಷ್ಮವೇ ಆ ಬೃಹದಾಕಾರದ ಅತ್ತಿಯ ಮರ. ಈ ಸೂಕ್ಷ್ಮ ತತ್ವವೇ ಇಡೀ ಜಗತ್ತಿನ ಆತ್ಮ; ಅದು ಸತ್ಯ; ಅದು ಆತ್ಮ. ಹಾಗೆಯೇ ನೀನು ಸಹ" ಎನ್ನುತ್ತಾನೆ. ಬೀಜದಲ್ಲಿ ಮರವಾಗುವ ಶಕ್ತಿಯು ಅಡಗಿರುವಂತೆ ಮನುಷ್ಯನಲ್ಲಿ ದೇವರಾಗುವ ಶಕ್ತಿಯು ಅಡಗಿರುತ್ತದೆ. ಬೀಜವೃಕ್ಷಗಳ ತಾದಾತ್ಮ್ಯ ಸಂಬಂಧವೇ ಜೀವ-ದೇವರುಗಳಲ್ಲಿರುವುದು. ಬೀಜವು ಮೊಳೆತು, ಬೆಳೆದು ಗಿಡವಾಗುವುದಕ್ಕೆ ಸ್ಥಲಜಲ ಕಾಲಾದಿಗಳು ಹೇಗೆ ಅವಶ್ಯವೋ ಹಾಗೆಯೇ ಜೀವನು ತನ್ನ ಸಂಕುಚಿತ ಶಕ್ತಿಯನ್ನು ವಿಕಾಸಗೊಳಿಸಿ ದೇವರಾಗುವ ಮಾರ್ಗಕ್ಕೆ ಸಾಧನವಾಗಿ ಮತಧರ್ಮವು ಅವಶ್ಯ ಎಂದು ವೀರಶೈವವು ಬೋಧಿಸುತ್ತದೆ. ಹಾಗಾಗಿಯೇ ವೀರಶೈವ ತತ್ವವು ಜೀವಜಗತ್ತುಗಳನ್ನು ಮಿಥ್ಯವೆಂದು ಹೇಳುವುದಿಲ್ಲ.
ದೇಹವನ್ನಲ್ಲಗಳೆಯುವುದಿಲ್ಲ, ಭೋಗವನ್ನು ದುಃಖಪ್ರದವೆಂದು ಪರಿಗಣಿಸುವುದಿಲ್ಲ. ಭೋಗವನ್ನು ಈಡೇರಿಸಿಕೊಳ್ಳಲು ಅನುವಾಗುವ ವೃತ್ತಿಗಳನ್ನು ತುಚ್ಛವಾಗಿ ಕಾಣುವುದಿಲ್ಲ. ಈ ಜಗದಾದಿಗಳೇ ಜೀವನು ಶಿವನಾಗುವ ವಿಕಾಸಮಾರ್ಗಕ್ಕೆ ಮುಖ್ಯ ಸಾಧನಗಳೆಂಬ ವಾಸ್ತವಾಂಶವನ್ನು ಹೇಳುತ್ತವೆ. ಜೀವಜಗತ್ತುಗಳೆಲ್ಲವೂ ದೇವರ ಅಂಶಗಳೇ ಆಗಿವೆ. ಹಾಗಾಗಿ ಜೀವನಿಗೆ ದೇಹವೇ ದೇವಾಲಯ. ಅವನು ತನ್ನ ವಿಕಾಸರೂಪವಾದ ಆತ್ಮಲಿಂಗವನ್ನು ದೇಹದಲ್ಲಿಟ್ಟು ಪೂಜಿಸುವನು. ಅವನ ಕಾಯಕ ವೃತ್ತಿಗಳೆಲ್ಲವೂ ದೇವರಪೂಜೆಯೇ ಆಗಿವೆ. ಜೀವನ ಭೋಗವೇ ದೇವರ ಪ್ರಸಾದವಾಗಿದೆ.
ಇದನ್ನೂ ಓದಿ: Ravi Hunj Column: ರೇಣುಕ-ಬಸವಣ್ಣ, ಐತಿಹಾಸಿಕ- ಪೌರಾಣಿಕ, ಸತ್ಯ-ಮಿಥ್ಯ !
ಆ ಪ್ರಸಾದದಿಂದಲೇ ಜೀವನು ವಿಕಾಸ ಹೊಂದಿ, ದೇವರಾಗುವನು. ಇದು ವೀರಶೈವ ಸಿದ್ಧಾಂತ ಶಿಖಾಮಣಿಯ ಸಂಕ್ಷಿಪ್ತ ವಿವರಣೆ. ಅದನ್ನೇ ವಚನಕಾರ ತುರುಗಾಹಿ ರಾಮಣ್ಣ: “ಆತ್ಮಂಗೆ ಕಾಯವೆ ರೂಪು, ಆ ಕಾಯಕ್ಕೆ ಆತ್ಮನೆ ಹಾಹೆ, ಆ ಹಾಹೆಗೆ ಅರಿವೇ ಬೀಜ, ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರ ಲಿಂಗವೆ ನಿರ್ವೀಜ" ಎಂದಿzನೆ. ಹೀಗೆ ಉಪನಿಷತ್ತು-ಸಿದ್ಧಾಂತ ಶಿಖಾಮಣಿ-ವಚನಗಳು ಬೆಸೆಯುತ್ತವೆ.
ದೇವರಶಕ್ತಿಯೇ ಸೃಷ್ಟಿಯಲ್ಲಿ ಆಸಕ್ತಿಯುಳ್ಳ ಕಾರಣ ಅದು ಬಂಧಕ; ಜೀವನ ಶಕ್ತಿಯೇ ಬಂಧ ನಿವೃತ್ತಿ ಯಲ್ಲಿ ಉನ್ಮುಖಿಯಾಗಿರುವುದರಿಂದ ಬಂಧವಿಮೋಚಕ; ಈ ಬಂಧವಿಮೋಚಕಶಕ್ತಿಯೇ ಭಕ್ತಿ; ಇಂಥ ಭಕ್ತಿಯೆಂಬ ಸಾಧನೆಗೈದ ಜೀವಿಯೇ ಶಿವತ್ವಕ್ಕೆ ಅರ್ಹ ಎಂಬ ಮಾರ್ಮಿಕ ತತ್ತ್ವವೇ ವೀರಶೈವ ಸಿದ್ಧಾಂತವಾಗಿದೆ. ಮುಖ್ಯವಾಗಿ ವೀರಶೈವರ ಶಕ್ತಿವಿಶಿಷ್ಟಾದ್ವೈತದಲ್ಲಿ ಶಿವಶಕ್ತಿಗೆ ಪ್ರಾಧಾನ್ಯವಿದೆ. ಆ ಶಕ್ತಿಯೇ ಸತ್ಯವಾದುದು. ಆ ಶಕ್ತಿಯೇ ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿ ಮೊದಲಾದ ರೂಪದಿಂದ ಪರಿಣಮಿಸುವುದು ಎನ್ನಲಾಗಿದೆ. ವೀರಶೈವದ ತಾತ್ವಿಕ ಭಾಗವಾದ ಸ್ಥಲಸಿದ್ಧಾಂತದಲ್ಲಿಯೂ ಶಕ್ತಿಯೇ ಶಿವನಲ್ಲಿ ಲಿಂಗಾಂಗರೂಪದಿಂದ ದ್ವಿವಿಧತೆಯನ್ನುಂಟು ಮಾಡುವುದು ಮತ್ತು ಆ ಶಕ್ತಿಯೇ ಭಕ್ತನಲ್ಲಿ ಭಕ್ತಿರೂಪದಿಂದ ಪರಿಣಮಿಸಿ, ಲಿಂಗಾಂಗಗಳ ಅಂದರೆ ಶಿವ-ಜೀವರ ಐಕ್ಯವನ್ನುಂಟು ಮಾಡುವುದು.
ಹೀಗೆ ಷಟ್ಸ್ಥಲಗಳಲ್ಲಿ ಶಿವಶಕ್ತಿಯ ಲೀಲೆಯೇ ತುಂಬಿದೆ ಎಂದು ಮೊಗ್ಗೆಯ ಮಾಯಿದೇವ ತನ್ನ ‘ಶಿವಾನುಭವಸೂತ್ರ’ದಲ್ಲಿ ವಿವರಿಸಿದ್ದಾನೆ. ಮಾಯಿದೇವನ ಈ ಶಿವಾನುಭವಸೂತ್ರವು ಷಟ್‌ಸ್ಥಲ ಸಿದ್ಧಾಂತವನ್ನು ಬೋಧಿಸುವ ಪ್ರಮುಖ ಗ್ರಂಥವೆಂದು ವಿಶೇಷವಾಗಿ ಇಂದು ಜಾಗತಿಕ ‘ಲಿಂಗಾಹತ’ ಮಹಾಸಭಾದೊಂದಿಗೆ ಗುರುತಿಸಿಕೊಂಡಿರುವ ‘ವಿರಕ್ತ ಪೀಠ’ಗಳು ಮಾನ್ಯ ಮಾಡಿವೆ ಎಂಬುದು ಗಮನಾರ್ಹ ಸಂಗತಿ.
ಈ ಗ್ರಂಥದಲ್ಲಿ ಮಾಯಿದೇವನು ಷಟ್‌ಸ್ಥಲ ಸಿದ್ಧಾಂತವು ಶ್ರುತಿಸ್ಮೃತಿಪುರಾಣಾದಿಗಳಲ್ಲಿ ಉಕ್ತ ವಾಗಿರುವುದೆಂದು ಹೇಳಿದ್ದಾನೆ. ಯಾವುದೇ ಪೂರ್ವಗ್ರಹಗಳಿಲ್ಲದೆ ವೀರಶೈವರ ಪ್ರಮಾಣಗ್ರಂಥ ಗಳಲ್ಲಿ ಶ್ರುತಿಸ್ಮೃತಿಗಳ ಆಧಾರದಿಂದ ವೀರಶೈವ ತತ್ತ್ವಗಳು ಪ್ರತಿಪಾದಿತವಾಗಿರುವುವು ಎನ್ನಲಾಗಿದೆ. ಕೆಲವರು ಶ್ರುತಿಯಲ್ಲಿ ಶಿವಾದ್ವೈತವು ಸ್ಫುಟವಾಗಿ ಕಂಡುಬರುವುದಿಲ್ಲ ಎಂದು ಮಾಯಿದೇವನ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ.
ಆದರೆ ಶ್ರುತಿಯಲ್ಲಿ ವೀರಶೈವ ಅಲ್ಲದೆ ಯಾವ ಮತದ ಸಿದ್ಧಾಂತವೂ ಸ್ಫುಟವಾಗಿ ಕಾಣುವುದಿಲ್ಲ. ಅಲ್ಲಿ ಮತತತ್ತ್ವಗಳು ಸೂಕ್ಷ್ಮರೂಪದಿಂದಿರುವುವು. ಆ ಸೂಕ್ಷ್ಮ ರೂಪಗಳನ್ನೇ ಮತಪ್ರವರ್ತಕರು ತಮ್ಮ ತಮ್ಮ ಮತಗ್ರಂಥಗಳಲ್ಲಿ ವಿಸ್ತೃತವಾಗಿ ವಿಸ್ತರಿಸಿದ್ದಾರೆ. ಹಾಗಾಗಿ ಮಾಯಿದೇವರ ಸೂಕ್ತಿಯು ಸತ್ಯವಿದೆ ಎಂದು ಆಸ್ಥಾನ ವಿದ್ವಾನ್ ಪಂಡಿತ್ ನಾಗೇಶ ಶಾಸ್ತ್ರಿಗಳು ತಮ್ಮ ‘ಮಾಯಿದೇವನ ಶಿವಾನು ಭವಸೂತ್ರಂ ಕನ್ನಡ ಭಾವಾರ್ಥ ಟೀಕು’ ಗ್ರಂಥದಲ್ಲಿ ಬರೆದಿದ್ದಾರೆ.
ಇದನ್ನು ಧಾರವಾಡದ ಮುರುಘಾಮಠವು ಪ್ರಕಟಿಸುವ ಮುಂಚೆ ಫ.ಗು.ಹಳಕಟ್ಟಿಯವರು ತಮ್ಮ ‘ಶಿವಾನುಭವ’ ಪತ್ರಿಕೆಯಲ್ಲಿ ಪ್ರಕಟಿಸಿದ್ದರು ಎಂಬುದು ಉಲ್ಲೇಖಾರ್ಹ. ಏಕೆಂದರೆ ಫ.ಗು.ಹಳಕಟ್ಟಿ ಯವರನ್ನು ಸಹ ಲಿಂಗಾಹತರು ಅಪಹರಿಸಿದ್ದಾರೆ. ನಾಗೇಶ ಶಾಸ್ತ್ರಿಗಳು, “...ಹೀಗೆ ಸ್ಥಲಸಿದ್ಧಾಂತವು ವೈಚಾರಿಕವಾಗಿ ವೈದಿಕವೆಂಬುದು ನಿರ್ವಿವಾದ. ವೇದ ಮತ್ತು ಆಗಮಗಳ ಆಧಾರದಿಂದಲೇ ಪ್ರತಿಯೊಂದು ಮತವೂ ಆರಂಭಗೊಂಡು ಪರಿಪೂರ್ಣತೆಯನ್ನು ಹೊಂದಿರುವುದು.
ವೇದಾಗಮಗಳಿಗೆ ಶಿವೈಕ ಕರ್ತೃತ್ವವಿರುವುದರಿಂದ ಅವುಗಳಿಗೆ ಪರಸ್ಪರ ವಿರೋಧವಿಲ್ಲದೆ ಏಕತ್ವವೇ ಸಿದ್ಧವಾಗುವುದು. ವೇದವು ಶಿವನ ನಿಶ್ವಾಸಜನ್ಯವು, ಆಗಮವು ಶಿವಮುಚೋದಿತವೂ ಆಗಿರುವುದು. ಷಟ್ ಸ್ಥಲ ಸಿದ್ಧಾಂತವು ವೇದಾಗಮಗಳಲ್ಲಿ ಹುಟ್ಟಿ ವೃದ್ಧಿಯಾಗಿ ಶರಣರ ವಚನಗಳಲ್ಲಿ ವಿಸ್ತರಿಸಿದೆ. ಶರಣರ ದೇಹವೇ ಶಿವನ ದೇಹವೆಂದಾಗಿ, ಅವರ ಆತ್ಮನಲ್ಲಿ ಪರಮಾತ್ಮನೊಡನೆ ಸಮರಸವನ್ನು ಹೊಂದಿದ ಶರಣರೂ, ಶಿವಸ್ವರೂಪಿಗಳಾಗುತ್ತಾರೆ" ಎನ್ನುತ್ತಾರೆ.
ಇನ್ನು ಷಟ್‌ಸ್ಥಲ ಮಾರ್ಗವು ವೀರಶೈವರ ಲಿಂಗೋಪಾಸನೆಯ ಸಾಧನೆಯ ಮಾರ್ಗವಾಗಿದೆ. ಷಟ್‌ಸ್ಥಲ ಸಿದ್ಧಾಂತ ದೃಷ್ಟಿಯಿಂದ ಆಣವಾದಿ ಮಲತ್ರಯದಿಂದ ಜೀವನು ಬಂಧಿತನಾಗುವುದೇ ಬಂಧವು, ಮಲತ್ರಯಂಗಳೇ ಬಂಧಕಾರಣ, ಮೋಕ್ಷವೆಂದರೆ ಜೀವನು ಶಿವನಾಗುವುದು, ಲಿಂಗಾಂಗ ಸಾಮರಸ್ಯವನ್ನು ಪಡೆಯುವುದು. ಇನ್ನು ಮೋನಾಯವೆಂಬುದು ಜೀವನು ಶಿವದೀಕ್ಷೆಯಿಂದ ಮಲತ್ರಯರಹಿತನಾಗಿ ಷಟ್‌ಸ್ಥಲ ಮಾರ್ಗಕ್ಕನುಸರಿಸಿ ಲಿಂಗೋಪಾಸಕ ನಾಗುವುದು. ದೀಕ್ಷಾಂಗ ವಾಗಿಯೇ ಷಟ್‌ಸ್ಥಲ ತತ್ವ ಪ್ರತಿಪಾದನೆಯಿರುವುದು. ಷಟ್‌ಸ್ಥಲ ಸಿದ್ಧಾಂತವನ್ನೇ ವೀರಶೈವರು ಶಿವಾದ್ವೈತ ಎಂದೂ ಕರೆಯುತ್ತಾರೆ.
ರಾಮಾನುಜರ ಪಂಥದಲ್ಲಿ ಹೇಗೆ ಸಂಸ್ಕೃತದಲ್ಲಿರುವ ರಾಮಾನುಜರ ಮತತತ್ವ ಗ್ರಂಥಗಳಿದ್ದು ತಮಿಳಿನಲ್ಲಿ ಆಳ್ವಾರರೆಂಬ ಭಕ್ತರು ರಚಿಸಿದ ನಾಲಾಯರ ಪ್ರಬಂಧವೆಂಬ ವಾಲ್ಮೀಯವಿದೆಯೋ, ಅದೇ ರೀತಿ ವೀರಶೈವ ಸಿದ್ಧಾಂತದ ಸಂಸ್ಕೃತದ ಶಿವಾಗಮಗಳಿದ್ದು ಕನ್ನಡದಲ್ಲಿ ವಚನಗಳು ಇವೆಯಷ್ಟೇ. ಹೀಗೆ ವ್ಯಾಖ್ಯಾನ, ಟೀಕುಗಳನ್ನು ಸಾಮಾನ್ಯರಿಗೆ ಅರ್ಥೈಸಲು ಭಾಷಾವಿಕಾಸಕ್ಕೆ ತಕ್ಕಂತೆ ಕಾಲಕಾಲಕ್ಕೆ ರಚಿತಗೊಂಡಿರುವುದು ವಿಶೇಷವೇನಲ್ಲ.
ಕೆರೆಯ ಪದ್ಮರಸನ ‘ದೀಕ್ಷಾಬೋಧೆ’ ಗ್ರಂಥವನ್ನು ಸಂಪಾದಿಸಿರುವ ಆರ್.ಸಿ. ಹಿರೇಮಠರು, “... ಇತ್ತೀಚೆಗೆ ವಚನಕಾರರು ಪ್ರತಿಪಾದಿಸಿರುವ ಷಟ್‌ಸ್ಥಲ, ಅಷ್ಟಾವರಣ, ತ್ರಿವಿಧ ದಾಸೋಹ, ಇಷ್ಟಲಿಂಗೋಪಾಸನಾದಿ ದಾರ್ಶನಿಕ ವಿಚಾರಗಳು ಅವರಿಗಿಂತ ಪೂರ್ವದ ಆಗಮ ಪುರಾಣಗಳಲ್ಲಿ ಪ್ರತಿಪಾದಿತವಾಗಿದ್ದವು ಎಂಬುದು ಗಮನಕ್ಕೆ ಬಂದಿದೆ. ಪುರಾಣಾಗಮೋಕ್ತ ಶ್ಲೋಕಗಳ ಆಧಾರ ದಿಂದ ವೀರಶೈವ ಮತದರ್ಶನ ಹಾಗೂ ಆಚಾರವನ್ನು ಪ್ರತಿಪಾದಿಸುವ ದೀಕ್ಷಾಬೋಧೆಯು ಈ ಅಂಶವನ್ನು ದೃಢಪಡಿಸುತ್ತದೆ.
ಎಂದಷ್ಟಕ್ಕೆ ವಚನಕಾರರ ಘನತೆಯೇನೂ ಕಡಿಮೆಯಾಗಲಾರದು. ಸಂಸ್ಕೃತದಲ್ಲಿದ್ದ, ಕೇವಲ ಕೆಲವೇ ಪಂಡಿತರಿಗೆ ಮಾತ್ರ ಲಭ್ಯವಿದ್ದ ಈ ದಾರ್ಶನಿಕ ಆಚಾರ-ವಿಚಾರಗಳನ್ನು ವೈಯಕ್ತಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಪ್ರಯೋಗಿಸಿ, ಪರೀಕ್ಷಿಸಿ ಜನಸಾಮಾನ್ಯರ ನಾಡಿನಾಡಿಗಳಲ್ಲಿ ಅವನ್ನು ಪ್ರೇರಿಸಿದ ಅವಕ್ಕೊಂದು ವಿಶ್ವಮಾನ್ಯವಾದ ಉದಾತ್ತ ನಿಲಯವನ್ನು ತಂದು ಕೊಟ್ಟ ಶ್ರೇಯಸ್ಸು ಬಸವಾದಿ ಶಿವಶರಣರದಾಗಿದೆಯೆನ್ನಬೇಕು" ಎಂದು 1973ರಲ್ಲಿಯೇ ದಾಖಲಿಸಿದ್ದಾರೆ.
ಹಾಗಾಗಿಯೇ ಬಸವಣ್ಣನು ಭಕ್ತಿಭಂಡಾರಿ ಎನಿಸುತ್ತಾನೆಯೇ ಹೊರತು ಮತಸ್ಥಾಪಕನಲ್ಲ. ಇನ್ನು ಹಿಂದೂ ಪ್ರಭೇದದ ಎಲ್ಲಾ ಮತಪಂಥಗಳ ಮೂಲಭೂತ ಸೂತ್ರವು ಅತ್ಯಂತ ಸಂಕ್ಷಿಪ್ತವಾಗಿ ವೇದೋಪನಿಷತ್ತುಗಳಲ್ಲಿ ಹೀಗಿದೆ:
೧. ತತ್ ತ್ವಂ ಅಸಿ (ಛಾಂದೋಗ್ಯೋಪನಿಷತ್)- ಎಂದರೆ ನನ್ನೊಳಗಿನ ದೇವರು. ಇದನ್ನೇ ವೀರಶೈವವು ಜೀವನಿಗೆ ದೇಹವೇ ದೇವಾಲಯ. ಅವನು ತನ್ನ ವಿಕಾಸರೂಪವಾದ ಆತ್ಮಲಿಂಗವನ್ನು ದೇಹದಲ್ಲಿಟ್ಟು ಪೂಜಿಸುವನು ಎನ್ನುತ್ತದೆ. ಹಾಗಾಗಿಯೇ ವೀರಶೈವಿಗ ಬಸವಣ್ಣ ಶಿವನನ್ನು ಒಳಗೊಂಡಿರುವ ದೇಹ ಯಾನೆ ಕಾಯವೇ ಕೈಲಾಸ ಎಂದಿದ್ದಾನೆ.
೨. ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕೋಪನಿಷತ್)- ಎಂದರೆ ನಾನೇ ಪರಮಾತ್ಮ. ನನ್ನೊಳಗೇ ದೇವರಿರುವ ಕಾರಣ ನಾನೇ ದೇವರು! ಇದನ್ನೇ ವೀರಶೈವರು ‘ಸೋಹಂ ಬ್ರಹ್ಮಾಸ್ಮಿ’ ಎಂದಿರುವುದು. ಈ ಆತ್ಮಲಿಂಗಕ್ಕೆ ಇಷ್ಟಲಿಂಗವೆಂಬ ಮೂರ್ತರೂಪ ಕೊಟ್ಟು ಧ್ಯಾನಕ್ಕೆ ಕುರುಹುವಾಗಿಸಿ ವೀರಶೈವರು ಧ್ಯಾನಿಸುವುದು. ಅಲ್ಲಮನ ಅಂಥ ಒಂದು ವಚನ ಹೀಗಿದೆ: “ನಿತ್ಯನಿರಂಜನ ನಿರವಯಖಂಡ ಪರವಸ್ತುವಿನತ್ತಣಿಂದುದಯಿಸಿ, ನಿಂದ ನಿಲವನರಿದು ಭಕ್ತ, ಗುರುಪ್ರಸನ್ನವಿಡಿದು ಮಾಹೇಶ್ವರ, ಲಿಂಗಪೂಜೆಯವಿಡಿದು ಪ್ರಸಾದಿ, ಸ್ವಾನುಭಾವ ವಿವೇಕವಿಡಿದು ಪ್ರಾಣಲಿಂಗಿ, ಸ್ವಯಾ ನಂದವಿಡಿದು ಶರಣ, ಸೋಹಂ ಬ್ರಹ್ಮಾಸ್ಮಿನ್ನೆಂದು ಲಿಂಗೈಕ್ಯ, ಇಂತೀ ಷಟ್‌ಸ್ಥಲ ಸಂಪನ್ನನಾಗಿ, ನಿಂದ ನಿಲವ ನೀ ಬಯಲ್ಲದೆ ಲೋಕದ ಸಂದೇಹಿಮಾನವರೆತ್ತ ಬಲ್ಲರು ಗುಹೇಶ್ವರಾ". ಅಲ್ಲದೆ ತನ್ನೊಳಗೇ ದೇವರಿರುವ ಕಾರಣಕ್ಕಾಗಿಯೇ ಬಸವಣ್ಣ ತನ್ನೊಳಗಿನ ಶಿವನೆಂಬ ದೇವರಿಗೆ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶ ಎಂದು ವಚನ ಕಟ್ಟಿ ಹಾಡಿರುವುದು.
೩. ಪ್ರಜ್ಞಾನಂ ಬ್ರಹ್ಮ (ಐತರೇಯೋಪನಿಷತ್)- ಎಂದರೆ ಅರಿವೇ ಗುರು. ಇದು ಬಸವಣ್ಣನ ವಚನ ವಲ್ಲದೆ ವೀರಶೈವರ ಉದ್ಘೋಷವೇ ಆಗಿರುವುದಲ್ಲದೆ ಕರ್ನಾಟಕ ವಿಶ್ವವಿದ್ಯಾಲಯದ ಉದ್ಘೋಷ ವೂ ಆಗಿದೆ. ಈ ಐತರೇಯೋಪನಿಷತ್ ವಾಕ್ಕುವಿನ ಆಧಾರದ ಮೇಲೆ ಅಕ್ಕಮಹಾ ದೇವಿಯ ವಚನ ವೊಂದು ಹೀಗಿದೆ: “ಅಯ್ಯಾ, ತನ್ನ ತಾನರಿಯಬೇಕಲ್ಲದೆ, ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರಲ್ಲಿ ಕೇಳಲುಂಟೆ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಎನಗೆ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿವೆನು". ಹೀಗೆ ಅರಿವಿನ ಮಹತ್ವದ ಕುರಿತು ನೂರಾರು ವಚನಗಳಿವೆ.
೪. ಅಯಂ ಆತ್ಮ ಬ್ರಹ್ಮ (ಮಂಡೋಕೋಪನಿಷತ್)- ಎಂದರೆ ಆತ್ಮವೇ ದೇವರು. ದೇವರು ಸಾಧನೆಯ ಮಾರ್ಗ. ನಿಮ್ಮ ನಿಮ್ಮ ಕಾಯಕವನ್ನು ಮಾಡುತ್ತಲೇ ದೇವರ ಸಾಕ್ಷಾತ್ಕಾರವನ್ನು ಕಂಡುಕೊಳ್ಳಿ ಎಂದಾಗುತ್ತದೆ. ಇದನ್ನೇ ವೀರಶೈವವು ಕಾಯಕ ವೃತ್ತಿಗಳೆಲ್ಲವೂ ದೇವರಪೂಜೆಯೇ ಆಗಿವೆ. ಜೀವನ ಭೋಗವೇ ದೇವರ ಪ್ರಸಾದವಾಗಿದೆ. ಆ ಪ್ರಸಾದದಿಂದಲೇ ಜೀವನು ವಿಕಾಸ ಹೊಂದಿ ದೇವರಾಗುವನು. ಈ ಪ್ರಸಾದಕ್ಕೆ ಅನುವಾಗುವ ಯಾವ ವೃತ್ತಿಯಾದರೂ ಅದು ತುಚ್ಛವಲ್ಲ ಎನ್ನುತ್ತದೆ.
ಹಾಗಾಗಿಯೇ ಶರಣರು ಕಾಯಕದ ಮಹತ್ವವನ್ನು ಎತ್ತಿಹಿಡಿದದ್ದು. ತೋಂಟದ ಸಿದ್ಧಲಿಂಗ ಶಿವಯೋಗಿಗಳು ಉಪನಿಷತ್ತಿನ ಈ ಸಾಲನ್ನೇ ತಮ್ಮ ವಚನದಲ್ಲಿ ಹೀಗೆ ವಿವರಿಸಿದ್ದಾರೆ: “ಎನ್ನಂತ ರಂಗದೊಳಗಣ ಆತ್ಮಲಿಂಗ, ಅನಂತ ಜ್ಯೋತಿಯಂತಿಪ್ಪುದು ನೋಡಾ. ಬಹಿರಂಗದಲ್ಲಿ ನವರತ್ನ ದಂತಿಪ್ಪುದಯ್ಯ.ತಿಂಗಳ ಸೂಡಿದಭವನು ಭವಭಂಗಿತರಿಗಾರಿಗೂ ಗೋಚರಿಸನು ಕಾಣ. ಲಿಂಗ ನಿಷ್ಠಾಂಗಿಗಳಿಗೆ ಮಂಗಳಮಯನಾಗಿ ತೋರ್ಪನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ".
೫. ಸರ್ವಂ ಖಲ್ವಿದಂ ಬ್ರಹ್ಮ (ಛಾಂದೋಗ್ಯೋಪನಿಷತ್)- ಎಂದರೆ ಜಗತ್ತಿನ ಸೃಷ್ಟಿಯಲ್ಲಿರುವ ಎಲ್ಲದೂ ಎಲ್ಲವೂ ಪರಮಾತ್ಮ! ಇದನ್ನೇ ವೀರಶೈವವು ಜೀವಜಗತ್ತುಗಳೆಲ್ಲವೂ ದೇವರ ಅಂಶಗಳೇ ಆಗಿವೆ ಎಂದಿದೆ. ಸಂಕ್ಷಿಪ್ತವಾಗಿ ಬ್ರಹ್ಮಾಂಡದಿಂದ ಪಿಂಡಾಂಡದೊಳಗಿನ ಶೂನ್ಯದವರೆಗೆ ಎಲ್ಲವೂ ಪರಮಾತ್ಮನ ಸೃಷ್ಟಿ. ಅದನ್ನೇ ವಚನಕಾರ ಸಿದ್ಧರಾಮನು ಹೀಗೆಂದಿದ್ದಾನೆ: “...‘ಸರ್ವಂ ಶಿವಮಯಂ ಜಗತ್’ ಎಂಬುದ ತಿಳಿಯದೆ ನುಡಿದವರ ನುಡಿಯಂತೆ ನಡೆಯದಿರಾ ಮನವೆ.
‘ಸರ್ವಂ ಶಿವಮಯಂ ಜಗತ್’ ಎಂದು ತಿಳಿದು ತಿಳಿದು ಸುಖಿಯಾಗು ಮನವೆ. ಪಿಂಡ ಬ್ರಹ್ಮಾಂಡಕ್ಕೆ ‘ತಿಲಷೋಡಶಭಾಗೇನ ಭೇದೋ ನಾಸ್ತಿ ವರಾನನೇ’ ಎಂಬುದು ಪುಸಿಯಲ್ಲ ನೋಡಾ ಮನವೆ. ಈಶ್ವರನ ಪಂಚಮುಖಂದ ಪಂಚತತ್ವಗಳುದಯಿಸಿದವು. ಈ ತತ್ವಂಗಳೊಂದೊಂದು ಕೂಡಿ ತನ್ನ ಚೈತನ್ಯ ಬೆರಸಿದಲ್ಲಿ, ಪಿಂಡ ಬ್ರಹ್ಮಾಂಡವೆನಿಸಿತ್ತು ನೋಡಾ ಮನವೆ. ತನ್ನ ತಾನರಿದು ನೋಡಿದಡೆ, ‘ಸರ್ವಂ ಶಿವಕಪಿಲಸಿದ್ಧಮಲ್ಲಿಕಾರ್ಜುನಮಯಂ ಜಗತ್’ ಎಂದರಿದು ಬಂದಿತ್ತು ನೋಡಾ ಮನವೆ" ಎಂದು ಹೇಳಿದ್ದಾನೆ.
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)