ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Raghava Sharma Nidle Column: ಮೇಲ್ವರ್ಗದ ಮುನಿಸು: ಬಿಜೆಪಿಗೆ ಅಗ್ನಿಪರೀಕ್ಷೆ !

ಮೇಲ್ವರ್ಗದವರ ಭಾವನೆಗಳಿಗೆ ಪಕ್ಷ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ಆಕ್ಷೇಪವೂ ಈ ಘಟನೆಯ ಮೂಲಕ ಮುನ್ನೆಲೆಗೆ ಬಂತು. ಇತರೆ ಹಿಂದುಳಿದ ಸಮುದಾಯಗಳನ್ನು ಓಲೈಸಲು ಹೋಗಿ, ನಮ್ಮ ಭಾವನೆ ಕಡೆಗಣಿಸಲಾಗಿದೆ ಎಂಬ ಆಕ್ರೋಶ ಮೇಲ್ವರ್ಗದಲ್ಲಿದ್ದು, ಅದು ಇಂತಹಾ ಘಟನೆಗಳ ಮೂಲಕ ಹೊರಬರುತ್ತಿದೆ. ಅದಾಗಿ 5 ದಿನದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯಿತು.

ಮೇಲ್ವರ್ಗದ ಮುನಿಸು: ಬಿಜೆಪಿಗೆ ಅಗ್ನಿಪರೀಕ್ಷೆ !

-

ಜನಪಥ

ನ .1ರಂದು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ರಾಷ್ಟ್ರೀಯ ಪರಶುರಾಮ ಸೇನೆಯು ಪ್ರಬುದ್ಧ ಮಹಾಕುಂಭ ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭಾಗವಹಿಸಿದ್ದರು. ಮೌರ್ಯ ಭಾಷಣ ಮಾಡುತ್ತಿದ್ದಾಗ ಬಿಜೆಪಿ ಕಾರ್ಯಕರ್ತ ರೋಹಿತ್ ತಿವಾರಿ ಯುಜಿಸಿ ನಿಯಮಾವಳಿಗಳ ಬಗ್ಗೆ ಪ್ರಶ್ನಿಸಿದ.

ಕೇಶವ್ ಜೀ, ನಮ್ಮ ಬಗ್ಗೆಯೂ ಮಾತನಾಡಿ ಎಂದು ಒತ್ತಾಯಿಸಿದ. ಮೌರ್ಯ ಅವರು ಮೊದಲು ಸುಮ್ಮನಿರುವಂತೆ ಸೂಚಿಸಿ, ಎಲ್ಲದರ ಬಗ್ಗೆಯೂ ಮಾತನಾಡುವುದಾಗಿ ಹೇಳಿದರು. ಪೊಲೀಸರು ತಿವಾರಿಯನ್ನು ಹೊರಗೆ ಕರೆದೊಯ್ಯುತ್ತಿದ್ದಾಗ ಬಿಜೆಪಿ ಕಾರ್ಪೊರೇಟರ್ ವಿನಯ್ ಮಿಶ್ರಾ, ರೋಹಿತ್ ತಿವಾರಿಗೆ ಕಪಾಳ ಮೋಕ್ಷ ಮಾಡಿದ್ದರು. ರೋಹಿತ್ ತಿವಾರಿ ದೂರು ನೀಡಿದ ಹಿನ್ನೆಲೆ ಯಲ್ಲಿ ವಿನಯ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ರಾಜ್ಯ ಬಿಜೆಪಿ ಶಾಸಕ ಹರ್ಷವರ್ಧನ್ ಬಾಜಪೇಯಿ ಈ ಘಟನೆ ಖಂಡಿಸಿ, ಯುಜಿಸಿ ನಿಯಮಾವಳಿ ವಿರೋಧಿಸುವುದು ಮೇಲ್ವರ್ಗದ ಹಕ್ಕು ಎಂದು ಪ್ರತಿಪಾದಿಸಿದರು. ಈ ಘಟನೆ ಕೇವಲ ಸಭೆಯೊಂದರಲ್ಲಿ ನಡೆದ ಗಲಾಟೆಯಾಗಿ ಉಳಿಯಲಿಲ್ಲ. ಬಿಜೆಪಿಯೊಳಗೇ ಯುಜಿಸಿ ವಿವಾದದ ಬಗ್ಗೆ ಅಸಮಾಧಾನವಿದೆ ಎಂಬುದಕ್ಕೆ ಸಾಕ್ಷಿಯಾಯಿತು.

ಮೇಲ್ವರ್ಗದವರ ಭಾವನೆಗಳಿಗೆ ಪಕ್ಷ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂಬ ಆಕ್ಷೇಪವೂ ಈ ಘಟನೆಯ ಮೂಲಕ ಮುನ್ನೆಲೆಗೆ ಬಂತು. ಇತರೆ ಹಿಂದುಳಿದ ಸಮುದಾಯಗಳನ್ನು ಓಲೈಸಲು ಹೋಗಿ, ನಮ್ಮ ಭಾವನೆ ಕಡೆಗಣಿಸಲಾಗಿದೆ ಎಂಬ ಆಕ್ರೋಶ ಮೇಲ್ವರ್ಗದಲ್ಲಿದ್ದು, ಅದು ಇಂತಹಾ ಘಟನೆಗಳ ಮೂಲಕ ಹೊರಬರುತ್ತಿದೆ. ಅದಾಗಿ 5 ದಿನದ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆಯಿತು.

ಇದನ್ನೂ ಓದಿ: Raghava Sharma Nidle Column: ರಾಜಕೀಯ ಒತ್ತಡಕ್ಕೆ ಜಗ್ಗದೆ ಹೋರಾಡಿದ್ದ ಕಾನೂನು ದಿಗ್ಗಜ !

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಮಾನತೆ ಉತ್ತೇಜಿಸುವ ಹೆಸರಲ್ಲಿ ರೂಪಿಸಲಾದ ಯುಜಿಸಿ ನಿಯಮಾವಳಿ ಗಳನ್ನು ಮರುಪರಿಶೀಲಿಸುವ ಸಂಬಂಧ ಸಮಿತಿಯೊಂದನ್ನು ರಚನೆ ಮಾಡುತ್ತೇವೆ ಎಂದು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಜೆಐ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠಕ್ಕೆ ತಿಳಿಸಿದರು.

ವಿಚಾರಣೆ ವೇಳೆ ಸಿಜೆಐ ಸೂರ್ಯಕಾಂತ್ ಅವರೇ, ನಿಯಮಾವಳಿಗಳನ್ನು ಮರು ಪರಿಶೀಲಿಸಬಹು ದಲ್ಲವೇ? ನೀವು ಪ್ರತಿಯೊಬ್ಬ ವಿದ್ಯಾರ್ಥಿಯ ಹಿತಾಸಕ್ತಿಯನ್ನೂ ರಕ್ಷಿಸಬೇಕು. ಯಾವುದೇ ವಿದ್ಯಾರ್ಥಿ ವರ್ಗಕ್ಕೆ ಆತಂಕ ಅಥವಾ ಅಸಮಾಧಾನ ಉಂಟಾಗಬಾರದು. ಹೊಸ ಪೀಳಿಗೆಯ ಹಿತದೃಷ್ಟಿಯಿಂದ ನಿಯಮಗಳನ್ನು ಮರುರೂಪಿಸಬೇಕು ಎಂದು ಸಲಹೆ ನೀಡಿದ್ದರು. ಇದಕ್ಕೂ ಮುನ್ನ ಈ ನಿಯಮಾವಳಿಗಳಿಗೆ ಮಧ್ಯಂತರ ತಡೆ ನೀಡಿದ್ದು ಸುಪ್ರೀಂ ಕೋರ್ಟ್ ಎನ್ನುವುದು ಉಲ್ಲೇಖಾರ್ಹ.

ಯುಜಿಸಿ ನಿಯಮಾವಳಿಗಳಿಗೆ ಮೇಲ್ವರ್ಗದ ಯುವಕರು ಹಾಗೂ ಕುಟುಂಬಗಳಿಂದ ಈ ಪರಿಯಲ್ಲಿ ವಿರೋಧ ಬರಲಿದೆ ಎಂದು ಕೇಂದ್ರ ಸರ್ಕಾರ (ಬಿಜೆಪಿ) ಮೊದಲು ಭಾವಿಸಿರಲಿಲ್ಲ. ಮೇಲ್ವರ್ಗದ ಯುವಕರು ಬೀದಿಗಳಿದಾಗಲೂ ಕೇಂದ್ರ ಅದಕ್ಕೆ ಮಹತ್ವ ನೀಡಿರಲಿಲ್ಲ. ಆದರೆ, ಸಿಜೆಪಿ ನೇತೃತ್ವದಲ್ಲಿ ನೀಟ್ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆಗಳು ನಡೆದಾಗ ಕೇಂದ್ರ ಸಚಿವರ ರಾಜೀನಾಮೆಯನ್ನೂ ಪಡೆದ ಸರ್ಕಾರ, ನಮ್ಮ ಬೇಡಿಕೆ-ಕಾಳಜಿಗಳಿಗೆ ಮಹತ್ವ ನೀಡಲಿಲ್ಲವಲ್ಲ ಎಂಬ ಸಿಟ್ಟು ಈ ಯುವಕರಲ್ಲಿ ಹೆಚ್ಚಾಯ್ತು. ಇದು ರಾಜಕೀಯವಾಗಿ ಹಾನಿ ಮಾಡಲಿದೆ ಎನ್ನುವುದು ಬಿಜೆಪಿಗೆ ತಡವಾಗಿ ಅರಿವಿಗೆ ಬಂತು.

ಮೊನ್ನೆ ಉತ್ತರ ಪ್ರದೇಶದಲ್ಲಿ ನಡೆದ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲೂ ಮೇಲ್ವರ್ಗದ ಮುನಿಸು ಮತ ಚೀಟಿಯಲ್ಲಿ ಕಂಡುಬಂದಿತ್ತು ಎನ್ನುವುದೂ ರಾಜ್ಯ- ಕೇಂದ್ರ ಬಿಜೆಪಿ ಘಟಕದಲ್ಲಿ ಚರ್ಚೆಯಾಗಿದೆ. ಹೀಗಾಗಿ, ಯುಜಿಸಿ ನಿಯಮಾವಳಿಗಳನ್ನು ಮರುಪರಿಶೀಲಿಸಿ, ಹಿಂಪಡೆಯದಿದ್ದರೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಸಿಯೇಟು ತಿನ್ನಬೇಕಾದೀತು ಎಂದೇ ಸುಪ್ರೀಂ ಕೋರ್ಟ್‌ನಲ್ಲಿ ಯುಜಿಸಿ ನಿಯಮಾವಳಿ ಮರುಪರಿಶೀಲಿಸಲು ಸಮಿತಿ ರಚನೆಯ ಪ್ರಸ್ತಾವ ಇಡಲಾಗಿದೆ.

ok

ಈ ವಿಚಾರವನ್ನು ಉತ್ತರ ಪ್ರದೇಶ ಬಿಜೆಪಿ ಉಸ್ತುವಾರಿ ವಿನೋದ್ ತಾವಡೆ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನೋಡಿದರೆ; ಬಿಜೆಪಿ ನಾಯಕರಿಗೆ ಉ.ಪ್ರ.ದಲ್ಲಿ ಮೇಲ್ವರ್ಗದ ಮುನಿಸನ್ನು ತಣಿಸುವುದು ಎಷ್ಟರಮಟ್ಟಿಗೆ ಅನಿವಾರ್ಯ ಎನ್ನುವುದನ್ನು ಅರ್ಥ ಮಾಡಿಕೊಳ್ಳ ಬಹುದು.

ಪ್ರತಿಯೊಬ್ಬ ವಿದ್ಯಾರ್ಥಿಯ ಗೌರವ, ಹಿತಾಸಕ್ತಿ ಮತ್ತು ಸಮಾನ ಹಕ್ಕುಗಳಿಗೆ ಆದ್ಯತೆ ನೀಡಲಾಗು ವುದು. ಯಾವ ವಿದ್ಯಾರ್ಥಿಗೂ ಅನ್ಯಾಯವಾಗದ ರೀತಿಯಲ್ಲಿ ನಿಯಮಾವಳಿಗಳನ್ನು ರೂಪಿಸು ವುದು ಕೇಂದ್ರ ಸರ್ಕಾರದ ಉದ್ದೇಶ. ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ನ್ಯಾಯ, ಸಮಾನ ಗೌರವ ಮತ್ತು ಸಮಾನ ರಕ್ಷಣೆ ಎಂಬುದೇ ಈ ಪ್ರಕ್ರಿಯೆಯ ಆಶಯ ಎಂದು ತಾವಡೆ ಬರೆದುಕೊಂಡರೂ ಮೇಲ್ವರ್ಗದ ಸಿಟ್ಟು ಕಡಿಮೆಯಾದಂತೆ ಕಾಣುತ್ತಿಲ್ಲ.

ಯುಜಿಸಿ ನಿಯಮಾವಳಿಯ ವಿವಾದ ಮೇಲ್ನೋಟಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಯುವ ಆಡಳಿತಾತ್ಮಕ ಕ್ರಮಕ್ಕೆ ಸಂಬಂಧಿಸಿದ್ದಾಗಿದೆ. ಆದರೆ ಅದರ ಕೆಲವು ನಿಬಂಧನೆಗಳ ವಿರುದ್ಧ ಸಾಮಾನ್ಯ ವರ್ಗದ (ಜನರಲ್ ಕೆಟಗರಿ) ವಿದ್ಯಾರ್ಥಿಗಳು ಮತ್ತು ಸಂಘಟನೆಗಳು ವ್ಯಕ್ತಪಡಿಸಿರುವ ಆಕ್ಷೇಪ, ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಬಿಜೆಪಿ ಬೆಂಬಲಿಗರಲ್ಲಿಯೇ ಕೇಳಿಬಂದ ಅಸಮಾಧಾನ ಈ ವಿಚಾರಕ್ಕೆ ರಾಜಕೀಯ ಆಯಾಮ ನೀಡಿವೆ. ಈ ನಿಯಮಾವಳಿಯ 3(1)(ಸಿ) ನಿಬಂಧನೆಯಲ್ಲಿ ಜಾತಿ ಆಧಾರಿತ ತಾರತಮ್ಯದ ನಿರ್ದಿಷ್ಟ ವ್ಯಾಖ್ಯಾನವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಮಾನ ರಕ್ಷಣೆ ದೊರೆಯುವುದಿಲ್ಲ ಎಂಬುದು ಆಕ್ಷೇಪಕರ ವಾದ. ಏತನ್ಮಧ್ಯೆ, ಆರೆಸ್ಸೆಸ್‌ನಿಂದಲೂ ನಿಯಮಾವಳಿಗೆ ಆಕ್ಷೇಪ ವ್ಯಕ್ತವಾಗಿದೆ. ಇಂದೋರ್‌ನಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಸಭೆಯ ಹಿನ್ನೆಲೆಯಲ್ಲಿ ಸಂಘಟನೆಯ ರಾಷ್ಟ್ರೀಯ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಅವರು ಯುಜಿಸಿ ನಿಯಮಾವಳಿ ಸಮತೋಲಿತವಾಗಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿದ್ದರು.

ಮುಂದಿನ ಕ್ರಮಗಳು ಎಲ್ಲ ವರ್ಗಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತವಾಗಿರ ಬೇಕು ಎಂದು ಸಲಹೆ ನೀಡಿದ್ದರು. ಆರೆಸ್ಸೆಸ್‌ನ ಈ ಪ್ರತಿಕ್ರಿಯೆ ಮಹತ್ವದ್ದು. ಏಕೆಂದರೆ ಯುಜಿಸಿ ವಿವಾದದ ಕುರಿತು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಮುಂದಿನ ನಿರ್ಧಾರ ಕೇವಲ ನ್ಯಾಯಾಲಯದ ವಿಚಾರಣೆಗೆ ಸೀಮಿತವಾಗದೆ, ಸಂಘಟನಾತ್ಮಕ ಹಾಗೂ ಸಾಮಾಜಿಕ ಮಟ್ಟದಲ್ಲಿಯೂ ವಿಮರ್ಶೆಗೆ ಒಳಪಡಲಿದೆ ಎಂಬುದನ್ನು ಇದು ಸೂಚಿಸುತ್ತದೆ. ಉತ್ತರ ಪ್ರದೇಶದಲ್ಲಿ ಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಬಿಜೆಪಿ ಸಂಘಟನಾತ್ಮಕ ಚಟುವಟಿಕೆಗಳನ್ನು ಚುರುಕುಗೊಳಿಸಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ನಡೆದ ಪಕ್ಷದ ಸಭೆಗಳು, ಹಿರಿಯ ನಾಯಕರ ನಡುವೆ ಸಾಮಾಜಿಕ ಸಮೀಕರಣಗಳ ಬಗ್ಗೆ ಚರ್ಚೆಯಾಗಿದೆ. ಈ ಮೊದಲು ಬಿಹಾರದ ಬಾಂಕಿಪುರ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ನಿತಿನ್ ನಬಿನ್ ಈಗ ರಾಜ್ಯಸಭೆ ಸದಸ್ಯ ರಾಗಿದ್ದರೂ, ಅವರಿಂದ ತೆರವಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ವಿರುದ್ಧ ಸೋಲು ಕಾಣಲು ಯುಜಿಸಿ ನಿಯಮಾವಳಿ ಮತ್ತು ಮೇಲ್ವರ್ಗದ ಮುನಿಸು ಕೂಡ ಪ್ರಮುಖ ಕಾರಣವಾಗಿತ್ತು ಎನ್ನುವುದು ನಬಿನ್‌ಗೂ ತಿಳಿದಿದೆ.

ಹೀಗಾಗಿ, ಉತ್ತರ ಪ್ರದೇಶ ಗೆಲ್ಲಬೇಕೆಂದರೆ ಹಿಂದುಳಿದ ಸಮಾಜಕ್ಕೆ ಹಾನಿಯಾಗದಂತೆ ಮೇಲ್ವರ್ಗ ವನ್ನು ಸಮಾಧಾನಪಡಿಸುವುದು ಬಿಜೆಪಿಗೆ ಅನಿವಾರ್ಯ. ಉ.ಪ್ರ. ಚುನಾವಣೆಗೆ ಸಂಬಂಧಿಸಿ ಕೆಲ ದಿನಗಳ ಹಿಂದೆ ಪಕ್ಷದಿಂದ ಆಂತರಿಕ ಸಮೀಕ್ಷೆಯೊಂದನ್ನೂ ನಡೆಸಲಾಗಿದ್ದು, ಸದ್ಯ ಚುನಾವಣೆ ನಡೆದರೆ ಬಿಜೆಪಿ 186-215 ಸೀಟುಗಳು ಬರಬಹುದು ಎಂದು ಅಂದಾಜಿಸಲಾಗಿದೆಯಂತೆ. ಹಾಗಿದ್ದರೆ, 2017 ಮತ್ತು 2022ರ ಚುನಾವಣೆಯನ್ನು ಅಭೂತಪೂರ್ವ ರೀತಿಯಲ್ಲಿ ಗೆದ್ದ ಬಿಜೆಪಿಗೆ ಇದು ಒಳ್ಳೆಯ ಸಂದೇಶವಲ್ಲ. ನಿತಿನ್ ನಬಿನ್ ನೇತೃತ್ವದಲ್ಲಿ ಉನ್ನತ ನಾಯಕರೊಂದಿಗೆ ಗೋರಖ್‌ಪುರದಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮುಖ್ಯವಾಗಿ ಯುಜಿಸಿ ವಿವಾದವೇ ಪಕ್ಷಕ್ಕೆ ಅತಿಯಾಗಿ ಹಾನಿ ಮಾಡುತ್ತಿದೆ ಎಂದು ಹಲವು ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಬಿಜೆಪಿ ಬಗ್ಗೆ ಮೇಲ್ವರ್ಗದಲ್ಲಿದ್ದ ನಂಬಿಕೆ-ವಿಶ್ವಾಸವನ್ನು ಯುಜಿಸಿ ನಿಯಮ ಕಿತ್ತುಕೊಳ್ಳುತ್ತಿದೆ ಎನ್ನುವುದು ಈ ಸಮುದಾಯದ ನಾಯಕರ ಅಸಮಾಧಾನ. ಕಳೆದೆರಡೂ ಚುನಾವಣೆಗಳಲ್ಲಿ ಬಿಜೆಪಿಗೆ ವರದಾನವಾಗಿದ್ದದ್ದು ಮೇಲ್ವರ್ಗದ ಜಬರ್ದಸ್ತ್ ಬೆಂಬಲ. ಆದರೆ, ಈ ಬಾರಿ ಪರಿಸ್ಥಿತಿ ಹೇಗಿರಲಿದೆ ಎನ್ನುವುದು ಕುತೂಹಲಕರ. ಇದೇ ಕಾರಣಕ್ಕೆ, ನ.6ರಂದು ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದಿಂದ ಯುಜಿಸಿ ನಿಯಮಾವಳಿಯ ಮರುಪರಿಶೀಲನೆಯ ಮಂತ್ರ ಜಪಿಸಲಾಗಿದೆ. ‌

ಮೇಲ್ವರ್ಗದ ಈ ಮುನಿಸನ್ನು ತನಗೆ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿರುವ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಪಕ್ಷದ ಪ್ರಧಾನ ವಕ್ತಾರರು ಹಾಗೂ ಮಾಧ್ಯಮದಲ್ಲಿ ಪಕ್ಷವನ್ನು ಪ್ರತಿನಿಧಿ ಸುವ ನಾಯಕರನ್ನು ಕರೆದು ಸಭೆ ನಡೆಸಿ, ಯಾವುದೇ ಕಾರಣಕ್ಕೂ ನಿಮ್ಮ ಮಾತುಗಳು ಸಾಮಾನ್ಯ ವರ್ಗದ ಮತದಾರರ ಭಾವನೆಗೆ ಹಾನಿ ಮಾಡಬಾರದು.

ಸಾರ್ವಜನಿಕವಾಗಿ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ತಮ್ಮ ಪಿಡಿಎ (ಪಿಚ್ಡಾ+ ದಲಿತ್+ ಅಲ್ಪಸಂಖ್ಯಾಕ್) ಸೂತ್ರದೊಂದಿಗೆ ಕಣಕ್ಕಿಳಿದಿರುವ ಅಖಿಲೇಶರು ಪಿಚ್ಡಾ ಜತೆಗೆ ಪಂಡಿತ್ ಪದವನ್ನೂ ಸೇರಿಸಿಕೊಂಡು ಮೇಲ್ವರ್ಗದ ವಿಶ್ವಾಸ ಗಳಿಸುವ ತವಕದಲ್ಲಿದ್ದಾರೆ. ಈ ನಡುವೆ, ಬಿಹಾರದ ಜನಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ದರ್ಭಂಗಾದ ಮಹಿನಾಮ್ ಗ್ರಾಮದಲ್ಲಿ ನಡೆದ ಮೈಥಿಲ ಬ್ರಾಹ್ಮಣ ಸಮುದಾಯದ ಸಭೆಯಲ್ಲಿ ಮಾಡಿದ ಭಾಷಣ ಈಗ ಚರ್ಚೆಗೆ ಗ್ರಾಸವಾಗಿದೆ.

ನವೆಂಬರ್ 5ರಂದು ನಡೆದ ಸಭೆಯ ಭಾಷಣದ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಬ್ರಾಹ್ಮಣ ಸಮುದಾಯದವರೇ ಶಾಸಕರಾಗಿದ್ದಾರೆ, ಸಂಸದರೂ ಬ್ರಾಹ್ಮಣರೇ ಆಗಿದ್ದಾರೆ. ಆದರೂ ಸಮುದಾಯದ ಸಮಸ್ಯೆಗಳು ಏಕೆ ಬಗೆಹರಿದಿಲ್ಲ ಎಂದು ಪ್ರಶ್ನಿಸಿದ ಅವರು, ಒಂದು ಕಾಲದಲ್ಲಿ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮತಗಳೂ ಬ್ರಾಹ್ಮಣ ಅಭ್ಯರ್ಥಿಗಳಿಗೆ ಬರುತ್ತಿದ್ದವು. ಆದರೆ ಬ್ರಾಹ್ಮಣ ಸಮುದಾಯ ಬಿಜೆಪಿ ಪರವಾಗಿ ಹೆಚ್ಚು ಗುರುತಿಸಿಕೊಂಡ ನಂತರ ಮುಸ್ಲಿಂ ಮತಗಳ ಬೆಂಬಲ ದೂರವಾಯಿತು ಎಂದಿದ್ದರು.

ಪ್ರಶಾಂತ್ ಕಿಶೋರ್ ಹೇಳಿಕೆಗೂ ಯುಜಿಸಿ ವಿವಾದಕ್ಕೂ, ಉ.ಪ್ರ. ಚುನಾವಣೆಗೆ ಸಂಬಂಧವಿಲ್ಲ ದಿದ್ದರೂ, ಅವರ ಭಾಷಣ ಬಿಹಾರದ ಬ್ರಾಹ್ಮಣ ಸಮುದಾಯದ ಆರ್ಥಿಕ ಸ್ಥಿತಿ, ಪ್ರಾತಿನಿಧ್ಯ ಮತ್ತು ಬಿಜೆಪಿಯೊಂದಿಗಿನ ಸಂಬಂಧದ ಕುರಿತು ಹೊಸ ಚರ್ಚೆ ಹುಟ್ಟುಹಾಕಿದೆ. ಬಿಹಾರ ಉತ್ತರ ಪ್ರದೇಶಕ್ಕೆ ತಾಗಿಕೊಂಡೇ ಇರುವುದರಿಂದ ಉ.ಪ್ರ. ಬ್ರಾಹ್ಮಣರು ಈ ಹೇಳಿಕೆಯನ್ನು ಹೇಗೆ ವಿಶ್ಲೇಷಿಸುತ್ತಾರೆ ಎನ್ನುವುದೂ ಕುತೂಹಲಕರ.

ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಕ್ಷೇತ್ರಗಳಿದ್ದು, ಮೇಲ್ವರ್ಗದ ಮತದಾರರ ಪ್ರಭಾವ ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕವಾಗಬಹುದು. ಬ್ರಾಹ್ಮಣರು ಸುಮಾರು 10-12%ರಷ್ಟಿದ್ದು, 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗಮನಾರ್ಹ ರಾಜಕೀಯ ಪ್ರಭಾವ ಹೊಂದಿದ್ದಾರೆ. ಸುಮಾರು 6-7% ಇರುವ ಠಾಕೂರರಿದ್ದಾರೆ.

ಯೋಗಿ ಆದಿತ್ಯನಾಥ್ ಅವರ ರಾಜಕೀಯ ಹಿನ್ನೆಲೆಯಿಂದ ಈ ಸಮುದಾಯದ ಪ್ರಾತಿನಿಧ್ಯ ಚರ್ಚೆಯಲ್ಲಿದೆ. ವ್ಯಾಪಾರ ಮತ್ತು ನಗರ ಪ್ರದೇಶಗಳಲ್ಲಿ ವೈಶ್ಯರು ಪ್ರಭಾವ ಹೊಂದಿದ್ದಾರೆ. ಸಿಎಸ್‌ಡಿಎಸ್-ಲೋಕನೀತಿ ಸಂಸ್ಥೆ ನಡೆಸಿದ 2024ರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಉತ್ತರ ಪ್ರದೇಶದಲ್ಲಿ ಮೇಲ್ವರ್ಗದ ಮತದಾರರ ಶೇ.79ರಷ್ಟು ಎನ್‌ಡಿಎಗೆ ಮತ ಹಾಕಿದ್ದರು.

ಇಂಡಿಯಾ ಮೈತ್ರಿಕೂಟಕ್ಕೆ ಶೇ.16ರಷ್ಟು ಮತ ನೀಡಿದ್ದರು. ಉತ್ತರ ಪ್ರದೇಶದಲ್ಲಿ ಬಿಜೆಪಿಯ ರಾಜಕೀಯ ಬೆಳವಣಿಗೆ ಹಿಂದೆ ಬ್ರಾಹ್ಮಣರು, ಠಾಕೂರ್‌ಗಳು ಸೇರಿದಂತೆ ಮೇಲ್ವರ್ಗದ ವಿವಿಧ ಸಮುದಾಯಗಳ ಬೆಂಬಲದ ಜೊತೆಗೆ ಹಲವು ಒಬಿಸಿ ಹಾಗೂ ದಲಿತ ಸಮುದಾಯಗಳ ಬೆಂಬಲವೂ ಪ್ರಮುಖ ಪಾತ್ರ ವಹಿಸಿದೆ.

ಸಾಂಪ್ರದಾಯಿಕ ಮೇಲ್ವರ್ಗದ ಬೆಂಬಲ ಉಳಿಸಿಕೊಂಡು ಹಿಂದುಳಿದ ವರ್ಗಗಳಲ್ಲಿಯೂ ಬಿಜೆಪಿ ತನ್ನ ಪ್ರಭಾವ ವಿಸ್ತರಿಸಿದೆ. ಆದರೆ ಯುಜಿಸಿ ನಿಯಮಾವಳಿ ವಿವಾದದಲ್ಲಿ ಈ ಸಮುದಾಯಗಳ ನಿರೀಕ್ಷೆಗಳು ವಿಭಿನ್ನವಾಗಿವೆ. ಸಾಮಾನ್ಯ ವರ್ಗದ ಪ್ರತಿಭಟನಾಕಾರರು ನಿಯಮಾವಳಿಯ ಕೆಲವು ಅಂಶಗಳು ತಮ್ಮ ವಿರುದ್ಧ ದುರುಪಯೋಗವಾಗಬಹುದು ಎಂಬ ಆತಂಕ ಹೊಂದಿದ್ದಾರೆ. ಮತ್ತೊಂದೆಡೆ, ದಲಿತ, ಆದಿವಾಸಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆ ಗಳಲ್ಲಿ ಎದುರಾಗುವ ತಾರತಮ್ಯದ ವಿರುದ್ಧ ಪರಿಣಾಮಕಾರಿ ಕಾನೂನಾತ್ಮಕ ರಕ್ಷಣೆ ಅಗತ್ಯ ಎಂಬ ವಾದವೂ ಇದೆ.

ಈ ಹಿನ್ನೆಲೆಯಲ್ಲಿ ನಿಯಮಾವಳಿಯನ್ನು ಬದಲಿಸುವುದಾದರೆ ಯಾವ ಅಂಶಗಳನ್ನು ಬದಲಿಸಬೇಕು, ಯಾರ ಹಕ್ಕುಗಳಿಗೆ ಯಾವ ರೀತಿಯ ರಕ್ಷಣೆ ಒದಗಿಸಬೇಕು ಎಂಬ ಪ್ರಶ್ನೆಗಳು ಮಹತ್ವ ಪಡೆದುಕೊಳ್ಳುತ್ತವೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಬಿಜೆಪಿಗೆ ಹಿನ್ನಡೆಯಾದರೆ ಅದು ಕೇಂದ್ರ ಸರ್ಕಾರದ ಬುಡವನ್ನೇ ಅಲುಗಾಡಿಸಬಲ್ಲದು.

ಹೀಗಾಗಿ, ಕೇಂದ್ರ ನಾಯಕರು ಈಗ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ರಾಜಕೀಯ ದೃಷ್ಟಿಯಿಂದ ನೋಡಿದರೆ, ಮೇಲ್ವರ್ಗದ ಆಕ್ಷೇಪಗಳಿಗೆ ಸ್ಪಂದಿಸುವಾಗ ಹಿಂದುಳಿದ ಸಮುದಾಯಗಳ ರಕ್ಷಣೆಯ ಬೇಡಿಕೆಗಳನ್ನು ನಿರ್ಲಕ್ಷಿಸಲಾಗದು. ಅದೇ ರೀತಿ ತಾರತಮ್ಯ ನಿವಾರಣೆಯ ಉದ್ದೇಶವನ್ನು ಮುಂದುವರಿಸುವಾಗ ಸಾಮಾನ್ಯ ವರ್ಗದ ವಿದ್ಯಾರ್ಥಿಗಳ ನ್ಯಾಯಸಮ್ಮತ ವಿಚಾರಣೆಯ ಹಕ್ಕಿನ ಕುರಿತ ಆತಂಕವನ್ನೂ ಪರಿಹರಿಸಬೇಕಾಗುತ್ತದೆ.