Lokesh Kaayarga Column: ನಮ್ಮ ಮಕ್ಕಳನ್ನು ಅಬ್ಬೇಪಾರಿ ಸ್ಥಿತಿಗೆ ತಳ್ಳದಿರಿ

ರಾಜ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಟ್ಟು ಸಂಖ್ಯೆ ಒಂದೂವರೆ ಕೋಟಿಗೂ ಹೆಚ್ಚು. 2023-24ರ ಸಾಲಿನಲ್ಲಿ ಸುಮಾರು ಒಂದು ಕೋಟಿ 20 ಲಕ್ಷ ವಿದ್ಯಾರ್ಥಿಗಳು ರಾಜ್ಯದ ನಾನಾ ಶಾಲೆಗಳಲ್ಲಿ ದಾಖಲಾಗಿ ದ್ದಾರೆ. ಉನ್ನತ ಶಿಕ್ಷಣವನ್ನೂ ತೆಗೆದುಕೊಂಡರೆ ರಾಜ್ಯದ ಪ್ರತಿ ಮನೆಗೂ ಶಿಕ್ಷಣ ಕ್ಷೇತ್ರದ ನಂಟಿದೆ

Kid
Profile Ashok Nayak January 15, 2025

Source : Vishwavani Daily News Paper

ಲೋಕಮತ

ಲೋಕೇಶ್‌ ಕಾಯರ್ಗ

ಕರ್ನಾಟಕದಲ್ಲಿ ಇಂದು ಅತ್ಯಂತ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುವ ಕ್ಷೇತ್ರ ಯಾವುದು? ಉತ್ತರಿಸುವುದು ಸ್ವಲ್ಪ ಕಷ್ಟ. ಆದರೆ ಅತ್ಯಂತ ಹೆಚ್ಚು ಜನರನ್ನು ಕಾಡುತ್ತಿ ರುವ ಸಮಸ್ಯೆ ಶಿಕ್ಷಣ ಕ್ಷೇತ್ರದ್ದು ಎಂದು ನಿಶ್ಚಯವಾಗಿ ಹೇಳಬಹುದು. ಈ ಕ್ಷೇತ್ರದ ಅಗಾ ಧತೆ, ವಿಸ್ತಾರ ಮತ್ತು ಸಮಸ್ಯೆಗಳ ಆಳವನ್ನು ತಿಳಿದುಕೊಂಡರೆ ಇದರಲ್ಲಿ ಯಾವ ಉತ್ಪೇಕ್ಷೆ ಯೂ ಇಲ್ಲ.

ರಾಜ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಟ್ಟು ಸಂಖ್ಯೆ ಒಂದೂವರೆ ಕೋಟಿಗೂ ಹೆಚ್ಚು. 2023-24ರ ಸಾಲಿನಲ್ಲಿ ಸುಮಾರು ಒಂದು ಕೋಟಿ 20 ಲಕ್ಷ ವಿದ್ಯಾರ್ಥಿಗಳು ರಾಜ್ಯದ ನಾನಾ ಶಾಲೆಗಳಲ್ಲಿ ದಾಖಲಾಗಿದ್ದಾರೆ. ಉನ್ನತ ಶಿಕ್ಷಣವನ್ನೂ ತೆಗೆದುಕೊಂಡರೆ ರಾಜ್ಯದ ಪ್ರತಿ ಮನೆಗೂ ಶಿಕ್ಷಣ ಕ್ಷೇತ್ರದ ನಂಟಿದೆ. ಪ್ರತಿ ವರ್ಷವೂ ಹೊಸ, ಹೊಸ ಪ್ರಯೋಗಗಳಿಗೆ ಗುರಿಯಾಗುತ್ತಿರುವ ಕ್ಷೇತ್ರವೂ ಇದೇ ಕ್ಷೇತ್ರ. ಇಷ್ಟೆಲ್ಲ ಆದರೂ ಶಿಕ್ಷಣದ ಗುಣಮಟ್ಟದ ವಿಚಾರ ಬಂದಾಗ ಕರ್ನಾಟಕ ಬಿಹಾರದಂತಹ ರಾಜ್ಯಗಳಿಂದಲೂ ಹಿಂದುಳಿದಿದೆ.

ಸುಮ್ಮನೆ ಗಮನಿಸಿ ನೋಡಿ, ಟಿ.ವಿ ರಿಯಾಲಿಟಿ ಶೋಗಳಲ್ಲಿ ಬರುವ ಮಕ್ಕಳು ಗ್ರಾಮೀಣ ಪ್ರದೇಶ ದಿಂದ ಬಂದವರಾಗಿದ್ದರೆ, ಆಯಾ ಪ್ರದೇಶದ ಭಾಷಾ ಸೊಗಡಿನ ಜತೆ ಕನ್ನಡದಲ್ಲಿ ಅಳುಕಿಲ್ಲದೆ ಮಾತನಾಡುತ್ತಾರೆ. ಆದರೆ ನಗರ ಪ್ರದೇಶದ ಮಕ್ಕಳು ಅದರಲ್ಲೂ ಇಂಗ್ಲಿಷ್ ಮೀಡಿಯಂನಲ್ಲಿ ಓದುತ್ತಿರುವ ಮಕ್ಕಳಾಗಿದ್ದರೆ ಕನ್ನಡದಲ್ಲಿ ಮಾತನಾಡಲು ಕಷ್ಟಪಡು ತ್ತಾರೆ.

ಹಾಗೆಂದು ಇಂಗ್ಲಿಷಿ ನಲ್ಲಿ ಸರಿಯಾಗಿ ಮಾತನಾಡಲೂ ತಡವರಿಸುತ್ತಾರೆ. ಇದು ಸದ್ಯದ ನಮ್ಮ ಶಿಕ್ಷಣ ವ್ಯವಸ್ಥೆಯ ಪ್ರತಿ-ಲನ. ನಮ್ಮ ಚಿತ್ರ ವಿಚಿತ್ರ ನೀತಿಗಳಿಂದ, ವಾರ್ಷಿಕ ಪ್ರಯೋಗಗಳಿಂದ ಕನ್ನಡವನ್ನೂ ಸರಿಯಾಗಿ ಕಲಿಯಲಾಗದ, ಇಂಗ್ಲೀಷನ್ನೂ ಅರಗಿಸಿ ಕೊಳ್ಳಲಾರದ ಅಬ್ಬೇಪಾರಿ ಸ್ಥಿತಿಗೆ ನಮ್ಮ ಮಕ್ಳಳನ್ನು ತಳ್ಳಿದ್ದೇವೆ.

ರಾಜ್ಯದ ಸಾಕ್ಷರತಾ ಪ್ರಮಾಣ ಶೇ. 74ರಷ್ಟಿದ್ದರೂ ಶಿಕ್ಷಣ ಗುಣಮಟ್ಟದ ವಿಷಯದಲ್ಲಿ ನಮ್ಮ ಸಾಧನೆ ತೀರಾ ಕಳಪೆ. ಕಳೆದ ವರ್ಷ ನಡೆದ ರಾಷ್ಟ್ರೀಯ ಸಮೀಕ್ಷೆಯೊಂದರ ಪ್ರಕಾರ ರಾಜ್ಯದ ಗ್ರಾಮೀಣ ಭಾಗದಲ್ಲಿ 1 ರಿಂದ 5ನೇ ತರಗತಿವರೆಗಿನ ಮಕ್ಕಳಲ್ಲಿ ಶೇ 53ರಷ್ಟು ಮಂದಿಗೆ ತೀರಾ ಸರಳವಾದ ವಾಕ್ಯವನ್ನು ಓದಲೂ ಸಾಧ್ಯವಾಗಿಲ್ಲ. ಶೇ.91 ರಷ್ಟು ವಿದ್ಯಾರ್ಥಿಗಳು ನೂರರೊಳಗಿನ ಸಂಖ್ಯೆಯನ್ನು ಭಾಗಿಸುವಲ್ಲಿ ವಿಫಲರಾಗಿದ್ದರು. ಭಾಷಾ ಕಲಿಕೆ ಈ ಸಮಸ್ಯೆ ಕೇವಲ ಕನ್ನಡ ಮಾಧ್ಯಮ ಶಾಲೆಗಳಿಗೆ ಇಲ್ಲವೇ ಸರಕಾರಿ ಶಾಲೆಗಳಿಗೆ ಸೀಮಿತವಾಗಿಲ್ಲ. ನಗರಗಳಲ್ಲಿ ದುಬಾರಿ ಫೀಜು ಪಡೆದು ಶಿಕ್ಷಣ ಸೇವೆ ನೀಡುತ್ತಿರುವ ಖಾಸಗಿ ಶಾಲೆಗಳಿಗೆ ಸೇರಿದ ವಿದ್ಯಾರ್ಥಿಗಳೂ ಭಾಷಾ ವಿಚಾರಕ್ಕೆ ಬಂದರೆ ತಡವರಿಸುತ್ತಾರೆ.

ಶಿಕ್ಷಣ ಕ್ಷೇತ್ರದ ಸುಧಾರಣೆಗೆ ನಿಕಟ ಗಮನಹರಿಸಿದ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿ ಯಲ್ಲಿದ್ದರೂ ಗುಣಮಟ್ಟ ಏರುವ ಬದಲು ಕುಸಿಯುತ್ತಿರುವುದು ಏಕೆ ಎಂದು ಗಮನಿಸಿದರೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಗೊಂದಲದಲ್ಲಿ ನಾವು ನಮ್ಮ ಮಕ್ಕಳನ್ನು ತ್ರಿಶಂಕು ಸ್ಥಿತಿಗೆ ತಳ್ಳಿ ದ್ದೇವೆ. ಮೂರು ದಶಕಗಳ ಹಿಂದೆ ಶಿಕ್ಷಕರು, ಶಾಲಾ ಕೊಠಡಿಗಳಿಲ್ಲದೆ, ನೆಲದಲ್ಲಿ ಕುಳಿತು ಓದುವ ಸ್ಥಿತಿ ಇದ್ದಾಗಲೂ ಏಳನೇ ತರಗತಿ ತೇರ್ಗಡೆಯಾದ ವಿದ್ಯಾರ್ಥಿ ಕನ್ನಡ ವನ್ನು ತಕ್ಕ ಮಟ್ಟಿಗೆ ಓದಿ ಬರೆಯಬಲ್ಲವನಾಗಿದ್ದ.

ಆಂಗ್ಲ ಮಾಧ್ಯಮದಲ್ಲಿ ಓದಿದ ಇದೇ ತರಗತಿಯ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಸ್ಫುಟ ವಾಗಿ ಮಾತನಾಡಬಲ್ಲವರಾಗಿದ್ದರು. ಈಗ ಅಂಗನವಾಡಿ/ ಪ್ರೀ ಕೆಜಿಯಿಂದಲೇ ಕಲಿಕೆ ಆರಂಭವಾದರೂ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಇಲ್ಲವೇ ಇಂಗ್ಲಿಷಿನಲ್ಲಿ ತಪ್ಪಿಲ್ಲದೆ ಮಾತನಾಡಲು, ಬರೆಯಲು ಎಡವುತ್ತಾರೆ. ಹಾಗಿದ್ದರೆ ಈ ಕ್ಷೇತ್ರದಲ್ಲಿ ಪ್ರಯೋಗಗಳ ಮೇಲೆ ಪ್ರಯೋಗಗಳನ್ನು ಮಾಡಿದ ಬಳಿಕವೂ ನಾವು ಸಾಧಿಸಿದ್ದೇನು ? ಇದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ.

ಗೊಂದಲಗಳೇ ಪ್ರಮುಖ ಸಮಸ್ಯೆ

ಭಾಷಾವಾರು ಆಧಾರದಲ್ಲಿ ರಾಜ್ಯಗಳು ವಿಂಗಡಣೆಯಾದ ಬಳಿಕ ಆಯಾ ರಾಜ್ಯಗಳು ಅಲ್ಲಿನ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಿದವು. ಕರ್ನಾಟಕವೂ ಕನ್ನಡದ ಹೆಸರಿನಲ್ಲಿ ನೂರೆಂಟು ಕಾರ‍್ಯ ಕ್ರಮಗಳನ್ನು ಹಮ್ಮಿಕೊಂಡಿತು. ಆದರೆ ಆಂಗ್ಲಭಾಷೆಯ ಮೋಹ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಉಳ್ಳವರು ಮತ್ತು ಇಲ್ಲದವರು ಎಂಬ ನೆಲೆಯಲ್ಲಿ ವಿಭಜಿಸಿತು. ಪಾಲಕರ ಇಂಗ್ಲಿಷ್ ಭ್ರಾಂತಿ ಮತ್ತು ಒಣ ಪ್ರತಿಷ್ಠೆಯನ್ನು ಬಳಸಿಕೊಂಡು ಖಾಸಗಿ ವ್ಯಕ್ತಿಗಳು ಶಿಕ್ಷಣವನ್ನು ದಂಧೆಯ ಮಟ್ಟಕ್ಕೆ ಇಳಿಸಿದರು. ನಮ್ಮ ಸರಕಾರವೇ ಇವರಿಗೆ ಪರೋಕ್ಷವಾಗಿ ಪ್ರೋತ್ಸಾಹ ನೀಡಿತು. ಆಗಲೇ ಎಚ್ಚೆತ್ತು ಕೊಂಡು ಸರಕಾರಿ ಶಾಲೆಗಳಲ್ಲಿ ಕನ್ನಡ ಮತ್ತು ಇಂಗ್ಲಿಷನ್ನು ಸರಿ ಸಮನಾಗಿ ಕಲಿಸುತ್ತಿದ್ದರೆ ಈ ಭಾಷಾ ಭೇದದ ಕಂದರ ಬೆಳೆಯುತ್ತಿರಲಿಲ್ಲ.

ಆದರೆ ಕನ್ನಡ ಮಾಧ್ಯಮ ಶಾಲೆಗಳು ಕನ್ನಡಕ್ಕಷ್ಟೇ ಒತ್ತು ನೀಡಿದರೆ ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡ ಮಾತನಾಡುವುದೂ ಅಪರಾಧವಾಯಿತು. ಒಂದೆಡೆ ಕನ್ನಡಕ್ಕೆ ಹಿನ್ನಡೆಯಾದರೆ, ಅತ್ತ ಇಂಗ್ಲಿಷೂ ಕಂಗ್ಲಿಷ್ ಮಟ್ಟಕ್ಕೆ ಇಳಿಯಿತು. ಈ ಶಾಲೆಗಳಲ್ಲಿ ಓದಿದ ನಮ್ಮ ವಿದ್ಯಾರ್ಥಿ ಗಳು ಕಾಲೇಜು ಶಿಕ್ಷಣ ಮುಗಿಸಿ ಯಾವುದೇ ವೃತ್ತಿಗೆ ಸೇರಿದ ಬಳಿಕ ಎದುರಿಸುವ ಮೊದಲ ಸಮಸ್ಯೆ ಸಂವಹನ ಕೌಶಲ್ಯದ್ದು. ಕನ್ನಡವಾಗಲಿ, ಇಂಗ್ಲಿಷ್ ಆಗಲಿ ಸುಲಲಿತ ಸಂವಹನದ ಕೊರತೆಯಿಂದಲೇ ನಮ್ಮ ರಾಜ್ಯದ ಯುವಕರು ಹಿಂದೆ ಬೀಳುತ್ತಿದ್ದಾರೆ ಎಂದು ಖಾಸಗಿ ಕಂಪನಿಗಳಲ್ಲಿ ದುಡಿಯುವ ಎಚ್. ಆರ್.ಗಳ ಅರೋಪ. ಉತ್ತರದಿಂದ ಬಂದ ಯುವಕರಿಗೆ ಹಿಂದಿಯ ಬಲವಿದ್ದರೆ ನಮ್ಮವರಿಗೆ ಸ್ಥಳೀಯ ಭಾಷೆ ಮತ್ತು ಇಂಗ್ಲಿಷೂ ಎರಡೂ ಅಷ್ಟಕಷ್ಟೇ ಎನ್ನುವ ಪರಿಸ್ಥಿತಿ.

ಟಿ.ವಿಗಳಲ್ಲಿ ಕಾರ್ಟೂನ್ ನೋಡಿಯೇ ಹಿಂದಿಯನ್ನು ಕರಗತ ಮಾಡಿಕೊಳ್ಳುವ ನಮ್ಮ ಎಳೆಯರಿಗೆ ಇಂಗ್ಲಿಷ್ ಆಗಲಿ, ಕನ್ನಡವಾಗಲಿ ಕಲಿಯುವುದು ಕಷ್ಟವೇನಲ್ಲ. ಆದರೆ ಈ ಎರಡೂ ಭಾಷೆಗಳು ತದ್ವಿರುದ್ಧ ಪದಗಳು ಎಂಬ ವಾತಾವರಣವನ್ನು ನಾವಾಗಿಯೇ ಸೃಷ್ಟಿಸಿದ್ದೇವೆ. ನಮ್ಮ ಕಲಿಕೆಯ ಮಾದರಿಯಲ್ಲಿಯೇ ಲೋಪವಿರುವುದರಿಂದ ಈ ವಿಚಾರದಲ್ಲಿ ಮಕ್ಕಳನ್ನು ದೂರುವಂತಿಲ್ಲ.

ಇದನ್ನು ಅರಿತೇ ಯು. ಆರ್. ಅನಂತಮೂರ್ತಿಯವರು ಇಂಗ್ಲಿಷ್ ಭಾಷೆಯ ಶ್ರೇಷ್ಠತೆಯ ವ್ಯಸನ ವನ್ನು ತಗ್ಗಿಸಲು ಕ್ರಮ ಕೈಗೊಳ್ಳಿ ಎಂದು ಕರೆ ನೀಡಿದ್ದರು. ನಮ್ಮ ಕನ್ನಡ ಶಾಲೆ ಗಳಲ್ಲೂ ಇಂಗ್ಲಿಷನ್ನು ಚೆನ್ನಾಗಿ ಓದಲು, ಬರೆಯಲು ಕಲಿಸಿದ್ದರೆ ಇಂಗ್ಲಿಷಿನ ಪಾರುಪತ್ಯಕ್ಕೆ ಅವಕಾಶವೇ ಇರಲಿಲ್ಲ. ಆದರೆ ಇದು ಕನಸಿನ ಮಾತಾಗಿಯೇ ಉಳಿಯಿತು.

ಶಿಕ್ಷಣವೆಂಬ ದಂಧೆ

ಇಂಗ್ಲಿಷ್ ಮಾಧ್ಯಮದಲ್ಲಿ ಓದಿದರೆ ಮಕ್ಕಳ ಭವಿಷ್ಯ ಚೆನ್ನಾಗಿರುತ್ತದೆ ಎಂಬ ಹುಸಿ ಕನಸಿನೊಂದಿಗೆ ಎಲ್ಲರೂ ಈಗ ಎಲ್ಲರೂ ಖಾಸಗಿ ಶಾಲೆಗಳತ್ತ ದೌಡಾಯಿಸಿದರು. ಬೇಡಿಕೆಗೆ ತಕ್ಕಂತೆ ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ಅಂಗ್ಲ ಮಾಧ್ಯಮ ಶಾಲೆಗಳು ತಲೆ ಎತ್ತಿದವು. ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಗೊಳಿಸಿ, ಮಧ್ಯಾಹ್ನ ಉಚಿತ ಬಿಸಿ ಊಟ ನೀಡಿದರೂ ಹಳ್ಳಿಯ ಬಡವರೂ ಖಾಸಗಿ ಶಾಲೆಗಳಲ್ಲಿಯೇ ತಮ್ಮ ಮಕ್ಕಳ ಭವಿಷ್ಯ ಅರಸತೊಡಗಿದರು.

ಹೆತ್ತವರ ದೌರ್ಬಲ್ಯವನ್ನು ಚೆನ್ನಾಗಿ ಅರಿತುಕೊಂಡ ಕೆಲವು ಶಿಕ್ಷಣ ಸಾಮಂತರು ಪಾಳೇಗಾರರಾದರು. ಸರಕಾರ ಮತ್ತು ನ್ಯಾಯಾಲಯದ ಆದೇಶಗಳಿಗೂ ಇವರು ಬಗ್ಗಲಿಲ್ಲ. ರಾಜ್ಯದಲ್ಲಿ ಮಾತ್ರ ವಲ್ಲ ದೇಶದ ಯಾವುದೇ ಭಾಗದಲ್ಲೂ ವಿದ್ಯಾರ್ಥಿಗಳಿಂದ ಡೊನೇಶನ್ ಸಂಗ್ರಹಿಸುವಂತಿಲ್ಲ. ಆದರೆ ನಮ್ಮ ಪ್ರತಿಯೊಂದು ಖಾಸಗಿ ಶಾಲೆಗಳಲ್ಲೂ ಅಭಿವೃದ್ಧಿ ಶುಲ್ಕ, ಕಟ್ಟಡ ಶುಲ್ಕದ ಹೆಸರಿನಲ್ಲಿ ಸಾವಿರಾರು ರೂಪಾಯಿ ಶುಲ್ಕ ವಸೂಲಿ ಮಾಡಲಾ ಗುತ್ತಿದೆ.

ಸೇವೆಯ ಹೆಸರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಕೆಲವು ಮಠ-ಮಾನ್ಯರ ಶಾಲೆ ಗಳಲ್ಲೂ ಈ ವಸೂಲಿ ಜೋರಾಗಿಯೇ ನಡೆಯುತ್ತಿದೆ. ಇಂತಹ ಯಾವ ವಸೂಲಿಗೂ ರಸೀದಿ ನೀಡುವ ಪರಿಪಾಠ ವಿಲ್ಲ. ಒಂದು ವೇಳೆ ನೀಡಿದರೂ ಅದು ಪಾಲಕರು ಸ್ವಯಂ ಇಚ್ಛೆ ಯಿಂದ ನೀಡುವ ’ದಾನ’ದ ವ್ಯಾಪ್ತಿಗೆ ಸೇರುತ್ತದೆ. ಕರ್ನಾಟಕದಲ್ಲಿ ಶಿಕ್ಷಣವೆಂದರೆ ಮಾಲ್‌ಗಳಲ್ಲಿ ದೊರಕುವ ಪ್ರಸಾಧನ ಸಾಮಗ್ರಿಗಳಂತೆ ಹತ್ತಾರು ಆಯ್ಕೆಗಳಿಗೆ ಅವಕಾಶ ವಿದೆ. ಸರಕಾರಿ ಕನ್ನಡ ಶಾಲೆಗಳು, ಅನುದಾನಿತ ಆಂಗ್ಲ ಮಾಧ್ಯಮ ಶಾಲೆಗಳು, ಅನುದಾನ ರಹಿತ ಆಂಗ್ಲ ಮಾಧ್ಯಮ ಶಾಲೆಗಳು, ಮೊರಾರ್ಜಿ, ಏಕಲವ್ಯ, ರಾಣಿ ಚೆನ್ನಮ್ಮ ವಸತಿ ಶಾಲೆಗಳು, ನವೋದಯ ಶಾಲೆಗಳು, ಕೇಂದ್ರೀಯ ವಿದ್ಯಾಲಯ ಗಳು ಹೀಗೆ ಶಾಲೆಗಳಲ್ಲೂ ನಾನು ವಿಧ, ನಾನಾ ಸ್ತರಗಳಿವೆ. ಆದರೆ ಕನ್ನಡ ಮಾಧ್ಯಮ ಎಲ್ಲ ಪಾಲಕರ ಕೊನೆಯ ಆಯ್ಕೆ. ಕೇಂದ್ರ ಸರಕಾರವೇ ನಡೆಸುವ ನವೋದಯ ವಿದ್ಯಾಲಯ, ಕೇಂದ್ರೀಯ ವಿದ್ಯಾಲ ಯಗಳಲ್ಲಿ ಸೆಂಟ್ರಲ್ ಸಿಲೆಬಸ್ ಪ್ರಕಾರ ಮಕ್ಕಳನ್ನು ಓದಿಸುವುದು ಬಹುತೇಕ ಹತ್ತವರ ಕನಸು. ಆದರೆ ಇಲ್ಲಿ ಸೀಟು ಸಿಗಬೇಕಾದರೆ ನೂರೆಂಟು ಕಟ್ಟುಪಾಡುಗಳು. ಇದು ಸಿಗದೇ ಹೋದರೆ ಉಳ್ಳವರು ಐಸಿಎಎಸ್‌ಇ, ಸಿಬಿಎಸ್‌ಇ ಮಾನ್ಯತೆ ಪಡೆದ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಇನ್ನುಳಿದವರು ರಾಜ್ಯಪಠ್ಯ ಅನುಸರಿಸುವ ಯಾವುದೋ ಅನುದಾನಿತ ಇಲ್ಲವೇ ಅನುದಾನ ರಹಿತ ಶಾಲೆಗಳ ಮೊರೆ ಹೋಗುತ್ತಾರೆ. ಕನ್ನಡ ಮಾಧ್ಯಮ ಶಾಲೆ ಇವರೆಲ್ಲರ ಕೊನೆಯ ಆಯ್ಕೆ.

ನನ್ನ ಮಗ/ಮಗಳು ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಓದಬೇಕೆಂಬ ಏಕೈಕ ಹಂಬಲ ಗ್ರಾಮೀಣ ಜನರದ್ದಾದರೆ , ಬೆಂಗಳೂರಿನಂತಹ ನಗರಗಳಲ್ಲಿ ಶಿಕ್ಷಣದ ಹಿಂದೆ ನೂರೆಂಟು ಒತ್ತಾಸೆಗಳಿವೆ. ಇಲ್ಲಿ ಬಡವರು-ಶ್ರೀಮಂತರೆಂಬ ಬೇಧವಿಲ್ಲದೆ ಎಲ್ಲರೂ ಯಾವುದಾದರೂ ಖಾಸಗಿ ಶಾಲೆಯ ಬಾಗಿಲು ಬಡಿಯುವುದು ಅನಿವಾರ‍್ಯ. ಬಹುತೇಕರಿಗೆ ಆ ಶಾಲೆಗಳಲ್ಲಿ ಯಾರಾರ ಮಕ್ಕಳು, ಎಂಥವರ ಮಕ್ಕಳು ಕಲಿಯುತ್ತಿದ್ದಾರೆ ಎನ್ನುವುದೂ ಮುಖ್ಯವಾಗುತ್ತದೆ. ದುಡ್ಡು ನೀರಾಗಿ ಹರಿದರೂ ಸರಿ, ಅಂತಸ್ತು, ಪ್ರತಿಷ್ಠೆಗೆ ಬಲಿ ಬಿದ್ದ ಕೆಳ ಮಧ್ಯಮದ ವರ್ಗದ ಜನರೂ ಪ್ರತಿಷ್ಠಿತ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹರಸಾಹಸ ನಡೆಸುತ್ತಾರೆ. ಈ ಪ್ರತಿಷ್ಠೆ ಉಳಿಸಿಕೊಳ್ಳುವುದೆಂದರೆ ಸಾಮಾನ್ಯದ ಮಾತಲ್ಲ. ಇಂತಹ ಶಾಲೆಗಳಲ್ಲಿ ಭವಿಷ್ಯ ಗಿಟ್ಟಿಕೊಳ್ಳಬೇಕಾದರೆ ಗಣ್ಯರೆನಿಸಿಕೊಂಡವರ ಪ್ರಭಾವ ಬೇಕೇಬೇಕು. ಇಷ್ಟಾಗಿಯೂ ಮಗುವಿನ ಜತೆ ಹೆತ್ತವರೂ ಸಂದರ್ಶನ ಎದುರಿಸಬೇಕು.

ಪ್ರೀ ನರ್ಸರಿಗೆ ಮಕ್ಕಳನ್ನು ಸೇರಿಸಬೇಕಾದರೂ ತಂದೆ ತಾಯಿಗಳ ಶಿಕ್ಷಣದ ಹಿನ್ನೆಲೆ, ಮಾಸಿಕ ವರಮಾನ, ವಾಸ್ತವ್ಯ ಇರುವ ಬಡಾವಣೆ, ಸ್ವಂತ ಮನೆಯೇ, ಬಾಡಿಗೆ ಮನೆಯೇ ಇತ್ಯಾದಿ ಮಾಹಿತಿ ನೀಡಬೇಕು. ಇಷ್ಟಾದರೂ ನಮ್ಮ ಮಕ್ಕಳಿಗೆ ಇಲ್ಲಿ ಬದುಕಿನ ಶಿಕ್ಷಣ ಸಿಗುವ ಖಾತರಿ ಇಲ್ಲ.

ಆಂಗ್ಲ ಭಾಷೆಗೆ ಮಣೆ ಆಂಗ್ಲ ಭಾಷೆಯ ವ್ಯಾಮೋಹದಿಂದ ಸರಕಾರಿ ಶಾಲೆಗಳು ಈಗ ಮುಚ್ಚುವ ಹಂತಕ್ಕೆ ಬಂದಿವೆ. ಇವುಗಳಿಗೆ ಅಂತಿಮ ಮೊಳೆ ಹೊಡೆಯಲು ಸರಕಾರವೇ ಮುಂದಾಗಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ಆಂಗ್ಲ ಭಾಷೆಯ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವು ದಾಗಿ ಸರಕಾರವೇ ತಿಳಿಸಿದೆ. ಈ ಶಾಲೆಗಳಲಲ್ಲಿ ಒಂದನೆ ತರಗತಿಯಿಂದಲೇ ಇಂಗ್ಲಿಷ್ ಕಲಿಸಲು ಸರಕಾರ ಮುಂದಾಗಿದೆ. ಅಂದರೆ ಇನ್ನು ಕೆಲವು ವರ್ಷಗಳಲ್ಲಿ ಎಲ್ಲ ಕನ್ನಡ ಶಾಲೆಗಳನ್ನು ಮುಚ್ಚು ವುದು ಅನಿವಾರ‍್ಯವಾಗಲಿದೆ. ಆದರೆ ಈ ಶಾಲೆಗಳಲ್ಲಿ ಕಲಿತ ಮಕ್ಕಳು ಯಾವ ರೀತಿಯ ಶಿಕ್ಷಣ ಪಡೆಯುತ್ತಾರೆ ಎನ್ನುವುದಕ್ಕೆ ಇನ್ನೂ ಖಾತರಿ ಇಲ್ಲ.

ನಮ್ಮ ಮಕ್ಕಳ ಭವಿಷ್ಯ ಮಾತ್ರವಲ್ಲ ದೇಶದ ಭವಿಷ್ಯ ಹಸನಾಗಬೇಕಾದರೆ ಎಳವೆಯ ಲ್ಲಿಯೇ ಅಸಮಾನತೆಯ ಬೀಜವನ್ನು ಬಿತ್ತುವ ಈ ಶಿಕ್ಷಣ ವ್ಯವಸ್ಥೆಯನ್ನು ಅಮೂಲಾಗ್ರ ವಾಗಿ ಬದಲಾಯಿಸ ಬೇಕಾಗಿದೆ. ಕನ್ನಡ ಮಾಧ್ಯಮ. ಇಂಗ್ಲಿಷ್ ಮಾಧ್ಯಮ ಕೇಂದ್ರ ವಠ್ಯ, ರಾಜ್ಯ ಪಠ್ಯ ಎನ್ನುವ ವರ್ಗೀ ಕರಣಗಳಿಲ್ಲದೇ, ಬಡವ ಬಲ್ಲಿದರೆಂಬ ಭೇದವಿಲ್ಲದೇ ಎಲ್ಲರೂ ಸರಿಸಮನಾಗಿ ಶಿಕ್ಷಣ ಪಡೆಯುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಎಡೆ ದೊರಕುವ ಶಿಕ್ಷಣದ ಗುಣಮಟ್ಟ ಒಂದೇ ಇರಬೇಕು. ಹಾಗಾದರೆ ಮಾತ್ರ ಶಿಕ್ಷಣ ನಮ್ಮ ಮೂಲಭೂತ ಹಕ್ಕಾಗಲು ಸಾಧ್ಯ. ಇಲ್ಲವಾದರೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಮಕ್ಕಳ ಪಾಲಿಗೆ ಮುಳು ವಾದೀತು.

ಇದನ್ನೂ ಓದಿ: ಶಿಕ್ಷಕರಿಗೆ ಸಿಗಬೇಕು ಸೂಕ್ತ ಗೌರವ

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ