ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಅವಿದ್ಯಾವಂತ ತಂದೆಯ ನೆನಪಿಗಾಗಿ ಇಮ್ಯಾಜಿನೇಷನ್‌ ಲೈಬ್ರರಿ ಕಟ್ಟಿದ ಮಗಳು

2020ರಲ್ಲಿ ಕೋವಿಡ್ ಸಮಯದಲ್ಲಿ, ಈಕೆ ‘ಮಾಡರ್ನಾ’ ಲಸಿಕೆಯ ಸಂಶೋಧನೆಗಾಗಿ 1 ಮಿಲಿ ಯನ್ ಡಾಲರ್ ದೇಣಿಗೆ ನೀಡಿದ್ದರು. ಇವರು ನೀಡಿದ ಈ ಸಮಯೋಚಿತ ಆರ್ಥಿಕ ನೆರವು ಲಸಿಕೆಯು ಬೇಗನೆ ಸಿದ್ಧವಾಗಲು ಪ್ರಮುಖ ಕಾರಣವಾಯಿತು. 2016ರಲ್ಲಿ ತಮ್ಮ ತವರು ಪ್ರಾಂತ್ಯ ದಲ್ಲಿ ಕಾಳ್ಗಿಚ್ಚು ಉಂಟಾದಾಗ ಮನೆ ಕಳೆದುಕೊಂಡವರಿಗೆ ನೆರವು ನೀಡಿ ಸಂತ್ರಸ್ತ ಕುಟುಂಬ ಗಳಿಗೆ ಪ್ರತಿ ತಿಂಗಳು ಹಣದ ಸಹಾಯ ನೀಡಿ ಅವರು ಮತ್ತೆ ಜೀವನ ಕಟ್ಟಿಕೊಳ್ಳಲು ಆಸರೆಯಾ ದರು.

ತಂದೆಯ ನೆನಪಿಗಾಗಿ ಇಮ್ಯಾಜಿನೇಷನ್‌ ಲೈಬ್ರರಿ ಕಟ್ಟಿದ ಮಗಳು

-

ಒಂದೊಳ್ಳೆ ಮಾತು

1946ರಲ್ಲಿ ಅಮೆರಿಕದ ಟೆನ್ನೆಸ್ಸಿಯ ಲೋಕಸ್ಟ್ ರಿಡ್ಜ್ ಎನ್ನುವ ಬೆಟ್ಟದ ತಪ್ಪಲಿನಲ್ಲಿ ಆಕೆ ಜನಿಸಿದಳು. ಹನ್ನೆರಡು ಮಕ್ಕಳ ಬಡ ಕುಟುಂಬದಲ್ಲಿ ಆಕೆ ನಾಲ್ಕನೆಯವಳು. ಆಕೆ ಹುಟ್ಟಿ ದಾಗ, ಹೆರಿಗೆ ಮಾಡಿಸಿದ ವೈದ್ಯರಿಗೆ ನೀಡಲು ಆಕೆಯ ತಂದೆ ರಾಬರ್ಟ್ ಲೀ ಪಾರ್ಟನ್ ಬಳಿ ಹಣವಿರಲಿಲ್ಲ; ಒಂದು ಚೀಲ ಜೋಳದ ಹಿಟ್ಟನ್ನು ನೀಡಿ ಆ ಋಣ ತೀರಿಸಿದ್ದರು. ‌

ಗಾಳಿ ತಡೆಯಲು ಗೋಡೆಗಳಿಗೆ ಹಳೆಯ ಪತ್ರಿಕೆಗಳನ್ನು ಅಂಟಿಸಿದ, ಕಿಟಕಿಗಳಿಲ್ಲದ ಒಂದು ಪುಟ್ಟ ಗುಡಿಸಲೇ ಅವರ ಮನೆಯಾಗಿತ್ತು. ಅಲ್ಲಿ ವಿದ್ಯುತ್ ಇರಲಿಲ್ಲ, ನಲ್ಲಿಯ ನೀರಿರಲಿಲ್ಲ. ಕೊರೆಯುವ ಚಳಿಯಲ್ಲಿ ಹದಿನಾಲ್ಕು ಮಂದಿ ಒಂದೇ ಸೂರಿನಡಿ ಬದುಕುತ್ತಿದ್ದರು.

ಆಕೆಯ ಬಾಲ್ಯದಲ್ಲಿ ಸಹಜವಾಗಿ ಬೇರೆ ಮಕ್ಕಳಂತೆ ನಿದ್ದೆ, ಆಟ-ಪಾಠಗಳು ಇರಲಿಲ್ಲ. ಮುಂಜಾನೆ ನಾಲ್ಕು ಗಂಟೆಗೆ ಎದ್ದು ತಂದೆಯ ಬುತ್ತಿ ಕಟ್ಟುವುದು ಮತ್ತು ಒಡಹುಟ್ಟಿದವ ರನ್ನು ನೋಡಿಕೊಳ್ಳುವುದು ಆಕೆಯ ಜವಾಬ್ದಾರಿಯಾಗಿತ್ತು.

ಇದನ್ನೂ ಓದಿ: ‌Roopa Gururaj Column: ಬದುಕಿಗೆ ಮರು ಉಡುಗೊರೆ ನೀಡಿದ ಗ್ರೇಸ್‌ ಗ್ರೋನರ್

ಒಮ್ಮೆ ಆಕೆಯ ಪಾದದ ಬೆರಳುಗಳು ಕತ್ತರಿಸಿ ಹೋದಾಗ, ಆಸ್ಪತ್ರೆಗೆ ಹೋಗುವ ಶಕ್ತಿಯೂ ಅವರಿಗಿರಲಿಲ್ಲ. ಅಮ್ಮ ಅವೀ ಲೀ ಪಾರ್ಟನ್ ಸೀಮೆಎಣ್ಣೆ ಮತ್ತು ಸೂಜಿಯನ್ನೇ ಬಳಸಿ ಆಕೆಯ ಬೆರಳುಗಳನ್ನು ಹೊಲಿದಿದ್ದಳು. ಇಂಥ ಕಠಿಣ ಬದುಕಿನಲ್ಲೂ ಅಮ್ಮ ಆಕೆಗೆ ಒಂದು ಅದ್ಭುತ ಪಾಠ ಕಲಿಸಿದ್ದಳು.

ಬಡತನವಿದ್ದರೂ ಗೌರವದಿಂದ ಬದುಕುವುದು ಹೇಗೆ ಎಂದು ಕಲಿಸಲು ಹರಿದ ಬಟ್ಟೆಗಳ ಚೂರುಗಳನ್ನು ಸೇರಿಸಿ ಒಂದು ಕೋಟನ್ನು ಹೊಲಿದು ಕೊಟ್ಟಿದ್ದಳು. ಬಡತನ ಬೆನ್ನಟ್ಟಿ ದರೂ ಆಕೆ ಕನಸು ಕಾಣುವು ದನ್ನು ಬಿಡಲಿಲ್ಲ. ತಗಡಿನ ಡಬ್ಬಿಯನ್ನೇ ಮೈಕ್ರೋ ಫೋನ್ ಮಾಡಿಕೊಂಡು ಬೆಟ್ಟಗಳ ಎದುರು ಹಾಡುತ್ತಿದ್ದ ಆ ಪುಟ್ಟ ಹುಡುಗಿ ಮುಂದೆ ಜಗತ್ತೇ ಕೊಂಡಾಡುವ ಡಾಲಿ ಪಾರ್ಟನ್ ಆದಳು.

ಆದರೆ ಡಾಲಿಯ ವಿಶೇಷತೆ ಇರುವುದು ಆಕೆಯ ಸಾಧನೆಯಲ್ಲಲ್ಲ, ತಾನು ಬೆಳೆದು ಬಂದ ಹಾದಿಯನ್ನು ಮರೆಯದಿರುವ ಆಕೆಯ ಗುಣದಲ್ಲಿ. ತನ್ನ ತಂದೆಗೆ ಓದಲು ಬರೆಯಲು ಬರುತ್ತಿರಲಿಲ್ಲ ಎಂಬ ನೋವು ಆಕೆಯನ್ನು ಕಾಡುತ್ತಿತ್ತು. ಅದರ ನೆನಪಿಗಾಗಿ ಆಕೆ ಇಮ್ಯಾಜಿ ನೇಷನ್ ಲೈಬ್ರರಿ’ ಎಂಬ ಸಂಸ್ಥೆಯನ್ನು ಕಟ್ಟಿ, ಕೋಟ್ಯಂತರ ಮಕ್ಕಳಿಗೆ ಉಚಿತವಾಗಿ ಪುಸ್ತಕ ಗಳನ್ನು ಹಂಚಿದಳು.

ಈ ಯೋಜನೆಯ ಮೂಲಕ ಅವರು ಹುಟ್ಟಿದ ಮಗುವಿನಿಂದ ಶಾಲಾ ವಯಸ್ಸಿನವರೆಗೆ ಮಕ್ಕಳಿಗೆ ಪ್ರತಿ ತಿಂಗಳು ಉಚಿತವಾಗಿ ಪುಸ್ತಕಗಳನ್ನು ಕಳುಹಿಸುತ್ತಾರೆ. ಈವರೆಗೆ ಜಗತ್ತಿ ನಾದ್ಯಂತ ಸುಮಾರು 20 ಕೋಟಿಗೂ ಅಧಿಕ ಗುಣಮಟ್ಟದ ಪುಸ್ತಕಗಳನ್ನು ಇವರ ಸಂಸ್ಥೆ ಹಂಚಿದೆ.

2020ರಲ್ಲಿ ಕೋವಿಡ್ ಸಮಯದಲ್ಲಿ, ಈಕೆ ‘ಮಾಡರ್ನಾ’ ಲಸಿಕೆಯ ಸಂಶೋಧನೆಗಾಗಿ 1 ಮಿಲಿಯನ್ ಡಾಲರ್ ದೇಣಿಗೆ ನೀಡಿದ್ದರು. ಇವರು ನೀಡಿದ ಈ ಸಮಯೋಚಿತ ಆರ್ಥಿಕ ನೆರವು ಲಸಿಕೆಯು ಬೇಗನೆ ಸಿದ್ಧವಾಗಲು ಪ್ರಮುಖ ಕಾರಣವಾಯಿತು. 2016ರಲ್ಲಿ ತಮ್ಮ ತವರು ಪ್ರಾಂತ್ಯದಲ್ಲಿ ಕಾಳ್ಗಿಚ್ಚು ಉಂಟಾದಾಗ ಮನೆ ಕಳೆದುಕೊಂಡವರಿಗೆ ನೆರವು ನೀಡಿ ಸಂತ್ರಸ್ತ ಕುಟುಂಬಗಳಿಗೆ ಪ್ರತಿ ತಿಂಗಳು ಹಣದ ಸಹಾಯ ನೀಡಿ ಅವರು ಮತ್ತೆ ಜೀವನ ಕಟ್ಟಿಕೊಳ್ಳಲು ಆಸರೆಯಾದರು.

ಕೇವಲ ಮನುಷ್ಯರಿಗಷ್ಟೇ ಅಲ್ಲದೆ, ಅಳಿವಿನ ಅಂಚಿನಲ್ಲಿದ್ದ ‘ಬಾಲ್ಡ್ ಈಗಲ್’ ಪಕ್ಷಿಗಳ ಸಂರಕ್ಷಣೆಗೂ ಡಾಲಿ ಪಾರ್ಟನ್ ಶ್ರಮಿಸುತ್ತಿದ್ದಾರೆ.

ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸಂಗೀತ ಸಲಕರಣೆ ಮತ್ತು ಸ್ಕಾಲರ್ʼಶಿಪ್‌‌ ಗಳನ್ನು ಇವರ ಸಂಸ್ಥೆ ನೀಡುತ್ತಾ ಬಂದಿದೆ. ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ರಿಗಾಗಿ ಉಚಿತವಾಗಿ ವಿಗ್‌ಗಳನ್ನು ಒದಗಿಸುವ ಕೆಲಸವನ್ನೂ ಮಾಡಲಾಗುತ್ತದೆ. ಇವರ ಹೆಚ್ಚಿನ ದಾನ ಕಾರ್ಯಗಳು ಯಾವುದೇ ಪ್ರಚಾರವಿಲ್ಲದೆ, ಸದ್ದಿಲ್ಲದೆ ಪ್ರಾಮಾಣಿಕವಾಗಿ ನಡೆಯುತ್ತವೆ.

‘ಸಹಾಯ ಮಾಡುವ ಶಕ್ತಿ ನಿಮಗಿದ್ದರೆ ಅದನ್ನು ಖಂಡಿತಾ ಮಾಡಿ’ ಎಂಬುದು ಡಾಲಿಯ ಜೀವನದ ಸರಳ ಮತ್ತು ಸ್ಪೂರ್ತಿದಾಯಕ ತತ್ವ.ಯಶಸ್ಸು ಎಂದರೆ ಕೇವಲ ಹಣ ಅಥವಾ ಚಪ್ಪಾಳೆಗಳಲ್ಲ. ನಾವು ಎತ್ತರಕ್ಕೆ ಬೆಳೆದಾಗ ನಮ್ಮ ಹಳೆಯ ಬದುಕನ್ನು ಎಷ್ಟು ಪ್ರೀತಿ ಯಿಂದ ನೆನಪಿಸಿಕೊಳ್ಳುತ್ತೇವೆ ಮತ್ತು ಎಷ್ಟು ಜನರ ಕೈ ಹಿಡಿದು ಮೇಲೆತ್ತುತ್ತೇವೆ ಎಂಬುದೇ ನಿಜವಾದ ಸಾಧನೆ.

ನಮ್ಮ ಭೂತಕಾಲ ನಮ್ಮನ್ನು ಕಾಡಬಾರದು, ಅದು ನಮ್ಮನ್ನು ರೂಪಿಸಬೇಕು. ಡಾಲಿ ಪಾರ್ಟನ್ ತನ್ನ ಹಸಿವನ್ನೇ ಹಸಿವಿನ ವಿರುದ್ಧ ಹೋರಾಡುವ ಶಕ್ತಿಯನ್ನಾಗಿ ಮಾಡಿ ಕೊಂಡರು. ಇಂದು ನಾವು ಅನುಭವಿಸುತ್ತಿರುವ ಕಷ್ಟಗಳು ನಾಳೆ ನಾವು ಮಾಡುವ ಸಾಧನೆಗೆ ಅಡಿಪಾಯವಾಗಬಹುದು ಎಂಬುದಕ್ಕೆ ಡಾಲಿ ಪಾರ್ಟನ್ ಜೀವನವೇ ಸಾಕ್ಷಿ.